ಮನೋರಂಜನೆ

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆಲ್ಲುತ್ತಾ? -ಒಂದು ವಿಶ್ಲೇಷಣೆ

Pinterest LinkedIn Tumblr

222

ವಿಶ್ವಕಪ್ ಪಂದ್ಯದಲ್ಲಿ ನಾಳೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿರುವ ಪಂದ್ಯ ಸಾಕಷ್ಟು ನಿರೀಕ್ಷೆ ಹಾಗು ಕುತೂಹಲದಿಂದ ಕೂಡಿದೆ. ಇಲ್ಲಿಯವರೆಗೆ ವಿಶ್ವಕಪ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿಲ್ಲ. ಹೀಗಿರುವಾಗ ನಾಳೆ ನಡೆಯಲಿರುವ ಪಂದ್ಯದಲ್ಲಿ ಭಾರತ ಗೆಲ್ಲಲು ಸಾಧ್ಯವೆ? ಎಂಬ ಆತಂಕ ಭಾರತೀಯ ಕ್ರಿಕೆಟ್ ಪ್ರೇಮಿಗಳದ್ದು.

ಕಳೆದ ಭಾನುವಾರ ಭಾರತ ಪಾಕಿಸ್ತಾನ ನಡುವಿನ ಪಂದ್ಯವೂ ಅಷ್ಟೇ ಆತಂಕದಿಂದ ಕೂಡಿತ್ತು. ಪಾಕಿಸ್ತಾನದೊಂದಿಗೆ ಒಮ್ಮೆಯೂ ಪರಾಭವಗೊಳ್ಳದ ಭಾರತ ತಂಡ ಈ ಬಾರಿ ಆ ಗೆಲವನ್ನು ಪುನಾರಾವರ್ತಿಸುವುದೋ? ಎಂಬ ಆತಂಕ ಎಲ್ಲರಲ್ಲಿಯೂ ಇತ್ತು. ಆದರೆ ಎಲ್ಲವೂ ಅಂದುಕೊಂಡಂತೆಯೇ ಆಯ್ತು. ವಿಶ್ವಕಪ್ ಪಂದ್ಯಗಳಲ್ಲಿ ಸತತವಾಗಿ 6 ಬಾರಿ ಪಾಕಿಸ್ತಾನವನ್ನು ಪರಾಭವಗೊಳಿಸಿ ಟೀಂ ಇಂಡಿಯಾ ಜಯಘೋಷ ಮಾಡಿದಾಗ ವಿಶ್ವಕಪ್ ಗೆದ್ದಷ್ಟೇ ಖುಷಿ ಭಾರತೀಯರದ್ದು. ಇನ್ನು ಯಾವ ಪಂದ್ಯ ಸೋತರೂ ಪರ್ವಾಗಿಲ್ಲ, ಪಾಕ್ ವಿರುದ್ಧ ಜಯ ಸಾಧಿಸಿತು. ನಮಗದಷ್ಟೇ ಸಾಕು ಎಂಬುದಾಗಿತ್ತು ಭಾರತೀಯ ಅಭಿಮಾನಿಗಳ ನಿಲುವು. ಆದರೆ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಪಂದ್ಯದಲ್ಲಿಯೂ ಭಾರತ ಗೆಲ್ಲಲಿ ಎಂಬ ಹಾರೈಕೆಯೊಂದಿಗೆ ಅಭಿಮಾನಿಗಳು ನಾಳೆಯ ನಿರೀಕ್ಷೆಯಲ್ಲಿದ್ದಾರೆ.

ಭಾರತ ಈ ಬಾರಿ ದಕ್ಷಿಣ ಆಫ್ರಿಕಾವನ್ನು ಪರಾಭವಗೊಳಿಸಿ ಹೊಸ ದಾಖಲೆ ಸೃಷ್ಟಿಸಲು ಸಾಧ್ಯವೆ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಪಾಸಿಟಿವ್ ಆಗಿ ಯೋಚನೆ ಮಾಡಿದಾಗ ಯೆಸ್, ಸಾಧ್ಯ ಎಂಬ ಉತ್ತರ ಸಿಗುತ್ತದೆ. ಅದಕ್ಕೆ ಕಾರಣಗಳೂ ಇವೆ. ಟೀಂ ಇಂಡಿಯಾದ ಸದ್ಯದ ಪ್ರದರ್ಶನವನ್ನು ನೋಡಿದರೆ, ದಕ್ಷಿಣ ಆಫ್ರಿಕಾವನ್ನು ಮಣಿಸುವುದು ಅಷ್ಟೇನೂ ಕಷ್ಟವಲ್ಲ. ಹಾಗಂತೀರಾ? ಎಂದು ನೀವು ಕೇಳಿದರೆ ಅದಕ್ಕೆ ಉತ್ತರ ಇಲ್ಲಿದೆ.

1. ಫಾರ್ಮ್‌ನಲ್ಲಿದೆ ಟೀಂ ಇಂಡಿಯಾ
ದಕ್ಷಿಣ ಆಫ್ರಿಕಾ ಈ ಮೊದಲು ಮೂರು ಬಾರಿ ಭಾರತವನ್ನು ಪರಾಭವಗೊಳಿಸಿರಬಹುದು. ಇದೊಂದೇ ಕಾರಣ ಸಾಕು ಟೀಂ ಇಂಡಿಯಾಗೆ. ಈ ಬಾರಿಯಾದರೂ ಆಫ್ರಿಕಾ ವಿರುದ್ಧ ಗೆಲ್ಲಲೇ ಬೇಕು ಎಂಬ ಛಲ ಭಾರತದ ಗೆಲವಿಗೆ ಕಾರಣವಾಗಬಹುದು. ರೋಹಿತ್ ಶರ್ಮಾ, ಧವನ್, ರೈನಾ, ಕೊಹ್ಲಿ ಮೊದಲಾದವರು ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಎದುರಿಸಲು ಹೆಚ್ಚು ಸಮರ್ಥರಾಗಿದ್ದಾರೆ.

2. ಧೋನಿಯ ಪಾಸಿಟಿವ್ ನಿಲುವು
ಯಾವ ರಣತಂತ್ರವನ್ನು ಹೆಣೆಯಬೇಕೆಂದು ಧೋನಿಗೆ ಚೆನ್ನಾಗಿ ಗೊತ್ತು. ಅದ್ಯಾವುದೇ ದೊಡ್ಡ ಪಂದ್ಯವೇ ಇರಲಿ ಧೋನಿ ಯಾವುದಕ್ಕೂ ಮೊದಲೇ ಹೆದರಿದವರಲ್ಲ. ಡ್ರೆಸ್ಸಿಂಗ್ ರೂಂನಲ್ಲಿ ಯಾವತ್ತೂ ಪಾಸಿಟಿವ್ ವಾತಾವರಣವನ್ನು ನಿರ್ಮಿಸುವಲ್ಲಿ ಧೋನಿ ಸಮರ್ಥ ನಾಯಕ. ಅವರ ಈ ಪಾಸಿಟಿವ್ ನಿಲುವಿನಿಂದಲೇ ಭಾರತ 2011ರಲ್ಲಿ ವಿಶ್ವಕಪ್ ಗೆದ್ದಿತ್ತು.

3. ಡೇಲ್ ಸ್ಟೇನ್ ಬೌಲಿಂಗ್ ದಾಳಿಗೆ ಉತ್ತರ ಕೊಡಲಿದ್ದಾರೆ ಕೊಹ್ಲಿ
ಜಗತ್ತಿನ ಉತ್ತಮ ಬೌಲರ್‌ಗಳಲ್ಲಿ ಡೇಲ್ ಸ್ಟೇನ್ ಕೂಡಾ ಒಬ್ಬರು. ಆದರೆ ಭಾರತದ ಬ್ಯಾಟಿಂಗ್ ಮುಂದೆ ಅವರ ಬೌಲಿಂಗ್ ಯಶಸ್ವಿಯಾಗುವುದು ಡೌಟು. ಯಾಕೆಂದರೆ ಕೊಹ್ಲಿಗೆ ಗೊತ್ತು ವಿರಾಟ ರೂಪ ಧರಿಸಿ ಹೇಗೆ ಬ್ಯಾಟಿಂಗ್ ಮಾಡಬೇಕೆಂಬುದು.

4. ಪಾಕ್ ವಿರುದ್ಧದ ಗೆಲವಿನಿಂದ ಹೆಚ್ಚಾಗಿದೆ ಆತ್ಮವಿಶ್ವಾಸ
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಭಾರತದ್ದು ಕಳಪೆ ಪ್ರದರ್ಶನವಾಗಿರಬಹುದು. ಆದರೆ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಪರಾಭವಗೊಳಿಸಿದ್ದು ಆಟಗಾರರಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬಿದೆ.

5. ದಾಖಲೆ ಸೃಷ್ಟಿಸಲು ಕೊಹ್ಲಿಗೆ ಅವಕಾಶ
ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಕೊಹ್ಲಿ ಇದುವರೆಗೆ ಶತಕ ಬಾರಿಸಿಲ್ಲ. ಹೀಗಿರುವಾಗ ಹೊಸತೊಂದು ದಾಖಲೆ ಬರೆಯಲು ಕೊಹ್ಲಿಗೆ ಇದು ಉತ್ತಮ ಅವಕಾಶ.

6. ಮೆಲ್ಬರ್ನ್ ಭಾರತದ ಫೇವರಿಟ್
ಭಾರತ ಮತ್ತು ದಕ್ಷಿಣ ಆಫ್ರಿಕಾಗೆ ಸಮಾನವಾಗಿ ಬೆಂಬಲ ಸಿಗುವ ಕ್ರಿಕೆಟ್ ಗ್ರೌಂಡ್‌ಗಳಲ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಭಾರತ ಗೆದ್ದಿದೆ. ನಾಳೆ ಮೆಲ್ಬರ್ನ್‌ನಲ್ಲಿ ಪಂದ್ಯ ನಡೆಯಲಿದ್ದು, ಅಲ್ಲಿಯೂ ಭಾರತ ಮತ್ತು ದಕ್ಷಿಣ ಆಫ್ರಿಕಾವನ್ನು ಸೋಲಿಸಿ 4-0 ವಿಜಯ ಸಾಧಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

7. ಎರಡು ವಿಶ್ವಕಪ್‌ಗಳನ್ನು ಗೆದ್ದ ಆತ್ಮ ವಿಶ್ವಾಸ
ಈ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ಟೀಂ ಇಂಡಿಯಾದ ಪ್ರಬಲ ಎದುರಾಳಿಗಳೇ ಆಗಿರಬಹುದು. ಆದರೆ ಅವರು ಇಲ್ಲಿಯವರೆಗೆ ವಿಶ್ವಕಪ್ ಗೆದ್ದಿಲ್ಲ. ಹಾಗೆ ನೋಡಿದರೆ ಎರಡು ವಿಶ್ವಕಪ್‌ಗಳನ್ನು ಗೆದ್ದಿರುವ ಟೀಂ ಇಂಡಿಯಾ ಇವರಿಗೆ ಯಾಕೆ ಹೆದರಬೇಕು?

8. ದಕ್ಷಿಣ ಆಫ್ರಿಕಾ ಬಲಿಷ್ಠ ಟೀಂ ಆಗಿರಬಹುದು ಆದರೆ ಬ್ಯಾಟಿಂಗ್ ವೈಫಲ್ಯ ಅವರಲ್ಲೂ ಇದೆ
ದಕ್ಷಿಣ ಆಫ್ರಿಕಾ ಬಲಿಷ್ಠ ಟೀಂ, ಮಾರಕ ಬೌಲಿಂಗ್‌ಗೆ ಎಂಥವರೂ ತತ್ತರಿಸಿ ಹೋಗುತ್ತಾರೆ ಎಂಬೆಲ್ಲಾ ಮಾತುಗಳಿವೆ. ಆದರೆ ಈ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ಆಫ್ರಿಕಾ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 83 ರನ್ ದಾಖಲಿಸಿತ್ತು. ಅಂದರೆ ಇಲ್ಲಿ ಬ್ಯಾಟಿಂಗ್ ವೈಫಲ್ಯವಿದೆ ಎಂಬುದು ಸ್ಪಷ್ಟ. ಧೋನಿ ಈ ಬಗ್ಗೆ ಗಮನ ಹರಿಸಿದರೆ ನಮ್ಮ ಬೌಲರ್‌ಗಳು ಇವರನ್ನು ನಡುಗಿಸಬಹುದು.

9. ಧೋನಿ ಬ್ಯಾಟಿಂಗ್‌ಗೆ ನಿಂತರೆ ತಡೆವವರ್ಯಾರು?
2004ರಲ್ಲಿ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನವಲ್ಲಿ ಧೋನಿ ಮೊದಲ ಇನ್ನಿಂಗ್ಸ್‌ನಲ್ಲಿ 270 ರನ್ ಪೇರಿಸಿದ್ದರು. ಇದು ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಗಳಿಸಿದ ಅತೀ ಹೆಚ್ಚು ರನ್ ಆಗಿತ್ತು.

10. ಶರ್ಮಾ, ಯಾದವ್, ಶಮೀ- ಬೌಲಿಂಗ್ ಅಸ್ತ್ರಗಳು
ಪಾಕಿಸ್ತಾನದ ವಿರುದ್ಧ ಶಮಿಯ ಪ್ರದರ್ಶನವನ್ನು ನೋಡಿದ್ದೇವೆ. ಶರ್ಮಾ, ಶಮಿ, ಯಾದವ್ ಈ ಮೂವರು ಉತ್ತಮ ಬೌಲರ್‌ಗಳು ಎಂಬುದರಲ್ಲಿ ಎರಡು ಮಾತಿಲ್ಲ. ಇವರನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಭಾರತಕ್ಕೆ ವಿಜಯ ಸುಲಭ ಸಾಧ್ಯ.

Write A Comment