ರಾಷ್ಟ್ರೀಯ

ಬೆಕ್ಕಿಗೂ ಒಂದು ಕಾಲ!

Pinterest LinkedIn Tumblr

cat

ದೇಸಿ ಹಾಗೂ ವಿದೇಶಿ ತಳಿಗಳ ಬೆಕ್ಕುಗಳಿಗಾಗಿಯೇ ಅಂತರರಾಷ್ಟ್ರೀಯ ಮಾರ್ಜಾಲ ಪ್ರದರ್ಶನವನ್ನು ಆಯೋಜಿಸಲಾಗಿದೆ. 15ಕ್ಕೂ ಹೆಚ್ಚು ದೇಸಿ ಹಾಗೂ ವಿದೇಶಿ ತಳಿಗಳ ಬೆಕ್ಕುಗಳು ಇದರಲ್ಲಿ ಭಾಗವಹಿಸಲಿವೆ.

ಫೆ.21 ಹಾಗೂ 22ರಂದು ಎರಡು ದಿನಗಳ ಕಾಲ ನಗರದ ವುಡ್‌ಲ್ಯಾಂಡ್ಸ್‌ ಹೋಟೆಲ್‌ನಲ್ಲಿ ‘ಅಂತರರಾಷ್ಟ್ರೀಯ ಮಾರ್ಜಾಲ ಪ್ರದರ್ಶನ’ ನಡೆಯಲಿದೆ. ಇಂಡಿಯನ್‌ ಕ್ಯಾಟ್‌ ಫೆಡರೇಷನ್‌, ವರ್ಲ್ಡ್‌ ಕ್ಯಾಟ್‌ ಫೆಡರೇಷನ್‌, ಮಿಡಲ್‌ ಈಸ್ಟ್‌ ಕ್ಯಾಟ್‌ ಸೊಸೈಟಿ ಹಾಗೂ ಮಾರ್ಸ್‌ ಇಂಡಿಯಾ ಸಹಯೋಗದಲ್ಲಿ ಇದನ್ನು ಆಯೋಜಿಸಲಾಗಿದೆ.

ಬೆಕ್ಕುಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳ ಸರಿಯಾದ ಆರೈಕೆಯ ಬಗ್ಗೆ ಹಾಗೂ ಭಾರತೀಯ ಸ್ಥಳೀಯ ತಳಿಯ ಬೆಕ್ಕನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಈ ಪ್ರದರ್ಶನವನ್ನು ನಡೆಸಲಾಗುತ್ತಿದೆ.

ಮುಂಬೈ, ಕೇರಳ, ತಮಿಳುನಾಡು, ಬೆಂಗಳೂರು ಸೇರಿದಂತೆ ದೇಶದ ಮೂಲೆಮೂಲೆಗಳಿಂದ ಬರಲಿರುವ ಬೆಕ್ಕುಗಳು ಈ ಪ್ರದರ್ಶನದಲ್ಲಿ ಭಾಗವಹಿಸಲಿವೆ. ಅರೇಬಿಯನ್‌ ಮಾವ್‌, ಮಧ್ಯಪ್ರಾಚ್ಯ ದೇಶದ ಸ್ಪಿಂಗ್ಸ್‌ (ಕೂದಲೇ ಇಲ್ಲದ ಬೆಕ್ಕುಗಳು), ಮುಂಬೈನ ಬಿಲ್ಲಿ, ಬೆಂಗಾಲ್‌ ಕ್ಯಾಟ್‌, ಮೈನ್‌ಕೂನ್‌, ಹಿಮಾಲಯನ್‌, ನಾರ್ವೇನಿಯನ್‌ ಫಾರೆಸ್ಟ್‌ ಕ್ಯಾಟ್‌, ಪರ್ಷಿಯನ್‌ ಕ್ಯಾಟ್‌ ಸೇರಿದಂತೆ ಇತರೆ ತಳಿಗಳ ಬೆಕ್ಕುಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಲಿವೆ.

ಎರಡು ದಿನ ನಡೆಯಲಿರುವ ಈ ಪ್ರದರ್ಶನದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ವಿದೇಶಿ ತಳಿಗಳ ಬೆಕ್ಕುಗಳಿಗೆ ಹಾಗೂ ಮನೆಗಳಲ್ಲಿ ಸಾಕಿಕೊಂಡಿರುವ ಸ್ಥಳೀಯ ಬೆಕ್ಕುಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ‘ಸಾಂಪ್ರದಾಯಿಕ ಟೆಸ್ಟ್‌’ನಲ್ಲಿ ನಡೆಸುವ ಸ್ಪರ್ಧೆಯಲ್ಲಿ ಆಯಾ ತಳಿಗಳ ಬೆಕ್ಕುಗಳು ಸೂಕ್ತವಾದ ಗಾತ್ರದಲ್ಲಿ, ಆರೋಗ್ಯವಂತವಾಗಿ ಬೆಳೆದಿವೆಯೋ ಇಲ್ಲವೋ ಎಂದು ಪರೀಕ್ಷಿಸಲಾಗುತ್ತದೆ. ಅವುಗಳಲ್ಲಿ ಉತ್ತಮ ಆರೋಗ್ಯ ಹೊಂದಿರುವ ಬೆಕ್ಕಿಗೆ ಮೊದಲ ಸ್ಥಾನ ನೀಡಲಾಗುತ್ತದೆ.

ಇನ್ನು ಎರಡನೇ ಸ್ಪರ್ಧೆ ‘ರಿಂಗ್‌ ಟೆಸ್ಟ್‌’. ಇದರಲ್ಲಿ ಒಂದೇ ರೀತಿ ಕಾಣುವ ಬೆಕ್ಕುಗಳ ನಡುವೆ ಸ್ಪರ್ಧೆ ನಡೆಸಿ, ಅವುಗಳಿಗೆ ಬಹುಮಾನ ನೀಡುತ್ತಾರೆ. ಉದ್ದ ಕೇಶ ಹೊಂದಿರುವ ಹಾಗೂ ಕಡಿಮೆ ಕೇಶ ಹೊಂದಿರುವ ಬೆಕ್ಕುಗಳನ್ನು ಗುಂಪುಗಳನ್ನಾಗಿ ವಿಂಗಡಿಸಿ, ಈ ಸ್ಪರ್ಧೆ ಆಯೋಜಿಸುತ್ತಾರೆ. ಪ್ರತಿ ಗುಂಪಿನಲ್ಲೂ ಪ್ರತ್ಯೇಕ ವಿಜೇತರನ್ನು ಆಯ್ಕೆ ಮಾಡುವುದು ವಿಶೇಷ.

ಈ ಸ್ಪರ್ಧೆಗಳಲ್ಲಿ ಬೆಕ್ಕುಗಳನ್ನು ನೋಡಿ ತೀರ್ಪು ನೀಡಲು ದಕ್ಷಿಣ ಆಫ್ರಿಕಾದಿಂದ ಇಬ್ಬರು ಹಾಗೂ ಲ್ಯಾಟ್ರಿಯಾದಿಂದ ಒಬ್ಬರು ತೀರ್ಪುಗಾರರು ಬರಲಿದ್ದಾರೆ. ಮಾರ್ಜಾಲ ಪ್ರದರ್ಶನದಲ್ಲಿ ತೀರ್ಪುಗಾರರಾಗಲು ವಿಶೇಷ ತರಬೇತಿಯ ಅಗತ್ಯವಿದೆ ಎನ್ನುವುದೇ ಇದಕ್ಕೆ ಕಾರಣ. ತೀರ್ಪುಗಾರರಿಗೆ ಬೆಕ್ಕಿನ ತಳಿಗಳು, ಅವುಗಳ ಪೋಷಣೆ ಹಾಗೂ ಬೆಳವಣಿಗೆ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕಾಗುತ್ತದೆ. ಅದಕ್ಕೆ ಹಲವಾರು ಕೋರ್ಸ್‌ ಹಾಗೂ ತರಬೇತಿ ಪಡೆದಿರಬೇಕು. ಇದಕ್ಕೆ 5ರಿಂದ 7 ವರ್ಷ ಆಗುತ್ತದೆ.

ತೀರ್ಪುಗಾರರ ಕಾರ್ಯಾಗಾರ
ಇದರಿಂದಾಗಿ ಭಾರತದಲ್ಲಿ ಬೆಕ್ಕುಗಳ ಪ್ರದರ್ಶನದಲ್ಲಿ ತೀರ್ಪುಗಾರರಾಗಿ ಭಾಗವಹಿಸಲು ಯಾರೂ ಇಲ್ಲ. ಈ ಹಿನ್ನೆಲೆಯಲ್ಲೇ ತೀರ್ಪುಗಾರರಾಗಲು ಬಯಸುವವರಿಗಾಗಿ ವರ್ಲ್ಡ್‌ ಕ್ಯಾಟ್‌ ಫೆಡರೇಷನ್‌ ಈ ಪ್ರದರ್ಶನದಲ್ಲಿ ಒಂದು ಕಾರ್ಯಾಗಾರವನ್ನೂ ಆಯೋಜಿಸಿದೆ. ಆಸಕ್ತರು ಇದರಲ್ಲಿ ಪಾಲ್ಗೊಳ್ಳಬಹುದು. ಇದಕ್ಕೆ ಪ್ರವೇಶ ಶುಲ್ಕ ಇರುತ್ತದೆ.

ಸ್ಪರ್ಧೆಗಳಲ್ಲಿ ಭಾಗವಹಿಸಲು ಬೆಕ್ಕುಗಳ ಮಾಲೀಕರು ಎರಡೂ ದಿನಗಳು ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳಬಹುದು. ಪ್ರದರ್ಶನ ನಡೆಯುವ ಸ್ಥಳದಲ್ಲಿ ಬೆಳಿಗ್ಗೆ 9ರಿಂದ 10ರವರೆಗೆ ನೋಂದಣಿ ಮಾಡಿಸಿಕೊಳ್ಳಬಹುದು. ಈಗಾಗಲೇ 80 ಮಂದಿ ನೋಂದಣಿ ಮಾಡಿಕೊಂಡಿದ್ದು, ಮೊದಲು ಬಂದವರಿಗೆ ಆದ್ಯತೆ.

ಪ್ರತಿದಿನ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಲು 120 ಬೆಕ್ಕುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪ್ರದರ್ಶನಲ್ಲಿ ಭಾಗವಹಿಸುವ ಬೆಕ್ಕುಗಳಿಗೆ ಎಲ್ಲಾ ರೀತಿಯ ಅಗತ್ಯ ಚುಚ್ಚುಮದ್ದನ್ನು ಕೊಡಿಸಿರಬೇಕು. ಅದಕ್ಕೆ ಪೂರಕ ದಾಖಲೆಗಳನ್ನು ಮಾಲೀಕರು ತಮ್ಮೊಂದಿಗೆ ಕೊಂಡೊಯ್ಯಬೇಕು. ಇಲ್ಲವಾದಲ್ಲಿ ಅಂತಹವರಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿಲ್ಲ.

‘ವಿದೇಶಗಳಿಂದ ತರುವ ಬೆಕ್ಕುಗಳು ಆಯಾ ದೇಶಗಳ ಹವಾಗುಣಕ್ಕೆ ಹೊಂದಿಕೊಂಡಿರುತ್ತವೆ. ಅವುಗಳನ್ನು ನಮ್ಮ ದೇಶಕ್ಕೆ ತಂದಾಗ ದೈಹಿಕವಾಗಿ ನಾನಾ ರೀತಿಯ ಕಾಯಿಲೆಗಳು ಬರುವುದು ಸಹಜ. ಈ ಬಗ್ಗೆ ಅರಿವೇ ಇಲ್ಲದೆ ಎಷ್ಟೋ ಬೆಕ್ಕುಗಳು ಸಾವನ್ನಪ್ಪುತ್ತವೆ. ಅದಕ್ಕಾಗಿ ಯಾವ ಯಾವ ತಳಿಗಳ ಬೆಕ್ಕುಗಳ ಪಾಲನೆಯನ್ನು ಸರಿಯಾದ ರೀತಿಯಲ್ಲಿ ಹೇಗೆ ಮಾಡಬೇಕು, ಆರೋಗ್ಯ ಕಾಪಾಡಿಕೊಳ್ಳಲು ಯಾವ ಸಮಯಕ್ಕೆ ಯಾವ ರೀತಿಯ ಚುಚ್ಚುಮದ್ದು ಕೊಡಿಸಬೇಕು ಹಾಗೂ ಅವುಗಳಿಗೆ ಬರಬಹುದಾದ ಕಾಯಿಲೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗುವುದು. ಅದಕ್ಕಾಗಿ ನುರಿತ ಪಶುವೈದ್ಯರು ಇಲ್ಲಿ ಇರುತ್ತಾರೆ’ ಎಂದು ಮಾಹಿತಿ ನೀಡುತ್ತಾರೆ ‘ಇಂಡಿಯನ್‌ ಕ್ಯಾಟ್‌ ಫೆಡರೇಷನ್‌’ ಅಧ್ಯಕ್ಷ ಶ್ರೀನಾಯರ್‌.

ಬೆಕ್ಕುಗಳ ಬಗ್ಗೆ ಅರಿವು ಮೂಡಿಸಲು ಇಂಡಿಯನ್‌ ಕ್ಯಾಟ್‌ ಫೆಡರೇಷನ್‌ ದೇಶದ ಪ್ರಮುಖ ನಗರಗಳಲ್ಲಿ ವರ್ಷದಲ್ಲಿ ಐದು ಬೆಕ್ಕುಗಳ ಪ್ರದರ್ಶನವನ್ನು ಆಯೋಜಿಸುತ್ತದೆ. ಕಳೆದ ಬಾರಿ 2013 ಏಪ್ರಿಲ್‌ 27 ಹಾಗೂ 28ರಂದು ಮೊದಲ ಬಾರಿಗೆ ನಗರದಲ್ಲಿ ಮೊದಲ ಆವೃತ್ತಿಯನ್ನು ನಡೆಸಲಾಗಿತ್ತು. 2ನೇ ಆವೃತ್ತಿಯನ್ನು ಮುಂಬೈನಲ್ಲಿ ಹಾಗೂ 3ನೇ ಆವೃತ್ತಿಯನ್ನು ಈಗ ಮತ್ತೆ ನಗರದಲ್ಲಿ ನಡೆಸಲಾಗುತ್ತಿದೆ. ಸಾರ್ವಜನಿಕರಿಗೆ ಮಧ್ಯಾಹ್ನ 1 ಗಂಟೆ ನಂತರ ಅವಕಾಶ ಕಲ್ಪಿಸಲಾಗಿದೆ. ಪ್ರವೇಶ ಹಾಗೂ ನೋಂದಣಿ ಉಚಿತ. ಆಸಕ್ತರು ಆನ್‌ಲೈನ್‌ನಲ್ಲೂ ನೋಂದಣಿ ಮಾಡಿಕೊಳ್ಳಬಹುದು.
ಮಾಹಿತಿಗೆ ವೆಬ್‌ ವಿಳಾಸ: www.indiancatfederation.org
* * *

ಭಾರತೀಯ ಬೆಕ್ಕುಗಳೇ ಇಲ್ಲ!
ಬೆಕ್ಕುಗಳಲ್ಲಿ ಭಾರತೀಯ ಬೆಕ್ಕುಗಳು ಎಂದು ಅಧಿಕೃತವಾಗಿ ಇಲ್ಲಿಯವರೆಗೆ ಯಾವುದನ್ನೂ ಪರಿಗಣಿಸಿಲ್ಲ. ಬೆಂಗಾಲ್‌ ಕ್ಯಾಟ್ಸ್‌, ಮುಂಬೈ ಕ್ಯಾಟ್ಸ್ ಎರಡೂ ವಿದೇಶಿ ತಳಿಗಳೇ. ಅದರಲ್ಲೂ ಮುಂಬೈ ಕ್ಯಾಟ್‌ ಅಮೆರಿಕಾಕ್ಕೆ ಸೇರಿದ ತಳಿ. ಹೀಗಿರುವಾಗ ಭಾರತೀಯ ತಳಿ ಎಂದು ಯಾವುದನ್ನೂ ಇನ್ನೂ ಗುರುತಿಸಲಾಗಿಲ್ಲ. ಅದಕ್ಕಾಗಿಯೇ ಮುಂಬೈ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇಂಡಿಯನ್‌ ಕ್ಯಾಟ್‌ ಫೆಡರೇಷನ್‌ ಸಂಶೋಧನೆ ಕೈಗೊಂಡಿದೆ.
– ಶ್ರೀನಾಯರ್‌, ಅಧ್ಯಕ್ಷ, ಇಂಡಿಯನ್‌ ಕ್ಯಾಟ್‌ ಫೆಡರೇಷನ್‌

Write A Comment