ಕರ್ನಾಟಕ

ಮುಖ್ಯಮಂತ್ರಿಗೆ ಎಚ್‌ಡಿಕೆ 12 ಪ್ರಶ್ನೆಗಳು

Pinterest LinkedIn Tumblr

kummi1

ಬೆಂಗಳೂರು: ಅರ್ಕಾವತಿ ಬಡಾವಣೆ ಜಮೀನಿನ ಡಿ–ನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌. ಡಿ. ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 12 ಪ್ರಶ್ನೆಗಳನ್ನು ಹಾಕಿದ್ದಾರೆ.

ಇವಕ್ಕೆ ಸದನದಲ್ಲಿ ಅಥವಾ ಮಾಧ್ಯಮಗಳ ಮೂಲಕ ಉತ್ತರ ನೀಡುವಂತೆ ಸವಾಲು ಹಾಕಿದ್ದಾರೆ.
ಪ್ರಶ್ನೆಗಳು:

1. ಅರ್ಕಾವತಿ  ಪ್ರಕರಣದಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ನೀಡಿರುವ ವರದಿಗೆ ವ್ಯತಿರಿಕ್ತವಾಗಿ, ನ್ಯಾಯಾಲಯವು ನೀಡಿರುವ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ರೀ–ಡು ಹೆಸರಿನಲ್ಲಿ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವುದು ಸುಳ್ಳೇ?

2. 2012ರ ನವೆಂಬರ್‌ನಲ್ಲಿ ಭೂಸ್ವಾಧೀನ ಕಾಯ್ದೆಯ ಸೆಕ್ಷನ್‌ 16(2) ಅಡಿ ಜಮೀನನ್ನು ಸ್ವಾಧೀನ ಪಡಿಸಿಕೊಂಡ ನಂತರ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವುದು ಸುಳ್ಳೇ?

3. 2004ರ ಅಂತಿಮ ಅಧಿಸೂಚನೆ ಚಾಲ್ತಿಯಲ್ಲಿರುವಾಗಲೇ 2014ರ ಜೂನ್‌ 18ರಂದು ಎರಡನೇ ಅಂತಿಮ ಅಧಿಸೂಚನೆ ಹೊರಡಿಸಿರುವುದು ಕಾನೂನು ಬಾಹೀರವಲ್ಲವೇ?

4. ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆ ಹೊರಡಿಸುವಾಗ ಯಾವ ಜಮೀನು ಯಾವ ಮೂಲ ಖಾತಾದಾರರ ಹೆಸರಿನಲ್ಲಿತ್ತೋ, ಆ ಜಮೀನನ್ನು ರೀ–ಡು ಮೂಲಕ ಖಾತಾದಾರರಲ್ಲದವರ ಹೆಸರಿನಲ್ಲಿ ಕೈಬಿಟ್ಟಿರುವ ಒಳಮರ್ಮವೇನು?

5. ಭೂ ಸ್ವಾಧೀನದಿಂದ ಕೈಬಿಟ್ಟಿರುವ ಎಲ್ಲ ಜಮೀನುಗಳಿಗೆ ಸಂಬಂಧಿಸಿದಂತೆ, ಬಿಡಿಎ ಮಂಡಳಿಯ ಸಭೆಯಲ್ಲಿ ಭೂಸ್ವಾಧೀನ­ದಿಂದ ಕೈಬಿಡುವ ನಿರ್ಣಯ ಅಂಗೀಕರಿಸಲಾಗಿದೆಯೇ?

6. ಡಿನೋಟಿಫಿಕೇಷನ್‌ ಮಾಡಲು ಸರ್ಕಾರ ರಚಿಸಿರುವ ಸಮಿತಿಯ ಗಮನಕ್ಕೂ ತಾರದೆ ವಾಮಮಾರ್ಗದಲ್ಲಿ ರೀ–ಡು ಹೆಸರಿನಲ್ಲಿ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವುದು ಸುಳ್ಳೇ?

7. ಕಾನೂನಿನಂತೆ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸದೇ ಮುಖ್ಯಮಂತ್ರಿಗಳೇ ನೇರವಾಗಿ ಕ್ರಮ ಕೈಗೊಂಡಿರುವುದು ಸರಿಯೇ?

8. ಭೂ ಸ್ವಾಧೀನ ಕಾಯ್ದೆ ಸೆಕ್ಷನ್‌ 48(1)ರಂತೆ ಮಾಡಬೇಕಾದ ಡಿನೋಟಿಫಿಕೇಷನನ್ನು ಎರಡನೇ ಬಾರಿ  ಅಂತಿಮ ಅಧಿಸೂಚನೆ ಹೊರಡಿಸಿದ್ದು ಕಾನೂನುಬಾಹೀರ ಅಲ್ಲವೇ?

9. 2015ರ ಮೇ 30ರ ನಂತರದ ಅವಧಿಯಲ್ಲಿ ನಿಮ್ಮ ದಾಖಲೆಗಳ ಪ್ರಕಾರವೇ ಸ್ವಾಧೀನದಿಂದ ಕೈಬಿಟ್ಟಿರುವ ವಿವರಗಳನ್ನು ನೀಡುತ್ತಿಲ್ಲ ಏಕೆ?

10. 2015ರ ಮೇ 30ರ ನಂತರ ಒಂದೇ ಒಂದು ಗುಂಟೆ ಜಮೀನನ್ನು ಡಿನೋಟಿಫಿಕೇಷನ್‌ ಮಾಡಿಲ್ಲ ಅಂತ ಹೇಳುವ ನೀವು ನೂರಾರು ಎಕರೆಯನ್ನು  ರೀ–ಡು ಹೆಸರಿನಲ್ಲಿ ಕೈಬಿಡುವ ಅಗತ್ಯವಿತ್ತೇ? ಈ ಕ್ರಮಕ್ಕೆ ನ್ಯಾಯಯುತ ಸ್ಪಷ್ಟೀಕರಣ ನೀಡುವಿರಾ?

11. ರೀ–ಡು ಹೆಸರಿನಲ್ಲಿ ಕೆಲವೊಂದು ಜಮೀನುಗಳನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವ ಮೊದಲೇ ಅಂದರೆ, ಸೆಕ್ಷನ್‌ 48(1)ರ ಅಡಿಯಲ್ಲಿ  ಹಿಂಬರಹ ಎಂಬ ತಲೆಬರಹ­ದಡಿಯಲ್ಲಿ ಬಿಡಿಎಯು ನಿರಾಕ್ಷೇಪಣಾ ಪತ್ರಗಳನ್ನು ಆ ಜಮೀನುಗಳಿಗೆ ನೀಡಿರುವುದರ ಹಿಂದಿನ ಹುನ್ನಾರ ಏನು?

12. ಕಾನೂನುಗಳನ್ನು ಗಾಳಿಗೆ ತೂರಿ, ನ್ಯಾಯಾಲಯ ಆದೇಶ­ಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿ, ಬಿಡಿಎನಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದೆ, ಡಿನೋಟಿಫಿಕೇಷನ್‌ ಸಮಿತಿಯ ಮುಂದಿಡದೆ, ಸಚಿವ ಸಂಪುಟದ ಅನುಮೋದನೆ ಪಡೆಯದೆ, ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸದೇ 974 ಎಕರೆ ಜಮೀನನ್ನು ಕೈಬಿಟ್ಟಿರುವುದಕ್ಕೆ ಸೂಕ್ತ ಕಾರಣ ನೀಡುವಿರಾ?

Write A Comment