ಕರ್ನಾಟಕ

ಶಿವಮೊಗ್ಗ ಬಂದ್ ವೇಳೆ ಅಹಿತಕರ ಘಟನೆ ನಡೆದರೆ ನಿರ್ದಾಕ್ಷಿಣ್ಯ ಕ್ರಮ : ಮುಖ್ಯಮಂತ್ರಿ ಸಿದ್ಧರಾಮಯ್ಯ

Pinterest LinkedIn Tumblr

siddaramaiah

ಮೈಸೂರು,ಫೆ.21: ಕೋಮುಗಲಭೆ ಹಿನ್ನೆಲೆಯಲ್ಲಿ ನಡೆಸಲಾಗುತ್ತಿರುವ ಶಿವಮೊಗ್ಗ ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆದರೂ ಬಂದ್‌ಗೆ ಕರೆ ನೀಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಎಚ್ಚರಿಸಿದ್ದಾರೆ.

ರಾಮಕೃಷ್ಣ ನಗರದಲ್ಲಿನ ತಮ್ಮ ನಿವಾಸದಲ್ಲಿಂದು ಬೆಳಗ್ಗೆ ಮಾಜಿ ಸಂಸದ ಎಚ್.ವಿಶ್ವನಾಥ್ ಅವರು ಬರೆದಿರುವ ಸಿರಿಭೂಮಿ ಪುಸ್ತಕ ಬಿಡುಗಡೆ ಮಾಡಿದ ನಂತರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಶಿವಮೊಗ್ಗದಲ್ಲಿ ಗುಂಪುಘರ್ಷಣೆ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ನಡುವೆ ಹಿಂದೂಪರ ಸಂಘಟನೆಗಳು ಬಂದ್‌ಗೆ ಕರೆಕೊಟ್ಟಿವೆ. ಈ ವೇಳೆ ಅಹಿತಕರ ಘಟನೆ ನಡೆದು ಶಾಂತಿ ಕದಡಿದರೆ ಬಂದ್‌ಗೆ ಕರೆ ನೀಡಿದವರೆ ಹೊಣೆ ಎಂದು ತಿಳಿಸಿದ್ದಾರೆ.

ಸಂಘಟನೆ ಹೆಸರಿನಲ್ಲಿ ಸೌಹಾರ್ದತೆಗೆ ಧಕ್ಕೆ ತಂದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಹೀಗಾಗಿ ತೊಗಾಡಿಯಾ, ಓವೈಸಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇವರಿಬ್ಬರ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದರು.

ಪ್ರಚೋದನಾಕಾರಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಿ ಕೊಳ್ಳಲಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾಜಿಕ ತಾಣಗಳಲ್ಲಿ ವಿಡಿಯೋ ಅಪ್‌ಲೋಡ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ತದನಂತರ ಸಿರಿಭೂಮಿ ಪುಸ್ತಕದ ಬಗ್ಗೆ ಮಾತನಾಡಿದ ಅವರು, ಈ ಪುಸ್ತಕದಲ್ಲಿ ರೈತರಿಗೆ ಯಾವ ರೀತಿ ಪರಿಹಾರ ಕೊಡಬೇಕು, ಯಾವ ರೀತಿಯ ಭೂಮಿಯನ್ನು ವಶಪಡಿಸಿಕೊಳ್ಳಬೇಕು, ರೈತರ ಪರವಾದ ಕಾನೂನುಗಳೇನಿದೆ? ಅವರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಯಾವ ಕ್ರಮಗಳನ್ನು ಅನುಸರಿಸಬೇಕೆಂಬ ಮಾಹಿತಿಯನ್ನೊಳಗೊಂಡ ಪುಸ್ತಕ ಇದಾಗಿದೆ ಎಂದರು.

ಬರಡು ಭೂಮಿಯನ್ನು ಯಾವ ರೀತಿ ವಶಪಡಿಸಿಕೊಳ್ಳಬೇಕು ಎಂಬ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಈ ಪುಸ್ತಕವನ್ನು ಓದಿ ಇದರಲ್ಲಿರುವ ಮಾಹಿತಿ ಬಗ್ಗೆ ಸದನದಲ್ಲಿ ಚರ್ಚಿಸಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾನೂನು ರೂಪಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾಜಿ ಸಂಸದ ವಿಶ್ವನಾಥ್ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಶಿವಮೊಗ್ಗದಲ್ಲಿ ಆತಂಕ ವಾತಾವರಣ ಬಿಗಿ ಭದ್ರತೆ

ಶಿವಮೊಗ್ಗ: ಬಂದ್‌ನಿಂದಾಗಿ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರೆದಿರುವ ಪರಿಣಾಮ ಕರ್ಫ್ಯೂ ಹೇರಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಈಗಾಗಲೇ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ ಏರ್ಪಡಿಸಲಾಗಿದ್ದು, ಪೂರ್ವವಲಯ ಐಜಿಪಿ ನಂಜುಂಡಸ್ವಾಮಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಗಸ್ತಿನಲ್ಲಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನ ನಡೆಸಿದ್ದಾರೆ.

ಬಂದ್ ಕರೆ ಹಿನ್ನೆಲೆಯಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಮಂದಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ. ಮೊನ್ನೆ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ೮೦ಕ್ಕೇರಿದೆ. ಸಾಗರ, ಭದ್ರಾವತಿ, ತೀರ್ಥಹಳ್ಳಿ ಸೇರಿದಂತೆ ಬಹುತೇಕ ಕಡೆ ಅಂಗಡಿಮುಂಗಟ್ಟುಗಳು ಬಂದಾಗಿದ್ದು, ಶಾಲಾ ಕಾಲೇಜುಗಳು, ವಾಣಿಜ್ಯ ಸಂಕೀರ್ಣಗಳು, ವ್ಯಾಪಾರ ವಹಿವಾಟುಗಳು ಬಂದಾಗಿವೆ.

ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೆರೆಯ ಜಿಲ್ಲೆಗಳಿಂದ ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಸಶಸ್ತ್ರಮೀಸಲು ಪಡೆಗಳನ್ನು ಕರೆಸಿಕೊಳ್ಳಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಹಲವೆಡೆ ಕರ್ಫ್ಯೂ ಜಾರಿಗೊಳಿಸಲು ಚಿಂತಿಸಲಾಗುವುದು ಎಂದು ಭದ್ರತೆಯ ಉಸ್ತುವಾರಿ ಹೊತ್ತಿರುವ ಎಸ್‌ಪಿ ರಮಣಗುಪ್ತ ತಿಳಿಸಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಇನ್ನೂ ಬಿಗಿವಿನ ವಾತಾವರಣ ಮುಂದುವರೆದಿದೆ. ಅಲ್ಲಿ ಹೆಚ್ಚಿನ ಪಡೆಗಳನ್ನು ನಿಯೋಜಿಸಲಾಗಿದೆ. ಜನರಲ್ಲಿ ಶಾಂತಿ ಕಾಪಾಡಲು ಈಗಾಗಲೇ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆಗಳನ್ನು ನಡೆಸಲಾಗಿದ್ದು, ಸದ್ಯ ಯಾವುದೇ ಆತಂಕಪಡುವ ಪರಿಸ್ಥಿತಿ ಇಲ್ಲ ಎಂದು ಅವರು ಹೇಳಿದ್ದಾರೆ.

ಇದರ ನಡುವೆಯೇ ತುಂಗಾನಗರದಲ್ಲಿ ವೈನ್‌ಶಾಪ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರ ಕೊಲೆ ನಡೆದಿರುವ ಸುದ್ದಿ ಹರಡಿದ್ದು, ಇದರಿಂದ ಶಾಂತ ಪರಿಸ್ಥಿತಿ ಕದಡುವ ಸಾಧ್ಯತೆ ಇದ್ದು, ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಐಜಿಪಿ ನಂಜುಂಡಸ್ವಾಮಿ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ೨೦೬ರನಲ್ಲಿ ಹಾದು ಹೋಗುವ ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ. ಉಡುಪಿ, ಕಾರವಾರ ಸೇರದಂತೆ ಆಸುಪಾಸಿನ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಲಾಗುತ್ತಿದೆ. ಕೆಲ ಹಿಂದೂಪರ ಸಂಘಟನೆಗಳು ಬಂದ್ ಕರೆ ನಡುವೆಯೂ ಶಾಂತಿಯಾತ್ರೆ ನಡೆಸಲು ಪ್ರಯತ್ನಿಸಿದ್ದು, ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ತುಂಗಾನಗರದಲ್ಲಿ ಇಂದು ಬೆಳಗ್ಗೆ ೨೦ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಕಿಡಿಗೇಡಿಗಳು ಪರಿಸ್ಥಿತಿಯ ಲಾಭ ಪಡೆದು ದುಷ್ಕೃತ್ಯಗಳನ್ನು ನಡೆಸಲು ಪ್ರಯತ್ನಿಸಿದ್ದು, ಇದರ ಬಗ್ಗೆ ನಿಗಾವಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸುಮಾರು ೨೨ಕೆಎಸ್‌ಆರ್‌ಪಿ ತುಕಡಿಗಳು, ೮ಡಿಎಆರ್ ತುಕಡಿಗಳನ್ನು ಶಿವಮೊಗ್ಗ ನಗರದಲ್ಲೇ ಬಂದೋಬಸ್ತ್‌ಗೆ ನೇಮಿಸಲಾಗಿದೆ. ಇಷ್ಟಾದರೂ ಸಾರ್ವಜನಿಕರು ಮನೆಯಿಂದ ಹೊರ ಬರದ ಕಾರಣ ಕೆಲವು ಪ್ರದೇಶಗಳು ಸಂಪೂರ್ಣ ಸ್ತಬ್ಧಗೊಂಡಿವೆ.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ:ಈಶ್ವರಪ್ಪ ಕಿಡಿ

ಶಿವಮೊಗ್ಗ: ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪರಿಸ್ಥಿತಿ ಹತೋಟಿಗೆ ತರುವುದು ಬಿಟ್ಟು ಪೊಲೀಸ್ ಅಧಿಕಾರಿಗಳು ಕೇವಲ ವಾಹನದಲ್ಲಿ ತಿರುಗಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳ ವಿರುದ್ಧ ತೀವ್ರ ಗರಂ ಆಗಿ ಕಳೆದ ಮೂರು ದಿನಗಳಿಂದ ಜನ ಆತಂಕದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಆದರೆ ಪೊಲೀಸ್ ಅಧಿಕಾರಿಗಳು ತಿರುಗುತ್ತಿದ್ದಾರೆ ಎಂದು ದೂರಿದರು. ಗುಂಪು ಘರ್ಷಣೆಯಲ್ಲಿ ಸಾವು-ನೋವು ಸಂಭವಿಸಿದೆ. ಆದರೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗಲಭೆಯನ್ನು ನಿಯಂತ್ರಿಸುವಲ್ಲಿ ಹಿರಿಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು. ಈಶ್ವರಪ್ಪ ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು ಕ್ರಮ

ಶಿವಮೊಗ್ಗ: ನಗರದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಅಭಯ ನೀಡಿದ್ದಾರೆ.

ಗಲಭೆ ಹಿನ್ನೆಲೆಯಲ್ಲಿ ನಗರಕ್ಕೆ ಭೇಟಿ ನೀಡಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಇದು ಗಲಭೆಯಲ್ಲೇ ಮೃತಪಟ್ಟಿರುವುದೇ ಅಥವಾ ಮತ್ತೇನು ಕಾರಣ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದರು. ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಿಷೇಧ ಮಾಡುವ ಸಂಬಂಧ ಪರಾಮರ್ಶೆ ಮಾಡಲಾಗುವುದು. ಮೊದಲು ನಗರದಲ್ಲಿ ಶಾಂತಿ ಕಾಪಾಡಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಗಲಭೆ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು, ಶಾಂತಿ ಕಾಪಾಡಲು ಈಗಾಗಲೇ ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಪೊಲೀಸ್ ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಿರ್ಲಕ್ಷ್ಯ ಮಾಡಿಲ್ಲ. ಘರ್ಷಣೆ ಸಂಬಂಧ ಯಾವುದೇ ರಾಜಕೀಯ ಮಾಡಬಾರದು ಎಂದು ಜಾರ್ಜ್ ಮನವಿ ಮಾಡಿದರು.

Write A Comment