ಮನೋರಂಜನೆ

‘ಡಿಕೆ’ ಸಿನಿಮಾದಲ್ಲಿ ಮನರಂಜನೆ: ನಾಯಕ ಪ್ರೇಮ್

Pinterest LinkedIn Tumblr

s

‘ಈಗಿನ ಯುವಕರಿಗೆ ಉಪದೇಶ ಮಾಡಿದರೆ ಕೇಳದೇ ಎದ್ದು ಹೋಗಿ ಬಿಡುತ್ತಾರೆ. ಅದರ ಬದಲಿಗೆ, ಮನರಂಜನೆ ಮೂಲಕ ಸಂದೇಶ ರವಾನಿಸುವ ಕೆಲಸವನ್ನು ಈ ಸಿನಿಮಾ ಮಾಡಲಿದೆ ಎನ್ನುವ ವಿಶ್ವಾಸ ನನಗಿದೆ’ ಎನ್ನುತ್ತಾರೆ ಪ್ರೇಮ್. ಕುಟುಂಬದ ಎಲ್ಲರೂ ಕುಳಿತು ನೋಡುವಂಥ ‘ಡಿಕೆ’ ಸಿನಿಮಾದಲ್ಲಿ ಮನರಂಜನೆ ಇದೆ, ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂದು ತೋರಿಸಲಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ಏನೂ ಕೆಲಸ ಮಾಡದ ಯುವಕರಿಗೆ ಈ ಚಿತ್ರದಲ್ಲೊಂದು ಸಂದೇಶ ಸಿಗಲಿದೆ ಎಂಬ ಅಭಿಮತ ಅವರದು. ಇಂದು (ಫೆ. 13) ಬಿಡುಗಡೆಯಾಗಿರುವ ‘ಡಿಕೆ’ ಚಿತ್ರದ ನಾಯಕ ಪ್ರೇಮ್, ಸಿನಿಮಾ ರಂಜನೆ ಜತೆ ಮಾತನಾಡಿದರು.

*‘ಡಿಕೆ’ ಸಿನಿಮಾ ಡಿ.ಕೆ.ಶಿವಕುಮಾರ್ ಅವರ ಜೀವನದ ಕಥೆ ಎಂಬ ಗುಮಾನಿ ಇದೆಯಲ್ಲ?
ಹಾಗೇನಿಲ್ಲ… ವಿಶೇಷವಾಗಿ ಯುವಕರಿಗೆ ದಾರಿ ತೋರಿಸುವ ಸಿನಿಮಾ ಎಂದು ಖಚಿತವಾಗಿ ಹೇಳಬಲ್ಲೆ. ಖಾಲಿ ಖಾಲಿ ಹಾಳು ಹರಟೆ ಮಾಡಿಕೊಂಡು ಓಡಾಡುವವರನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿದ್ದು ಇದು. ಒಂದರ್ಥದಲ್ಲಿ ‘ಡಿಕೆ’ ಪಕ್ಕಾ ಕಮಷಿರ್ಯಲ್. ಚುರುಕಾದ ಸಂಭಾಷಣೆ, ಯುವಕರಿಗೆ ಸಂದೇಶ, ಫ್ಯಾಮಿಲಿಗೆ ಮನರಂಜನೆ ಇದೆ. ರಾಜಕೀಯ ಹಿನ್ನೆಲೆಯ ಕಥೆ. ಯಾರಿಗೂ ನೋವು ಉಂಟು ಮಾಡದಂತೆ ಸಿನಿಮಾ ಮಾಡಿದ್ದೇವೆ.

*ಹಾಗಾದರೆ ಶೀರ್ಷಿಕೆಯನ್ನು ನೋಡುತ್ತಿದ್ದರೆ..?
ಟೈಟಲ್‌ ಮಾತ್ರ ‘ಡಿಕೆ’ ಅಂತ ಇದೆ. ಆದರೆ ಅದು ರಾಜಕೀಯ ಹಿನ್ನೆಲೆಯ ಕಥೆ ಅಷ್ಟೇ. ಇದರಲ್ಲಿನ ನಾಯಕನ ಪಾತ್ರವನ್ನು ನೋಡಿದ ಬಳಿಕ, ಇದು ತಮ್ಮ ಸಿನಿಮಾ ಅಂತ ಯಾರಾದರೂ ಕಲ್ಪನೆ ಮಾಡಿಕೊಂಡರೆ ಮಾಡಿಕೊಳ್ಳಲಿ ಬಿಡಿ. ಅದಕ್ಕೂ ನಮಗೂ ಸಂಬಂಧವಿಲ್ಲ!

*ಅಂದರೆ ಡಿ.ಕೆ. ಶಿವಕುಮಾರ್ ಅವರಿಗೂ ಇದಕ್ಕೂ ಸಂಬಂಧವಿಲ್ಲ ಅಂದಾಯ್ತಲ್ಲ?
‘ಡಿಕೆ’ ಅಂದ ಕೂಡಲೇ ಎಲ್ಲ ಕಡೆ ಅದನ್ನೇ ಕೇಳ್ತಾರೆ. ಅದು ಒಂದರ್ಥದಲ್ಲಿ ಹೌದು, ಇನ್ನೊಂದು ಅರ್ಥದಲ್ಲಿ ಅಲ್ಲ. ಒಂಥರ ಫಿಫ್ಟಿ– ಫಿಫ್ಟಿ. ಇದರಲ್ಲಿ ನಾಯಕನ ಸ್ಟೈಲು, ಗತ್ತು, ಕಾರ್ಯವೈಖರಿ ಎಲ್ಲವೂ ಡಿ.ಕೆ.ಶಿವಕುಮಾರ್ ಅವರದೇ ರೀತಿ ಇದೆ. ನೋಡಿ… ಮೊದಲೆಲ್ಲ ರೇಬಾನ್ ಗ್ಲಾಸ್ ಹಾಕಿಕೊಂಡು ಓಡಾಡುವವರನ್ನು ‘ರೇಬಾನ್ ಗೌಡ’ ಅಂತ ಕರೀತಿದ್ರು ಅಲ್ವಾ? ಆ ಥರದ ಸ್ಟೈಲ್ ಎತ್ತಿಕೊಂಡು, ಅದರೊಂದಿಗೆ ಡಿ.ಕೆ.ಶಿವಕುಮಾರ್ ಅವರ ಸ್ಟೈಲ್ ಬೆರೆಸಿ ಈ ಪಾತ್ರ ಮಾಡಿದ್ದೇವೆ. ಪಾತ್ರವಂತೂ ಅವರಿಂದಲೇ ಸ್ಫೂರ್ತಿ ಪಡೆದಿದೆ. ಕಮರ್ಷಿಯಲ್ ಆದ್ದರಿಂದ ಒಂದಷ್ಟು ಗನ್, ಮಚ್ಚು ಬಳಸಿದ್ದೇವೆ.

*ರಾಜಕೀಯವೆಂದರೆ ಗಂಭೀರ ವಿಚಾರ. ಅದನ್ನು ಇಲ್ಲಿ ಹೇಳಿರುವ ಬಗೆ ಹೇಗೆ?
ರಾಜಕೀಯದ ಹಿನ್ನೆಲೆ ಇಟ್ಟುಕೊಂಡು ರೂಪಿಸಿರುವ ನನ್ನ ಪಾತ್ರ ಸಂಪೂರ್ಣ ಮನರಂಜನೆಯಿಂದ ಕೂಡಿದೆ. ಈಗಿನ ಯುವಕರಿಗೆ ಏನಾದರೂ ಗಂಭೀರವಾಗಿ ಹೇಳಿದರೆ ಅವರು ಕೇಳ್ತಾರಾ? ಹೀಗಾಗಿ ಹೇಳುವುದನ್ನು ತಮಾಷೆಯಾಗಿ ಹೇಳಬೇಕು. ಆಗಲೇ ಅವರ ಮನಸ್ಸಿಗೆ ಏನಾದರೂ ತಲುಪಲು ಸಾಧ್ಯವಿದೆ. ಹೀಗಾಗಿ ಒಂದೊಳ್ಳೆ ಸಂದೇಶವನ್ನು ಯುವಕರಿಗೆ ‘ಡಿಕೆ’ ಮೂಲಕ ಕೊಟ್ಟಿದ್ದೇವೆ.

*ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಅವರನ್ನು ಹಾಕಿಕೊಂಡು ಚಿತ್ರಕ್ಕೆ ಗ್ಲಾಮರ್ ಹೆಚ್ಚಿಸಿದ್ದೀರಲ್ಲವೇ?
ಹಾಗೆ ಅನ್ನುವುದಕ್ಕಿಂದ, ಹಾಡೊಂದಕ್ಕೆ ಸನ್ನಿ ಲಿಯೋನ್ ಹೆಜ್ಜೆ ಹಾಕಿರುವುದು ಒಂದು ವಿಶೇಷ ಎನ್ನಬಹುದು. ಮೊದಲು ಆ ಹಾಡಿಗೆ ಬಿಪಾಶಾ ಬಸು ಅವರನ್ನು ಕರೆಸಲು ಯೋಚಿಸಿದೆ. ಅದು ಹೊಂದಾಣಿಕೆ ಆಗಲಿಲ್ಲ. ಆಗ ಹುಡುಕಾಟ ನಡೆಸಿದಾಗ ಸಿಕ್ಕಿದ್ದೇ ಸನ್ನಿ ಲಿಯೋನ್. ಅವರನ್ನು ಆ ರೀತಿ ನಾವು ತೋರಿಸಿಲ್ಲ. ನಮ್ಮ ಕನ್ನಡ ಪ್ರೇಕ್ಷಕರಿಗೆ ಹೇಗೆ ಬೇಕೋ ಹಾಗೆ ತೋರಿಸಿದ್ದೇವೆ! ಆದರೆ ಗ್ಲಾಮರ್‌ ಖಂಡಿತ ಇದೆ ಎಂದಷ್ಟೇ ಹೇಳಬಲ್ಲೆ! ಅಷ್ಟಕ್ಕೂ ನನ್ನ ಸಿನಿಮಾಗಳಲ್ಲಿ ಯಾವಾಗಲೂ ಇಂಥ ವಿಶೇಷ ಇದ್ದೇ ಇರುತ್ತದೆ. ಯಾನಾ ಗುಪ್ತಾ, ಮಲ್ಲಿಕಾ ಶೆರಾವತ್ ಸಾಲಿಗೆ ಈಗ ಸನ್ನಿ ಸೇರಿದ್ದಾರೆ.

*ನೀವು ನಿರ್ದೇಶಕರೂ ಹೌದು. ಇನ್ನೊಬ್ಬ ನಿರ್ದೇಶಕ ವಿಜಯ್ ಹಂಪಾಳಿ ಬಳಿ ಕೆಲಸ ಮಾಡುವಾಗ ಏನನ್ನಿಸಿತು?
ಅಲ್ಲಿ ನಾನೊಬ್ಬ ನಟ ಅಷ್ಟೇ. ಚಿತ್ರೀಕರಣ ನಡೆಯುವಾಗ ನನಗೆ ಏನಾದರೂ ಅನಿಸಿದರೆ ಅದನ್ನು ಹೇಳಲು ಮಧ್ಯ ಪ್ರವೇಶಿಸಿದರೆ ಅದು ನಾನ್‌ಸೆನ್ಸ್‌. ನನ್ನ ನಿರ್ದೇಶನದ ಸಿನಿಮಾದಲ್ಲಿ ನನಗೆ ಹೇಗೆ ಬೇಕೋ ಹಾಗೆ ಕಲಾವಿದರನ್ನು ತೋರಿಸುತ್ತೇನೆ. ಇಲ್ಲಿ ಹಂಪಾಳಿ ನಿರ್ದೇಶಕ. ನನ್ನನ್ನು ಹೇಗೆ ತೋರಿಸಬೇಕು ಅಂತ ಅವರಿಗೆ ಅನಿಸುತ್ತದೆಯೋ, ಹಾಗೆ ತೋರಿಸುತ್ತಾರೆ. ಚಿತ್ರ ಸೆಟ್ಟೇರುವ ಮೊದಲು ಕಥೆ, ಚಿತ್ರಕಥೆ ಎಲ್ಲವನ್ನೂ ಪಕ್ಕಾ ಪ್ಲ್ಯಾನ್ ಆಗಿ ಮಾಡಿದ್ದೆವು. ಪ್ರತಿಯೊಂದನ್ನೂ ಚರ್ಚೆ ಮಾಡಿದ ಬಳಿಕವೇ ಎಲ್ಲ ಶೂಟಿಂಗ್ ಮಾಡಿದೆವು. ನಿರ್ದೇಶಕನು ಕಲಾವಿದನಾದಾಗ, ಚಿತ್ರೀಕರಣದ ಮಧ್ಯೆ ಮೂಗು ತೂರಿಸುವುದು ಸರಿಯಲ್ಲ. ನಾನು ಅದನ್ನು ಪಾಲಿಸಿದ್ದೇನೆ.

*ಮುಂದಿನ ಯೋಜನೆಗಳು..?
‘ಬಂ ಬಂ ಬೋಲೆನಾಥ್’, ‘ಹಿಟ್ಲರ್’ ಚಿತ್ರೀಕರಣ ಸಿದ್ಧತೆಯಲ್ಲಿ ಇದ್ದೇನೆ. ನಿರ್ಮಾಪಕ ಕೆ.ಮಂಜು ಅವರಿಗಾಗಿ ಇನ್ನೊಂದು ರೀಮೇಕ್ ಮಾಡುತ್ತಿದ್ದೇನೆ. ನನ್ನ ಹಾಗೂ ಅಂಬರೀಷ ಅವರ ಕಾಂಬಿನೇಶನ್‌ದಲ್ಲಿ ‘ಮೈ ನೇಮ್‌ ಇಸ್ ಭೈರೇಗೌಡ’ ಸಿನಿಮಾವಿದೆ. ಹೀಗೆ ನಾಲ್ಕು ಚಿತ್ರಗಳು ನನ್ನ ಕೈಯಲ್ಲಿವೆ.

Write A Comment