ಮನೋರಂಜನೆ

ಟಿ.ಕೆ. ದಯಾನಂದ್ ನಿರ್ದೇಶನದ ‘ಬೆಂಕಿಪಟ್ಣ’ ಚಿತ್ರ ಮುಂದಿನವಾರ (ಫೆ.20) ತೆರೆಗೆ

Pinterest LinkedIn Tumblr

crec13BENKIPATNA

ಟಿ.ಕೆ. ದಯಾನಂದ್ ನಿರ್ದೇಶನದ ‘ಬೆಂಕಿಪಟ್ಣ’ ಚಿತ್ರ ಮುಂದಿನವಾರ (ಫೆ.20) ತೆರೆಗೆ ಬರಲಿದೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳ ಮೂಲಕ ಒಂದು ಹಂತದ ಹವಾ ಮತ್ತು ಕುತೂಹಲ ಹುಟ್ಟಿಸಿರುವ ‘ಬೆಂಕಿಪಟ್ಣ’ವನ್ನು ತೆರೆಯಲ್ಲಿ ತಂದು ಪ್ರೇಕ್ಷಕನಿಗೆ ತೋರಿಸಲು ಚಿತ್ರ ತಂಡ ಅಪಾರ ಉತ್ಸುಕದಲ್ಲಿದೆ.

ಸಿನಿಮಾ ತೆರೆಗೆ ತರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾಧ್ಯಮಗಳ ಎದುರಾಯಿತು ‘ಬೆಂಕಿಪಟ್ಣ’. ಇಲ್ಲಿರುವವರು ಬಹುತೇಕ ಮಂದಿ ಉತ್ಸಾಹಿ ಸೃಜನಶೀಲ ಯುವತಂಡವಾದ್ದರಿಂದ ‘ಬೆಂಕಿಪಟ್ಣ’ದ ಬಗ್ಗೆ ಪ್ರೇಕ್ಷಕನಲ್ಲೂ ಸಹಜವಾಗಿ ಕುತೂಹಲ ಮನೆ ಮಾಡಿದೆ. ಅಷ್ಟೇ ಅಲ್ಲದೇ ಪ್ರಕಾಶ್ ಬೆಳವಾಡಿ, ಬಿ.ಸುರೇಶ್ ಅವರಂಥ ಪ್ರಮುಖ ನಟರು ಕಾಣಿಸಿಕೊಂಡಿರುವುದು ಫ್ಲಸ್ ಪಾಯಿಂಟ್‌ಗಳಲ್ಲಿ ಒಂದು.

ಮೊದಲು ಮಾತನಾಡಿದವರು ನಿರ್ಮಾಪಕ ಮಾಸ್ತಿ ಜಾಕೀರ್ ಅಲಿಖಾನ್. ‘ನನ್ನ ಮೊದಲ ಸಿನಿಮಾ ಇದು. ಉತ್ತಮವಾಗಿ ಮೂಡಿ ಬಂದಿದೆ’ ಎಂದ ಎಲ್ಲರ ಸಹಕಾರ ಕೋರಿದರು. ಪ್ರತಾಪ್ ನಾರಾಯಣ್ ಮತ್ತು ಅನುಶ್ರೀ ‘ಬೆಂಕಿಪಟ್ಣ’ದ ನಾಯಕ–ನಾಯಕಿ. ತಮಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟ ನಿರ್ಮಾಪಕರ–ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು ಪ್ರತಾಪ್. ತೀವ್ರ ಸಂತಸ ಮತ್ತು ಕಾತುರರಾಗಿದ್ದವರು ಅನುಶ್ರೀ. ‘ತುಂಬಾ ಖುಷಿಯಾಗುತ್ತಿದೆ. ಬೆಂಕಿಪಟ್ಣ ಎಲ್ಲ ಪ್ರೇಕ್ಷಕರಿಗೂ ಬೆಳಕು ನೀಡುತ್ತದೆ’ ಎಂದು ಗೆಲುವಿನ ಮುಗುಳ್ನಕ್ಕರು.

ನಿರ್ದೇಶಕ–ನಟ–ನಿರ್ಮಾಪಕ ಬಿ. ಸುರೇಶ್, ‘ಇಂದು ಸ್ಯಾಟಲೈಟ್ ಹಕ್ಕುಗಳನ್ನು ತೆಗೆದುಕೊಳ್ಳುವುದು ಕಡಿಮೆ ಆಗುತ್ತಿದೆ. ಒಂದು ಉತ್ತಮ ಸಿನಿಮಾವನ್ನು ಮತ್ತು ಆ ಚಿತ್ರತಂಡದ ಶ್ರಮವನ್ನು ಜನರಿಗೆ ಮುಟ್ಟಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ’ ಎಂದರು. ಚಿತ್ರದ ‘ದೂರಿ ದೂರಿ…’ ಹಾಡಿಗೆ ಅಪಾರ ಜನಮನ್ನಣೆ ಸಿಕ್ಕಿರುವುದನ್ನು ನೆನೆದರು. 125 ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.

ನಿರ್ದೇಶಕ ಟಿ.ಕೆ. ದಯಾನಂದ್ ಅವರನ್ನು ಮನತುಂಬಿ ಹೊಗಳಿದರು ನಟ–ನಿರ್ದೇಶಕ ಪ್ರಕಾಶ್ ಬೆಳವಾಡಿ. ‘ದಯಾನಂದ್ ಸೃಜನಶೀಲ ಬರಹಗಾರ. ನಾನು ಕಮರ್ಷಿಯಲ್ ಚಿತ್ರದಲ್ಲಿ ನಟಿಸುತ್ತಿರುವುದು ಇದು ಮೊದಲು. ಕನ್ನಡ ಸಂಸ್ಕೃತಿ ಈ ಚಿತ್ರದಲ್ಲಿ ಅತ್ಯುತ್ತಮವಾಗಿ ಅಭಿವ್ಯಕ್ತಗೊಂಡಿದೆ’ ಎಂದರು ಬೆಳವಾಡಿ.

ತಮ್ಮ ಮೊದಲ ಸಿನಿಮಾವನ್ನು ಮುಂದಿನವಾರ ತೆರೆಗೆ ತರುವ ಸಂಭ್ರಮ ದಯಾನಂದ್ ಅವರಲ್ಲಿ ಮನೆಮಾಡಿತ್ತು. ಆ ಸಂಭ್ರಮ ಅಕ್ಷರಶಃ ಅವರ ಮಾತುಗಳನ್ನು ಹಿಡಿದಿಟ್ಟಿತ್ತು. ತಮ್ಮ ಆಲೋಚನೆ ಮತ್ತು ಕನಸುಗಳ ಸಾಕಾರಕ್ಕೆ ಕೈ ಜೋಡಿಸಿದ ನಿರ್ಮಾಪಕರು ಮತ್ತು ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಿದರು. ನಟ ಅರುಣ್ ಸಾಗರ್, ನಟಿ ಶ್ವೇತಾ, ದಿನೇಶ್ ಕುಮಾರ್, ಸಂಗೀತ ನಿರ್ದೇಶಕ ಸ್ಟಿಫನ್, ಹರ್ಷ ಮತ್ತಿತರು ಹಾಜರಿದ್ದರು.

Write A Comment