ಮನೋರಂಜನೆ

ಪುನೀತ್ ರಾಜ್‌ಕುಮಾರ್, ಮೋಹನ್‌ಲಾಲ್‌ ಅಭಿನಯಿಸಿರುವ ‘ಮೈತ್ರಿ’ ಫೆ. 20 ಬಿಡುಗಡೆ

Pinterest LinkedIn Tumblr

pu

ಪುನೀತ್ ರಾಜ್‌ಕುಮಾರ್, ಮೋಹನ್‌ಲಾಲ್‌, ಅತುಲ್ ಕುಲಕರ್ಣಿಯಂಥ ಸ್ಟಾರ್ ಕಲಾವಿದರು ಅಭಿನಯಿಸಿರುವ ‘ಮೈತ್ರಿ’ ಫೆ. 20ರಂದು ಬಿಡುಗಡೆಯಾಗಲಿದೆ. ಈ ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕಲಾವಿದರು ಇರಲಿಲ್ಲ; ಬದಲಾಗಿ, ತಾಂತ್ರಿಕ ವರ್ಗದವರು ತಮ್ಮ ಅನುಭವ ಹಂಚಿಕೊಳ್ಳಲು ಅವಕಾಶ ನೀಡಲಾಗಿತ್ತು.

‘ಈಗಿನ ಚಿತ್ರರಂಗದ ಟ್ರೆಂಡ್ ಮಾರುಕಟ್ಟೆಯತ್ತ ಮುಖ ಮಾಡಿರುವಂಥದು. ಇಂಥ ಸಮಯದಲ್ಲಿ ಕೇವಲ ಚಿತ್ರಕಥೆಯನ್ನು ನಂಬಿಕೊಂಡು ದೊಡ್ಡ ಕಲಾವಿದರು ನನ್ನ ಸಿನಿಮಾದಲ್ಲಿ ಅಭಿನಯಿಸಿದರು ಎಂಬುದೇ ಸೋಜಿಗದ ಸಂಗತಿ’ ಎಂದು ನಿರ್ದೇಶಕ ಬಿ.ಎಂ.ಗಿರಿರಾಜ್ ಹೇಳಿದರು. ಕಥೆಯೇ ‘ಮೈತ್ರಿ’ಯ ನಾಯಕ; ಇದನ್ನು ಎಲ್ಲರೂ ಗಮನಿಸಿಯೇ ಒಪ್ಪಿಕೊಂಡರು ಎಂದರು ಗಿರಿರಾಜ್.

ಎಲ್ಲರ ಮನ ಗೆಲ್ಲುವಂಥ ಸಿನಿಮಾ ಮಾಡುವುದಕ್ಕಿಂತಲೂ ಹಿತಕರ ಅನುಭವ ಕೊಡುವ ಚಿತ್ರ ನಿರ್ಮಾಣದ ಗುರಿ ನಿರ್ಮಾಪಕ ಎನ್.ಎಸ್.ರಾಜ್‌ಕುಮಾರ್ ಅವರಲ್ಲಿದೆ. ‘ಹಣ ಎಷ್ಟು ಖರ್ಚಾದರೂ ಚಿಂತೆಯಿಲ್ಲ; ಸಿನಿಮಾ ನೋಡಿಕೊಂಡು ಚಿತ್ರಮಂದಿರದಿಂದ ಹೊರಗೆ ಬರುವವರು ಖುಷಿ ಪಡಬೇಕು ಎಂಬ ಉದ್ದೇಶ ನಮ್ಮದಾಗಿದೆ.

ಅದನ್ನು ಮೈತ್ರಿ ಮೂಲಕ ಸಾಧಿಸಿದ್ದೇವೆ’ ಎಂದು ತೃಪ್ತಿ ವ್ಯಕ್ತಪಡಿಸಿದರು. ಮೋಹನ್‌ಲಾಲ್, ಪುನೀತ್, ಇಳಯರಾಜ ಅವರಂಥ ದೊಡ್ಡ ವ್ಯಕ್ತಿಗಳು ಸಂಭಾವನೆ ವಿಷಯದಲ್ಲಿ ಒಂದಿಷ್ಟೂ ಯೋಚಿಸದೇ ಸಹಕಾರ ಕೊಟ್ಟಿರುವುದು ನಿರ್ಮಾಪಕರನ್ನು ಅಚ್ಚರಿಗೊಳಿಸಿದೆ.

ಕಲಾತ್ಮಕ ಚೌಕಟ್ಟಿನೊಂದಿಗೆ ಚೆಂದದ ಕಮರ್ಷಿಯಲ್ ಆಗಿಯೂ ಈ ಚಿತ್ರ ಕಾಣಿಸಿಕೊಳ್ಳಲಿದೆ ಎಂದ ನೃತ್ಯ ನಿರ್ದೇಶಕಿ ಹರಿಣಿ, ಮೋಹನ್‌ಲಾಲ್‌ ಹಾಗೂ ಮಕ್ಕಳು ಪಾಲ್ಗೊಂಡಿದ್ದ ಹಾಡಿಗೆ ನೃತ್ಯ ಸಂಯೋಜಿಸಿದ್ದು ರೋಮಾಂಚನ ನೀಡಿದ ಸಂಗತಿ ಎಂದರು.

ಚಿತ್ರೀಕರಣದ ದಿನದಂದು ದೃಶ್ಯಗಳ ವಿವರ ಕೊಡುವ ನಿರ್ದೇಶಕರ ಮಧ್ಯೆ, ಇಡೀ ಚಿತ್ರಕಥೆಯನ್ನು ಇ–ಮೇಲ್ ಮೂಲಕ ಕಳಿಸಿದ ಗಿರಿರಾಜ್ ಅವರ ನಿಲುವಿಗೆ ಛಾಯಾಗ್ರಾಹಕ ಕೃಷ್ಣಕುಮಾರ್ ಅಚ್ಚರಿ ವ್ಯಕ್ತಪಡಿಸಿದರು. ‘ಸೆಟ್‌ಗಳ ಕೃತಕತೆ ಇಲ್ಲದೇ ಸ್ವಾಭಾವಿಕವಾಗಿ ಶಾಲೆ ಇತರ ಕಡೆಗಳಲ್ಲಿ ಶೂಟಿಂಗ್‌ ನಡೆಸಿದ್ದೇವೆ.

ಅದು ಆ ಸಿನಿಮಾಕ್ಕೆ ಬೇಕಾಗಿದ್ದ ಪ್ರಮುಖ ಅಂಶ’ ಎಂದರು. ಸಾಹಸ ದೃಶ್ಯ ಸಂಯೋಜಿಸಿದ ಡ್ಯಾನಿ, ಮಕ್ಕಳ ಜತೆಯಲ್ಲಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರೆ, ‘ಕಥೆಯ ಓಟಕ್ಕೆ ಎಲ್ಲೂ ಅಡ್ಡಿಯಾಗದಂತೆ ಸಂಕಲನ ಮಾಡುವುದೇ ದೊಡ್ಡ ಸವಾಲು ಅನಿಸಿತು’ ಎಂದು ಕೆ.ಎಂ.ಪ್ರಕಾಶ್ ಹೇಳಿದರು.

ರಾಜ್ಯದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಮೈತ್ರಿ’ಯನ್ನು ತೆರೆ ಕಾಣಿಸಲು ಸಿದ್ಧತೆ ನಡೆಸಲಾಗಿದೆ ಎಂದು ವಿತರಕ ಕಿಶೋರ್ ವಿವರ ನೀಡಿದರು.

Write A Comment