ಮನೋರಂಜನೆ

ಶಮಿತಾಭ್ : ನಶೆ ಏರಿಸುವ ಅಮಿತಾಭ್, ಧನುಷ್

Pinterest LinkedIn Tumblr

ಪಾತ್ರವರ್ಗ: ಅಮಿತಾಭ್ ಬಚ್ಚನ್, ಧನುಷ್, ಅಕ್ಷರಾ ಹಾಸನ್
ನಿರ್ದೇಶನ: ಆರ್. ಬಾಲ್ಕಿ

shamitabh poster

‘ಚೀನಿ ಕಮ್’, ‘ಪಾ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಬಾಲ್ಕಿ ‘ಶಮಿತಾಭ್’ ಚಿತ್ರದಲ್ಲಿ ಏನು ಹೊಸದನ್ನು ಕೊಟ್ಟಿದ್ದಾರೆ ಎಂಬ ಕುತೂಹಲವಿತ್ತು. ಚಿತ್ರ ನೋಡಿ ಹೊರಬಂದ ನಂತರ ಬಾಲ್ಕಿ ಮೇಲೆ ಇಟ್ಟಿದ್ದ ವಿಶ್ವಾಸ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಹೌದು, ‘ಶಮಿತಾಭ್’ ಚಿತ್ರದಲ್ಲಿ ಅಮಿತಾಭ್ ಹಾಗೂ ಧನುಷ್ ನಡುವೆ ಸ್ಟಾರ್ ಪಟ್ಟ ಪಡೆಯಲು ನಡೆಯುವ ಜಿದ್ದಾಜಿದ್ದಿಯನ್ನು ನೋಡುವುದಕ್ಕೆ ಖುಷಿಯಾಗುತ್ತದೆ. ಅಮಿತಾಭ್ ಭಾರತೀಯ ಚಿತ್ರರಂಗದ ಕಂಡ ಅದ್ಭುತ ನಟ ಎಂಬುದು ಪದೇ ಪದೇ ಈ ಚಿತ್ರದಲ್ಲಿ ಸಾಬೀತಾಗುತ್ತದೆ. ದಕ್ಷಿಣ ಭಾರತ ಚಿತ್ರರಂಗದ ಧನುಷ್, ದೈತ್ಯ ಪ್ರತಿಭೆ ಅಮಿತಾಭ್ ಎದುರು ನಟಿಸಿ ಸೈ ಅನಿಸಿಕೊಂಡಿದ್ದಾರೆ. ಅವರ ಮ್ಯಾನರಿಸಂ, ನಟನೆ ನೋಡುಗರಿಗೆ ಬೋರ್ ಹೊಡೆಸುವುದಿಲ್ಲ.

ಡ್ಯಾನಿಶ್ ( ಧನುಷ್)ಗೆ ಬಾಲ್ಯದಿಂದಲೂ ಸಿನಿಮಾ ಸ್ಟಾರ್ ಆಗಬೇಕು ಎಂಬ ಆಸೆ. ಅದಕ್ಕಾಗಿ ತಯಾರಿ ನಡೆಸಿಕೊಂಡಿರುತ್ತಾನೆ. ದೊಡ್ಡ ನಿರ್ದೇಶಕರ ಬಳಿ ಹೋಗಿ ಚಾನ್ಸ್ ಕೇಳುತ್ತಾನೆ. ಎಲ್ಲಾ ಓಕೆ ಆದರೆ ಡ್ಯಾನಿಶ್‌ಗೆ ಧ್ವನಿ ಇರುವುದಿಲ್ಲ. ಧ್ವನಿ ಇಲ್ಲದವನಿಗೆ ಪಾತ್ರ ಕೊಡುವುದು ಹೇಗೆ ಎಂದು ಇಡೀ ಬಾಲಿವುಡ್ ಮೂದಲಿಸುತ್ತದೆ. ಆ ಸಮಯದಲ್ಲಿ ಅಸಿಸ್ಟಂಟ್ ಡೈರೆಕ್ಟರ್ ಅಕ್ಷರಾ ( ಅಕ್ಷರಾ ಹಾಸನ್) ಡ್ಯಾನಿಶ್ ಪ್ರತಿಭೆಯನ್ನು ಗುರುತಿಸುತ್ತಾರೆ. ಈತನ ಶರೀರಕ್ಕೆ ಅಮಿತಾಭ್ ಸಿನ್ಹಾ (ಅಮಿತಾಭ್ ಬಚ್ಚನ್)ನ ಧ್ವನಿ ಹೊಂದಿಕೆಯಾಗುತ್ತದೆ ಎಂದು ಅಮಿತಾಭ್‌ಗೆ ಧ್ವನಿ ಕೊಡಲು ಒಪ್ಪಿಸುತ್ತಾರೆ. ಅದರಂತೆ ಡ್ಯಾನಿಶ್ ಶರೀರಕ್ಕೆ ಅಮಿತಾಭ್ ವಾಯ್ಸ್ ವಿಸ್ಕಿ ಜತೆ ನೀರು ಮ್ಯಾಚ್ ಆಗುವಂತೆ ಹೊಂದಿಕೆಯಾಗುತ್ತದೆ. ಇದರಿಂದಾಗಿ ಡ್ಯಾನಿಶ್ ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗುತ್ತಾನೆ. ಆದರೆ ಯಾರೊಬ್ಬರೂ ಡ್ಯಾನಿಶ್‌ಗೆ ಧ್ವನಿ ಕೊಟ್ಟ ಅಮಿತಾಭ್‌ರನ್ನು ಗುರುತಿಸುವುದಿಲ್ಲ. ಇದು ಅಮಿತಾಭ್‌ಗೆ ಬೇಸರ ತರಿಸುತ್ತದೆ. ಆಗ ಡ್ಯಾನಿಶ್ ಹಾಗೂ ಅಮಿತಾಭ್ ನಡುವಿನ ಇಗೊ ಕ್ಲಾಶ್ ಶುರುವಾಗುತ್ತದೆ. ಮುಂದೆ ಏನಾಗುತ್ತದೆ ಎಂಬುದೇ ಚಿತ್ರದ ಕಥಾಹಂದರ.

ಬಾಲ್ಕಿ ಅಪರೂಪದ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಪಾತ್ರಕ್ಕೆ ಕಲಾವಿದರನ್ನು ಆಯ್ಕೆ ಮಾಡಿಕೊಂಡಿರುವ ರೀತಿ ಕೂಡ ಸೂಕ್ತವಾಗಿದೆ. ಅಮಿತಾಭ್‌ಗೆ ಕೊಟ್ಟಿರುವ ಗೆಟಪ್, ಅವರ ಪಾತ್ರ ಪೋಷಣೆ ನಿಜಕ್ಕೂ ಹೊಸ ರೀತಿಯಾಗಿದೆ. ಅಮಿತಾಭ್ ಲೋ ಪ್ರೊಫೈಲ್ ಪಾತ್ರವನ್ನು ಒಪ್ಪಿಕೊಂಡಿರುವುದು ಸಿನಿಮಾ ಮೇಲೆ ಅವರಿಗಿರುವ ಪ್ರೀತಿಯನ್ನು ತೋರಿಸುತ್ತದೆ. ಇಲ್ಲಿ ಧನುಷ್ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿ ಆ ನಂತರ ಸೂಪರ್ ಸ್ಟಾರ್ ಆಗುವ ದೃಶ್ಯ ಬಂದು ಹೋಗುತ್ತದೆ. ಹಾಗಂತ ಇದು ರಜನೀಕಾಂತ್ ಸ್ಟೋರಿ ಎಂದು ಹೇಳುವುದಕ್ಕೆ ಆಗುವುದಿಲ್ಲ. ಸೂಪರ್ ಸ್ಟಾರ್ ಆಗುವುದಕ್ಕೂ ಮುನ್ನ ವ್ಯಕ್ತಿಯೊಬ್ಬ ಎಷ್ಟೆಲ್ಲ ಕಷ್ಟ ಪಡಬೇಕಾಗುತ್ತದೆ ಎಂಬುದನ್ನು ಇಲ್ಲಿ ಬಾಲ್ಕಿ ಪರಿಣಾಮಕಾರಿಯಾಗಿ ತೋರಿಸಿದ್ದಾರೆ.

ಅಕ್ಷರಾ ಹಾಸನ್‌ಗೆ ಇದು ಚೊಚ್ಚಲ ಸಿನಿಮಾವಾದರೂ ನಟನೆಯಲ್ಲಿ ಹಿಂದೆ ಬಿದ್ದಿಲ್ಲ. ಧನುಷ್‌ಗೆ ಹೇಳಿ ಮಾಡಿಸಿದ ಜೋಡಿ. ಚೆಲುವಿನಲ್ಲಿ ಸಹೋದರಿ ಶ್ರುತಿ ಹಾಸನ್‌ರನ್ನು ಮೀರಿಸಿದ್ದಾರೆ. ಇಳಯರಾಜ ಸಂಗೀತ ಹಾಗೂ ಹಿನ್ನೆಲೆ ಸಂಗೀತವನ್ನು ಚಿತ್ರ ನೋಡಿಯೇ ಅನುಭವಿಸಬೇಕು.

ಆದರೆ ಬಾಲ್ಕಿ ಎಲ್ಲವನ್ನೂ ಇಲ್ಲಿ ಸರಿ ಮಾಡಿದ್ದಾರೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಅವರು ಡ್ಯಾನಿಶ್ ಪಾತ್ರಕ್ಕೆ ತಂತ್ರಜ್ಞಾನದ ಮೂಲಕ ಧ್ವನಿ ಕೊಡುವುದಕ್ಕೆ ಹೋಗಿ ಎಡವಿದ್ದಾರೆ. ಟ್ರಾನ್ಸ್‌ಮೀಟರ್ ಮೂಲಕ ಧ್ವನಿ ಕೊಡಬಹುದು ಎಂಬುದನ್ನು ಸಾಬೀತುಪಡಿಸಲು ಹೋಗುವ ದೃಶ್ಯಗಳು ಬೋರ್ ಹೊಡೆಸುತ್ತವೆ. ಈ ದೃಶ್ಯಗಳನ್ನು ಸಹಿಸಿಕೊಂಡರೆ ವಿಸ್ಕಿ, ನೀರಿನ ಮಿಶ್ರಣದಂತೆಯೇ ಶಮಿತಾಭ್ ಕಿಕ್ ಕೊಡುತ್ತದೆ.

Write A Comment