ಮನೋರಂಜನೆ

3ಕೆ’: ಮೂರು ಕೋನದ ಶಾಕ್ ಪ್ರೇಮ ಕಥೆ

Pinterest LinkedIn Tumblr

Rashika

ಮದುವೆ ಮಂಟಪದಲ್ಲಿ ಅಣ್ಣ–ತಮ್ಮ ಇಬ್ಬರು ‘ನನ್ನ ಮದುವೆ’, ‘…ನನ್ನ ಮದುವೆ’ ಎಂದು ಕಿತ್ತಾಡುತ್ತಿದ್ದರೆ ಮದುವಣಗಿತ್ತಿ ಮಾತ್ರ ‘ನಮ್ಮ ಮದುವೆ’ ಎಂದು ಇಬ್ಬರನ್ನೂ ಸಂತೈಸಿ ಶಾಕ್ ನೀಡಿದ್ದಳು. ಕಾರಣ– ಇಬ್ಬರೂ ವರರಿಗೆ ವಧು ಒಬ್ಬಳೇ. ಕಂಠೀರವ ಸ್ಟುಡಿಯೊದಲ್ಲಿ ಚಿತ್ರೀಕರಣವಾಗುತ್ತಿದ್ದ ‘3ಕೆ’ ಚಿತ್ರದ ವಿಶೇಷ ಅದು.

ಚಿತ್ರದ ಮುಹೂರ್ತ ನೆರವೇರಿಸಿ ಮೊದಲ ದೃಶ್ಯ ಚಿತ್ರೀಕರಿಸಿಕೊಂಡ ‘3ಕೆ’ ತಂಡ ಪತ್ರಕರ್ತರೆದುರು ಮಾಹಿತಿ ನೀಡಲು ಹಾಜರಾಗಿತ್ತು. ಕರಣ್, ಕೀರ್ತಿ, ಕಿರಣ್ ಈ ಮೂವರ ತ್ರಿಕೋನ ಪ್ರೇಮಕಥೆ ‘3ಕೆ’. ಮೂವರ ಹೆಸರಿನ ಮೊದಲ ಅಕ್ಷರ ಆಂಗ್ಲ ಪದ ‘ಕೆ’ಯಿಂದ ಪ್ರಾರಂಭವಾಗುವ ಕಾರಣಕ್ಕೆ ಇಂತಹ ಶೀರ್ಷಿಕೆಯೊಂದನ್ನು ಅನ್ವೇಷಣೆ ಮಾಡಿ ಕುತೂಹಲ ಹುಟ್ಟಿಸಲು ಮುಂದಾಗಿದ್ದಾರೆ ನಿರ್ದೇಶಕ ಎಸ್.ಕೆ.ಶ್ರೀನಿವಾಸ್. ನಿರ್ಮಾಪಕರೂ ಅವರೇ. ಮೂವರ ಪ್ರೇಮದ ಮಧ್ಯೆ ಹರಿದಾಡುವ ಮಾಯಾ ಎಂಬ ಪಾತ್ರವೂ ಇದೆ. ಮೂವರ ಮನಸನ್ನು ತಟ್ಟುವ ಪಾತ್ರ ಈ ಮಾಯಾ.

ಯಾರನ್ನೋ ಪ್ರೀತಿಸಿ ಅವರನ್ನು ಪಡೆಯಲು ಪಡಿಪಾಟಲು ಪಡುವುದಕ್ಕಿಂತ ನಮ್ಮನ್ನು ಪ್ರೀತಿಸುವವರ ಜೊತೆ ಖುಷಿಯಾಗಿರುವುದೇ ಒಳಿತು ಎಂಬುದನ್ನು ಚಿತ್ರದ ಮೂಲಕ ಹೇಳಹೊರಟಿದ್ದಾರೆ ನಿರ್ದೇಶಕರು. ಸಂದೇಶ ಹೊಸದೇನಲ್ಲ. ತ್ರಿಕೋನ ಪ್ರೇಮ ಕಥೆಗಳೂ ಹಲವು ಆಗಿಹೋಗಿವೆ. ಇವೆಲ್ಲವನ್ನೂ ನಿವಾಳಿಸುವಂಥ ವಿಭಿನ್ನ ಚಿತ್ರಕಥೆ ಮಾಡಿಕೊಂಡಿದ್ದೇನೆ ಎನ್ನುತ್ತಾರೆ ಅವರು.

ನಾಯಕರಾಗಿ ರಾಕೇಶ್ ಮತ್ತು ಹರಿಪ್ರಸಾದ್ ಇದ್ದಾರೆ. ರಾಕೇಶ್ ಮೈಸೂರು ರಂಗಾಯಣದ ಪ್ರತಿಭೆ. ಹರಿಪ್ರಸಾದ್ ಕೂಡ ನಟನೆಯ ತರಬೇತಿ ಪಡೆದವರೇ. ಚಿತ್ರದಲ್ಲಿ ಒಬ್ಬ ಹಠಮಾರಿಯಾದರೆ ಇನ್ನೊಬ್ಬ ಸಾಧು ಸ್ವಭಾವಿ. ‘ಜಾಸ್ಮಿನ್ 5’ ನಾಯಕಿ ನವ್ಯಾ ಈ ಚಿತ್ರದಿಂದ ರಾಶಿಕಾ ಆಗಿದ್ದಾರೆ. ಮಾಯಾ ಪಾತ್ರ ನಿರ್ವಹಿಸುತ್ತಿರುವ ಕೃತಿ ಅವರಿಗೆ ಇದು ಮೊದಲ ಚಿತ್ರ.

ಅವಿನಾಶ್, ವಿನಯಾ ಪ್ರಸಾದ್, ಸುಮಿತ್ರಮ್ಮ ಮುಂತಾದವರ ತಾರಾಗಣವಿದೆ. ಎಸ್.ಪಿ.ವರ್ಮ ಐದು ಹಾಡುಗಳಿಗೆ ರಾಗ ಸಂಯೋಜಿಸಿದ್ದಾರೆ. ಧಾರಾವಾಹಿಗಳಿಗೆ ಛಾಯಾಗ್ರಹಣ ಮಾಡುತ್ತಿದ್ದ ಆರ್.ಕೆ.ವೆಂಕಟೇಶ್ ಕ್ಯಾಮೆರಾ ಹೆಗಲಿಗೇರಿಸಿದ್ದಾರೆ. ಮೈಸೂರು, ಮಡಿಕೇರಿ, ಸಕಲೇಶಪುರಗಳಲ್ಲಿ ಚಿತ್ರೀಕರಣಕ್ಕೆ ತಂಡ ಸಿದ್ಧವಾಗಿದೆ.

Write A Comment