ಮನೋರಂಜನೆ

‘Whatsupp ಲವ್‌’: ಪ್ರೇಮಾಂಕುರದ ಕಥೆ

Pinterest LinkedIn Tumblr

crec13Whatsapp_0

ಸಾಮಾಜಿಕ ಜಾಲತಾಣಗಳಲ್ಲಿ ಅರಳುವ ಪ್ರೇಮಾಂಕುರಕ್ಕೆ ಒಂದಿಷ್ಟು ಕಥೆ ಕಟ್ಟಿ ಸಿನಿಮಾವಾಗಿಸುವ ಪ್ರಯತ್ನಗಳನ್ನು ಈಗಾಗಲೇ ಕಂಡಿದ್ದೇವೆ. ಅದಕ್ಕೆ ಮತ್ತೊಂದು ಹೊಸ ಸೇರ್ಪಡೆ ‘Whatsupp ಲವ್‌’. ಇತ್ತೀಚೆಗೆ ‘Whatsupp ಲವ್‌’ ಚಿತ್ರದ ಟೈಟಲ್ ಅನಾವರಣ ಮತ್ತು ಮುಹೂರ್ತ ನಡೆಯಿತು. ಅರೆ ಇದೇನು ಅಕ್ಷರ ದೋಷ ‘whatsapp’ ಹೀಗಲ್ಲವೇ ಎಂದು ಚಿತ್ರದ ನಿರ್ದೇಶಕ ರಾಮ್ ಅವರನ್ನು ಪ್ರಶ್ನಿಸಿದರೆ ‘ಇಲ್ಲ ಆ ಸಾಮಾಜಿಕ ಜಾಲದ ಹೆಸರನ್ನು ಬಳಸಿಕೊಳ್ಳುವುದು ಬೇಡ’ ಎಂದು ಉತ್ತರಿಸಿದರು.

ಸಹಾಯಕ ನಿರ್ದೇಶಕನಾಗಿದ್ದ ರಾಮ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶನದ ಪ್ರಯತ್ನಕ್ಕೆ ಕೈಯಾಕಿದ್ದಾರೆ. ‘ವಾಟ್ಸಪ್‌ ಪ್ರೀತಿ ಅರಳಲು ಕಾರಣವಾಗುವುದಲ್ಲದೇ ಅದನ್ನು ಯಾವ ರೀತಿ ಸದುಪಯೋಗ ಮಾಡಿಕೊಳ್ಳಬಹುದು ಎನ್ನುವುದನ್ನು ಇಲ್ಲಿ ಹೇಳಿದ್ದೇನೆ’ ಎನ್ನುತ್ತಾರೆ ರಾಮ್. 45 ದಿನಗಳ ಚಿತ್ರೀಕರಣದ ಯೋಜನೆಯನ್ನು ನಿರ್ದೇಶಕರು ಹಾಕಿಕೊಂಡಿದ್ದು ಬೆಂಗಳೂರು, ಮಡಿಕೇರಿ ಮತ್ತು ಅರಸೀಕೆರೆಯಲ್ಲಿ ಚಿತ್ರೀಕರಿಸುವ ಯೋಜನೆ ಹೊಂದಿದ್ದಾರೆ.

ಜೀವ ಈ ಚಿತ್ರದ ಮೂಲಕ ನಾಯಕ ನಟನಾಗಿ ಪರಿಚಿತರಾಗುತ್ತಿದ್ದು ‘ಪ್ರೀತಿಯ ಕಥೆ ಇಲ್ಲಿಯದ್ದು. ನಾನು ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕೆ. ಬಾಲಚಂದರ್ ನಿರ್ದೇಶನದ ‘ಸುಂದರ ಸ್ವಪ್ನಗಳು’ ಚಿತ್ರದಲ್ಲಿ ಬಾಲ ನಟನಾಗಿದ್ದೆ’ ಎಂದು ತಮ್ಮನ್ನು ಪರಿಚಯಿಸಿಕೊಂಡರು. ಕಾರ್ಯಕ್ರಮದಲ್ಲಿ ಗ್ಲಾಮರ್ ಆಗಿ ಮಿಂಚುತ್ತಿದ್ದ ಐಶ್ವರ್ಯಾ ಜೀವ ಜತೆ ಪ್ರೇಮದ ಲಾಲಿ ಹಾಡುವ ನಾಯಕಿ. ‘ಪಬ್ಲಿಕ್‌ಗೆ ಹತ್ತಿರವಾದ ಕಥೆ. ವಾಟ್ಸಪ್‌ನಲ್ಲಿನ ಪ್ರೀತಿ–ಪ್ರೇಮ–ಅನಾಹುತಗಳೂ ಇಲ್ಲಿ ಕಾಣಲಿವೆ’ ಎಂದರು.

ನಟಿ ಶ್ರಾವ್ಯಾ ಮತ್ತು ಶ್ರೀನಗರ ಕಿಟ್ಟಿ ಜೋಡಿಯಾಗಿ Whatsupp ಲವ್‌’ನಲ್ಲಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಬ್ಯೂಟಿಫುಲ್ ಕಂಫೋಸ್ ಕಥೆ ಇದು. ನನ್ನದು 10 ನಿಮಿಷದಲ್ಲಿ ಬರುವ ಪಾತ್ರ’ ಎಂದರು ಶ್ರಾವ್ಯಾ. ಕುಮಾರ್ ಸೂಗೂರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Write A Comment