ರಾಷ್ಟ್ರೀಯ

ಮಾಹಿತಿ ಸೋರಿಕೆ: ಇದು ರು.10,000 ಕೋಟಿಯ ಹಗರಣ!

Pinterest LinkedIn Tumblr

Santanu Saikia

ನವದೆಹಲಿ: ಪೆಟ್ರೋಲಿಯಂ ಸಚಿವಾಲಯದ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿದ ಪ್ರಕರಣಗಳಲ್ಲಿ ಬಂಧಿತರಾಗಿರುವ ಶಂತನು ಸೈಕಿಯಾ ಎಂಬ ಪತ್ರಕರ್ತ ವಿಚಾರಣೆ ವೇಳೆ ತಾನು ಈ ಹಗರಣದಲ್ಲಿ ಭಾಗಿಯಾಗಿಲ್ಲ. ನನಗೆ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿ ಏನಾಗಬೇಕಿದೆ? ನಾನು ಅಂಥಾ ಕೆಲಸ ಮಾಡಿಲ್ಲ ಎಂದು ಹೇಳಿದ್ದಾನೆ.

ನಾನು ಈ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೆ ಅಷ್ಟೇ. ಇದು ರು. 10,000 ಕೋಟಿಯ ಹಗರಣ. ಈ ಹಗರಣದ ಬಗ್ಗೆ ನಾನು ತನಿಖೆ ನಡೆಸುತ್ತಿದ್ದೆ ಎಂದು ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಆಫೀಸಿನ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸೈಕಿಯಾ ಹೇಳಿದ್ದಾರೆ.

ಕಾರ್ಪೊರೇಟ್ ಬೇಹುಗಾರಿಕೆ ಹಗರಣದಲ್ಲಿ ಭಾಗಿಯಾಗಿದ್ದು, ಅಪರಾಧ ಸಾಬೀತಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಹಗರಣದಲ್ಲಿ ಯಾರನ್ನೂ ನಾವು ಬಿಡುವುದಿಲ್ಲ. ಅವರಿಗೆ ಕಠಿಣ ಶಿಕ್ಷೆ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಗುಡುಗಿದ ಬೆನ್ನಲ್ಲೇ ಸೈಕಿಯಾ ಈ ಮಾಹಿತಿಯನ್ನು ಮಾಧ್ಯಮದವರಲ್ಲಿ ಬಹಿರಂಗ ಪಡಿಸಿದ್ದಾರೆ.

ಕಾರ್ಪೊರೇಟ್ ಬೇಹುಗಾರಿಕೆ ಹಗರಣದಲ್ಲಿ ತೈಲ ಸಚಿವಾಲಯದ ಇಬ್ಬರು ಅಧಿಕಾರಿಗಳು, ಇಬ್ಬರು ಮಧ್ಯವರ್ತಿಗಳು ಹಾಗೂ ರಿಲಯನ್ಸ್ ಇಂಡಸ್ಟ್ರೀಸ್‌ನ ಒಬ್ಬ ಎಕ್ಸಿಕ್ಯೂಟಿವ್‌ನನ್ನು ಗುರುವಾರ ಬಂಧಿಸಲಾಗಿತ್ತು. ನಾನಾ ಕಂಪನಿಗಳ ಒಟ್ಟು ಐವರು ಎಕ್ಸಿಕ್ಯೂಟಿವ್‌ಗಳ ವಿರುದ್ಧ ಕ್ರಿಮಿನಲ್ ಸಂಚು, ಕದ್ದ ವಸ್ತುಗಳ ಬಳಕೆ ಮುಂತಾದ ಗುರುತರವಾದ ಆರೋಪಗಳನ್ನು ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಸಿ ಬಸ್ಸಿ ಹೇಳಿದ್ದಾರೆ.

ಪೆಟ್ರೋಲಿಯಂ ಖಾತೆಯ ರಹಸ್ಯ ದಾಖಲೆಗಳನ್ನು ಕದ್ದು ಹಣಕ್ಕಾಗಿ ಮಾರಲಾಗಿರುವ ಪ್ರಕರಣ ಇದಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವ ದೆಹಲಿ ಕ್ರೈಂ ಬ್ರಾಂಚ್ ತನಿಖೆಯನ್ನು ತೀವ್ರಗೊಳಿಸಿದೆ. ಶನಿವಾರ ನೋಯ್ಡಾದಲ್ಲಿರುವ ಪೆಟ್ರೋಕೆಮಿಕಲ್ ಸಂಸ್ಥೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಇದೀಗ ಪ್ರಸ್ತುತ ಹಗರಣದಲ್ಲಿ ಶಂತನು ಸೈಕಿಯಾ, ಪ್ರಯಾಸ್ ಜೈನ್, ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಪೊರೇಟ್ ವ್ಯವಹಾರಗಳ ವ್ಯವಸ್ಥಾಪಕ ಶೈಲೇಶ್ ಸಕ್ಸೇನಾ, ಜುಬಿಲೆಂಟ್ ಎನರ್ಜಿಯ ಸೀನಿಯರ್ ಎಕ್ಸಿಕ್ಯುಟಿವ್ ಸುಭಾಶ್ಚಂದ್ರ, ರಿಲಯನ್ಸ್ ಎಡಿಎಜಿ ರಿಶಿ ಆನಂದ್, ಎಸ್ಸಾರ್ ಡಿಜಿಎಂ ವಿನಯ್ ಮತ್ತು ಕೇರ್ನ್ಸ್ ಇಂಡಿಯಾ ಜಿಎಂ ಕೆ.ಕೆ ನಾಯ್ಕ್ ಬಂಧಿತ ವ್ಯಕ್ತಿಗಳಾಗಿದ್ದಾರೆ.

Write A Comment