ಮನೋರಂಜನೆ

‘ಮಂಡ್ಯ ಟು ಮುಂಬೈ’ ಹಾಡುಗಳ ಸಿಡಿ ಬಿಡುಗಡೆ ಸಮಾರಂಭ

Pinterest LinkedIn Tumblr

crec13Mandta mumbai

ಸ್ಟಾರ್ ನಟರು ಸಿನಿಮಾದ ಹಾಡುಗಳಿಗೆ ದನಿ ಕೊಡುವ ಪರಿಪಾಠ ಹೆಚ್ಚುತ್ತಿದೆ. ಅವರಿಗೆ ಎಷ್ಟು ಸಂಭಾವನೆ ಕೊಡುತ್ತಾರೆ ಎಂಬುದು ಬಹಿರಂಗವಾಗುವುದಿಲ್ಲ. ಆದರೆ ಹೊಸಬರನ್ನು ಸದಾ ಉತ್ತೇಜಿಸುವ ಸುದೀಪ್, ಸಿನಿಮಾವೊಂದರ ಹಾಡಿಗೆ ಏನೂ ಸಂಭಾವನೆ ಪಡೆದಿಲ್ಲವಂತೆ. ಅದನ್ನು ಅವರೇ ‘ಮಂಡ್ಯ ಟು ಮುಂಬೈ’ ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಸಮಾರಂಭದಲ್ಲಿ ಹೇಳಿಕೊಂಡರು.

ಡ್ರಮ್ಮರ್ ದೇವ್ ಪುತ್ರ ವಾರ್ಧಿಕ್ ಜೋಸೆಫ್ ನಿರ್ದೇಶನದಲ್ಲಿ ತಯಾರಾದ ‘ಮಂಡ್ಯ ಟು ಮುಂಬೈ’ ಸಿನಿಮಾ ತಮಿಳಿನ ‘ರೇಣಿಗುಂಟ’ ರೀಮೇಕ್. ಈ ಮೊದಲು ಅವರು ‘ಆನೆಕೆರೆ ಬೀದಿ’ ಎಂಬ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದರು. ಆದರೆ ಅದೇಕೋ ಅಲ್ಲಿಗೇ ನಿಂತು, ಈಗ ಮಂಡ್ಯದಿಂದ ಮುಂಬೈಗೆ ಪಯಣ ಬೆಳೆಸಿದ್ದಾರೆ.

ರೀಮೇಕ್ ಅಂದ ಕೂಡಲೇ ಯಥಾವತ್ತು ನಕಲು ಅಲ್ಲ ಎಂಬುದು ಜೋಸೆಫ್ ಸ್ಪಷ್ಟನೆ. ‘ಕನ್ನಡದ ನೇಟಿವಿಗೆ ಪೂರಕವಾಗಿ ಚಿತ್ರಕಥೆ ಹೆಣೆಯಲಾಗಿದೆ’ ಎನ್ನುತ್ತಾರೆ ಅವರು. ಮಂಡ್ಯ, ಮೈಸೂರು, ಬೆಂಗಳೂರು, ತುಮಕೂರು ಹಾಗೂ ಚಿತ್ರದುರ್ಗದ ಮೂಲಕ ಪಯಣ ಸಾಗುವುದರಿಂದ ಅಲ್ಲಿನ ಸಹಜ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆಯಂತೆ. ಹಾಡುಗಳ ಪೈಕಿ ಒಂದನ್ನು ಹೊರತುಪಡಿಸಿ ಉಳಿದೆಲ್ಲವೂ ಅದ್ಧೂರಿ ಸೆಟ್‌ಗಳಲ್ಲಿ ಚಿತ್ರಿಸಲಾಗಿದೆ.

ಹಳ್ಳಿಯ ಮುಗ್ಧ ಹುಡುಗನಾಗಿ ಕಾಣಿಸಿಕೊಂಡಿರುವ ನಾಯಕ ರಾಕೇಶ್ ಅಡಿಗ ಅವರದು ಇಡೀ ಸಿನಿಮಾದಲ್ಲಿ ಎರಡು ಶೇಡ್‌ಗಳ ಪಾತ್ರ. ‘ದುಷ್ಟರ ಸಹವಾಸಕ್ಕೆ ಸಿಲುಕಿ, ಕೆಟ್ಟವನಾಗಿ, ಬಳಿಕ ಬದಲಾಗುವ ಯುವಕನ ಕಥೆಯಿದು. ನಾನು ಆಯ್ಕೆಯಾಗುವ ಮೊದಲಿಗೆ ಈ ಸಿನಿಮಾದ ಹಾಡು ಕೇಳಿದ್ದೆ. ಆಗಲೇ ಸಿನಿಮಾ ಬಗ್ಗೆ ಆಸಕ್ತಿ ಮೂಡಿತ್ತು’ ಎಂದರು ರಾಕೇಶ್. ಹೊಸಬರ ತಂಡದೊಂದಿಗೆ ಕೆಲಸ ಮಾಡುವುದೆಂದರೆ ಮತ್ತಷ್ಟು ಕಲಿತಂತೆ ಎಂಬ ಅಭಿಪ್ರಾಯ ನಾಯಕಿ ಸಂಜನಾ ಅವರದು. ಈವರೆಗೆ ಬರೀ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು ಇದರಲ್ಲಿ ಸ್ಲಂ ಹುಡುಗಿ.

ದರ್ಶನ್ ಹಾಗೂ ವಿಶ್ವೇಶ ಶಿವಪ್ರಸಾದ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಅವರವರ ಅನುಭವಕ್ಕೆ ಪೂರಕವಾಗಿ ಚಿತ್ರೀಕರಣದ ಕೆಲಸವನ್ನು ಜೋಸೆಫ್ ಹಂಚಿಕೆ ಮಾಡಿದ್ದಾರೆ. ಶೇಖರ್, ಚಿರಾಗ್ ಹಾಗೂ ಚಂದನ್ ಎಂಬ ನಾಯಕರೂ, ಮಾಧುರಿ ಹಾಗೂ ಅಮೃತಾ ಗಣೇಶ್ ಎಂಬ ನಾಯಕಿಯರೂ ಚಿತ್ರದಲ್ಲಿ ಇದ್ದಾರೆ. ಜ್ಯೋತಿಲಿಂಗಂ ಬಂಡವಾಳ ಹಾಕಿದ್ದಾರೆ. ಚರಣ್‌ರಾಜ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.

ಬಳಿಕ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸುದೀಪ್ ಆಡಿಯೊ ಸಿ.ಡಿ ಬಿಡುಗಡೆ ಮಾಡಿದರು. ಹಲವಾರು ಮನರಂಜನಾ ಕಾರ್ಯಕ್ರಮಗಳೂ ನಡೆದವು.

Write A Comment