ಮನೋರಂಜನೆ

‘ಜ್ವಲಂತಂ’; ರೈತರು–ಬಂಡವಾಳಶಾಹಿಗಳ ನಡುವಿನ ತಿಕ್ಕಾಟ

Pinterest LinkedIn Tumblr

psmec12jwalnata

ಮಾತಿನ ಭಾಗದ ಚಿತ್ರೀಕರಣ ಮುಗಿಸಿದ ‘ಜ್ವಲಂತಂ’ ಚಿತ್ರತಂಡ ಚಿತ್ರೀಕರಣದ ಅನುಭವ ಹಾಗೂ ಮೇಕಿಂಗ್ ದೃಶ್ಯಗಳನ್ನು ಹೊತ್ತು ಸಂಭ್ರಮದಿಂದ ಪತ್ರಕರ್ತರನ್ನು ಎದುರುಗೊಂಡಿತ್ತು. ಇದುವರೆಗೆ ಬೆಂಗಳೂರು, ಕನಕಪುರ, ರಾಮನಗರ, ಚನ್ನಪಟ್ಟಣ ಹಾಗೂ ಹೊನ್ನಾವರದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಹಾಡುಗಳು ಮಾತ್ರ ಬಾಕಿ ಉಳಿದಿವೆ.

ರೈತರು–ಬಂಡವಾಳಶಾಹಿಗಳ ನಡುವಿನ ತಿಕ್ಕಾಟ ಮತ್ತು ಇತರೆ ಸಾಮಾಜಿಕ ಸಮಸ್ಯೆಗಳ ಮೇಲೆ ಹೆಚ್ಚಿನ ಗಮನ ಹರಿಸುವ ‘ಜ್ವಲಂತಂ’ ಇಂತಹ ಸಮಸ್ಯೆಗಳಿಗೆ ಜ್ವಲಂತ ಸಾಕ್ಷಿಯಂತೆ. ‘ಜ್ವಲಂತಂ’ ಶಬ್ದವನ್ನು ಉಗ್ರ ನರಸಿಂಹ ಶ್ಲೋಕದಿಂದ ಆಯ್ದುಕೊಂಡಿದ್ದಾರೆ ನಿರ್ದೇಶಕ ಬಿ.ಎಂ.ಅಂಬರೀಷ್. ‘ಶೀರ್ಷಿಕೆ ತುಂಬ ವಿಭಿನ್ನವಾಗಿದ್ದು ಅದು ಚಿತ್ರದ ಆಶಯಕ್ಕೆ ಸೂಕ್ತವಾಗಿದೆ. ಇದು ಖಂಡಿತ ಜನರನ್ನು ಸೆಳೆಯಲಿದೆ’ ಎಂಬ ವಿಶ್ವಾಸ ನಿರ್ದೇಶಕರದ್ದು. ಹೈದರಾಬಾದ್‌ನಲ್ಲಿ ನಿರ್ದೇಶನದ ಡಿಪ್ಲೊಮಾ ಕೋರ್ಸ್ ಮಾಡಿರುವ ಅವರಿಗಿದು ಮೊದಲ ನಿರ್ದೇಶನದ ಅನುಭವ.

‘ಚಿತ್ರದ ನಾಯಕ ಪುರಾತತ್ವ ಶಾಸ್ತ್ರ ವಿದ್ಯಾರ್ಥಿಯಾಗಿದ್ದು, ಗಂಭೀರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸುತ್ತಾನೆ. ತನ್ನ ದಾರಿಯಲ್ಲಿ ಆತ ಏನೇನು ಕಷ್ಟಗಳನ್ನು ಎದುರಿಸುತ್ತಾನೆ ಎಂಬುದೇ ಚಿತ್ರದ ಕಥೆ’. ಚಿತ್ರದ ಕುರಿತು ನಿರ್ದೇಶಕರು ಬಿಟ್ಟುಕೊಟ್ಟ ಎಳೆ ಇಷ್ಟು. ಸಾಮಾಜಿಕ ವಿಚಾರವನ್ನಾಧರಿಸಿದ ಚಿತ್ರ ಇದಾದರೂ ಹಾಸ್ಯ, ಭಾವನಾತ್ಮಕ ಅಂಶಗಳು, ಪ್ರೇಮ ಹೀಗೆ ಮಾಸ್ ಪ್ರೇಕ್ಷಕರಿಗೂ ಇಷ್ಟವಾಗುವ ಎಲ್ಲ ಕಮರ್ಷಿಯಲ್ ಅಂಶಗಳೂ ಇವೆಯಂತೆ.

ನಾಯಕ ಗೌತಮ್ ಕ್ಯಾಮೆರಾ ಎದುರು ನಿಂತಾಗಲೆಲ್ಲ ತನ್ನ ಪಾತ್ರದ ಜ್ವಾಲಾ ಎಂಬ ಹೆಸರು ಅವರಿಗೆ ಪ್ರೇರಣೆ ನೀಡುತ್ತದೆಯಂತೆ. ಅದಕ್ಕಾಗಿ ತನ್ನ ಹೆಸರನ್ನೇ ಜ್ವಾಲಾ ಆಗಿ ಬದಲಾಯಿಸಿಕೊಂಡು ಆನಂದಿಸಿದ್ದಾರೆ. ಎಂಜಿನಿಯರಿಂಗ್ ಓದಿರುವ ಗೌತಮ್ ಚೆನ್ನೈನಲ್ಲಿ ಒಂದಷ್ಟು ದಿನ ಕೆಲಸವನ್ನೂ ಮಾಡಿದ್ದಾರೆ. ‘ನಟನೆಯಲ್ಲಿ ಆಸಕ್ತಿ ಇರುವ ನಾನು ಅದಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದೇನೆ. ನನ್ನಿಂದ ಸಾಧ್ಯವಾದ ಮಟ್ಟಿಗೆ ಒಳ್ಳೆಯ ನಟನೆ ನೀಡಿದ್ದೇನೆ’ ಎನ್ನುತ್ತಾರೆ ಗೌತಮ್.

‘ಕ’, ‘ಜಸ್ಟ್ ಮದ್ವೇಲಿ’ ಚಿತ್ರದಲ್ಲಿ ನಟಿಸಿರುವ ದೀಪಾ ಗೌಡ ‘ಜ್ವಲಂತಂ’ ನಾಯಕಿ. ಅವರಿಲ್ಲಿ ಪತ್ರಕರ್ತೆ. ‘ನಾಯಕನ ಯಶಸ್ಸಿಗೆ ಸಹಾಯಕಳಾಗುವ ನನ್ನ ಪಾತ್ರ ಮಹತ್ವಾಕಾಂಕ್ಷೆ ಉಳ್ಳದ್ದು’ ಎಂದರು. ಮತ್ತೊಬ್ಬ ನಾಯಕಿ ದೀಪ್ತಿ ಕಾಪ್ಸೆ ಹಳ್ಳಿ ಹುಡುಗಿಯಾಗಿ ಬಣ್ಣ ಹಚ್ಚಿದ್ದಾರೆ. ಅನು ರಾವ್ ನಿರ್ಮಿಸುತ್ತಿರುವ ಚಿತ್ರಕ್ಕೆ ವಿಕ್ರಂ ಸುಬ್ರಹ್ಮಣ್ಯ ಸಂಗೀತವಿದೆ.

Write A Comment