ಮನೋರಂಜನೆ

ರಾಜ ರಾಜೇಂದ್ರ : ರಾಜನ ಕೊರಳಲ್ಲಿ ಬಾಟಲಿ ಮಣಿ

Pinterest LinkedIn Tumblr

ವಿಮರ್ಶಕರ ರೇಟಿಂಗ್ :
ಪಾತ್ರವರ್ಗ: ಶರಣ್, ಇಶಿತಾ ದತ್ತ, ಸಾಧು ಕೋಕಿಲಾ, ರಾಮಕೃಷ್ಣ, ಕುರಿ ಪ್ರತಾಪ್, ಶ್ರೀನಿವಾಸ್ ಮೂರ್ತಿ, ವಿಮಲಾ ರಾಮನ್
ನಿರ್ದೇಶನ: ಪಿ.ಕುಮಾರ್

raja

ರಾಜ ರಾಜೇಂದ್ರ ಚಿತ್ರದಲ್ಲಿ ಶರಣ್, ‘ನಾನು ಕಾಮಿಡಿ ಪೀಸ್ ನಿಜ. ಜನರು ನನ್ನನ್ನೂ ನಾಯಕನನ್ನಾಗಿ ಮಾಡಿದ್ದಾರೆ’ ಎಂದು ವಿಲನ್ ಮುಂದೆ ಅಬ್ಬರಿಸುತ್ತಾರೆ. ಹೌದು, ಶರಣ್ ಅವರನ್ನು ಕನ್ನಡ ಚಿತ್ರ ಪ್ರೇಮಿಗಳು ನಾಯಕನನ್ನಾಗಿ ಮಾಡಿದ್ದಾರೆ. ಆದರೆ, ನಿರ್ದೇಶಕರು ಮಾತ್ರ ಅವರನ್ನು ರಾಜನನ್ನಾಗಿ ಪರಿವರ್ತಿಸಿ, ಅಭಿಮಾನಿಗಳಿಂದ ದೂರ ಮಾಡುವ ಹುನ್ನಾರು ನಡೆಸಿದ್ದಾರೆ. ಇಂಥದ್ದೊಂದು ಅನುಮಾನ ‘ಜೈಲಲಿತಾ’ ಸಿನಿಮಾದಿಂದ ಶುರುವಾಗಿತ್ತು ‘ರಾಜ ರಾಜೇಂದ್ರ’ ಚಿತ್ರದಿಂದ ಅದು ಖಚಿತವಾಗಿದೆ.

ಕನ್ನಡ ಚಿತ್ರೋದ್ಯಮ ಕಂಡ ಅಪರೂಪದ ಕಾಮಿಡಿ ಕಲಾವಿದರಲ್ಲಿ ಶರಣ್ ಕೂಡ ಒಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ. ನಾಯಕನಾದರೂ ಸರಿ, ಪೋಷಕ ಪಾತ್ರ ಮಾಡಿದರೂ ಓಕೆ.. ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸುತ್ತಾರೆ. ಆದರೆ, ರಾಜ ರಾಜೇಂದ್ರ ಸಿನಿಮಾದಲ್ಲಿ ಕಾಮಿಡಿ ಕಲಾವಿದ ಕಳೆದು ಹೋಗಿ, ಸ್ಟಾರ್ ಶರಣ್ ಹುಟ್ಟಿಕೊಂಡಿದ್ದಾರೆ. ಹೀಗಾಗಿ ಚಿತ್ರಕತೆ ಒಂದು ಕಡೆ ಸಾಗಿದರೆ, ಶರಣ್ ನಟನೆ ಮತ್ತೊಂದು ದಾರಿ ಹಿಡಿಯುತ್ತದೆ. ಅಲ್ಲಲ್ಲಿ ನಗೆಯ ಕಚಗುಳಿ ಇಟ್ಟರೂ, ಅದು ಹೃದಯಕ್ಕೆ ಇಳಿಯದೇ ತುಟಿಯಂಚಿಗೆ ತಾಗಿ ಮಾಯವಾಗುತ್ತದೆ.

ಶರಣ್ ಅವರ ಬಹುತೇಕ ಸಿನಿಮಾಗಳಲ್ಲಿ ಇರುವಂಥ ಕತೆಯೇ ಇಲ್ಲಿದೆ. ಮಣಿ (ಶರಣ್)ಉಂಡಾಡಿ ಗುಂಡ. ಅಮ್ಮನ ಪ್ರೀತಿಯ ಮಗ. ತಾಯಿಯ ಆಪರೇಷನ್‌ಗೆ ದುಡ್ಡು ಹೊಂದಿಸಬೇಕಾದ ಸ್ಥಿತಿ ಆತನಿಗೆ ಎದುರಾಗುತ್ತದೆ. ಇಂತಹ ಸಮಯದಲ್ಲಿ ಮಣಿಯ ಮಾವ (ತಬಲಾ ನಾಣಿ) ಕೊಲೆಯ ಡೀಲ್‌ವೊಂದನ್ನು ಒಪ್ಪಿಕೊಂಡು ಬರುತ್ತಾನೆ. ಅದು ರಾಜ ಮನೆತನದ ಹಿರಿಯ ವ್ಯಕ್ತಿಯ ಕೊಲೆ. ರಾತ್ರಿ ವೇಳೆ ಒಬ್ಬನೇ ಓಡಾಡುವುದಕ್ಕೂ ಹೆದರುವ ಮಣಿ, ದುಡ್ಡಿಗಾಗಿ ಮಾವನ ಜತೆ ಕೊಲೆ ಮಾಡೋಕೆ ಹೊರಡುತ್ತಾನೆ. ಅಲ್ಲಿ ಅವನಿಗೆ ಎದುರಾಗುವ ಸಮಸ್ಯೆಗಳು ಯಾವುವು? ಅವುಗಳಿಂದ ಮಣಿ ಪಾರಾಗುತ್ತಾನಾ? ಸಮಸ್ಯೆಗೆ ಸಿಲುಕಿಕೊಂಡು ನರಳುತ್ತಾನಾ? ಎನ್ನುವುದೇ ಸಿನಿಮಾದ ಕತೆ.

ಮಣಿಯಾಗಿ ಖುಷಿ ಕೊಡುವ ಶರಣ್, ರಾಜ ರಾಜೇಂದ್ರನ ಪೋಷಾಕು ಧರಿಸಿದಾಗ ನಿಜಕ್ಕೂ ಕಾಮಿಡಿ ಪೀಸ್ ಆಗಿಯೇ ಕಾಣುತ್ತಾರೆ. ರಾಜೇಂದ್ರನನ್ನು ಮಾಸ್ ಕಲಾವಿದರ ಲುಕ್‌ನಲ್ಲಿ ತೋರಿಸಲು ಪ್ರಯತ್ನ ಪಟ್ಟಿರುವ ನಿರ್ದೇಶಕರು, ಶರಣ್ ಒಳಗಿನ ಕಲಾವಿದನ ಶಕ್ತಿಯನ್ನು ಮರೆತು ಬಿಡುತ್ತಾರೆ. ಹೀಗಾಗಿ ರಾಮಕೃಷ್ಣ ಅವರ ನಟನೆಯ ಮುಂದೆ ಶರಣ್ ಸಪ್ಪೆಯಾಗುತ್ತಾರೆ. ರಾಜ ಮನೆತನದ ಹಿರಿಕನ ಪಾತ್ರಕ್ಕೆ ರಾಮಕೃಷ್ಣ ಅಕ್ಷರಶಃ ಜೀವ ತುಂಬಿದ್ದಾರೆ. ಮತ್ತೆ ‘ಮಾವ’ನ ಪಾತ್ರದಲ್ಲೇ ತಬಲಾ ನಾಣಿ ಸಾಗಿದ್ದಾರೆ. ನಾಯಕಿ ಇಶಿತಾ ದತ್ತಾ, ಸಾಧು ಕೋಕಿಲಾ, ಕುರಿ ಪ್ರತಾಪ್ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದ್ದಾರೆ. ಬಾಟಲಿ ಮಣಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವಿಶಂಕರ್‌ರದ್ದು ಮತ್ತದೇ ಮಾಮೂಲಿನ ಅಬ್ಬರವಿದೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಕೆಲವು ಹಾಡುಗಳು, ಅವರದ್ದೇ ಹಿಂದಿನ ಸಿನಿಮಾದ ಗೀತೆಗಳನ್ನು ನೆನಪಿಸುತ್ತವೆ. ಇಡೀ ಸಿನಿಮಾವನ್ನು ಒಂದೇ ಭಾವದಲ್ಲಿ ಕಟ್ಟಿಕೊಡುವ ನಿರ್ದೇಶಕರ ಪ್ರಯತ್ನ ಸಫಲವಾಗಿದೆ.

ಮನುಷ್ಯ ಬೆಳೆಯುತ್ತಿದ್ದಂತೆಯೇ ಅದರ ಜತೆ ಜತೆಯಲ್ಲೇ ಬಹುಪರಾಕುಗಳೂ ಬೆಳೆಯುತ್ತವೆ. ಇಂತಹ ಘೋಷಣೆಗೆ ಕಿವಿಗೊಟ್ಟರೆ ‘ರಾಜ ರಾಜೇಂದ್ರ’ನಾಗುತ್ತಾನೆ. ತನ್ನ ಪಾಡಿಗೆ ತಾನು ಕಲಾವಿದನಾಗಿ ಉಳಿದರೆ ‘ಅಧ್ಯಕ್ಷ’ನಾಗಿ ಸದಾ ಮೆರೆಯುತ್ತಾನೆ. ರಾಜ ಮತ್ತು ಅಧ್ಯಕ್ಷ ನಡುವಿನ ಅಂತರವನ್ನು ಶರಣ್ ಕಾಪಾಡಿಕೊಳ್ಳುವ ಜಾಣ್ಮೆಯನ್ನು ಬೆಳೆಸಿಕೊಳ್ಳುವುದು ಉತ್ತಮ.

Write A Comment