ಮನೋರಂಜನೆ

‘ಅಟ್ಟಹಾಸ’ ಬಳಿಕ ಎ.ಎಂ.ಆರ್. ರಮೇಶ್ ‘ಗೇಮ್’!: ಇದು ಕೊಲೆ ಕೆದಕೊ ಆಟ!

Pinterest LinkedIn Tumblr

moni

‘ಅಟ್ಟಹಾಸ’ ಸಿನಿಮಾ ಮಾಡಿದ ಬಳಿಕ ನಿರ್ದೇಶಕ ಎ.ಎಂ.ಆರ್. ರಮೇಶ್ ಈಗ ‘ಗೇಮ್’ ಆಡಲು ಮುಂದಾಗಿದ್ದಾರೆ. ಯಾವತ್ತೋ ನಡೆದಿರುವ ಕೊಲೆ ಘಟನೆಯೊಂದನ್ನು ಮುಂದಿಟ್ಟುಕೊಂಡು, ತೆರೆಯ ಮೇಲೆ ಆಟ ಆಡುವುದು ಅವರ ಬಯಕೆ. ‘ನನ್ನ ಪ್ರತಿ ಸಿನಿಮಾ ಕೂಡ ವಿಭಿನ್ನವಾಗಿರುತ್ತದೆ. ಆ ಸಾಲಿಗೆ ಇನ್ನೊಂದು ಸಿನಿಮಾ ಸೇರ್ಪಡೆಯಾಗಲಿದೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು ರಮೇಶ್.

‘ಗೇಮ್’ ಚಿತ್ರದ ಮುಹೂರ್ತ ಬೆಂಗಳೂರಿನ ಬಸವನಗುಡಿ ದೇವಸ್ಥಾನದಲ್ಲಿ ಈಚೆಗೆ ನಡೆಯಿತು. ಕೊಲೆ, ಅದರ ತನಿಖೆ ಕುರಿತ ಸಿನಿಮಾ ಇದಾಗಿರುವುದರಿಂದಲೋ ಏನೋ, ಹಿರಿಯ ಪೊಲೀಸ್‌ ಅಧಿಕಾರಿಗಳ ದೊಡ್ಡ ದಂಡು ಕಾರ್ಯಕ್ರಮಕ್ಕೆ ಬಂದಿತ್ತು! ಚುಟುಕಾಗಿ ನಡೆದ ಪೂಜೆ– ಮುಹೂರ್ತದ ನಂತರ, ಪತ್ರಕರ್ತರ ಜತೆ ಚಿತ್ರತಂಡ ಮಾತಿಗಿಳಿಯಿತು.

ರಮೇಶ್ ಅವರದು ಇದು ಆರನೇ ಚಿತ್ರ. ನಿಗೂಢವಾಗಿ ನಡೆದ ಕೊಲೆಯೊಂದರ ಬೆನ್ನತ್ತಿ, ಅದರ ಹಿಂದಿರುವ ಕೈಗಳನ್ನು ಪತ್ತೆಹಚ್ಚುವುದು ಚಿತ್ರಕಥೆ. ‘ಅಟ್ಟಹಾಸ ತರಹ ಇದನ್ನು ಕರಾರುವಾಕ್ಕಾಗಿ ಪ್ಲ್ಯಾನ್ ಮಾಡಿದ್ದೇವೆ.

ಮಾರ್ಚ್ 1ರಿಂದ ಶೂಟಿಂಗ್ ಆರಂಭವಾಗಲಿದ್ದು, ಸತತ 35 ದಿನಗಳ ಕಾಲ ಚಿತ್ರೀಕರಣ ನಡೆಸಲಾಗುವುದು’ ಎಂಬ ಮಾಹಿತಿಯನ್ನು ರಮೇಶ್ ಕೊಟ್ಟರು.ಒಂದಷ್ಟು ದೃಶ್ಯಗಳನ್ನು ಚಿತ್ರಕಥೆಗೆ ಅಗತ್ಯವಾಗುವಂತೆ ಸ್ಕಾಟ್‌ಲೆಂಡ್ ಅಥವಾ ಸ್ವಿಟ್ಝರ್‌ಲೆಂಡಿನಲ್ಲಿ ಚಿತ್ರೀಕರಿಸುವ ಯೋಜನೆಯೂ ಇದೆ.

‘ಇಂಥ ಚಿತ್ರಕಥೆಯಾಗಲೀ, ಪಾತ್ರವಾಗಲೀ ಈವರೆಗೆ ನನಗೆ ಸಿಕ್ಕಿಲ್ಲ. ಅದಕ್ಕಾಗಿಯೇ ಎರಡನೇ ಮಾತಿಲ್ಲದೇ ಒಪ್ಪಿಕೊಂಡೆ’ ಎಂಬ ಖುಷಿ ಅರ್ಜುನ್ ಸರ್ಜಾ ಅವರದಾಗಿತ್ತು. ಇದೊಂದು ಆ್ಯಕ್ಷನ್– ಥ್ರಿಲ್ಲರ್. ಅದಕ್ಕಿಂತ ಮಿಗಿಲಾಗಿ, ರಮೇಶ್ ಅವರ ಮ್ಯಾಜಿಕ್‌ ಇರುವ ಸಿನಿಮಾ ಎಂಬ ಶ್ಲಾಘನೆ ಅರ್ಜುನ್ ಅವರದು.

ಕವಿತಾ ಲಂಕೇಶ್ ಅವರ ‘ತನನಂ ತನನಂ’ನಲ್ಲಿ ಕಾಣಿಸಿಕೊಂಡಿದ್ದ ಶ್ಯಾಮ್‌ಗೆ ‘ಗೇಮ್‌’ನಲ್ಲಿ ಮುಖ್ಯ ಪಾತ್ರವಿದೆ. ಬಾಲ್ಯದಿಂದಲೂ ಅರ್ಜುನ್ ಸರ್ಜಾ ಅಭಿಮಾನಿಯಾಗಿರುವ ಶ್ಯಾಮ್ ಅವರಿಗೆ ಈಗ ಅರ್ಜುನ್ ಅವರ ಜತೆಗೇ ಅಭಿನಯಿಸುವುದು ರೋಮಾಂಚನ ಮೂಡಿಸಿದೆಯಂತೆ.

ಚಿತ್ರಕ್ಕೆ ದೇಶರಾಜ್ ಬಂಡವಾಳ ಹಾಕಲಿದ್ದು, ‘ಕಥೆ ಫೆಂಟಾಸ್ಟಿಕ್ ಆಗಿರುವುದೇ ನಾನು ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ಕಾರಣ’ ಎಂದು ಹೇಳಿಕೊಂಡರು. ಛಾಯಾಗ್ರಾಹಕ ಶ್ರೀರಾಮ್, ಸಂಕಲನಕಾರ ಕೃಷ್ಣಾರೆಡ್ಡಿ, ನಿವೃತ್ತ ಡಿಜಿಪಿ ಕುಚ್ಚಣ್ಣ ಶ್ರೀನಿವಾಸ್ ಮಾತನಾಡಿದರು.

ಮನಿಷಾ ಕೊಯಿರಾಲಾ ನಾಯಕಿಯಾಗಿರುವ ಈ ಚಿತ್ರಕ್ಕೆ ಎರಡೇ ಹಾಡುಗಳಿದ್ದು, ಇಳಯರಾಜ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಕನ್ನಡ ಹಾಗೂ ತಮಿಳಿನಲ್ಲಿ ನಿರ್ಮಾಣವಾಗಲಿರುವ ‘ಗೇಮ್‌’ ಚಿತ್ರವನ್ನು ಜೂನ್ ತಿಂಗಳ ಹೊತ್ತಿಗೆ ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶ ಚಿತ್ರತಂಡದ್ದು.

Write A Comment