ವಿಶೇಷ ವರದಿ
ಮಂಗಳೂರು, ಫೆ.19: ಇತ್ತೀಚೆಗೆ ಮೊರಕೋದಲ್ಲಿ ಬಂಧನಕ್ಕೊಳಗಾಗಿರುವ ಕರಾವಳಿ ಮೂಲದ ಭೂಗತಪಾತಕಿ ಬನ್ನಂಜೆರಾಜನ ಕರಾಳ ಅಪರಾಧ ಕೃತ್ಯಗಳ ಹಿಂದೆ ಕರ್ನಾಟಕ ಪೊಲೀಸ್ ಅಧಿಕಾರಿಗಳ ಸಹಕಾರ, ಬೆಂಬಲವಿರುವ ವಿಷಯ ಇದೀಗ ಬಹಿರಂಗಗೊಂಡಿದ್ದು, ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.
ಬನ್ನಂಜೆ ರಾಜಾ ಯಾನೆ ರಾಜೇಂದ್ರ ಮೊರಕೋದಲ್ಲಿದ್ದುಕೊಂಡೇ ತನ್ನ ಭೂಗತ ಲೋಕದ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದ. ಮೂರು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದ ಬನ್ನಂಜೆರಾಜಾ ಮೊರಕೋದಲ್ಲಿ ಹೆಗ್ಡೆ ಕುಮಾರ್ ರಾಜಾ ಹೇಮಂತ್ ಎಂಬ ಹೆಸರನ್ನಿಟ್ಟುಕೊಂಡು ತನ್ನ ಕರಾಳಕೃತ್ಯಗಳನ್ನು ಎಸಗುತ್ತಿದ್ದ.
ಫೆ.9ರಂದು ಭಾರತೀಯ ಗುಪ್ತಚರ ಸಂಸ್ಥೆ ‘ರಾ’ದ ಸಹಕಾರದೊಂದಿಗೆ ಮೊರಕೋದಲ್ಲಿ ಅಲ್ಲಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಈ ವೇಳೆ ಆತನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ವಿಚಾರಣೆಯ ವೇಳೆ ತನ್ನ ಅಪರಾಧ ಕೃತ್ಯಗಳಿಗೆ 6 ವರ್ಷಗಳಿಂದ ಕರ್ನಾಟಕ ಪೊಲೀಸರು ಸಹಕಾರ, ಬೆಂಬಲ ನೀಡುತ್ತಿರುವ ವಿಚಾರವನ್ನು ರಾಜಾ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ಉಡುಪಿಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ, ಬಳಿಕ ಮಂಗಳೂರಿನಲ್ಲಿ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸಿ, ಇದೀಗ ಬೆಂಗಳೂರಿನಲ್ಲಿ ಎಸಿಪಿಯಾಗಿರುವ ಕೇರಳ ಮೂಲದ ಪೊಲೀಸ್ ಅಧಿಕಾರಿಯೇ ತನ್ನ ಭೂಗತ ಲೋಕದ ಅಪರಾಧ ಕೃತ್ಯಗಳಿಗೆ ಬೆನ್ನೆಲುಬಾಗಿ ನಿಂತು ಸಾಥ್ ನೀಡುತ್ತಿರುವ ಕಳವಳಕಾರಿ ವಿಷಯ ತನಿಖೆಯ ವೇಳೆ ಹೊರಬಂದಿದೆ ಎಂದು ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ.
ಉಡುಪಿಯಲ್ಲಿದ್ದಾಗ ರಫ್ ಆ್ಯಂಡ್ ಟಫ್ ಪೊಲೀಸ್ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದ, ಕಾರ್ಕಳ ಈದುವಿನಲ್ಲಿ ನಡೆದ ಪಾರ್ವತಿ-ಹಾಜಿಮ ನಕ್ಸಲ್ ಎನ್‌ಕೌಂಟರ್‌ನಲ್ಲಿಯೂ ಮುಂಚೂಣಿಯಲ್ಲಿದ್ದುಕೊಂಡು ಪಾತ್ರವಹಿಸಿದ್ದ ಪೊಲೀಸ್ ಅಧಿಕಾರಿಯೇ ಇದೀಗ ಬನ್ನಂಜೆರಾಜಾನ ಅಪರಾಧ ಕೃತ್ಯಗಳ ಹಿಂದೆ ನಿಂತು ಸಾಥ್ ನೀಡಿರುವುದು ವಿಚಾರಣೆ ವೇಳೆ ಬಹಿರಂಗಗೊಳ್ಳುತ್ತಿದ್ದಂತೆ ಜನಸಾಮಾನ್ಯರು ಆತಂಕಕ್ಕೀಡಾಗಿದ್ದಾರೆ.
ತಾನು ಎಸಗುತ್ತಿದ್ದ ಅಪರಾಧ ಕೃತ್ಯಗಳಿಗೆ ಕಳೆದ 6 ವರ್ಷಗಳಿಂದ ಈ ಪೊಲೀಸ್ ಅಧಿಕಾರಿ ಹಿಂದೆ ನಿಂತು ಗುರುವಿನಂತೆ ಸಹಕಾರ ನೀಡಿದ್ದು, ಹಫ್ತಾವಸೂಲಿ, ಬೆದರಿಕೆ, ಕೊಲೆಯತ್ನದಂಥ ಅಪರಾಧ ಕೃತ್ಯಗಳಿಗೆ ತೆರೆಮರೆಯಲ್ಲಿ ನಿಂತು ಇನ್ನಷ್ಟು ಕೃತ್ಯವೆಸಗಲು ಕಾರಣಕರ್ತನಾಗಿದ್ದಾನೆ ಎನ್ನಲಾಗಿದೆ.
ಕರಾವಳಿಯ ಕೆಲವು ಪೊಲೀಸ್ ಅಧಿಕಾರಿಗಳು ಬನ್ನಂಜೆರಾಜಾನಿಗೆ ಸಹಕಾರ, ಬೆಂಬಲ ನೀಡಿರುವುದು ಬೆಳಕಿಗೆ ಬರುತ್ತಿದ್ದಂತೆ, ಸಾಥ್ ನೀಡಿರುವ ಪೊಲೀಸ್ ಅಧಿಕಾರಿಗಳಿಗೆ ನಡುಕ ಉಂಟಾಗಿದೆ.
ಮಂಗಳೂರು, ಉಡುಪಿ, ಬೆಂಗಳೂರು ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ 6 ಕೊಲೆ, ಕೊಲೆಯತ್ನ, ಜೀವ ಬೆದರಿಕೆ, ಹಫ್ತಾವಸೂಲಿ 46ಕ್ಕೂ ಅಧಿಕ ಗಂಭೀರ ಪ್ರಕರಣಗಳು ದಾಖಲಾಗಿವೆ.
ದುಬೈಯಲ್ಲಿರುವ ಕರಾವಳಿ ಮೂಲದ ಖ್ಯಾತ ಹೊಟೇಲ್ ಉದ್ಯಮಿಯೊಬ್ಬರಿಗೆ 5 ಕೋಟಿ ರೂ.ನೀಡುವಂತೆ ಬನ್ನಂಜೆ ರಾಜಾ ಬೆದರಿಕೆ ಹಾಕಿದ್ದ. ಈ ವೇಳೆ ರಾಜಾನ ವಿರುದ್ಧ ಉದ್ಯಮಿ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರಕಾರದ ಗೃಹ ಖಾತೆ ಇಲಾಖೆ, ರಾಜಾ ಬಂಧನಕ್ಕೆ ಕಾರ್ಯತಂತ್ರ ರೂಪಿಸಿತು.
ಬಂಧನಕ್ಕೆ ಮೊರೆಕೋ ಪೊಲೀಸರ ಸಹಕಾರ ಕೇಳಿದ ಭಾರತೀಯ ಗುಪ್ತಚರ ಸಂಸ್ಥೆ ‘ರಾ’ದ ಅಧಿಕಾರಿಗಳು, ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾದರು. ದುಬೈ ಹೊಟೇಲ್ ಉದ್ಯಮಿ ನೀಡಿದ ದೂರಿನಿಂದ ಭೂಗತ ಪಾತಕಿಯೋರ್ವ ಕಂಬಿಗಳ ಸರಿದಿದ್ದು, ಈತನಿಂದ ಜೀವಬೆದರಿಕೆಗೊಳಗಾದ ಉದ್ಯಮಿಗಳಿಂದು ನಿಟ್ಟುಸಿರು ಬಿಡುವಂತಾಗಿದೆ.
ಪೊಲೀಸರ ಭಯದಿಂದ ಮುಖವನ್ನೇ ಬದಲಿಸಿದ್ದ
ಪೊಲೀಸ್ ಅಧಿಕಾರಿಗಳು ಬಂಧಿಸುವ ವೇಳೆ ಬನ್ನಂಜೆರಾಜಾನ ಮುಖ ಹಿಂದಿದ್ದಂತಿರಲಿಲ್ಲ. ತನ್ನ ಮುಖದಲ್ಲಿ ಬದಲಾವಣೆಯನ್ನು ಮಾಡಿದ್ದ ರಾಜಾ, ಮೂರು ನಕಲಿ ಪಾಸ್‌ಪೋರ್ಟ್‌ಗಳನ್ನು ಇಟ್ಟುಕೊಂಡಿದ್ದ. ಜೊತೆಗೆ ಡಯಾಬಿಟಿಸ್ ಕಾಯಿಲೆಯಿಂದಲೂ ಬಳಲುತ್ತಿದ್ದ.
30 ದಿನಗಳೊಳಗೆ ರಾಜಾ ಭಾರತಕ್ಕೆ ಹಸ್ತಾಂತರ
ಮೊರೆಕೋ ಪೊಲೀಸ್ ಅಧಿಕಾರಿಗಳ ವಶದಲ್ಲಿರುವ ಬನ್ನಂಜೆ ರಾಜಾನನ್ನು 30 ದಿನಗಳೊಳಗೆ ಭಾರತ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ. ಭಾರತೀಯ ಗುಪ್ತಚರ ಸಂಸ್ಥೆ ‘ರಾ’ದ ಅಧಿಕಾರಿಗಳು ಹಾಗೂ ಬೆಂಗಳೂರು ಪೊಲೀಸರು ರಾಜಾನನ್ನು ತಮ್ಮ ವಶಕ್ಕೆ ಪಡೆಯಲು ಮೊರಕೋದಲ್ಲಿಯಾ ಬೀಡುಬಿಟ್ಟಿದ್ದು, ಹಸ್ತಾಂತರಕ್ಕೆ ಎಲ್ಲ ರೀತಿಯ ಕಾರ್ಯಗಳು ನಡೆಯುತ್ತಿವೆ.
ಕೇಂದ್ರದ ಗೃಹ ಸಚಿವ ರಾಜನಾಥ್ ಸಿಂಗ್, ಸಚಿವೆ ಸುಷ್ಮಾ ಸ್ವರಾಜ್ ಕೂಡಾ ಈ ಸಂಬಂಧ ಕಟ್ಟುನಿಟ್ಟಿನ ಸೂಚನೆ ನೀಡಿರುವುದರಿಂದ ಕೇಂದ್ರ ಗೃಹ ಖಾತೆಯ ಅಧಿಕಾರಿಗಳು ಬನ್ನಂಜೆ ರಾಜಾನ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲು ಕರ್ನಾಟಕ ಪೊಲೀಸರಿಗೆ ಕಟ್ಟಪ್ಪಣೆ ನೀಡಿದ್ದಾರೆ. ಇದರಿಂದ ಕರ್ನಾಟಕ ಪೊಲೀಸರು ಕೂಡಾ ಚುರುಕಿನ ಕಾರ್ಯತಂತ್ರ ಹೆಣೆದಿದ್ದಾರೆ.
ಬನ್ನಂಜೆರಾಜಾನ ಬಂಧನದ ಜೊತೆಗೆ ಇಂಥ ಸಮಾಜಘಾತುಕ, ಭೂಗತ ಪಾತಕಿಗಳಿಂದ ಯಾರಾದರೂ ತೊಂದರೆ, ಬೆದರಿಕೆಗೆ ಒಳಗಾದರೆ ಅಂಥವರು ತಕ್ಷಣ ದೂರು ನೀಡುವಂತೆಯೂ ಸೂಚನೆ ನೀಡಿರುವ ಕೇಂದ್ರ ಗೃಹ ಖಾತೆ ಇಲಾಖೆ, ಭೂಗತ ಪಾತಕಿಗಳನ್ನು ಮಟ್ಟ ಹಾಕಲು ದಿಟ್ಟ ನಿರ್ಧಾರಕ್ಕೆ ಬಂದಿದೆ. ಉದ್ಯಮಿಗಳ ತಮ್ಮ ರಕ್ಷಣೆಗಾಗಿ ಯಾವುದೇ ರೀತಿಯ ಭಯಕ್ಕೀಡಾಗಬಾರದು, ಅಂಥವರ ರಕ್ಷಣೆಗೆ ಕೇಂದ್ರ ಬದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ.