ಮನೋರಂಜನೆ

ಪಿಕೆ, ಡಿಕೆ ಮುಖಾಮುಖಿ!

Pinterest LinkedIn Tumblr

dk‘ಪಿಕೆ’ ಮತ್ತು ‘ಡಿಕೆ’ ಸುದ್ದಿಯಲ್ಲಿರುವ ಎರಡು ಸಿನಿಮಾಗಳು. ಅಮೀರ್ ಖಾನ್‌ ಅಭಿನಯದ ‘ಪಿಕೆ’ ಬಿಡುಗಡೆಯಾಗಿ ಸುಮಾರು ಎಂಟು ವಾರವೇ ಉರುಳಿದೆ. ಪ್ರೇಮ್‌ ಅಭಿನಯದ ‘ಡಿಕೆ’ ಸಿನಿಮಾ ಫೆಬ್ರುವರಿ ೧೩ರಂದು ತೆರೆ ಕಂಡಿದೆ. ಇವೆರಡು ಸಿನಿಮಾಗಳನ್ನು ಬೆಸೆಯುವ ಮತ್ತೊಂದು ವಿಶಿಷ್ಟ ಚಿತ್ರವಿದೆ.

ಈ ಚಿತ್ರದ ಅವಧಿ ೧೦ ನಿಮಿಷ ಮಾತ್ರ! ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರದ ಹೆಸರು ‘ಪಿಕೆ ಮೀಟ್ಸ್‌ ಡಿಕೆ’. ಒಂದಷ್ಟು ಲೇವಡಿ, ಅಣಕ, ತಮಾಷೆಗಳನ್ನು ಬೆರೆಸಿ ಮನರಂಜನೆ ನೀಡುವ ಈ ಚಿತ್ರವನ್ನು ಸೃಷ್ಟಿಸಿರುವ ನಾಲ್ವರು ಯುವಕರ ಗುರಿ ಆನ್‌ಲೈನ್ ಚಾನೆಲ್‌ ಸ್ಥಾಪನೆ.

ಸಿನಿಮಾ ಪ್ರಚಾರಕ್ಕೆ ನಾನಾ ಮಾರ್ಗಗಳು. ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿರುವ ಮಾಧ್ಯಮವೆಂದರೆ ಸಾಮಾಜಿಕ ಜಾಲತಾಣಗಳು. ಅದರಲ್ಲಿಯೂ ನಿರ್ಮಾಪಕರು ಈಗ ಎಐಬಿ, ವೈರಲ್‌ ಫೀವರ್ ಮುಂತಾದ ಆನ್‌ಲೈನ್ ಚಾನೆಲ್‌ಗಳ ಬೆನ್ನುಬೀಳುತ್ತಿದ್ದಾರೆ. ಇದಕ್ಕೆ ಕಾರಣ ದೊಡ್ಡ ಪ್ರಮಾಣದ ಅಂತರ್ಜಾಲ ಬಳಕೆದಾರರನ್ನು ಸುಲಭವಾಗಿ ತಲುಪಬಲ್ಲ ವಿಧಾನ.

ಇಲ್ಲಿ ಪ್ರಚಾರವೆಂದರೆ ಚಿತ್ರದ ಬಗ್ಗೆ ಹೊಗಳಿಕೆಯ ಮಾತನ್ನಾಡುವುದಲ್ಲ, ಅದರ ದೃಶ್ಯಗಳನ್ನು ಬಳಸಿಕೊಂಡು ಕಲಾವಿದರು, ನಿರ್ದೇಶಕರನ್ನು ಅಣಕಿಸುವುದು, ಕಾಲೆಳೆಯುವುದು! ಇಂದಿನ ಯುಗದಲ್ಲಿ ನೇತ್ಯಾತ್ಮಕ ಶೈಲಿಯೇ ಪ್ರಚಾರವನ್ನು ಪರಿಣಾಮಕಾರಿಯನ್ನಾಗಿಸುವುದು. ಅದು ವಿವಾದವೇ ಆಗಬೇಕೆಂದಿಲ್ಲ, ಈ ರೀತಿ ವಿಡಂಬನಾತ್ಮಕವಾಗಿ ವಿಡಿಯೊಗಳನ್ನು ಯಾವುದೇ ತಪ್ಪು ಕಲ್ಪನೆಗೆ ಎಡೆಮಾಡಿಕೊಡದಂತೆ ಮಾಡುವುದರಿಂದ ಹೆಚ್ಚು ಜನರನ್ನು ಸುಲಭವಾಗಿ ತಲುಪಬಹುದು ಎನ್ನುವುದು ಈ ಗೆಳೆಯರ ಬಳಗದ ಮಾತು.

ಸಾಫ್ಟ್‌ವೇರ್‌ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಮೈಸೂರಿನ ಶ್ರೇಯಸ್‌ ಆರ್ಯ, ‘ಲೂಸಿಯಾ’ ಚಿತ್ರಕ್ಕೆ ‘ನೀ ತೊರೆದ ಗಳಿಗೆಯಲಿ’ ಗೀತೆ ರಚಿಸಿದ ರಘುಶಾಸ್ತ್ರಿ, ಸಂಕಲನ ಮುಂತಾದ ತಾಂತ್ರಿಕ ವಿಭಾಗಗಳಲ್ಲಿ ಪರಿಣತರಾದ ಹಸೀನ್ ಖಾನ್‌ ಮತ್ತು ಇಶಾಂ ಖಾನ್‌ ಸಹೋದರರು ಸೇರಿ ಪ್ರಾರಂಭಿಸಿರುವ ಈ ಸೃಜನಶೀಲ ಸಾಹಸಕ್ಕೆ ಇಟ್ಟಿರುವ ಹೆಸರು ‘ಜಂಪ್‌ಕಟ್ಸ್‌’. ಶ್ರೇಯಸ್‌ ಆರ್ಯ ಫೇಸ್‌ಬುಕ್‌, ಯೂಟ್ಯೂಬ್‌ಗಳಲ್ಲಿ ಕೆಲಸ ಮಾಡಿದವರು. ಸಾಮಾಜಿಕ ಜಾಲತಾಣಗಳಲ್ಲಿನ ಪ್ರಚಾರದ ವೈಖರಿ, ಮಾದರಿಗಳನ್ನು ಅರಿತವರು. ಅವರಿಗೆ ಜತೆಯಾದವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿರುವ ರಘುಶಾಸ್ತ್ರಿ, ಹಸೀನ್‌ ಮತ್ತು ಇಶಾಂ ಖಾನ್‌ ಸಹೋದರರು.

ಹಿಂದಿ ಚಿತ್ರರಂಗದಲ್ಲಿ ಪ್ರಚಾರಕ್ಕೆ ಆನ್‌ಲೈನ್‌ ಚಾನೆಲ್‌ಗಳನ್ನು ಬಳಸಿಕೊಳ್ಳಲು ಪ್ರಾರಂಭಿಸಿ ಹಲವು ಸಮಯವೇ ಕಳೆದಿವೆ. ಇತರೆ ಭಾಷೆಗಳಲ್ಲಿಯೂ ಈ ಮಾಧ್ಯಮ ಬಳಕೆಯಲ್ಲಿದೆ. ಸ್ವತಃ ಶಾರೂಖ್‌ ಖಾನ್‌ರಂತಹ ನಟ ಲೇವಡಿಗೊಳಗಾಗಲು ಸಿದ್ಧರಾಗಿರುತ್ತಾರೆ.

ತಮ್ಮನ್ನು ಅಣಕಿಸುವುದನ್ನು ನೋಡಿ ನಗುತ್ತಾರೆ, ಬೆನ್ನುತಟ್ಟುತ್ತಾರೆ. ಕನ್ನಡದಲ್ಲಿಯೂ ಅಂತಹ ವಾತಾವರಣ ನಿರ್ಮಾಣವಾಗಬೇಕು ಎನ್ನುವ ಈ ಬಳಗ ಮೊದಲು ತಯಾರಿಸಿದ್ದು ‘ವೆಂಕಟ್ ಇನ್‌ ಸಂಕಟ’ ಎಂಬ ಕಿರು ವಿಡಿಯೊವನ್ನು. ಹಲವು ಮಾಧ್ಯಮಗಳಲ್ಲಿ ವಿವಿಧ ರೀತಿಯಲ್ಲಿ ಜನಪ್ರಿಯರಾಗಿರುವ ಹುಚ್ಚ ವೆಂಕಟ್‌ ಅವರನ್ನು ಅನುಕರಿಸುವ ಈ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ 70 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದರು.

ಇದಕ್ಕೆ ದೊರೆತ ಪ್ರೋತ್ಸಾಹ ‘ಪಿಕೆ ಮೀಟ್ಸ್‌ ಡಿಕೆ’ಯ ಸೃಷ್ಟಿಗೆ ಪ್ರೇರಣೆ ನೀಡಿತು. ‘ಡಿಕೆ’ ಚಿತ್ರದ ಟ್ರೇಲರ್‌ಅನ್ನು ಅಣಕಿಸುವ ಈ ವಿಡಿಯೊವನ್ನು ಚಿತ್ರರಂಗದ ಅನೇಕ ಮಂದಿ ಕೂಡ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ‘ಈ ತಂಡ ಚಿತ್ರರಂಗಕ್ಕೆ ಬರಬೇಕು’ ಎಂದು ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಪ್ರಶಂಸಿಸಿದರು.

ಜತೆಗೆ ವಿಡಿಯೊವನ್ನು ಅಳಿಸಿ ಹಾಕುವಂತೆ ಬೆದರಿಕೆಯೂ ಬಂದಿತ್ತು. ‘ಈ ಬಗೆಯ ವಿಡಿಯೊಗಳನ್ನು ಅವಹೇಳನ ಎಂದುಕೊಳ್ಳದೆ ಅದನ್ನು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸುವ ಮನೋಭಾವ ನಮ್ಮ ಕಲಾವಿದರು, ನಿರ್ದೇಶಕ, ನಿರ್ಮಾಪಕರಿಗೆ ಮೂಡಬೇಕು. ಅದು ಚಿತ್ರತಂಡಕ್ಕೂ ನೆರವಾಗಲಿದೆ ಎಂಬುದು ಅರಿವಾಗಬೇಕು’ ಎನ್ನುತ್ತಾರೆ ಶ್ರೇಯಸ್‌.

ಕನ್ನಡದ ಕೆಲ ನಿರ್ದೇಶಕರ ಕುರಿತ ವಿಡಿಯೊ ಒಂದನ್ನು ತಯಾರಿಸುತ್ತಿರುವ ಈ ತಂಡ, ಸಿನಿಮಾಗಳಿಂದಾಚೆಗೂ ಸಾಮಾನ್ಯ ವಿಷಯಗಳನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನದಲ್ಲಿಯೂ ತೊಡಗಿದ್ದಾರೆ. ಈ ರೀತಿ ಇನ್ನಷ್ಟು ವಿಡಿಯೊಗಳನ್ನು ತಯಾರಿಸಿ ತಮ್ಮದೇ ಆನ್‌ಲೈನ್ ಚಾನೆಲ್‌ ಸ್ಥಾಪನೆಗೆ ವೇದಿಕೆ ನಿರ್ಮಿಸಬೇಕು ಎಂಬ ಉದ್ದೇಶ ಹೊಂದಿರುವ ‘ಜಂಪ್‌ಕಟ್ಸ್‌’ ಬಳಗ ಸಿನಿಮಾರಂಗಕ್ಕೆ ಕಾಲಿರಿಸುವ ಗುರಿಯನ್ನೂ ಹೊಂದಿದೆ. ಆದರೆ ಅದಕ್ಕೆ ಅವರಲ್ಲಿ ಅವಸರವಿಲ್ಲ.

‘ತಾಂತ್ರಿಕವಾಗಿ ತಂಡ ಸಾಕಷ್ಟು ಪರಿಣತಿ ಹೊಂದಿದೆ. ಚಿಕ್ಕ ಅವಧಿಯ ವಿಡಿಯೊ ಎಂಬ ಕಾರಣಕ್ಕೆ ಗುಣಮಟ್ಟದಲ್ಲಿ ರಾಜಿಯಾಗಿಲ್ಲ. ಚಿತ್ರರಂಗದ ಹಲವರ ಬೆಂಬಲವೂ ಇದೆ. ‘ಪಿಕೆ ಮೀಟ್ಸ್‌ ಡಿಕೆ’ಯಲ್ಲಿ ಬಳಸಿದ ಭಾಷೆ ತುಸು ಹದ್ದುಮೀರಿತ್ತು ಎಂದು ನಮಗೂ ಅನಿಸಿದೆ.

ಆದರೆ ಯಾರಿಗೂ ನೋವುಂಟುಮಾಡದಂತೆ ಎಚ್ಚರಿಕೆಯಿಂದ ಸನ್ನಿವೇಶಗಳನ್ನು ಹೊಸೆಯುತ್ತೇವೆ. ಮಿಗಿಲಾಗಿ ಇಲ್ಲಿ ಪ್ರತಿಭೆಗಳಿಗೆ ಅವಕಾಶ ನೀಡುತ್ತೇವೆ. ವಿಡಿಯೊದ ಪರಿಕಲ್ಪನೆ ನಮ್ಮದಾದರೂ ಅದರಲ್ಲಿ ನಟಿಸಲು ಬೇರೆಯವರಿಗೆ ವೇದಿಕೆ ಇಲ್ಲಿ ಸಿಗುತ್ತದೆ. ಇದು ಪುಟ್ಟ ವೇದಿಕೆಯಾದರೂ ಪರಿಣಾಮ ಹಿರಿದು. ‘ವೆಂಕಟ್ ಇನ್‌ ಸಂಕಟ’ದಲ್ಲಿ ಕಾಣಿಸಿಕೊಂಡ ನವೀನ್‌ ಅವರನ್ನು ಈಗ ಎಲ್ಲರೂ ಗುರ್ತಿಸುತ್ತಾರೆ’ ಎನ್ನುವ ಶ್ರೇಯಸ್‌, ‘ನಮ್ಮ ಕೆಲಸಗಳ ತಾಂತ್ರಿಕ ವೆಚ್ಚವನ್ನು ಭರಿಸುವಷ್ಟು ಹಣ ಹೂಡುವ ನಿರ್ಮಾಪಕರು ಸಿಕ್ಕರೆ ಸಾಕು. ನಾವು ಲಾಭವನ್ನು ನಿರೀಕ್ಷಿಸುತ್ತಿಲ್ಲ. ಪ್ಯಾಷನ್‌ನಿಂದ ಮಾಡಿರುವ ಈ ಪ್ರಯತ್ನ ನಮ್ಮ ಸಿನಿಮಾ ಸೃಷ್ಟಿ ಆಸೆಗೆ ದಾರಿಯಾಗುವುದರ ಜತೆಗೆ, ಸಿನಿಮಾಗಳ ಪ್ರಚಾರದಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ’ ಎನ್ನುತ್ತಾರೆ.

ನಟಿಸುವ ಆಸೆಯಿದ್ದವರು ನೇರವಾಗಿ ತಮ್ಮನ್ನು ಸಂಪರ್ಕಿಸಬಹುದು ಎಂದು ಅವರು ಆಹ್ವಾನ ನೀಡುತ್ತಾರೆ. ಅವರ ಸಂಪರ್ಕ ಸಂಖ್ಯೆ: 8904550598.

Write A Comment