ಮನೋರಂಜನೆ

8 ವರ್ಷದ ಬಳಿಕ ನಟಿ ಹೃದಯ ಅವಂತಿ

Pinterest LinkedIn Tumblr

ava

ಬರೋಬ್ಬರಿ ಎಂಟು ವರ್ಷದ ಬಳಿಕ ಮತ್ತೆ ಚಿತ್ರರಂಗದ ಹೊಸ್ತಿಲಲ್ಲಿ ನಿಂತು ಕದ ತಟ್ಟುತ್ತಿದ್ದಾರೆ ನಟಿ ಹೃದಯ ಅವಂತಿ. ಈ ಹೆಸರು ಚಿತ್ರರಸಿಕರಿಗೆ ಅಪರಿಚಿತ. ‘ಒರಟ ಐ ಲವ್‌ ಯೂ’ ಚಿತ್ರದಲ್ಲಿ ಸೌಮ್ಯಾ ಎಂದು ಪರಿಚಿತವಾಗಿದ್ದರೂ ಕಾಲದ ತಿರುಗಣೆಯಲ್ಲಿ ಆ ಹೆಸರೂ ಪ್ರೇಕ್ಷಕರ ಮನಸಿನಿಂದ ಮಾಸಿರಬಹುದು.

‘ಸೌಮ್ಯ ಸ್ವಭಾವದವಳಾಗಿರಬಹುದು, ಅದಕ್ಕಿಂತ ಮಿಗಿಲಾಗಿ ನಾನು ಹೃದಯವಂತೆ. ಈಗ ಹೊಸ ಹುರುಪು, ಹೊಸ ಭರವಸೆಗಳೊಂದಿಗೆ ಮೂಲ ಹೆಸರಿನೊಂದಿಗೇ ಬಂದಿದ್ದೇನೆ’ ಎನ್ನುತ್ತಿದ್ದಾರೆ ಈ ಬೆಡಗಿ.

ಪ್ರಶಾಂತ್‌ ನಾಯಕರಾಗಿದ್ದ ‘ಒರಟ ಐ ಲವ್‌ ಯೂ’ ಚಿತ್ರದ ಮೂಲಕ ನಾಯಕಿಯಾಗಿ ಪರಿಚಿತರಾದವರು ಸೌಮ್ಯಾ. ಆಗ ಅವರಿನ್ನೂ 10ನೇ ತರಗತಿ ವಿದ್ಯಾರ್ಥಿನಿ. ನಾಯಕಿಯಾಗಿ ಮೊದಲ ಚಿತ್ರವಾದರೂ ‘ಹಠವಾದಿ’ ಮತ್ತು ‘ನಮ್ಮಣ್ಣ’ ಚಿತ್ರಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು.

ಚಿತ್ರದ ಗೆಲುವು ಅವರ ಮುಂದೆ ಸಾಕಷ್ಟು ಅವಕಾಶಗಳನ್ನೂ ಇರಿಸಿತು. ನಾಯಕಿಯಾಗಬೇಕು ಎಂಬ ಬಾಲ್ಯದ ಕನಸು ಈಡೇರಿದ್ದರೂ, ಇದೇ ವೃತ್ತಿಯಲ್ಲಿ ಮುಂದುವರಿಯಲು ಓದು ಪೂರ್ಣಗೊಳಿಸದೆ ಸಾಧ್ಯವಿರಲಿಲ್ಲ. ಓದು ಮುಗಿದ ಬಳಿಕವಷ್ಟೇ ಸಿನಿಮಾ ಎಂಬ ಕಟ್ಟಪ್ಪಣೆ ಮನೆಯಲ್ಲಿ. ಹೀಗಾಗಿ ಎಂಜಿನಿಯರಿಂಗ್‌ ಪದವಿ ಪಡೆಯುವುದರಲ್ಲಿ ಮಗ್ನರಾಗಿದ್ದ ಅವರಲ್ಲಿ ನಟಿಯಾಗಿ ಬೆಳೆಯಬೇಕೆಂಬ ಕನಸಿಗೆ ರೆಕ್ಕೆ ಪುಕ್ಕ ಚಿಗುರಿದೆ. ಪದವಿ ಮುಗಿಯುತ್ತಿದ್ದಂತೆಯೇ ಮತ್ತೆ ಸಿನಿಮಾದತ್ತ ಹೊರಳಿದ್ದಾರೆ.

ಹಿಂದಿಗಿಂತ ದೇಹವನ್ನು ದಂಡಿಸಿ ಕಡೆದಿರುವುದರ ಜತೆ, ನೃತ್ಯ, ನಟನೆ ಮುಂತಾದವುಗಳಲ್ಲಿ ಸಾಕಷ್ಟು ಅಭ್ಯಾಸ ನಡೆಸಿದ್ದಾರೆ. ‘ಒರಟ…’ ಚಿತ್ರದ ವೇಳೆ ಇನ್ನೂ ಪ್ರಬುದ್ಧತೆ ಬಂದಿರಲಿಲ್ಲ. ಈಗ ಒಳಿತು ಕೆಡಕುಗಳ ಕುರಿತು ತೀರ್ಮಾನ ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆದಿದ್ದೇನೆ’ ಎನ್ನುತ್ತಾರೆ ಅವರು.

ಅಂದಹಾಗೆ, ಸೌಮ್ಯಾ ಅವರ ಮೂಲ ಹೆಸರು ಹೃದಯ ಅವಂತಿ. ಸಿನಿಮಾಕ್ಕೆ ಬೇರೆ ಹೆಸರಿರಲಿ ಎಂದು ಬದಲಿಸಲಾಗಿತ್ತು.ಆದರೆ, ಬದಲಾದ ಹೆಸರು ಅವರ ಕುಟುಂಬಕ್ಕೆ ಇಷ್ಟವಿಲ್ಲ. ಮೂಲ ಹೆಸರಿನಲ್ಲಿಯೇ ಅವರು ಕಾಣಿಸಿಕೊಳ್ಳಬೇಕು ಎನ್ನುವುದು ಅವರ ಅಭಿಲಾಷೆ. ಹೀಗಾಗಿ ಹೃದಯ ಅವಂತಿ ಎಂಬ ಹೆಸರಿನ ಮೂಲಕವೇ ಎರಡನೇ ಇನ್ನಿಂಗ್ಸ್‌ ಆರಂಭಿಸಲು ತಯಾರಾಗಿದ್ದಾರೆ.

ತೆಲುಗಿನ ಎರಡು ಸಿನಿಮಾಗಳಿಗೆ ಆಡಿಷನ್‌ನಲ್ಲಿ ಪಾಲ್ಗೊಂಡು ಬಂದಿರುವ ಅವರ ಹೃದಯ ಮಿಡಿಯುತ್ತಿರುವುದು ಕನ್ನಡ ಚಿತ್ರರಂಗದತ್ತ. ‘ಕಲಾವಿದರಿಗೆ ಭಾಷೆಯ ಪರಿಮಿತಿ ಇಲ್ಲ. ಪ್ರತಿಭೆ ಅನಾವರಣಕ್ಕೆ ಯಾವ ಭಾಷೆಯಾದರೇನು? ಆದರೆ ನಮ್ಮ ಮನೆಯವರು ನನ್ನನ್ನು ಗುರ್ತಿಸಿದರೆ ಖುಷಿ. ಅದಕ್ಕಾಗಿ ಕಾಯುತ್ತೇನೆ. ಇಲ್ಲದಿದ್ದರೆ ಪರಭಾಷಾ ಸಾಂಗತ್ಯ ಅನಿವಾರ್ಯ’ ಎನ್ನುತ್ತಾರೆ ಹೃದಯ.

ಅವಕಾಶಕ್ಕಾಗಿ ಹುಡುಕಾಡುತ್ತಿದ್ದರೂ ಬರುವ ಸಿನಿಮಾಗಳೆಲ್ಲವನ್ನೂ ಒಪ್ಪಿಕೊಳ್ಳುವ ತರಾತುರಿಯೂ ಅವರದ್ದಲ್ಲ. ನಾಯಕ ಮತ್ತು ನಿರ್ದೇಶಕರಿಗೆ ಅವರ ಮೊದಲ ಆದ್ಯತೆ. ಅದರಲ್ಲಿಯೂ ರವಿಚಂದ್ರನ್ ಅವರೊಂದಿಗೆ ಕನಿಷ್ಠ ಒಂದು ಹಾಡಿನಲ್ಲಾದರೂ ಕಾಣಿಸಬೇಕೆಂಬ  ದೊಡ್ಡ ನಟರೊಂದಿಗೆ ನಟಿಸುವ ಆಸೆ ಒಂದೆಡೆ.

ಹೊಸಬರಾದರೂ ಅಡ್ಡಿಯಿಲ್ಲ, ಅವರು ಉತ್ತಮ ನಿರ್ದೇಶಕ ಎಂಬ ಭಾವನೆ ಮೂಡಬೇಕು. ಹೀಗಿದ್ದಲ್ಲಿ ಮಾತ್ರ ಒಪ್ಪಿಕೊಳ್ಳುವುದು ಎನ್ನುವ ಕರಾರನ್ನೂ ಹಾಕುತ್ತಾರೆ. ಹಳ್ಳಿ ಯುವತಿ ಪಾತ್ರವಾದರೂ ಸೈ, ಗ್ಲಾಮರಸ್‌ ಪಾತ್ರಕ್ಕೂ ಸೈ ಎನ್ನುವ ಅವರು, ಈಗಿನ ಸಿನಿಮಾ ಟ್ರೆಂಡ್‌ಗೆ ಪೂರಕವಾಗಿ ತಮ್ಮನ್ನು ತಿದ್ದಿ ತೀಡಿಕೊಂಡಿದ್ದಾರಂತೆ.

Write A Comment