ಮನೋರಂಜನೆ

ಮಂಗಳೂರಿನ ಹುಡುಗಿ ಶುಭಾ ಪೂಂಜ ಚಿತ್ರರಂಗಕ್ಕೆ ಒಂದು ದಶಕ

Pinterest LinkedIn Tumblr

s-p

ಮಂಗಳೂರಿನ ಹುಡುಗಿ ಶುಭಾ ಪೂಂಜ ಚಿತ್ರರಂಗಕ್ಕೆ ಬಂದ ಒಂದು ದಶಕದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಪರಭಾಷೆಯತ್ತಲೂ ಮುಖ ಮಾಡಿ ಬಂದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಕನ್ನಡ ಚಿತ್ರ ‘ಚಿರಾಯು’ ಅಂಥ ಯಶಸ್ಸನ್ನೇನೂ ಕಂಡಿಲ್ಲ.

ಇಂದು (ಫೆ. 13) ಬಿಡುಗಡೆಯಾದ ‘ಕೋಟಿಗೊಂದ್ ಲವ್ ಸ್ಟೋರಿ’ ಚಿತ್ರ ಅವರ ಎಕ್ಸ್‌ಪೋಸ್‌ ಕಾರಣಕ್ಕೆ ಬಿಡುಗಡೆಗೂ ಮೊದಲು ಸುದ್ದಿ ಮಾಡಿದೆ. ಮೂರ್ನಾಲ್ಕು ಚಿತ್ರಗಳಿಗೆ ಒಟ್ಟಿಗೇ ಕೆಲಸ ಮಾಡುತ್ತಿರುವ ಶುಭಾಗೆ ಸದ್ಯ ಗೆಲುವು ಮರೀಚಿಕೆಯಾಗಿದೆ. ಎರಡು ಚಿತ್ರಗಳು ಪೆಟ್ಟಿಗೆಯಲ್ಲಿ ಹಾಗೇ ಕೂತಿವೆ. ಈಗ ‘…ಲವ್ ಸ್ಟೋರಿ’ ಮತ್ತೆ ಕೈ ಹಿಡಿಯುವ ಭರವಸೆ ಅವರದು. ಈ ಕುರಿತು ‘ಸಿನಿಮಾ ರಂಜನೆ’ ಜತೆ ಮಾತನಾಡಿದ್ದಾರೆ.

‘ಕೋಟಿಗೊಂದ್ ಲವ್ ಸ್ಟೋರಿ’ ಸ್ಟೋರಿ ಏನು?
ಶೀರ್ಷಿಕೆಯೇ ಹೇಳುವಂತೆ ಇದೊಂದು ಮುದ್ದಾದ ಪ್ರೇಮಕಥೆ. ಶಿರಸಿ, ಮಲೆನಾಡು ಕಡೆಯ ಹಸಿರಿನ ಮಡಿಲಲ್ಲಿ ನಡೆಯುವ ಸ್ಟೋರಿ. ಇದು ಕೋಟಿಗೊಂದು ಎಂದೇ ಹೇಳಬಹುದು. ಕಂಪ್ಲೀಟ್ ಎಂಟರ್‌ಟೇನರ್. ‘ಪ್ರೇಮಿಗಳ ದಿನ’ಕ್ಕೆ ಒಂದು ಮುದ್ದಾದ ಪ್ರೇಮಕಥೆ ನೀಡುತ್ತಿದ್ದೇವೆ. ಕುಟುಂಬದವರೆಲ್ಲರೂ ಕೂತು ನೋಡಬಹುದಾದ ಚಿತ್ರ. ಈಗಿನ ಹುಡುಗ ಹುಡುಗಿಯರಿಗೆ ಉತ್ತಮ ಸಂದೇಶವಿದೆ. ಮತ್ತೊಂದು ವಿಶೇಷವೆಂದರೆ ಚಿತ್ರದಲ್ಲಿ ಶಾರ್ಕ್ ಪಾತ್ರವಿದೆ. ನಿಜವಾದ ಶಾರ್ಕ್ ಅಲ್ಲ. ಗುಡ್ಡ, ಪ್ರಕೃತಿಗಳೂ ನಮ್ಮ ಚಿತ್ರದ ಪಾತ್ರಗಳೇ. ಅದೇ ರೀತಿ ಶಾರ್ಕ್ ಕೂಡ. ಚಿತ್ರ ನೋಡುವಾಗ ಯಾರಿಗೂ ಬೋರ್ ಆಗುವುದಿಲ್ಲ ಎಂಬುದು ನನ್ನ ನಂಬಿಕೆ.

ನಿಮ್ಮ ಪಾತ್ರದ ಬಗ್ಗೆ ಹೇಳಿ…
ಚಿತ್ರದಲ್ಲಿ ನಾನು ಶಿರಸಿಯ ಹುಡುಗಿ. ಮುದ್ದುಮುದ್ದಾದ ಮುಗ್ಧೆ. ಒಂದು ರೀತಿಯ ಜಾಣ ಪೆದ್ದಿ ಅಂತಾರಲ್ಲ, ಹಾಗೆ. ನಾನು ಮಂಗಳೂರಿನವಳಾದ್ದರಿಂದ ಅಲ್ಲಿನ ಕೆಲವು ಮ್ಯಾನರಿಸಂಗಳೆಲ್ಲ ನನಗೆ ಗೊತ್ತು. ಅಲ್ಲದೇ ನಿರ್ದೇಶಕ ಜಗ್ಗು ಕೂಡ ಶಿರಸಿಯವರೇ. ಅವರಿಗೆ ಆ ವಾತಾವರಣದ ಪರಿಚಯ ಚೆನ್ನಾಗಿ ಇದೆ. ಅವರು ಸಾಕಷ್ಟು ಟಿಪ್ಸ್ ಕೊಟ್ಟಿದ್ದಾರೆ. ಹಾಗಾಗಿ ಈ ಪಾತ್ರ ನಿರ್ವಹಣೆ ಅಷ್ಟೇನೂ ಕಷ್ಟವೆನಿಸಿಲ್ಲ. ಹೆಚ್ಚಿನ ತಯಾರಿಯೂ ಬೇಕಾಗಲಿಲ್ಲ.

ನಿಮ್ಮ ಪಾತ್ರದಲ್ಲಿ ಎಕ್ಸ್‌ಪೋಸ್ ಹೆಚ್ಚಾಗಿದೆಯಂತೆ?
ಹಾಗೇನಿಲ್ಲ. ಆತ್ಮಹತ್ಯೆಗೆಂದು ಹೋಗುವ ನಾಯಕಿ ಅಲ್ಲಿ ನಾಯಕನ ಪ್ರೀತಿಯಲ್ಲಿ ಸಿಲುಕುತ್ತಾಳೆ. ಆತನ ಜೊತೆ ಕಾಡಿನೊಳಗೆ ಸೇರಿಕೊಳ್ಳುತ್ತಾಳೆ. ಕಾಡಿನಲ್ಲಿ ನಡೆವ ಒಂದು ಹಾಡಿನಲ್ಲಿ ಒಂದಷ್ಟು ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದೇನೆ.

ಮತ್ತೆ ‘ಎ’ ಪ್ರಮಾಣ ಪತ್ರ ಸಿಕ್ಕಿದೆ. ಅಂಥದ್ದೇನಿದೆ..?
ಕಾಡಿನಲ್ಲಿ ಜಲಪಾತದ ವಾತಾವರಣದ ಹಿನ್ನೆಲೆಯಲ್ಲಿ ಬರುವ ಈ ಹಾಡಿನಲ್ಲಿ ಸ್ವಲ್ಪ ಹಾಟ್ ಆಗಿ ಕಾಣಿಸಿಕೊಂಡಿದ್ದು ನಿಜ. ಅದನ್ನು ಎಕ್ಸ್‌ಪೋಸ್ ಅನ್ನುವುದಕ್ಕಿಂತ ಗ್ಲಾಮರಸ್ ಅಂದರೆ ಸೂಕ್ತ ಎನಿಸುತ್ತದೆ. ನಾನೊಬ್ಬ ನಟಿಯಾಗಿ ಚಿತ್ರದ ಕಥೆಗೆ ಅವಶ್ಯವಿರುವ ಭಾವವನ್ನು ಕಟ್ಟಿಕೊಡಲೇಬೇಕಾಗುತ್ತದೆ. ಚಿತ್ರಕ್ಕೆ ತಕ್ಕಂತೆ ನನ್ನನ್ನು ಹೇಗೆ ತೋರಿಸಬೇಕೆಂಬುದು ನಿರ್ದೇಶಕರಿಗೆ ಚೆನ್ನಾಗಿ ಗೊತ್ತು. ಇಡೀ ಚಿತ್ರ ಹಾಗಿಲ್ಲ. ಕೆಲವು ಸನ್ನಿವೇಶ, ಹಾಡುಗಳು ಮಾತ್ರ ಸ್ವಲ್ಪ ರೊಮ್ಯಾಂಟಿಕ್ ಆಗಿದೆ. ಹೀಗೆ ಒಂದಷ್ಟು ನಿಯಮಗಳ ಅನುಸಾರ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಿದೆ ಅಷ್ಟೆ. ಒಟ್ಟಾರೆ ಫ್ಯಾಮಿಲಿ ಎಂಟರ್‌ಟೇನರ್.

ಬೇರೆ ಚಿತ್ರಗಳ ಬಗ್ಗೆ?
‘ತರ್ಲೆ ನನ್ಮಕ್ಳು’ ಬಿಡುಗಡೆಗೆ ಸಿದ್ಧವಾಗಿದೆ. ಮಾರ್ಚ್ ಕೊನೆಯ ವಾರ ತೆರೆ ಕಾಣಲಿದೆ. ಅದರಲ್ಲಿ ಚಿತ್ರದ ಒಳಗೆ ಮತ್ತೊಂದು ಚಿತ್ರ ಬರುತ್ತದೆ. ಆ ಚಿತ್ರದ ನಾಯಕಿಯ ಪಾತ್ರ ನಂದು. ಅದು ಬಿಟ್ಟರೆ ‘ಮೀನಾಕ್ಷಿ’ ಚಿತ್ರವೂ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಇನ್ನೊಂದು ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಆ ಕುರಿತು ನಿರ್ದೇಶಕರೇ ಪತ್ರಿಕಾಗೋಷ್ಠಿಯಲ್ಲಿ ಹೇಳುತ್ತೇನೆ ಎಂದಿದ್ದಾರೆ. ಹಾಗಾಗಿ ನಾನು ಈಗಲೇ ಏನೂ ಹೇಳುವಂತಿಲ್ಲ.

ಒಂದೆರಡು ಚಿತ್ರಗಳು ಬಿಡುಗಡೆ ಭಾಗ್ಯ ಕಾಣದೇ ಇವೆಯಲ್ಲ?
‘ಬೀರ’ ಮತ್ತು ‘ಸಮೋಸ’ ಚಿತ್ರಗಳು ಪೂರ್ಣಗೊಂಡು ವರ್ಷಗಳೇ ಕಳೆದಿವೆ. ಬಿಡುಗಡೆಯ ಬಗ್ಗೆ ದೇವರಾಣೆಯಾಗಿಯೂ ನನಗೇನೂ ಗೊತ್ತಿಲ್ಲ. ಅದಕ್ಕೆ ನಿರ್ಮಾಪಕರೇ ಉತ್ತರಿಸಬೇಕು. ನಾನೊಬ್ಬ ನಟಿ. ನನ್ನ ಕೆಲಸ ಸಿನಿಮಾ ಮಾಡುವುದು ಅಷ್ಟೇ. ಅಚ್ಚುಕಟ್ಟಾಗಿ ನಟಿಸಿ ಬಂದಿದ್ದೇನೆ. ಇನ್ನೊಂದು ಚಿತ್ರ ‘ಅರ್ಥ’. ಅದಕ್ಕೆ ಮುಹೂರ್ತ ಮಾಡಿದ್ದೆವು. ಆದರೆ ಕಾರಣಾಂತರಗಳಿಂದ ಅದು ಮುಂದುವರಿಯಲಿಲ್ಲ.

Write A Comment