ರಾಷ್ಟ್ರೀಯ

ಭಾರತೀಯರ ಆಯುಷ್ಯ ಕಿತ್ತುಕೊಳ್ಳುತ್ತಿದೆ ವಾಯುಮಾಲಿನ್ಯ

Pinterest LinkedIn Tumblr

Air-pollutoin

ಚಿಕಾಗೋ, ಫೆ.21: ದಿನೇ ದಿನೇ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದಾಗಿ ಭಾರತೀಯನ ಆಯಸ್ಸು 3 ವರ್ಷ ಕ್ಷೀಣಿಸುತ್ತಿದೆಯಂತೆ. ಇಂತಹ ಒಂದು ಆಘಾತಕಾರಿ ಅಂಶವನ್ನು ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದ ಆರ್ಥಿಕ ತಜ್ಞರು ಬಯಲು ಮಾಡಿದ್ದಾರೆ.

ಅತಿ ಹೆಚ್ಚು ವಾಯುಮಾಲಿನ್ಯದಿಂದ ಕೂಡಿರುವ ದೇಶಗಳಲ್ಲಿ ಭಾರತವೇ ಪ್ರಮುಖ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನಾಧರಿಸಿ ನಡೆಸಿದ ಸಮೀಕ್ಷೆಯಲ್ಲಿ ಭಾರತೀಯನ ಆಯಸ್ಸು ಕ್ಷೀಣಿಸುತ್ತಿರುವುದು ಪತ್ತೆಯಾಗಿದೆ ಎಂದು ಚಿಕಾಗೋ ವಿಶ್ವವಿದ್ಯಾಲಯ, ಹಾರ್ವರ್ಡ್ ಮತ್ತು ಯಾಲೆ ಸಂಸ್ಥೆಗಳು ಹೊರತಂದಿರುವ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಪ್ರಕಟಿಸಲಾಗಿದೆ. ಭಾರತದ ಜನಸಂಖ್ಯೆಯ ಅರ್ಧದಷ್ಟು ಮಂದಿ ವಾಯುಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇದರಿಂದಾಗಿ ಸರಿ ಸುಮಾರು 660 ಮಿಲಿಯನ್‌ನಷ್ಟು ಭಾರತೀಯರ ಆಯಸ್ಸು ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ಉಲ್ಲೇಖಿಸಲಾಗಿದೆ.

ಭಾರತೀಯರು ವಾಯುಮಾಲಿನ್ಯದ ದುಷ್ಪರಿಣಾಮಗಳ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಕಾದಿತು ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ಭಾರತಕ್ಕೆ ಈಗಲೂ ಕಾಲ ಮಿಂಚಿಲ್ಲ. ವಾಯು ಮಾಲಿನ್ಯ ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡರೆ ಮುಂದೆ ಆಗಬಹುದಾದ ಅನಾಹುತ ತಪ್ಪಿಸಬಹುದು. ಆದರೆ, ತಕ್ಷಣ ಮಾಲಿನ್ಯ ನಿಯಂತ್ರಣ ಅಸಾಧ್ಯ. ಆದರೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ಒಳಿತು ಎಂದು ವರದಿ ಪ್ರಕಟಿಸಿರುವ ಸಂಸ್ಥೆಯ ಮುಖ್ಯಸ್ಥ ಮೈಕೆಲ್ ಗ್ರೀನ್‌ಸ್ಟೋನ್ ಸಲಹೆ ನೀಡಿದ್ದಾರೆ. ಹೆಚ್ಚುತ್ತಿರುವ ವಾಯುಮಾಲಿನ್ಯದಿಂದಾಗಿ ಭಾರತದಲ್ಲಿ ಅಕಾಲಿಕ ಮರಣ ಹೊಂದುತ್ತಿರುವವರ ಸಂಖ್ಯೆಯೂ ದ್ವಿಗುಣಗೊಳ್ಳುತ್ತಿದೆ. ಮಾತ್ರವಲ್ಲ ಭಾರತೀಯರ ಆರೋಗ್ಯದ ಮೇಲೆ ಭಾರಿ ದುಷ್ಪರಿಣಾಮ ಬೀರುತ್ತಿದೆ ಎಂದು ವರದಿ ಬಹಿರಂಗಗೊಳಿಸಿದೆ.

ಅತಿ ಹೆಚ್ಚು ವಾಯುಮಾಲಿನ್ಯ ಹೊಂದಿರುವ 20 ದೇಶಗಳ ಪಟ್ಟಿಯಲ್ಲಿ ಭಾರತ 13 ಸ್ಥಾನ ಪಡೆದುಕೊಂಡಿದೆ. ಆದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿ ಅತ್ಯಂತ ಹೊಲಸು ಮಾಲಿನ್ಯ ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ. ವಾಯು ಮಾಲಿನ್ಯದಿಂದ ಭಾರತೀಯರಲ್ಲಿ ಹೃದ್ರೋಗ ಹೆಚ್ಚಳವಾಗುತ್ತಿದ್ದು, ವಿಶ್ವದಲ್ಲೇ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರು ಭಾರತೀಯರೇ ಹೆಚ್ಚಂತೆ. ಇದರಿಂದ 2 ಬಿಲಿಯನ್‌ಗೂ ಹೆಚ್ಚು ಭಾರತೀಯರು ವಾಯುಮಾಲಿನ್ಯದಿಂದಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ಲೇಖಕಿ ರೋಹಿಣಿ ಪಾಂಡೆ ವರದಿಯಲ್ಲಿ ವಿವರಿಸಿದ್ದಾರೆ.

ಮಾನವ ಸಂಪನ್ಮೂಲದ ವಿನಾಶಕ್ಕೆ ನಾಂದಿ ಹಾಡುತ್ತಿರುವ ವಾಯುಮಾಲಿನ್ಯ ತಡೆಗಟ್ಟಲು ಭಾರತ ಹೊಸ ಹೊಸ ಆವಿಷ್ಕಾರಗಳಿಗೆ ಮೊರೆ ಹೋಗುವುದು ಸೂಕ್ತ ಎಂದು ಲೇಖಕರು ಸಲಹೆ ನೀಡಿದ್ದಾರೆ.

Write A Comment