ಮನೋರಂಜನೆ

‘ನನಗೆ ಸ್ಟಾರ್‌ಗಿರಿ ಬೇಡ’: ನಟ ವಿಜಯ ರಾಘವೇಂದ್ರ

Pinterest LinkedIn Tumblr

kbec19vijay1

ನಟ ವಿಜಯ ರಾಘವೇಂದ್ರ ಅವರನ್ನು ಹಾಸ್ಯಕ್ಕೆ ಎಳೆಯುವುದು ತುಂಬಾ ಕಷ್ಟ. ಸದ್ಯಕ್ಕೆ ‘ರಣತಂತ್ರ’, ‘ವಂಶೋದ್ಧಾರಕ’ ಚಿತ್ರಗಳನ್ನು ಅಂಗೈಯಲ್ಲಿಟ್ಟುಕೊಂಡಿರುವ ಅವರು ರವಿಚಂದ್ರನ್ ಅವರ ‘ಅಪೂರ್ವ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಅಪೂರ್ವ’ದಲ್ಲಿ ಅವರ ಧರ್ಮಪತ್ನಿಯೇ ಅವರಿಗೆ ಜೋಡಿ.

ಇಷ್ಟೇ ಅಲ್ಲ, ಮೊದಲ ಬಾರಿಗೆ ‘ಕಿಸ್ಮತ್’ ಚಿತ್ರ ನಿರ್ದೇಶನ ಮತ್ತು ನಿರ್ಮಾಣ ಮಾಡುವ ಮೂಲಕ ವಿಜಯ್ ಹೊಸ ಅವತಾರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಬದುಕನ್ನು ಗಂಭೀರವಾಗಿ ನೋಡುವ ಅವರಿಂದ ಒಂದಿಷ್ಟು ಕಚಗುಳಿಯ ಮಾತುಗಳನ್ನು ಅಪೇಕ್ಷಿಸಿರುವ ಸಂದರ್ಶನ ಇದು.

* ‘ಅಪೂರ್ವ’ದಲ್ಲಿ ಪತಿ– ಪತ್ನಿ ಜತೆಯಾಗಿದ್ದೀರಿ?
ಅದೊಂದು ‘ಅಪೂರ್ವ’ ಅವಕಾಶ. ಎಲ್ಲರಿಗೂ ಈ ಅವಕಾಶ ಸಿಕ್ಕುವುದಿಲ್ಲ ಅಲ್ಲವೇ.

* ‘ವಂಶೋದ್ಧಾರಕ’ದಲ್ಲಿ ನೇಗಿಲು ಹಿಡಿದು ಉಳುವಾಯೋಗಿಯಾಗಿದ್ದೀರಂತೆ. ದೇಹವನ್ನು ಬಗ್ಗಿಸುವ ಯೋಜನೆಯೇ?
ಜಿಮ್‌ನಲ್ಲಿ ಮಾಡಿದ ಕಸರತ್ತು ತಾಂತ್ರಿಕವಾಗಿತ್ತು. ನೇಗಿಲು ಹಿಡಿದು ದೇಹ ಬಗ್ಗಿಸಿ ಭೂಮಿ ತಾಯಿಗೆ ಹತ್ತಿರವಾಗೋಣ ಎಂದು. ನಾನೂ ಹಳ್ಳಿಯವನೇ. ನೇಗಿಲು ಹಿಡಿಯುವುದಕ್ಕೆ, ಬೇಸಾಯ ಮಾಡುವುದಕ್ಕೆ ಕಷ್ಟಪಡಬೇಕಾಗಿಲ್ಲ. ರಾಗಿ ಮುದ್ದೆ, ಸೊಪ್ಸಾರು, ಖಾರವನ್ನು ಚಪ್ಪರಿಸಿ ಚೆನ್ನಾಗಿ ಹೊಡೆಯುತ್ತೇನೆ.

* ವಂಶ ಉದ್ಧಾರ ಮಾಡುವ ‘ವಂಶೋದ್ಧಾರಕ’ ಎನಿಸಿಕೊಳ್ಳಬೇಕೆಂದು ಈಗೇಕೆ ಅನ್ನಿಸಿತು?
ಇತ್ತೀಚಿನ ದಿನಗಳಲ್ಲಿ ವಂಶಗಳು ಬೆಳೆಯುವುದೇ ಕಷ್ಟವಾಗುತ್ತಿದೆ. ಆ ಕಾರಣಕ್ಕೆ ನಾನೂ ವಂಶ ಉದ್ಧಾರ ಮಾಡುವ ವಂಶೋದ್ಧಾರಕನಾದೆ. ಫ್ಯಾಮಿಲಿ ಪ್ಲಾನಿಂಗ್‌ಗಳು ಕುಟುಂಬಗಳನ್ನು ಬೆಳೆಸುವ ರೀತಿ ಇರಬೇಕು, ಆದರೆ ಮೂಲ ಬೇರನ್ನೇ ಕಟ್ ಮಾಡಿಕೊಳ್ಳಬಾರದು.

* ರೇಡಿಯೊದಲ್ಲಿ ‘ನೆನಪಿನ ಈಡಿಯಟ್ ಬಾಕ್ಸ್‌’ ಕಾರ್ಯಕ್ರಮ ನಡೆಸಿಕೊಡುತ್ತಿದ್ದೀರಿ. ಮೂರ್ಖರನ್ನಾಗಿ ಮಾಡುವ ಆಲೋಚನೆ ನಿಮಗೇಕೆ ಬಂತು?
ನಮ್ಮನ್ನು ನಾವೇ ಒಂದು ಸಲ ನೋಡಿಕೊಂಡರೆ ಈಡಿಯಟ್ ರೀತಿ ಬದುಕುತ್ತಿದ್ದೇವೆ ಎನಿಸುತ್ತದೆ. ಅದಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ ಇದಷ್ಟೇ.

* ಕಾಲೇಜು ದಿನಗಳಲ್ಲಿ ಲೈನ್ ಹಾಕಿದ ಹುಡುಗಿಯರ ಲಿಸ್ಟ್ ಏನಾದ್ರೂ ಇಟ್ಟಿದ್ದಿರಾ?
ಅಯ್ಯೋ… ಹೆಚ್ಚು ಹುಡುಗಿಯರೇನೂ ಲೈನ್ ಹಾಕಿಲ್ಲ. ಒಂದೇ ಒಂದು ಹುಡುಗಿ! ಅದು ಗ್ರೀಟಿಂಗ್ ಕಾರ್ಡು, ಡೈರಿ ಮಿಲ್ಕ್, ಲೆಟರ್‌ ತೆಗೆದುಕೊಂಡು ಬಂದಳು. ಸಿಕ್ಕಾಪಟ್ಟೆ ಹೆದರಿದ್ದಳು. ಅಪ್ಪ–ಅಮ್ಮನನ್ನು ನೆನಪು ಮಾಡಿಕೊಂಡು ಅವಳಿಗಿಂತ ನಾನು ಹೆಚ್ಚು ಹೆದರಿದ್ದೆ. ಡೈರಿಮಿಲ್ಕ್‌ ಅಂದರೆ ನನಗೆ ತುಂಬಾ ಇಷ್ಟ, ಅದನ್ನು ಮಾತ್ರ ತೆಗೆದುಕೊಂಡು ಬಂದೆ. ಆದರೆ ಅದನ್ನೂ ನನ್ನ ಫ್ರೆಂಡ್ಸ್‌ ತಿಂದುಬಿಟ್ಟರು.

* ನೀವು ಯಾರಿಗಾದ್ರೂ ಫ್ಲವರು, ಚಾಕೊಲೇಟ್ ಕೊಟ್ಟಿದ್ದುಂಟೇ?
ಕೊಟ್ಟಿದ್ದೆ. ಎಲ್ಲರೂ ಚಾಕೊಲೇಟ್ ತಿಂದಾದ ಮೇಲೆ ಚಾಕೊಲೇಟ್ ಚೆನ್ನಾಗಿದೆ ಎಂದು ಹೇಳಿ ಹೋದರು! ಕಾಲೇಜಿನಲ್ಲಿ ನಮ್ಮಷ್ಟು ಬೋರಿಂಗ್ ಗುಂಪು ಯಾವುದೂ ಇರಲಿಲ್ಲ. ನಾಲ್ಕೈದು ಜನ ಸ್ನೇಹಿತರು ಅಷ್ಟೇ. ಡ್ಯಾನ್ಸ್‌ ನಮ್ಮ ತಂಡಕ್ಕೆ ಅಚ್ಚುಮೆಚ್ಚು. ಕಾಲೇಜಿಗಿಂತ ಹೆಚ್ಚು ಸಮಯ ಕಳೆದದ್ದು ಥಿಯೇಟರ್‌ಗಳಲ್ಲಿ.

* ‘ರಣತಂತ್ರ’ವನ್ನು ಬೇಧಿಸುತ್ತಿದ್ದೀರಿ?
ಖಂಡಿತ ಬೇಧಿಸುತ್ತೇನೆ. ಎಲ್ಲರ ಬದುಕಿನಲ್ಲಿ ಎಲ್ಲವೂ ಚೆನ್ನಾಗಿರುತ್ತದೆ ಎಂದು ಹೋಗುತ್ತೇವೆ. ಆದರೆ ಕೆಲವು ಸಮಯಗಳು ದೊಡ್ಡ ತಂತ್ರ ಹೆಣೆದಿರುತ್ತದೆ.

* ನಿಮ್ಮ ಪತ್ನಿಯ ಜತೆಯಲ್ಲಿಯೇ ನಟಿಸಲು ‘ಅಮ್ಮಾವ್ರ ಗಂಡ’ ಸಿನಿಮಾ ಪಾರ್ಟ್ 2 ಬಂದ್ರೆ ನಾಯಕನಾಗುತ್ತೀರಾ?
ಖಂಡಿತ. ಅದಕ್ಕಿಂತ ಖುಷಿ ಬೇರೇನು ಇದೆ. ಗಂಡ ಹೆಂಡತಿ ಸಂಬಂಧ ಬಹಳ ರಿಯಾಲಿಸ್ಟಿಕ್ ಆಗಿ ಬರುತ್ತದೆ. ನನ್ನಾಕೆಗೆ ನಾನು ಬಗ್ಗುತ್ತೇನೆ, ಅಪ್ಪ–ಅಮ್ಮ, ಸ್ನೇಹಿತರು ಅಷ್ಟೇ ಏಕೆ ಜನರಿಗೂ ನಾನು ಬಗ್ಗಿದ್ದೇನೆ.

* ಶಾಲಾದಿನಗಳಲ್ಲಿ ಚಿನ್ನಾರಿ ಮುತ್ತನಂಗೆ ಇದ್ದರೋ, ಇಲ್ಲ ಕೀಟಲೆ ಕ್ವಾಟ್ಲೆ ಜಾಸ್ತಿನೋ?
ಈಗಲೂ ಒಂದು ಘಟನೆ ಚೆನ್ನಾಗಿ ನೆನಪಿದೆ. ನಾನಾಗ 10ನೇ ತರಗತಿ. ಉಷಾ ಪದ್ಮನಾಭನ್ ಎಂದು ಇಂಗ್ಲಿಷ್ ಟೀಚರ್ ಇದ್ದರು. ಈಗ ಅಲ್ಪಸ್ವಲ್ಪ ಇಂಗ್ಲಿಷ್ ಮಾತನಾಡುವೆ ಎಂದರೆ ಅದಕ್ಕೆ ಅವರೇ ಕಾರಣ. ಹಣೆಗೆ ದೊಡ್ಡದಾಗಿ ಕುಂಕುಮ ಇಟ್ಟುಕೊಂಡು ಬರುತ್ತಿದ್ದರು. ಒಂದು ದಿನ ದೊಡ್ಡ ಹಣೆ, ಕುಂಕುಮ, ಕೋರೆ ಹಲ್ಲು ಇತ್ಯಾದಿ ಸೇರಿಸಿ ವಿಕೃತವಾಗಿ ಅವರ ಚಿತ್ರ ಬರೆದಿದ್ದೆ. ಪಕ್ಕದಲ್ಲಿ ಕುಳಿತ್ತಿದ್ದ ನನ್ನ ಸ್ನೇಹಿತ ನೋಡಿ ನಕ್ಕುಬಿಟ್ಟ. ಮೇಡಂ ಬಂದು ಆ ಚಿತ್ರವನ್ನು ನೋಡಿ ಕಿವಿ ಹಿಂಡಿದರು. ಇದೆಲ್ಲಾ ಚೇಷ್ಟೆಗಳನ್ನು ಮಾಡಿದ್ದು ನೆನೆಸಿಕೊಂಡರೆ ನಗು ಬರುತ್ತದೆ.

* ಸ್ಟಾರ್‌ಗಿರಿ ಮೇಲೆ ಏಕೆ ಮೋಹ ಇಲ್ಲ ನಿಮಗೆ?
ಒಂದಿಬ್ಬರು ಬಂದು ‘ಸರ್ ನಿಮಗೆ ಆ ಸ್ಟಾರ್ ಕೊಡುತ್ತೀವಿ, ಈ ಸ್ಟಾರ್ ಕೊಡ್ತೀವಿ’ ಎಂದರು. ನನಗೆ ಯಾವ ಸ್ಟಾರ್‌ಗಿರಿಯೂ ಬೇಡ ಎಂದೆ. ಈಗ ನನ್ನ  ಸಿನಿಮಾಗಾಗಿ ಚಿನ್ನಾರಿ ಮುತ್ತಾ ವಿಜಯ್ ಎಂದು ಕರೆದುಕೊಳ್ಳುತ್ತಿದ್ದೇನೆ. ಇದಕ್ಕೂ ಕೆಲವರು ಹೆಸರು ಬದಲಿಸಿಕೊಂಡಿದ್ದೀರಾ ಎಂದರು. ಅಪ್ಪ ಅಮ್ಮ ಇಟ್ಟು ಹೆಸರು ನಾನು ಬದಲಾಯಿಸಿಕೊಳ್ಳೋದಿಲ್ಲ.

* ‘ಕಿಸ್ಮತ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದೀರಿ. ಇದು ದೂರದ ಆಲೋಚನೆಯೋ, ದುರಾಲೋಚನೆಯೋ?
‘ಕಿಸ್ಮತ್’ ನಿರ್ಮಾಣ ಮತ್ತು ನಿರ್ದೇಶನ ಬಹು ದೂರದ ಆಲೋಚನೆ. ಎಲ್ಲರಿಂದಲೂ ಒಳ್ಳೇ ಸಹಕಾರ ಸಿಕ್ಕುತ್ತಿದೆ.
* * *

ಒಂದು ದಿನ ಕಾಲೇಜಿಗೆ ಹೋದೆ. ಪೀಒನ್, ವಾಚ್‌ಮ್ಯಾನ್, ಲೆಕ್ಚರರ್ ಎಲ್ಲರೂ ನನ್ನ ನುಂಗುವಂತೆ ನೋಡುತ್ತಿದ್ದರು. ಮೊದಲು ಟೀಚರ್ ಲೆಕ್ಚರರ್ ಒಬ್ಬರು ‘ಬಂದಾ, ಬಾ ಬಾ ನಿಮ್ಮ ತಂದೆ ನೋಡಿದರೆ ಅಂಥಾ ದೊಡ್ಡ ಮನುಷ್ಯರು, ನೀನು ನೋಡಿದರೆ ಹೀಗೆ ಮಾಡೋದಾ’ ಅಂದರು. ನಮ್ಮ ಅಕ್ಕನೂ ಅದೇ ಕಾಲೇಜಿನಲ್ಲಿ ಓದುತ್ತಿದ್ದು, ‘ನಮ್ಮ ಅಪ್ಪ–ಅಮ್ಮನ ಮಾನ ಕಳೆಯುವುದಕ್ಕೆ ನೀನು ಹುಟ್ಟುಬಿಟ್ಟಿದ್ದೀಯಾ ಥೂ…’ ಎಂದಳು. ನನಗೆ ಏನೂ ಅರ್ಥವೇ ಆಗಲಿಲ್ಲ.

ಉದಯ್ ಚಂದ್ರ ಎನ್ನುವ ಲೆಕ್ಚರರ್, ‘ಮಿಸ್ಟರ್ ಗ್ರೇಟ್ ವಿಜಯ ರಾಘವೇಂದ್ರ ಬನ್ನಿ’ ಅಂದರು. ಅಯ್ಯೋ ಇದೇನಪ್ಪ ಈ ರೀತಿ, ಏನು ತಪ್ಪು ಮಾಡಿದ್ದೀನಿ ಎಂದುಕೊಂಡೆ. ಪ್ರಿನ್ಸಿಪಾಲರ ರೂಮ್‌ಗೆ ಕಳುಹಿಸಿದರು. ಅಲ್ಲಿ ಅದಾಗಲೇ ಕೇಶು, ಸಂತೋಷ, ದೀಪು ಎನ್ನುವ ನನ್ನ ಸ್ನೇಹಿತರು ಇದ್ದರು. ಪೀಒನ್ನು ದೇವರ ಚಿತ್ರಕ್ಕೆ ಮಂಗಳಾರತಿ ಮಾಡುತ್ತಿದ್ದ. ಪ್ರಿನ್ಸಿಪಾಲ್ ವೆಂಕಟರಾಜು ‘ಏ ಇವನ ಮುಖಕ್ಕೂ ಮಂಗಳಾರತಿ ಮಾಡು’ ಎಂದರು. ಆ ಆಸಾಮಿ ನನಗೂ ಮಂಗಳಾರತಿ ಮಾಡಿಬಿಟ್ಟ.

ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು ಅಂದರೆ, ನಮ್ಮ ಕಾಲೇಜಿನ ಒಂದು ಹುಡುಗಿ ನೋಟ್ ಪುಸ್ತಕದಲ್ಲಿ ಅಶ್ಲೀಲವಾಗಿ ಇಂಗ್ಲಿಷ್‌ನಲ್ಲಿ ಏನೇನೋ ಬರೆದು ನಮ್ಮ ಬೆಂಚ್ ಬಳಿ ಅದನ್ನು ಇಟ್ಟಿದ್ದರು. ಅದನ್ನು ಅವಳು ವಿಜಯ್ ರಾಘವೇಂದ್ರ ಮತ್ತು ಅವನ ಸ್ನೇಹಿತರು ಬರೆದಿದ್ದಾರೆ ಎಂದು ಕಂಪ್ಲೇಂಟ್ ಮಾಡಿದ್ದಳು. ನನ್ನ ಸ್ನೇಹಿತರು ಆ ರೀತಿ ಎಲ್ಲ ಮಾಡುವವರಲ್ಲ, ಆದರೂ ‘ಏಕೆ ಈ ರೀತಿ ಮಾಡಿದರೋ’ ಎಂದು ಕೇಳಿದೆ. ‘ಅಯ್ಯೋ ಆ ಹುಡುಗಿ ಫೇಸ್ ನೋಡಿದರೆ ಸಾಕಾಗುತ್ತೆ, ಇನ್ನು ಬರೆಯೋದೆಲ್ಲಿ’ ಅಂದರು. ಕೊನೆಗೆ ವಿಚಾರಣೆ ನಡೆಸಿದಾಗ ತಿಳಿದದ್ದು, ಆಕೆಯ ವಿರೋಧಿಗಳು ಆ ರೀತಿ ಬರೆದು ನಮ್ಮ ಬೆಂಚ್‌ಗೆ ಹಾಕಿದ್ದರು. ಆ ಘಟನೆಗಳನ್ನು ನೆನೆಸಿಕೊಂಡಾಗ ನಗು ಉಕ್ಕಿ ಬರುತ್ತೆ.

Write A Comment