ಮನೋರಂಜನೆ

ರಣಜಿ: ಪಂದ್ಯದ ಮೇಲೆ ಕರ್ನಾಟಕದ ಹಿಡಿತ; ಬೇಗನೆ ಕುಸಿದ ವಿನಯ್ ಬಳಗ, ಅಸ್ಸಾಂ ತಂಡಕ್ಕೂ ತಪ್ಪದ ಸಂಕಷ್ಟ

Pinterest LinkedIn Tumblr

pvec18xgautham

ಇಂದೋರ್‌: ಬ್ಯಾಟಿಂಗ್‌ನಲ್ಲಿ ಬೇಗನೆ ಕುಸಿತ ಕಂಡ ಕರ್ನಾಟಕ ದಿನದ ಕೊನೆಯಲ್ಲಿ ಬೌಲಿಂಗ್‌ನಲ್ಲಿ ಮಿಂಚಿತು. ಇದರಿಂದ ರಾಜ್ಯ ತಂಡ ಅಸ್ಸಾಂ ಎದುರಿನ ರಣಜಿ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

ಹೋಳ್ಕರ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ವಿನಯ್‌ ಕುಮಾರ್‌ ನಾಯಕತ್ವದ ಕರ್ನಾಟಕ ಮೊದಲ ದಿನ ಎರಡು ವಿಕೆಟ್‌ ನಷ್ಟಕ್ಕೆ 302 ರನ್‌ ಗಳಿಸಿತ್ತು. ಆದರೆ, ಮಂಗಳವಾರ 150 ರನ್‌ ಕಲೆ ಹಾಕುವಷ್ಟರಲ್ಲಿ ಎಂಟು ವಿಕೆಟ್‌ಗಳನ್ನು ಕಳೆದುಕೊಂಡಿತು.
ಇದಕ್ಕೆ ಕರ್ನಾಟಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಒಂದು ಕಾರಣವಾದರೆ, ಅಸ್ಸಾಂ ತಂಡದ ಚುರುಕಿನ ಫೀಲ್ಡಿಂಗ್‌ ಕೂಡಾ ಕಾರಣವಾಯಿತು. ಮೊದಲ ಇನಿಂಗ್ಸ್‌ ಆರಂಭಿಸಿರುವ ಅಸ್ಸಾಂ 59 ರನ್‌ ಗಳಿಸಿ ಮೂರು ವಿಕೆಟ್‌ ಕಳೆದುಕೊಂಡಿದೆ.

ಫಲ ನೀಡಿದ ಯೋಜನೆ ಬೇಗನೆ ವಿಕೆಟ್‌ ಉರುಳಿಸುವ ಲೆಕ್ಕಾಚಾರದೊಂದಿಗೆ ಟಾಸ್‌ ಗೆದ್ದರೂ ಫೀಲ್ಡಿಂಗ್ ಆಯ್ದುಕೊಂಡಿದ್ದ ಅಸ್ಸಾಂ ತಂಡದ ಯೋಜನೆಗೆ ಎರಡನೇ ದಿನದಾಟದಲ್ಲಿ ಫಲ ಲಭಿಸಿತು.

ಮಂಗಳವಾರ ಬ್ಯಾಟಿಂಗ್‌ ಮುಂದುವರಿಸಿದ ಆರ್. ಸಮರ್ಥ್‌ (46, 126 ಎಸೆತ, 6 ಬೌಂಡರಿ) ಮತ್ತು ಮನೀಷ್‌ ಪಾಂಡೆ (36) ದಿನದಾಟ ಆರಂಭವಾದ ಒಂದೇ ಗಂಟೆಯಲ್ಲಿ ಪೆವಿಲಿಯನ್‌ ಸೇರಿದರು. ಬೆಂಗಳೂರಿನಲ್ಲಿ ಹೋದ ವಾರ ನಡೆದ ಸಿ.ಕೆ. ನಾಯ್ಡು ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಶತಕ ಗಳಿಸಿದ್ದ ಕರುಣ್‌ ನಾಯರ್‌ (20) ರಣಜಿಯಲ್ಲಿ ಮತ್ತೆ ವೈಫಲ್ಯ ಅನುಭವಿಸಿದರು. ಯುವ ಆಟಗಾರ ಶಿಶಿರ್ ಭವಾನೆ (10) ಕೂಡಾ ಕರುಣ್‌ ಹಾದಿಯನ್ನೇ ತುಳಿದರು.

ಮುಳುವಾದ ರನ್‌ ಔಟ್‌
ಕರ್ನಾಟಕ ಲೀಗ್‌ ಹಂತದ ಪಂದ್ಯಗಳಲ್ಲಿ ಆರಂಭದಲ್ಲಿ ಬೇಗನೆ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇಲ್ಲಿನ ಪಂದ್ಯದಲ್ಲಿ ಉತ್ತಮ ಆರಂಭ

ಪಡೆದಿತ್ತಾದರೂ, ನಂತರ ವೈಫಲ್ಯದ ಹಾದಿ ತುಳಿಯಿತು. ಶ್ರೇಯಸ್‌ ಗೋಪಾಲ್‌ ಮತ್ತು ವಿನಯ್‌ ಕುಮಾರ್‌ ಅನಗತ್ಯ ರನ್ ಔಟ್‌ ಆಗಿದ್ದು ಇದಕ್ಕೆ ಕಾರಣವಾಯಿತು.

ಮೈಸೂರಿನಲ್ಲಿ ನಡೆದ ಬರೋಡ ಎದುರಿನ ಪಂದ್ಯದಲ್ಲಿ ಕರ್ನಾಟಕ ಸೋಲಿನ ಭೀತಿಯಲ್ಲಿತ್ತು. ಆಗ ಸಿ.ಎಂ. ಗೌತಮ್ ಮತ್ತು ಶ್ರೇಯಸ್ ರಕ್ಷಣಾತ್ಮಕವಾಗಿ ಆಡಿ ಪಂದ್ಯವನ್ನು ಡ್ರಾ ಹಾದಿಗೆ ಕೊಂಡೊಯ್ದಿದ್ದರು. ಅದೇ ರೀತಿ ಈ ಜೋಡಿ ಅಸ್ಸಾಂ ಎದುರು ದಿಟ್ಟ ಹೋರಾಟ ತೋರಿತ್ತು. ಶ್ರೇಯಸ್‌ 38 ರನ್‌ ಗಳಿಸಿದ್ದ ವೇಳೆ ರನ್‌ ಔಟ್‌ಗೆ ಬಲಿಯಾದರು.

ಗೌತಮ್‌ ಕವರ್‌್ ಬಳಿ ಚೆಂಡನ್ನು ಬಾರಿಸಿ ಒಂದು ರನ್‌ ಗಳಿಸಲು ವೇಗವಾಗಿ ಓಡಿದರು. ಇನ್ನೊಂದು ಬದಿಯಿದ್ದ ಶ್ರೇಯಸ್‌ ಕ್ರೀಸ್‌ ಮುಟ್ಟುವುದರ ಒಳಗೆ ಶಿವಶಂಕರ್ ರಾಯ್ ಚೆಂಡನ್ನು ವಿಕೆಟ್‌ಗೆ ನೇರ ಥ್ರೋ ಎಸೆದು ಸಂಭ್ರಮಿಸಿದರು. ಈ ವೇಳೆ ಕರ್ನಾಟಕ ಒಟ್ಟು 439 ರನ್‌ ಗಳಿಸಿತ್ತು. ನಂತರದ 13 ರನ್‌ ಗಳಿಸುವಷ್ಟರಲ್ಲಿ ವಿನಯ್‌, ಅಭಿಮನ್ಯು ಮಿಥುನ್‌ ಮತ್ತು ಅರವಿಂದ್‌ ಔಟಾದರು.

ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳು ಒಂದೆಡೆ ಜಿದ್ದಿಗೆ ಬಿದ್ದಂತೆ ವಿಕೆಟ್ ಒಪ್ಪಿಸುತ್ತಿದ್ದರೆ, ಆಪದ್ಭಾಂಧವ ಗೌತಮ್‌ (ಔಟಾಗದೆ 44, 99ಎಸೆತ, 8ಬೌಂಡರಿ) ಏಕಾಂಗಿ ಹೋರಾಟ ನಡೆಸಿದರು. ಗೌತಮ್‌ 142ನೇ ಓವರ್‌ನ ಮೂರನೇ ಎಸೆತವನ್ನು ಥರ್ಡ್‌ ಮ್ಯಾನ್‌ ಬಳಿ ಬಾರಿಸಿದರು. ಆದರೆ, ಮೂರನೇ ಸ್ಲಿಪ್‌ನಲ್ಲಿದ್ದ ಪಲ್ಲವ್‌ ದಾಸ್ ಕೊಂಚ ದೂರದಲ್ಲಿದ್ದ ಚೆಂಡನ್ನು ಹಾರಿ ಹಿಡಿತಕ್ಕೆ ಪಡೆದು ವಿಕೆಟ್‌ಗೆ ನೇರ ಥ್ರೋ ಎಸೆದು ವಿನಯ್‌ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಪಲ್ಲವ್‌ ಗಾಳಿಯಲ್ಲಿ ಜಿಗಿದು ಚೆಂಡನ್ನು ಹಿಡಿತಕ್ಕೆ ಪಡೆದ ರೀತಿ ಅಮೋಘವಾಗಿತ್ತು. ಮೊದಲ ದಿನದ ತಪ್ಪಿನಿಂದ ಪಾಠ ಕಲಿತಿರುವ ಅಸ್ಸಾಂ ಎರಡನೇ ದಿನ ಕ್ಷೇತ್ರರಕ್ಷಣೆಯಲ್ಲಿ ತುಂಬಾ ಚುರುಕುತನ ತೋರಿತು.

ಆರಂಭಿಕ ಆಘಾತ: ರಣಜಿ ಟೂರ್ನಿಯಲ್ಲಿ ಎರಡನೇ ಬಾರಿ ಕ್ವಾರ್ಟರ್‌ ಫೈನಲ್‌ (ಪ್ಲೇಟ್‌ ಡಿವಿಷನ್‌ ಹೊರತುಪಡಿಸಿ) ಆಡುತ್ತಿರುವ ಅಸ್ಸಾಂ ತಂಡ ಆರಂಭದ ಹತ್ತು ಓವರ್‌ಗಳಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಯಿತು. ಆದರೆ, ನಂತರ ದಿಢೀರನೇ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

ಪೆವಿಲಿಯನ್ ತುದಿಯಿಂದ ವಿನಯ್ ಬೌಲಿಂಗ್‌ ಆರಂಭಿಸಿದರು. ನಂತರ, ಮಿಥುನ್‌ ಮತ್ತು ಎಡಗೈ ವೇಗಿ ಅರವಿಂದ್‌ ದಾಳಿ ನಡೆಸಿದರೂ ವಿಕೆಟ್‌ ಮಾತ್ರ ಬೀಳಲಿಲ್ಲ. ಆದ್ದರಿಂದ ನಾಯಕ ವಿನಯ್‌ ಲೆಗ್‌ ಸ್ಪಿನ್ನರ್‌ ಶ್ರೇಯಸ್ ಕೈಗೆ ಚೆಂಡು ನೀಡಿದರು. ಶ್ರೇಯಸ್‌ ತಮ್ಮ ಮೊದಲ ಓವರ್‌ನಲ್ಲಿಯೇ ಪಲ್ಲವ್‌ ದಾಸ್‌ ವಿಕೆಟ್‌ ಉರುಳಿಸಿದರು. ನಂತರ ಅರವಿಂದ್‌ 14ನೇ ಓವರ್‌ನಲ್ಲಿ ಶಿವಶಂಕರ್‌ ಅವರನ್ನು ಪೆವಿಲಿಯನ್‌ ಕಳುಹಿಸಿದರು. ಇನ್ನೊಂದು ವಿಕೆಟ್‌ ಕೂಡಾ ಶ್ರೇಯಸ್ ಪಾಲಾಯಿತು.

ಅಸ್ಸಾಂ ಕಷ್ಟದ ಹಾದಿ
ಚೊಚ್ಚಲ ರಣಜಿ ಟ್ರೋಫಿ ಗೆಲ್ಲುವ ಆಸೆ ಹೊಂದಿರುವ ಅಸ್ಸಾಂ ಇನಿಂಗ್ಸ್‌ ಮುನ್ನಡೆ ಗಳಿಸಬೇಕಾದರೆ 395 ರನ್‌ ಗಳಿಸಬೇಕಿದೆ. ಆದರೆ, ‘ಸಿ’ ಗುಂಪಿನಿಂದ ನಾಕೌಟ್‌ ಪ್ರವೇಶಿಸಿರುವ ಈ ತಂಡಕ್ಕೆ ಇದು ಮುಳ್ಳಿನ ಮೇಲಿನ ನಡಿಗೆ ಎನಿಸಿದೆ.

ವಿನಯ್‌, ಮಿಥುನ್, ಅರವಿಂದ್‌ ಮತ್ತು ಶ್ರೇಯಸ್‌ ಅವರಂಥ ಸಮರ್ಥ ಬೌಲರ್‌ಗಳ ದಾಳಿಯನ್ನು ಎದುರಿಸಿ ಇಷ್ಟೊಂದು ರನ್‌ ಗಳಿಸುವುದು ಕಾಗದದ ಮೇಲಿನ ಲೆಕ್ಕಾಚಾರದಷ್ಟು ಖಂಡಿತಾ ಸುಲಭವಲ್ಲ. ಏಕೆಂದರೆ, ಈ ತಂಡ ರಣಜಿ ಇತಿಹಾಸದಲ್ಲಿ ಕರ್ನಾಟಕದ ಎದುರು ಒಮ್ಮೆಯೂ 350ಕ್ಕಿಂತಲೂ ಹೆಚ್ಚು ರನ್‌ ಕಲೆ ಹಾಕಿಲ್ಲ. 2000-01ರಲ್ಲಿ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಗಳಿಸಿದ್ದ 321 ರನ್‌ ಈ ತಂಡದ ಇದುವರೆಗಿನ ಒಟ್ಟು ಗರಿಷ್ಠ ರನ್‌ ಎನಿಸಿದೆ!

ಸ್ಕೋರ್ ವಿವರ
ಕರ್ನಾಟಕ ಪ್ರಥಮ ಇನಿಂಗ್ಸ್‌ 144.2 ಓವರ್‌ಗಳಲ್ಲಿ 452 (ಸೋಮವಾರದ ಅಂತ್ಯಕ್ಕೆ 90 ಓವರ್‌ಗಳಲ್ಲಿ 302ಕ್ಕೆ2)

ಆರ್. ಸಮರ್ಥ್‌ ಸಿ ಅರುಣ್‌ ಕಾರ್ತಿಕ್‌ ಬಿ ಕೃಷ್ಣ ದಾಸ್‌  46
ಮನೀಷ್‌ ಪಾಂಡೆ ಸಿ ಅರುಣ್‌ ಕಾರ್ತಿಕ್‌ ಬಿ ಕೃಷ್ಣ ದಾಸ್‌  36
ಕರುಣ್‌ ನಾಯರ್‌ ಸಿ ಅರುಣ್‌ ಕಾರ್ತಿಕ್‌ ಬಿ ಅರೂಪ್‌ ದಾಸ್‌  20
ಶಿಶಿರ್‌ ಭವಾನೆ ಸಿ ಅರುಣ್‌ ಕಾರ್ತಿಕ್‌ ಬಿ ಪಲ್ಲವ್‌ ಕುಮಾರ್ ದಾಸ್‌  10
ಸಿ.ಎಂ. ಗೌತಮ್‌ ಔಟಾಗದೆ  44
ಶ್ರೇಯಸ್ ಗೋಪಾಲ್‌ ರನ್‌ಔಟ್‌ (ಶಿವಶಂಕರ್‌ ರಾಯ್‌)  38
ಆರ್‌. ವಿನಯ್‌ ಕುಮಾರ್‌ ರನ್‌ಔಟ್‌ (ಪಲ್ಲವ್‌ ಕುಮಾರ್‌ ದಾಸ್‌)  03
ಅಭಿಮನ್ಯು ಮಿಥುನ್‌ ಸಿ ಅರುಣ್‌ ಕಾರ್ತಿಕ್‌ ಬಿ ಕೃಷ್ಣ ದಾಸ್‌  06
ಎಸ್‌. ಅರವಿಂದ್‌ ಬಿ ಕೃಷ್ಣ ದಾಸ್‌  00
ಇತರೆ: (ಬೈ-1, ಲೆಗ್‌ ಬೈ-4)  05
ವಿಕೆಟ್‌ ಪತನ: 3-326 (ಪಾಂಡೆ; 98.4), 4-327 (ಸಮರ್ಥ್‌; 100.1), 5-356 (ಕರುಣ್; 112.1), 6-358 (ಶಿಶಿರ್‌; 117.4), 7-439 (ಶ್ರೇಯಸ್‌; 141.6), 8-442 (ವಿನಯ್‌; 142.3), 9-452 (ಮಿಥುನ್‌; 144.1), 10-452 (ಅರವಿಂದ್‌; 144.2)
ಬೌಲಿಂಗ್‌: ಅರೂಪ್‌ ದಾಸ್‌ 31-11-77-1, ಕೃಷ್ಣ ದಾಸ್‌ 37.2-8-101-4, ಅಬು ನೇಚಿಮ್‌ ಅಹ್ಮದ್ 20-0-95-1, ಪಲ್ಲವ್‌ ಕುಮಾರ್‌ ದಾಸ್‌ 16-4-35-1, ಸೈಯದ್‌ ಮೊಹಮ್ಮದ್‌ 23-4-74-1, ಪಿ. ಸ್ವರೂಪಮ್ 15-4-63-0, ಗೋಕುಲ್ ಶರ್ಮ
2-1-2-0.

ಅಸ್ಸಾಂ ಮೊದಲ ಇನಿಂಗ್ಸ್‌ 27 ಓವರ್‌ಗಳಲ್ಲಿ 58ಕ್ಕೆ3
ಪಲ್ಲವ್‌ ಕುಮಾರ್‌ ದಾಸ್‌ ಸಿ ಆರ್‌. ಸಮರ್ಥ್‌ ಬಿ ಶ್ರೇಯಸ್ ಗೋಪಾಲ್‌  11
ಶಿವಶಂಕರ್‌ ರಾಯ್‌ ಸಿ ಕೆ.ಎಲ್. ರಾಹುಲ್‌ ಬಿ ಎಸ್‌. ಅರವಿಂದ್‌  16
ಗೋಕುಲ್ ಶರ್ಮ ಬ್ಯಾಟಿಂಗ್‌  18
ಧೀರಜ್ ಯಾದವ್‌ ಬಿ ಶ್ರೇಯಸ್‌ ಗೋಪಾಲ್‌  03
ಕೆ.ಬಿ. ಅರುಣ್‌ ಕಾರ್ತಿಕ್‌ ಬ್ಯಾಟಿಂಗ್‌  05
ಇತರೆ: (ಬೈ-4, ಲೆಗ್‌ ಬೈ-1)  05
ವಿಕೆಟ್‌ ಪತನ: 1-32 (ಪಲ್ಲವ್‌; 12.5), 2-32 (ಶಿವಶಂಕರ್‌; 13.1), 3-45 (ಜಾಧವ್‌; 20.3).
ಬೌಲಿಂಗ್‌: ಆರ್‌. ವಿನಯ್‌ ಕುಮಾರ್‌ 8-1-18-0, ಅಭಿಮನ್ಯು ಮಿಥುನ್‌ 8-3-17-0, ಶ್ರೀನಾಥ್‌ ಅರವಿಂದ್‌ 5-3-12-1, ಶ್ರೇಯಸ್‌ ಗೋಪಾಲ್‌ 6-1-6-2.

ಕರ್ನಾಟಕದ ಮೂರನೇ ಗರಿಷ್ಠ ಮೊತ್ತ
452 ರನ್‌ ಇದು ಅಸ್ಸಾಂ ಎದುರು ಕರ್ನಾಟಕ ತಂಡ ಗಳಿಸಿದ ಮೂರನೇ ಗರಿಷ್ಠ ಮೊತ್ತವಾಗಿದೆ.
2003-04ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ 475 ರನ್‌ ಗಳಿಸಿತ್ತು. ಇದು ಗರಿಷ್ಠ ಸ್ಕೋರು ಎನಿಸಿದೆ. ರಣಜಿ ಇತಿಹಾಸದಲ್ಲಿ ಉಭಯ ತಂಡಗಳು 1993-94ರಲ್ಲಿ ಮೊದಲ ಸಲ ಮುಖಾಮುಖಿಯಾಗಿದ್ದಾಗ 468 ರನ್‌ ಗಳಿಸಿದ್ದು ಎರಡನೇ ಗರಿಷ್ಠ ಮೊತ್ತ ಎನಿಸಿದೆ.

Write A Comment