ಮನೋರಂಜನೆ

ನಾಕ್‌ಔಟ್‌ ಬ್ರಾಂಡ್‌ ರಾಯಭಾರಿ ಸುದೀಪ್ ಚೆಲ್ಲಾಪಿಲ್ಲಿ ಮಾತು

Pinterest LinkedIn Tumblr

su

ನಾಕ್‌ಔಟ್‌ ಬ್ರಾಂಡ್‌ ರಾಯಭಾರಿಯಾಗಿರುವ ನಟ ಕಿಚ್ಚ ಸುದೀಪ್‌ ಅವರು ರಾಜ್ಯ ಸುತ್ತಿ ಬಂದ ಖುಷಿಯಲ್ಲಿ ಇದ್ದರು. ಸ್ಯಾಬ್‌ಮಿಲ್ಲರ್ ಇಂಡಿಯಾ ಲಿಮಿಟೆಡ್‌ ಆಯೋಜಿಸಿದ್ದ ‘ಸ್ನೇಹಿತರೊಂದಿಗೆ ಕಳೆದ ಆಹ್ಲಾದಕರ ಕ್ಷಣಗಳು’ ಕಾರ್ಯಕ್ರಮದ ನಿಮಿತ್ತ ಅವರು ರಾಜ್ಯದ ಬೀದರ್‌, ಬೆಳಗಾವಿ ಮತ್ತು ಮೈಸೂರು ಜಿಲ್ಲೆಗಳಿಗೆ ಭೇಟಿ ನೀಡಿದ್ದರು.

ಇದರ ಭಾಗವಾಗಿ ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಸಮಾರಂಭದಲ್ಲಿ ಕಂಪೆನಿಯ ೪೦ ಮಂದಿ ಅದೃಷ್ಟಶಾಲಿ ಗ್ರಾಹಕರಿಗೆ ನೇರವಾಗಿ ಸುದೀಪ್‌ ಅವರೊಂದಿಗೆ ಕಾಲ ಕಳೆಯುವ ಅವಕಾಶ ಸಿಕ್ಕಿತ್ತು. ಅವರು ತಮ್ಮ ನೆಚ್ಚಿನ ನಟನೊಂದಿಗೆ ಕೆಲಕಾಲ ಹರಟೆ ಹೊಡೆದರು. ಸೆಲ್ಫೀ ತೆಗೆಸಿಕೊಂಡು ಸಂಭ್ರಮಿಸಿದರು. ಇದಕ್ಕೂ ಮುನ್ನ ಸುದೀಪ್‌ ಅವರು ಕೆಲ ಸಮಯ ‘ಮೆಟ್ರೊ’ ಜೊತೆಗೂ ಕಳೆದರು.

ಪ್ರವಾಸದ ಸಂದರ್ಭದಲ್ಲಿ ನೀವು ಕಳೆದ ಮರೆಯಲಾರದ ಕ್ಷಣ ಯಾವುದು?
ಪ್ರತಿಯೊಂದು ಕ್ಷಣವೂ ನನಗೆ ಮರೆಯಲಾರದ್ದು. ಎಲ್ಲರೊಂದಿಗೆ ಮುಕ್ತವಾಗಿ ಬೆರೆತು ಮಾತನಾಡುವ ಅವಕಾಶ ಸಿಗುವುದು ಬಹಳ ವಿರಳ. ಒಬ್ಬೊಬ್ಬರು ಒಂದೊಂದು ತರಹದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅದರಲ್ಲಿ ಹೆಚ್ಚಿನವು ನನ್ನ ಸಿನಿಮಾ ಜೀವನಕ್ಕೆ ಸಂಬಂಧಿಸಿದ್ದಾಗಿದ್ದವು. ಅದೊಂದು ವಿಶಿಷ್ಟ ಅನುಭವ.

ಅನೇಕ ಕಡೆ ಓಡಾಡಿದ್ದೀರಿ. ಈ ವೇಳೆ ಫಿಟ್‌ನೆಸ್‌ ಕಾಯ್ದುಕೊಳ್ಳಲು ಏನು ಮಾಡಿದ್ದೀರಿ?
ನಿಜ ಹೇಳಬೇಕೆಂದರೆ ಏನೂ ಮಾಡಿರಲಿಲ್ಲ. ಎಲ್ಲದ್ದಕ್ಕೂ ಪ್ಯಾಷನ್‌ ಅಂತ ಇದ್ದರೆ ಏನೂ ಬೇಕಾದರೂ ಮಾಡಬಹುದು. ಹಿಂದೆ ಕ್ರಿಕೆಟ್‌ ಆಡಬೇಕು ಅನಿಸುತ್ತಿತ್ತು. ಈಗ ಆ ಅವಕಾಶ ಕೂಡ ಬಂದಿದೆ. ಸುಮಾರು ಒಂದೂವರೆ ತಿಂಗಳು ಸಿಸಿಎಲ್‌ನಲ್ಲಿ ಕಳೆದೆವು. ಅದರಿಂದ ಇನ್ನಷ್ಟು ಜನರಿಗೆ ಹತ್ತಿರವಾಗುವ ಅವಕಾಶ ಒಲಿಯಿತು.

ನಿಮ್ಮನ್ನು ಅನುಸರಿಸುವ ಅಭಿಮಾನಿಗಳ ದೊಡ್ಡ ದಂಡೇ ಇದೆ. ಹೀಗಿರುವಾಗ ನಾಕ್‌ಔಟ್‌ನಂತಹ ಬ್ರಾಂಡ್‌ಗೆ ರಾಯಭಾರಿಯಾಗಲು ಮೌಲ್ಯಗಳು ಅಡ್ಡಿ ಬರಲಿಲ್ಲವೇ?
ನಾನು ಸಿನಿಮಾರಂಗ ಪ್ರವೇಶಿಸಿದ ನಂತರ ಹಲವು ಕಂಪೆನಿಗಳಿಂದ ಪ್ರಚಾರ ರಾಯಭಾರಿ ಆಗುವಂತೆ ಆಹ್ವಾನಗಳು ಬಂದಿದ್ದವು. ಆದರೆ, ನಾನೆಂದೂ ಒಂದು ಉತ್ಪನ್ನದ ಪ್ರಚಾರ ರಾಯಭಾರಿ ಆಗಬೇಕು ಅಂದುಕೊಂಡಿರಲಿಲ್ಲ. ಆದರೆ, ರಿಯಾಲಿಟಿ ಷೋ ತರಹದ ಕಾರ್ಯಕ್ರಮಗಳ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾದೆ.

ಆಗ ಅನಿಸಿತು ಏನಾದರೂ ಮಾಡಬೇಕು ಅಂತ. ಆಗ ಈ ಕಂಪೆನಿಯವರು ನನ್ನನ್ನು ಭೇಟಿ ಮಾಡಿದರು. ಅವರು ಬಂದ ಸಮಯ ಹಾಗೂ ಅವರು ತಮ್ಮ ಉದ್ದೇಶಗಳನ್ನು ವಿವರಿಸಿದ ಬಗೆ ಇತ್ತಲ್ಲ ಅದು ನನಗೆ ಬಹಳ ಇಷ್ಟವಾಗಿತ್ತು. ಅದನ್ನು ಒಪ್ಪಿಕೊಳ್ಳುವುದಕ್ಕೆ ಒಂದು ವರ್ಷಕ್ಕೂ ಹೆಚ್ಚಿನ ಸಮಯ ತೆಗೆದುಕೊಂಡಿದ್ದೆ. ಅವರ ಉದ್ದೇಶ ಒಳ್ಳೆಯದಾಗಿದ್ದರಿಂದ ರಾಯಭಾರಿ ಆಗಲು ಒಪ್ಪಿಕೊಂಡೆ.

ಬಿಗ್‌ಬಾಸ್ ಮೂರನೇ ಸೀಸನ್ ಕೂಡ ನೀವೇ ನಡೆಸಿಕೊಡಲಿದ್ದೀರಿ ಎಂಬ ಊಹಾಪೋಹ ಕೇಳಿ ಬರುತ್ತಿದೆಯಲ್ಲ?
ಇನ್ನೂ ಅದರ ಹವಾನೇ ಎದ್ದಿಲ್ಲ. ಈಗತಾನೇ ಎರಡನೇ ಸೀಸನ್‌ ಮುಗಿಸಿದ್ದೇವೆ. ಒಂದುವೇಳೆ ಮೂರನೇ ಸೀಸನ್‌ ನಡೆಸಿಕೊಡಬೇಕು ಎಂಬ ಆಹ್ವಾನ ಬಂದರೆ ಖಂಡಿತವಾಗಿಯೂ ನಡೆಸಿಕೊಡುತ್ತೇನೆ.

ಬಿಗ್‌ಬಾಸ್‌ನಂತಹ ರಿಯಾಲಿಟಿ ಷೋಗಳಿಂದ ಜನರಿಗೇನು ಪ್ರಯೋಜನ?
ಜನರಿಗೇನು ಪ್ರಯೋಜನವಾಗಿದೆ ಎಂಬುದನ್ನು ನಾನ್ಹೇಗೆ ಹೇಳಲಿ? ಅದನ್ನು ನೀವೇ ಹೇಳಬೇಕು. ಆದರೆ, ಕಾರ್ಯಕ್ರಮದ ಬಗ್ಗೆ ತುಂಬಾ ಒಳ್ಳೆಯ ಪ್ರತಿಕ್ರಿಯೆಗಳು ಬಂದಿದ್ದವು.

ಒಬ್ಬ ನಿರ್ದೇಶಕರಾಗಿ ರೀಮೇಕ್‌ ಚಿತ್ರಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಜನರಿಗೆ ಯಾವುದು ತಲುಪುತ್ತದೆ ಅದನ್ನು ಖಂಡಿತವಾಗಿಯೂ ಮಾಡುತ್ತೇನೆ. ಆದರೆ, ನಾನು ನಟಿಸಿದ ೫೯ ಚಿತ್ರಗಳಲ್ಲಿ ಕೇವಲ ೧೩ ಚಿತ್ರಗಳು ರೀಮೇಕ್‌.

ಹಿಂದೆ ವರ್ಷದಲ್ಲಿ ಕನಿಷ್ಠ ಆರೇಳು ಚಿತ್ರಗಳಲ್ಲಿ ನಟಿಸುತ್ತಿದ್ದೀರಿ. ಆದರೆ, ಈಗ ಒಂದೆರಡಕ್ಕೆ ಸೀಮಿತವಾಗಿದೆ. ಇದರ ಅರ್ಥ ನೀವು ತುಂಬಾ ಚೂಸಿಯಾಗಿದ್ದೀರಾ ಅಥವಾ ಅದಕ್ಕೆ ಸಮಯ ಇಲ್ಲವೇ?
ಬಿಗ್‌ಬಾಸೂ ಮಾಡು ಅಂತೀರಾ, ಸಿಸಿಎಲ್ಲೂ (ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌) ಆಡು ಅಂತೀರಾ, ಮನೆಯಲ್ಲಿ ಹೆಂಡತಿ ಮಕ್ಕಳ ಜೊತೆ ಇರ್ತಾ ಇಲ್ಲ ಅಂತಾನೂ ಕೇಳ್ತೀರಾ. ಇಷ್ಟೆಲ್ಲದರ ಮಧ್ಯೆ ಮೂರ್ಮೂರು ಸಿನಿಮಾ ಮಾಡಬೇಕು ಅಂದರೆ ಹೇಗೆ ಮಾಡುವುದು ನೀವೇ ಹೇಳಿ?

ಇನ್ನಷ್ಟೇ ತೆರೆ ಕಾಣಬೇಕಿರುವ ‘ರನ್ನ’ ಚಿತ್ರದ ಬಗ್ಗೆ ನಿಮಗಿರುವ ನಿರೀಕ್ಷೆ?
‘ರನ್ನ’ ಚಿತ್ರದ ಚಿತ್ರೀಕರಣ ಬಹುತೇಕ  ಕೊನೆಯ ಹಂತದಲ್ಲಿದೆ. ತುಂಬಾ ಒಳ್ಳೆಯ ಚಿತ್ರ. ಜನಕ್ಕೆ ಇಷ್ಟವಾಗುತ್ತದೆ ಎಂಬ ಭರವಸೆ ಇದೆ.

ವಿಶ್ವಕಪ್‌ ಕ್ರಿಕೆಟ್‌ ಪಂದ್ಯಗಳನ್ನು ನೋಡಲು ಏನಾದರೂ ವಿಶೇಷ ಯೋಜನೆ ಹಾಕಿಕೊಂಡಿದ್ದೀರಾ?
ನಿಜ ಹೇಳಬೇಕೆಂದರೆ ಇದು ಟ್ವೆಂಟಿ–೨೦ ಜಮಾನ. ಇಡೀ ದಿನ ಕುಳಿತು ೫೦ ಓವರ್‌ನ ಮ್ಯಾಚ್‌ ನೋಡುವುದು ನನ್ನ ಪ್ರಕಾರ ಕಷ್ಟದ ಕೆಲಸ. ನನಗೆ ತಿಳಿದ ಮಟ್ಟಿಗೆ ಶೇ ೮೦ರಷ್ಟು ಜನರಿಗೆ ಇಷ್ಟು ಸಮಯವೇ ಇಲ್ಲ. ಭಾನುವಾರದಂತಹ ರಜೆ ದಿನಗಳು ಹಾಗೂ ಕೆಲವು ಅಪರೂಪದ ಪಂದ್ಯಗಳಿದ್ದರೆ ಅಷ್ಟೊಂದು ಸಮಯ ವ್ಯಯಿಸಬಹುದು. ಆದರೆ, ಕೆಲಸದ ದಿನಗಳಲ್ಲಿ ಇಡೀ ದಿನ ಟಿ.ವಿ. ಎದುರು ಕೂರಲು ಯಾರಿಗೂ ಆಗುವುದಿಲ್ಲ.

ಟ್ರಾಫಿಕ್‌ನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕಾದರೆ ಸಾಕಷ್ಟು ಸಮಯ ಬೇಕಾಗುತ್ತದೆ. ಅಂತಹದರಲ್ಲಿ ಪಂದ್ಯ ವೀಕ್ಷಿಸಿ ನಿತ್ಯದ ಕೆಲಸ ಮಾಡಲು ಆಗುವುದಿಲ್ಲ. ೧೦ರಿಂದ ೧೫ ಓವರ್‌ಗಳವರೆಗೆ ಪಂದ್ಯವನ್ನು ವೀಕ್ಷಿಸಿ, ಉಳಿದದ್ದನ್ನು ಮೊಬೈಲ್‌ನಲ್ಲಿ ತಿಳಿದುಕೊಳ್ಳಬಹುದು.

Write A Comment