ಮನೋರಂಜನೆ

‘ಲವ್ ಯೂ ಆಲಿಯಾ’: ‘ನನ್ನ ಇಡೀ ಚಿತ್ರ ಜೀವನದ ಅನುಭವದ ಧಾರೆ ಇಲ್ಲಿದೆ’; ನಿರ್ದೇಶಕ ಇಂದ್ರಜಿತ್ ಲಂಕೇಶ್

Pinterest LinkedIn Tumblr

crec13Indraji

ನಿರ್ದೇಶಕ ಇಂದ್ರಜಿತ್ ಲಂಕೇಶ್ ಮೂರು ವರುಷಗಳ ತರುವಾಯ ‘ಲವ್ ಯೂ ಆಲಿಯಾ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ ಸಂತಸದಲ್ಲಿದ್ದಾರೆ. ‘ನನ್ನ ಇಡೀ ಚಿತ್ರ ಜೀವನದ ಅನುಭವದ ಧಾರೆ ಇಲ್ಲಿದೆ’ ಎಂದು ಅಪಾರ ವಿಶ್ವಾಸದಲ್ಲಿ ಹೇಳುವ ಅವರಲ್ಲಿ ಪಿ. ಲಂಕೇಶ್ ಕುರಿತು ಟಾಕಿ ಡ್ರಾಮಾ ಮಾಡುವ ಆಸೆ–ಕನಸು ಕೂಡ ಇದೆ.

*2012ರಲ್ಲಿ ನಿಮ್ಮ ‘ದೇವ್ ಸನ್ ಆಫ್ ಮುದ್ದೇಗೌಡ’ ಚಿತ್ರ ಬಂದಿತು. ಈಗ ‘ಲವ್ ಯೂ ಆಲಿಯಾ’, ಏಕೆ ಈ ಮೂರು ವರುಷಗಳ ಅಂತರ?
ಸಿನಿಮಾ ಒಂದು ಸೃಜನಶೀಲ ಕೆಲಸ. ಅದನ್ನು ಒಂದು ಕಾರ್ಖಾನೆ ರೀತಿ ನಡೆಸಲು ಸಾಧ್ಯವಿಲ್ಲ. ಯಾರೇ ನಿರ್ದೇಶಕರಾದರೂ ಚಿತ್ರಕಥೆ, ಮೇಕಿಂಗ್ ಇತ್ಯಾದಿಯನ್ನು ಸದೃಢವಾಗಿಸಿಕೊಂಡು ಒಳ್ಳೆಯ ಸಿನಿಮಾ ಮಾಡಲು ಕನಿಷ್ಠ ಒಂದು ವರುಷವಾದರೂ ಬೇಕು. ಸಿನಿಮಾ ಸಹ ಒಂದು ಸೃಜನಾತ್ಮಕ ಕಲೆ, ಅದು ನಿರ್ದೇಶಕನ ಆಲೋಚನೆಯ ಸೃಷ್ಟಿಯಾಗಿರುತ್ತದೆ. ಆ ಹಿನ್ನೆಲೆಯಲ್ಲಿ ನೋಡುವುದಾದರೆ ಯೋಚಿಸಲು ಆಲೋಚಿಸಲು ಅವರಿಗೂ ಸಮಯ ಬೇಕು. ಆದರೆ ಕೆಲವು ವೇಳೆ ಅದರ ನಿರ್ಮಾಣ ಸಾಧ್ಯತೆ ಬಗ್ಗೆ ಅರಿಯುವುದು ಕಷ್ಟ. ರೀಮೇಕ್ ವಿಚಾರದಲ್ಲಿ ಈ ಸೃಜನಶೀಲತೆಯ ಮಾತು ಹೇಳುವುದು ಕಷ್ಟಸಾಧ್ಯ. ನಾನು ಸಿನಿಮಾ ರಂಗಕ್ಕೆ ಬಂದು 15 ವರುಷ ಆಗಿದೆ. ಇದು 9ನೇ ಸಿನಿಮಾ. ನಾನು ವರುಷಕ್ಕೆ ಒಂದು ಸಿನಿಮಾ ಮಾಡುವೆ; ಯೋಜನಾಬದ್ಧವಾಗಿ ಅತ್ಯುತ್ತಮವಾದದ್ದನ್ನೇ ಕೊಡುವೆ. ಅಲ್ಲದೆ ಚುನಾವಣೆಯೂ ಬಂತು. ಆ ಬಗ್ಗೆ ಗಮನ ನೀಡಿದ್ದರಿಂದ ಸ್ವಲ್ಪ ಕಾಲ ನಿರ್ದೇಶನಕ್ಕೆ ಗಮನ ನೀಡಲು ಸಾಧ್ಯವಾಗಿರಲಿಲ್ಲ.

*‘ಲವ್‌ ಯೂ ಆಲಿಯಾ’ ಚಿತ್ರಕ್ಕೆ ಎಷ್ಟು ದಿನಗಳಿಂದ ತೊಡಗಿಸಿಕೊಂಡಿದ್ದಿರಿ?
ಸುಮಾರು ಒಂದೂವರೆ ವರುಷ ಕಥೆಯ ಕುರಿತು ಆಲೋಚಿಸಿದ್ದೆ. ಆ ನಂತರ ಮೂರು ತಿಂಗಳಲ್ಲಿ ಚಿತ್ರಕಥೆ ಮಾಡಿಕೊಂಡೆ. ಮೋಹನ್, ಜನಾರ್ದನ್ ಜತೆಗೂಡಿದರು. ಈಗಾಗಲೇ ಸಿನಿಮಾದ ಪೂರ್ಣ ಚಿತ್ರೀಕರಣ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಮೇ ತಿಂಗಳ ಮೊದಲ ವಾರದಲ್ಲಿ ಸಿನಿಮಾವನ್ನು ತೆರೆಗೆ ತರಲು ಆಲೋಚಿಸಲಾಗಿದೆ.

*ನಿಮ್ಮ ಚಿತ್ರಗಳಲ್ಲಿ ಆದಷ್ಟೂ ಹೊಸ ಮುಖಗಳಿಗೆ ಆದ್ಯತೆ ನೀಡುತ್ತೀರಿ. ಇಲ್ಲಿ ರವಿಚಂದ್ರನ್ ಅವರಿಗೆ ಕಥೆ ಹೆಣೆದಿದ್ದೀರಿ. ಕನಸುಗಾರನ ಮೇಲೆ ಕಣ್ಣೋಟ ಬೀರಲು ಕಾರಣ?
ರವಿಚಂದ್ರನ್ ಮತ್ತು ಭೂಮಿಕಾ ಪ್ರಬುದ್ಧ ನಟ–ನಟಿಯರು. ಕಿರುತೆರೆಯಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತಿದ್ದ ಚಂದನ್ ಮತ್ತು ಹೊಸ ಪ್ರತಿಭೆ ಸಂಗೀತ ಇಲ್ಲಿ ನಟಿಸಿದ್ದಾರೆ. ಈ ನಾಲ್ವರನ್ನು ಸೇರಿಸಿ ಕಥೆ ಹೆಣೆಯಲಾಗಿದೆ. ರವಿಶಂಕರ್, ಧ್ಯಾನ್, ಸಾಧುಕೋಕಿಲಾ, ಶಕೀಲಾ ಮೊದಲಾದವರ ತಾರಾಗಣವಿದೆ. ರವಿಚಂದ್ರನ್ ಅವರು ನಾನು ಸಿನಿಮಾರಂಗಕ್ಕೆ ಬರುವ ಮುಂಚೆಯೇ ನನಗೆ ಪರಿಚಿತರು. ನಾನು ‘ಆಲ್‌ರೌಂಡರ್’ ಪತ್ರಿಕೆ ಆರಂಭಿಸಿದಾಗ ಅದರ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಅವರು ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ಆದರೆ ವೈದ್ಯರ ಪಾತ್ರವನ್ನು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಪಾತ್ರ ಮತ್ತು ಕಥೆಯನ್ನು ಹೊಂದಿಸಿದೆ. ‘ತುಂಟಾಟ’ ಸಿನಿಮಾವನ್ನು ಅವರೇ ಮೊದಲು ವಿಮರ್ಶೆ ಮಾಡಿದ್ದು. ಮೊದಲಿನಿಂದಲೂ ಪ್ರತಿ ಹಂತದಲ್ಲೂ ನನ್ನ ಜತೆ ಅವರು ಇದ್ದಾರೆ. ಇಲ್ಲಿ ಅವರದ್ದು ಅತ್ಯುತ್ತಮ ಪಾತ್ರವಾಗಿದ್ದು, ಒಂದು ಒಳ್ಳೆಯ ಮೆಸೇಜ್ ಸಹ ಇರಲಿದೆ.

*ಗ್ಲಾಮರ್ ಮತ್ತು ಸ್ಟೈಲಿಶ್ ನಿರ್ದೇಶಕರಾಗಿ ಗುರ್ತಾಗಿದ್ದೀರಿ. ಇಲ್ಲೂ ಅದು ಮುಂದುವರೆಯುತ್ತದೆಯೇ?
ಖಂಡಿತಾ… ನಾನು ಸಿನಿಮಾ ವಿಚಾರದಲ್ಲಿ ಎಂದಿಗೂ ಆಲೋಚಿಸುವುದು ದೊಟ್ಟಮಟ್ಟದಲ್ಲಿಯೇ. ಬಜೆಟ್, ಮೇಕಿಂಗ್‌, ನಟರು ಎಲ್ಲ ವಿಚಾರದಲ್ಲೂ ಇದು ಕನ್ನಡದ ದೊಡ್ಡ ಚಿತ್ರವಾಗಿ ಹೊರಹೊಮ್ಮತ್ತದೆ. ನನ್ನ ಎಲ್ಲ ಚಿತ್ರಗಳಿಗಿಂತ ಹೆಚ್ಚಿನ ಶ್ರಮವನ್ನು ಇಲ್ಲಿ ವಿನಿಯೋಗಿಸಿದ್ದೇನೆ; ನನ್ನನ್ನು ನಾನೇ ಚಾಲೆಂಜ್‌ಗೆ ಒಡ್ಡಿಕೊಂಡಿದ್ದೇನೆ. ಎಲ್ಲ ಚಿತ್ರಗಳಿಗೂ ಶ್ರಮ ಹಾಕಿದ್ದೇನೆ ಎಂಬುದೇನೋ ನಿಜ. ಆದರೆ 15 ವರುಷಗಳ ಚಿತ್ರರಂಗದ ಅನುಭವ, ಪರಿಶ್ರಮ ಈ ಚಿತ್ರಕ್ಕೆ ವಿನಿಯೋಗಿಸಿದ್ದೇನೆ.

*ಪ್ರೇಮಕಥೆಯ ಚಿತ್ರಗಳು ಹೆಚ್ಚುತ್ತಿವೆ. ಇಲ್ಲಿ ಯಾವ ರೀತಿಯ ಭಿನ್ನತೆ ಇದೆ?
ಇದು ಕಮರ್ಷಿಯಲ್ ಸಿನಿಮಾ. ‘ಲವ್‌ ಯು ಆಲಿಯಾ’ವನ್ನು ಮೇಕಿಂಗ್‌, ಕಾಸ್ಟ್ಯೂಮ್ ಮತ್ತಿತರ ವಿಚಾರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಿನಿಮಾವಾಗಿಸಲು ಪ್ರಯತ್ನಿಸಿರುವೆ. ಕಥೆಯೂ ಸರಳವಾಗಿ ಅರ್ಥವಾಗುತ್ತದೆ. ಮನರಂಜನೆ ಹಾದಿಯಲ್ಲಿ ಒಳ್ಳೆಯ ಸಂದೇಶವಿರಲಿದೆ. ಖಂಡಿತ ಇದೊಂದು ಮೈಲಿಗಲ್ಲಿನ ಚಿತ್ರವಾಗಲಿದೆ. ಈ ಭರವಸೆಯ ಮಾತನ್ನು ಕೇವಲ ಬಜೆಟ್‌, ಹಣ ಗಳಿಕೆ ಇತ್ಯಾದಿ ವಿಷಯವಾಗಿ ಹೇಳುತ್ತಿಲ್ಲ. ತಾಂತ್ರಿಕ ವಿಚಾರ ಇಟ್ಟುಕೊಂಡು ಈ ಮಾತು ಹೇಳುತ್ತಿದ್ದೇನೆ.

*‘ಮಜಾ ಟಾಕೀಸ್’ ರಿಯಾಲಿಟಿ ಶೋನದಲ್ಲಿ ನಿಮಗೆ ಬಾಯಿ ತುಂಬಾ ನಗುವ ಜವಾಬ್ದಾರಿ ಕೊಟ್ಟಿದ್ದಾರೆ?
ನಾನು ಕ್ರಿಕೆಟ್ ಮ್ಯಾಚ್‌ನಲ್ಲಿ ಒಬ್ಬ ಪ್ರೇಕ್ಷಕನ ಹಾಗೆ ಅಲ್ಲಿ ಇದ್ದೇನೆ. ಸೃಜನ್ ಲೋಕೇಶ್ ಸಿಕ್ಸರ್ ಹೊಡೆದರೆ ನಾನು ಕ್ಯಾಚ್ ಹಿಡಿಯಬೇಕು; ಬಾಲ್ ಸಿಕ್ಕರೆ ನನಗೆ ನಾನೇ ಖುಷಿ ಪಡಬೇಕು! ಪತ್ರಿಕೆ ಕೆಲಸ, ಸಿನಿಮಾ ಇತ್ಯಾದಿ ಒತ್ತಡದ ಬದುಕನ್ನು ‘ಮಜಾ ಟಾಕೀಸ್’ ನಿರಾಳಗೊಳಿಸುತ್ತದೆ. ಸೃಜನ್‌, ವಿ.ಮನೋಹರ್, ಅಪರ್ಣಾ ಅವರ ಕಾಮಿಡಿಯನ್ನು ಎಂಜಾಯ್ ಮಾಡುತ್ತಿದ್ದೇನೆ. ಈ ಶೋ ಇಷ್ಟು ಪ್ರಸಿದ್ಧವಾಗುತ್ತದೆ ಎಂದು ನಾನು ಖಂಡಿತ ಎಣಿಸಿರಲಿಲ್ಲ.

*ರಾಜಕೀಯ ಕಥನವನ್ನು ಸಿನಿಮಾ ಆಗಿಸುವ ಆಲೋಚನೆ, ಪ್ರಯತ್ನವೇನಾದರೂ ಇದೆಯೇ?
‘ದೇವ್ ಸನ್ ಆಫ್ ಮುದ್ದೇಗೌಡ’ ಚಿತ್ರ ದೇವೇಗೌಡರಿಗೆ ಕನೆಕ್ಟ್ ಆಗುತ್ತದೆ ಎಂದು ನನಗೆ ಸಿನಿಮಾ ಮಾಡುವಾಗ ಅನ್ನಿಸಲೇ ಇಲ್ಲ. ಆ ಸಿನಿಮಾ ನೋಡಿ ದೇವೇಗೌಡರೂ ಖುಷಿಪಟ್ಟರು. ಆದರೆ ಆ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಮೂರ್‍್ನಾಲ್ಕು ಸಿನಿಮಾಗಳು ತೆರೆಗೆ ಬಂದಿದ್ದರಿಂದ ಟೇಕಾಫ್ ಆಗಲಿಲ್ಲ. ಟಿ.ವಿಯಲ್ಲಿ ಒಳ್ಳೆಯ ಹೆಸರು ಬಂದಿತು. ಕರ್ನಾಟಕದ ಮಟ್ಟಿನ ರಾಜಕಾರಣದ ಸ್ಥಿತಿಯನ್ನು ನೋಡಿದರೆ ರಾಜಕೀಯ ಕಥನದ ಸಿನಿಮಾದ ಪ್ರಯತ್ನ ಅಗತ್ಯವಾಗಿದೆ; ಒಂದು ಚಾಲೆಂಜ್ ಸಹ. ಆ ಬಗ್ಗೆ ಮುಂದೆ ಆಲೋಚಿಸುವೆ, ಆ ರೀತಿ ಕಥೆ ತಂದರೆ ಅದಕ್ಕೆ ಜೀವಕೊಡುವೆ.

*ಕಥೆ, ಕಾದಂಬರಿಯನ್ನು ಸಿನಿಮಾ ಆಗಿಸುವ ಮನಸ್ಸೇನಾದರೂ ಇದೆಯೇ?
ನಾನು ಬೆಳೆದ ರೀತಿ ಮತ್ತು ಆಲೋಚನೆ ಬೇರೆ ರೀತಿಯದ್ದು. ನನಗೆ ಒಂದು ವಿಚಾರ ತಲೆಯಲ್ಲಿ ಕಾಡುತ್ತಿದ್ದು, ತಂದೆಯವರ ಬದುಕು, ಬರವಣಿಗೆ ಆಧರಿಸಿ ಒಂದು ಟಾಕಿ ಡ್ರಾಮಾ ಮಾಡಬೇಕು. ಅದನ್ನು ಜನರಿಗೆ ತಲುಪಿಸಬೇಕು. ಅದಕ್ಕೆ ಬಹಳ ಸಮಯ ಬೇಕಾಗುತ್ತದೆ, ಪ್ರತಿಭಾವಂತರ ಒಂದು ತಂಡವೂ ಬೇಕು. ನಮ್ಮ ಅಪ್ಪನ ಬರವಣಿಗೆ ಮೇರು ಮಟ್ಟದಲ್ಲಿ ನಿಲ್ಲುತ್ತದೆ. ಅವರ ಕಥೆಯನ್ನು ಸಿನಿಮಾ ಆಗಿಸಿದರೆ ನ್ಯಾಯ ಒದಗಿಸಲು ಸಾಧ್ಯವೇ ಎನ್ನುವ ಭಯ ನನ್ನ ಕಾಡುತ್ತದೆ. ಒಂದು ವೇಳೆ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ ಎಂದರೆ ಅದು ನನಗೆ ಮರೆಯಲಾಗದ ನೋವು.

*ಮುಂದಿನ ದಿನಗಳಲ್ಲಿ ಹೊಸ ಕಥೆಯನ್ನೇನಾದರೂ ಮಾಡಿಕೊಂಡಿದ್ದೀರಾ?
ಖಂಡಿತ ಇದೆ. ಮತ್ತೊಂದು ಕಥೆ ಸಿದ್ಧವಾಗಿದೆ. ಆದರೆ ‘ಲವ್‌ ಯೂ ಆಲಿಯಾ’ ಸಿನಿಮಾ ಪೂರ್ಣವಾಗಿ ಈ ಕೆಲಸಗಳೆಲ್ಲವೂ ಪೂರ್ಣಗೊಂಡ ನಂತರ ಮಾತನಾಡುವೆ. ಇದನ್ನು ಮುಂದಿನ ದಿನಗಳಲ್ಲಿ ಹೇಳುವೆ.

*ಹೊಸ ಹುಡುಗರು ಪ್ರಯೋಗಾತ್ಮಕವಾಗಿ ತೊಡಗುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯ?
ನನಗೆ ಖುಷಿ ಆಗುತ್ತಿದೆ. ಹಲವು ಉತ್ತಮ ಬರಹಗಾರರು, ನಿರ್ದೇಶಕರು ಬರುತ್ತಿದ್ದಾರೆ. ಬರಹಗಾರರು ಒಂದೇ ಸಲ ನಿರ್ದೇಶಕರಾಗುತ್ತಿದ್ದು, ಸ್ವಲ್ಪ ಡೇಂಜರ್ ಎನಿಸುತ್ತಿದೆ. ಇದಕ್ಕೆ ನಿದರ್ಶನ ‘ಬಹದ್ದೂರ್’, ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಚಿತ್ರಗಳು. ಬರಹಗಾರರ ಹುಡುಕಾಟ ಆರಂಭವಾಗುತ್ತದೆಯೇ ಎನ್ನುವ ಪ್ರಶ್ನೆ ಕೆಲವು ವೇಳೆ ನನ್ನ ಕಾಡುತ್ತಿದೆ. ಆದರೆ ಒಳ್ಳೆಯ ಬರಹಗಾರರು ಮತ್ತು ನಿರ್ದೇಶಕರಿಂದ ಕನ್ನಡ ಚಿತ್ರರಂಗ ಸಶಕ್ತವಾಗುತ್ತಿದೆ. ಸೂಪರ್ ಹಿಟ್ ಕೊಡುತ್ತಿದ್ದಾರೆ.

*ಬರಹಗಾರ/ನಿರ್ದೇಶಕ – ಇದರಲ್ಲಿ ನಿಮ್ಮ ಮುಖ್ಯ ಗಮನ ಯಾವುದರ ಬಗ್ಗೆ?
ಒಬ್ಬ ನಿರ್ದೇಶಕನಿಗೆ ಸಂಗೀತದ ಕಿವಿ ಇರಬೇಕು. ದೃಶ್ಯ ಇತ್ಯಾದಿ ವಿಷಯಕ್ಕೆ ಸಂಬಂಧಿಸಿದಂತೆ ಬರವಣಿಗೆ ಸರಿ ಇದೆಯೇ ಎನ್ನುವ ಬಗ್ಗೆ ಜಡ್ಜ್‌ಮೆಂಟ್ ಇರಬೇಕು. ಕಣ್ಣಿನಲ್ಲಿ ಸಂಕಲನಕಾರನಾಗಿರಬೇಕು. ಸಿನಿಮಾಕ್ಕೆ ಸಂಭಾಷಣೆ, ಚಿತ್ರಿಕೆ ಯಾವುದು ಎಲ್ಲಿ ಎನ್ನುವುದು ಅರಿವು ಅಗತ್ಯ. ನಿರ್ದೇಶಕನೇ ಎಲ್ಲವನ್ನೂ ಮಾಡಬೇಕು ಎಂದೇನೂ ಇಲ್ಲ. ಆದರೆ ಒಂದು ಜಡ್ಜಮೆಂಟ್ ಮಾಡುವ ಜ್ಞಾನ ಇರಬೇಕು, ಅಷ್ಟೇ. ಇದು ನನಗೆ ಒಂದು ಮಟ್ಟದಲ್ಲಿ ಇದೆ ಎಂದುಕೊಂಡಿದ್ದೇನೆ. ಅಂತಿಮವಾಗಿ ಸಿನಿಮಾ ಒಬ್ಬನ ಪರಿಶ್ರಮವಲ್ಲ; ಅದು ತಂಡದ ಕೆಲಸ, ಪರಿಶ್ರಮ.

Write A Comment