ಕರ್ನಾಟಕ

ಕೇಶದಾನ ಅಭಿಯಾನ

Pinterest LinkedIn Tumblr

kes

ರಕ್ತದಾನ, ನೇತ್ರದಾನ, ಅಂಗಾಂಗದಾನದ ಬಗ್ಗೆ ಕೇಳಿದ್ದೇವೆ, ಅಂತಹ ದಾನಗಳ ಸಾರ್ಥಕತೆಯ ಬಗ್ಗೆಯೂ ಗೊತ್ತು, ಆದರೆ ಇದೇನಿದು ಹೊಸ ದಾನದ ಮಾತು– ‘ಕೇಶದಾನ’ದಿಂದ ಪ್ರಯೋಜನ ಏನು? ಅದರಲ್ಲಿ ಸಾರ್ಥಕ್ಯದ ಮಾತೆಲ್ಲಿದೆ? ಎಂದೆಲ್ಲ ಯೋಚಿಸುವವರಿಗಾಗಿಯೇ ನಗರದ ಗ್ರೀನ್ ಟ್ರೆಂಡ್ ಸಲೂನ್ ‘ಟ್ಯಾಂಗಲ್ಡ್’ ಎನ್ನುವ ಈ ವಿನೂತನ ಅಭಿಯಾನವನ್ನು ಆಯೋಜಿಸಿದೆ.

ಕಳೆದ ವರ್ಷ ಈ ಅಭಿಯಾನಕ್ಕೆ ಅಪಾರ ಜನಮನ್ನಣೆ ವ್ಯಕ್ತವಾಗಿತ್ತು. ಮಾತ್ರವಲ್ಲ, ಸುಮಾರು 3,500 ಜನರು ಸ್ವಯಂಪ್ರೇರಿತರಾಗಿ ಕೇಶದಾನ ಮಾಡುವ ಮೂಲಕ 200ಕ್ಕೂ ಅಧಿಕ ವಿಗ್‌ಗಳ ತಯಾರಿಕೆಗೆ ಕೊಡುಗೆ ನೀಡಿದ್ದರು. ಈ ವಿಗ್‌ಗಳನ್ನು ಕಿಮೊಥೆರಪಿ ಚಿಕಿತ್ಸೆಯಿಂದ ತಲೆಗೂದಲು ಕಳೆದುಕೊಂಡ ಕ್ಯಾನ್ಸರ್ ರೋಗಿಗಳಿಗೆ ನೀಡಲಾಗಿತ್ತು.

ಈ ಯಶಸ್ಸಿನಿಂದ ಪ್ರೇರಿತರಾದ ಗ್ರೀನ್ ಟ್ರೆಂಡ್, ಆಡ್ಯಾರ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ ಸಹಯೋಗದಲ್ಲಿ ಈ ವರ್ಷವೂ ‘ಟ್ಯಾಂಗಲ್ಡ್’ಅಭಿಯಾನಕ್ಕೆ ಚಾಲನೆ ನೀಡಿದೆ. ಚೆನ್ನೈನಲ್ಲಿ ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡ ಈ ಅಭಿಯಾನ ಇದೇ 18ರಿಂದ ಬೆಂಗಳೂರಿನಲ್ಲಿಯೂ ಆರಂಭಗೊಂಡಿದ್ದು, 25ರವರೆಗೂ ಮುಂದುವರಿಯಲಿದೆ.

ಏನಿದು ಟ್ಯಾಂಗಲ್ಡ್ ಅಭಿಯಾನ
ದೇಶದಾದ್ಯಂತ ನೂರಾರು ಜನ ಕ್ಯಾನ್ಸರ್ ರೋಗಿಗಳು ಕಿಮೊಥೆರಪಿ ಚಿಕಿತ್ಸೆಯಿಂದಾಗಿ ತಲೆಗೂದಲು ಕಳೆದುಕೊಂಡು ಮಾನಸಿಕವಾಗಿ ನಲುಗಿ ಹೋಗುವುದುಂಟು. ಕ್ಯಾನ್ಸರ್ ರೋಗ ತಂದೊಡ್ಡುವ ದೈಹಿಕ ನೋವುಗಳಿಗಿಂತ ಈ ಮಾನಸಿಕ ವೇದನೆ ಅವರನ್ನು ಹೆಚ್ಚು ಕಟುವಾಗಿ ಕಾಡುವುದಿದೆ.

ಹುಬ್ಬು, ತಲೆಗೂದಲು ಉದುರಿ ಹೋಗಿ ಚೈತನ್ಯವನ್ನೇ ಕುಗ್ಗಿಸುವ ಕ್ಯಾನ್ಸರ್‌ ವಿರುದ್ಧ ಇನ್ನಷ್ಟು ಪರಿಣಾಮಕಾರಿಯಾಗಿ ಹೋರಾಡುವ ಮನಸ್ಥಿತಿಯನ್ನು ತುಂಬುವ ಪ್ರಯತ್ನದಲ್ಲಿ ಇದೂ ಒಂದು. ಕ್ಯಾನ್ಸರ್ ರೋಗಿಗಳು ಇನ್ನು ಮುಂದೆ ಯಾವುದೇ ಸಾಮಾಜಿಕ ಅಥವಾ ಕೌಟುಂಬಿಕ ಸಮಾರಂಭಗಳಿಂದ ತಪ್ಪಿಸಿಕೊಳ್ಳುವ ಅಗತ್ಯವಿಲ್ಲ ಎನ್ನುವುದು ಗ್ರೀನ್‌ ಟ್ರೆಂಡ್‌ ನೀಡುವ ವಿವರಣೆ.

ಕೇಶದಾನ ಹೀಗೆ…
ಈ ಮಹಾನ್ ಕೇಶದಾನ ಅಭಿಯಾನಕ್ಕೆ ಕೈಜೋಡಿಸಲು ಬಯಸುವವರು ನಗರದ ಯಾವುದೇ ಗ್ರೀನ್ ಟ್ರೆಂಡ್ ಸಲೂನ್‌ಗೆ ಭೇಟಿ ನೀಡಬಹುದು. ಅಲ್ಲಿರುವ ತಜ್ಞ ಕೇಶವಿನ್ಯಾಸಕರು ನಿಮ್ಮ ಪ್ರಸ್ತುತ ಕೇಶವಿನ್ಯಾಸಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಕನಿಷ್ಠ ೬ರಿಂದ ೧೦ ಇಂಚು ಉದ್ದದ ತಲೆಗೂದಲನ್ನು ಕತ್ತರಿಸಿಕೊಳ್ಳುತ್ತಾರೆ. ನೀವು ಬಯಸಿದಲ್ಲಿ ನಿಮಗೆ ಒಪ್ಪುವ ಹೊಸ ಕೇಶವಿನ್ಯಾಸವನ್ನೂ ಮಾಡಿಸಿಕೊಳ್ಳಬಹುದು.

ಪ್ರೇರಣೆಯ ಆ ಕ್ಷಣ
‘ಟ್ಯಾಂಗಲ್ಡ್’ ಒಂದು ರಾಷ್ಟ್ರವ್ಯಾಪಿ ಅಭಿಯಾನವಾಗಿ ರೂಪತಳೆದ ಬಗೆಯನ್ನು ಗ್ರೀನ್ ಟ್ರೆಂಡ್ಸ್ ಯುನಿಸೆಕ್ಸ್ ಹೇರ್ & ಸ್ಟೈಲ್ ಸಲೂನ್‌ನ ಸಿಓಓ ಎಸ್.ದೀಪಕ್ ಪ್ರವೀಣ್ ಹಂಚಿಕೊಂಡಿದ್ದು ಹೀಗೆ: ‘ಸುಮಾರು ಒಂದು ವರ್ಷದ ಹಿಂದಿನ ಮಾತು. ಚೆನ್ನೈನ ಡಬ್ಲ್ಯೂಸಿಸಿ ಮಹಿಳಾ ಕಾಲೇಜಿನ ಸುಮಾರು 15 ಜನ ಹುಡುಗಿಯರು ನನ್ನನ್ನು ಭೇಟಿ ಮಾಡಿ, ತಮ್ಮ ತಲೆಗೂದಲನ್ನು ದಾನ ಮಾಡುವುದಾಗಿ ಹಾಗೂ ಅದರಿಂದ ವಿಗ್ ತಯಾರಿಸಿ ಕ್ಯಾನ್ಸರ್ ರೋಗಿಗಳಿಗೆ ಕೊಡಬೇಕೆಂದು ಕೇಳಿದರು. ಈ ವಿಚಾರ ನನ್ನನ್ನು ಬಹಳ ಇಂಪ್ರೆಸ್ ಮಾಡಿತು. ಕೂಡಲೇ ಆಡ್ಯಾರ್ ಕ್ಯಾನ್ಸರ್ ಸಂಸ್ಥೆಗೆ ಈ ವಿಚಾರ ತಿಳಿಸಿದಾಗ ಅವರೂ ಖುಷಿಪಟ್ಟರು. ಆದರೆ ಇದನ್ನು ಕೇವಲ ಒಂದು ಕಾಲೇಜಿಗಷ್ಟೇ ಸೀಮಿತಗೊಳಿಸದೆ ಎಲ್ಲಾ ನಗರಗಳ, ಎಲ್ಲಾ ಜನರ ಸಹಭಾಗಿತ್ವ ಪಡೆಯುವುದೆಂದು ನಿರ್ಧರಿಸಿದಾಗ ಇದೊಂದು ರಾಷ್ಟ್ರೀಯ ಅಭಿಯಾನವಾಗಿ ರೂಪುಗೊಂಡಿತು’.
* * *

ಆತ್ಮವಿಶ್ವಾಸದ ನಗು
ಹಿಂದೆಂದಿಗಿಂತಲೂ ಇಂದು ಕ್ಯಾನ್ಸರ್ ಹೆಚ್ಚು ವ್ಯಾಪಕವಾಗುತ್ತಿದೆ. ಕಿಮೊಥೆರಪಿ ಚಿಕಿತ್ಸೆಗೆ ಹೋದಾಗ ಕೂದಲು ಉದುರುವುದು ಸಾಮಾನ್ಯ. ಅದು ಮತ್ತೆ ಬೆಳೆಯಲು ವರ್ಷವಾದರೂ ಬೇಕು. ಆದರೆ ಆ ಅವಧಿಯಲ್ಲಿ, ಅದರಲ್ಲೂ ಹೆಣ್ಣು ಮಕ್ಕಳು ಬಹಳ ವೇದನೆ ಅನುಭವಿಸುತ್ತಾರೆ. ಅವರ ಸಾಮಾಜಿಕ ಜೀವನದ ಮೇಲೆ ಇದು ಪರಿಣಾಮ ಬೀರುತ್ತದೆ.

ಸಭೆ–ಸಮಾರಂಭ, ಮದುವೆಯಂತಹ ವಿಶೇಷ ಕಾರ್ಯಕ್ರಮಗಳಲ್ಲಂತೂ ಅವರು ಕುಗ್ಗಿ ಹೋಗುತ್ತಾರೆ. ತಲೆಗೂದಲು ಕಳೆದುಕೊಂಡ ಮಹಿಳೆಯರು ಮಾನಸಿಕ ಆಘಾತಕ್ಕೆ ಒಳಗಾಗುವುದು ಇಂಥದ್ದೇ ಸಂದರ್ಭಗಳಲ್ಲಿ. ವೇದನೆ, ಹತಾಶೆ, ನೋವು ಮಡುಗಟ್ಟಿ ಮನೆಯಿಂದ ಆಚೆ ಎದ್ದು ಹೋಗುವುದಕ್ಕೂ ಮನಸ್ಸು ಮಾಡದೇ ಸಂಕಟ ಪಡುತ್ತಾರೆ. ಅಂಥವರಿಗೆ ವಿಗ್ ಸಹಾಯಕ. ಇದು ಕೇವಲ ಸೌಂದರ್ಯ ಹೆಚ್ಚಸುವ ಸಾಧನವಲ್ಲ, ಆತ್ಮವಿಶ್ವಾಸವನ್ನೂ ಹೆಚ್ಚಿಸುವ ಶಕ್ತಿ.
–ಡಾ. ವಿ.ಲೋಕೇಶ್,
ಕ್ಯಾನ್ಸರ್ ತಜ್ಞ ವೈದ್ಯ
* * *

ಬದ್ಧತೆಯ ಮತ್ತೊಂದು ಹೆಜ್ಜೆ
ಈ ಅಭಿಯಾನದಲ್ಲಿ ಸುಮಾರು ೨೦೦ ಸಲೂನ್‌ಗಳು ಭಾಗಿಯಾಗಲಿದ್ದು, ಅದಕ್ಕಾಗಿ ೨೦೦೦ಕ್ಕೂ ಹೆಚ್ಚು ವಿನ್ಯಾಸಕರಿಗೆ ನಾವು ತರಬೇತಿ ನೀಡಿದ್ದೇವೆ. ಒಂದು ವಾರ ನಡೆಯಲಿರುವ ಈ ಅಭಿಯಾನದಲ್ಲಿ ಗ್ರಾಹಕರು ಯಾವುದೇ ಗ್ರೀನ್ ಟ್ರೆಂಡ್ಸ್ ಸಲೂನ್‌ಗೆ ಹೋಗಿ ತಮ್ಮ ಇಚ್ಚೆಯಂತೆ ಕೂದಲನ್ನು ದಾನ ಮಾಡಬಹುದು. ದಾನ ನೀಡಲು ಬರುವವರಿಗೆ ವಿಶೇಷವಾದ ಹಾಗೂ ಪ್ರಸ್ತುತ ಹೆಚ್ಚು ಚಾಲ್ತಿಯಲ್ಲಿರುವ ಹೇರ್‌ಸ್ಟೈಲ್‌ಗಳನ್ನು ಮಾಡುವ ಮೂಲಕ ಕೇವಲ 6ರಿಂದ ೧೦ ಇಂಚು ಕೂದಲನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ.
ಕೇಶದಾನ ಮಾಡಲು ಹತ್ತಿರದ ಯಾವುದೇ ಗ್ರೀನ್ ಟ್ರೆಂಡ್ ಸಲೂನ್‌ಗೆ ಭೇಟಿ ನೀಡಬಹುದು.
ಮಾಹಿತಿಗೆ: ವೆಬ್‌ಸೈಟ್‌ www.mygreentrends.in . ದೂರವಾಣಿ: ೧೮೦೦೪೨೦೨೦೨೦.
–ಎಸ್.ದೀಪಕ್ ಪ್ರವೀಣ್,
ಸಿಓಓ, ಗ್ರೀನ್ ಟ್ರೆಂಡ್ಸ್ ಯುನಿಸೆಕ್ಸ್ ಹೇರ್ & ಸ್ಟೈಲ್ ಸಲೂನ್

Write A Comment