ರಾಷ್ಟ್ರೀಯ

ಲಾಲು ಪ್ರಸಾದ್ ಯಾದವ್ ಪುತ್ರಿಗೆ ಡಿಸಿಎಂ ಪಟ್ಟ

Pinterest LinkedIn Tumblr

Misa-bharathi

ಪಾಟ್ನಾ, ಫೆ.21: ಬಿಹಾರದಲ್ಲಿ ನಾಳೆ ನಾಲ್ಕನೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ನಿತೀಶ್‌ಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಪುತ್ರಿ ಮಿಸಾ ಭಾರತಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಒಲವು ತೋರಿದ್ದಾರೆ.

ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ ಹಾಗೂ ಆರ್‌ಜೆಡಿಗೂ ಸಚಿವ ಸ್ಥಾನ ಕಲ್ಪಿಸಲು ನಿತೀಶ್ ಮುಂದಾಗಿದ್ದಾರೆಂದು ಜೆಡಿಯು ಪಕ್ಷದ ಮೂಲಗಳು ಖಚಿತಪಡಿಸಿವೆ. ಸಂಪುಟದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿಗೆ ಸ್ಥಾನಮಾನ ಕಲ್ಪಿಸಿದರೆ ಮುಂದೆ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿಯನ್ನು ಎದುರಿಸಲು ಅನುಕೂಲವಾಗುತ್ತದೆ ಎಂಬುದು ನಿತೀಶ್ ಲೆಕ್ಕಾಚಾರವಾಗಿದೆ.

ಇದಕ್ಕಾಗಿಯೇ ಸರ್ಕಾರದಲ್ಲಿ ಆರ್‌ಜೆಡಿಯನ್ನು ಸೇರಿಸಿಕೊಳ್ಳಲು ನಿತೀಶ್ ಮುಂದಾಗಿದ್ದಾರೆ. ಆರ್‌ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಪುತ್ರಿ ಮಿಸಾ ಭಾರತಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದು ಬಹುತೇಕ ಖಚಿತ ಎನ್ನಲಾಗಿದೆ.

ಈಗಾಗಲೇ ಸಂಪುಟ ವಿಸ್ತರಣೆ ಕುರಿತಂತೆ ತಮ್ಮ ಹಿರಿಯ ಸಹೋದ್ಯೋಗಿಗಳ ಜತೆ ಮಾತುಕತೆ ನಡೆಸಿದ್ದಾರೆ. ಪುತ್ರಿಯನ್ನು ಉಪಮುಖ್ಯಮಂತ್ರಿ ಮಾಡಲು ಲಾಲು ಕೂಡ ಆಸಕ್ತಿ ವಹಿಸಿದ್ದಾರೆ ಎಂದು ತಿಳಿದುಬಂದಿದೆ. ಇದೇ ವರ್ಷದ ಡಿಸೆಂಬರ್‌ನಲ್ಲಿ ಬಿಹಾರಕ್ಕೆ ವಿಧಾನಸಭೆ ಚುನಾವಣೆ ಜರುಗಲಿದೆ. ಈ ವೇಳೆ ಪ್ರತಿಪಕ್ಷ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನಿತೀಶ್ ಈಗಿನಿಂದಲೇ ಮಹಾಮೈತ್ರಿ ಸ್ಥಾಪನೆಗೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ. ಬಿಜೆಪಿ ವಿರೋಧಿ ಬಣಗಳನ್ನು ಒಂದುಗೂಡಿಸಿ ಚುನಾವಣೆ ಎದುರಿಸುವುದು ಅವರ ಯೋಜನೆಗಳಲ್ಲೊಂದು. ಕಾಂಗ್ರೆಸ್, ಆರ್‌ಜೆಡಿ ಎಡಪಕ್ಷಗಳನ್ನು ಸಂಪುಟದಲ್ಲಿಟ್ಟುಕೊಂಡು ಮೂರನೆ ಬಾರಿಗೆ ಅಧಿಕಾರಕ್ಕೆ ಬರುವುದು ಈ ಬಿಹಾರಿ ಚಾಣಕ್ಯನ ಮುಂದಾಲೋಚನೆ. ಆದರೆ, ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದಕ್ಕೆ ಚುನಾವಣೆಯೇ ಉತ್ತರ ನೀಡಬೇಕು.

Write A Comment