ಮನೋರಂಜನೆ

ಸುಮನಾ ಕಿತ್ತೂರು ನಿರ್ದೇಶನದ ‘ಕಿರಗೂರಿನ ಗಯ್ಯಾಳಿಗಳು’ ಸಿನಿಮಾದಲ್ಲಿ ಶ್ವೇತಾ ಶ್ರೀವಾಸ್ತವ್

Pinterest LinkedIn Tumblr

crec06shwetha-srivastav

ಕಿರಗೂರಿನ ಗದ್ದೆ ಬಯಲಿನಲ್ಲಿ ಓಡಾಡಿ, ದಾನಮ್ಮನೊಂದಿಗೆ ಗಂಟೆಗಟ್ಟಲೆ ಹರಟಿ ಬಂದಂತಹ ಖುಷಿಯಲ್ಲಿದ್ದಾರೆ ನಟಿ ಶ್ವೇತಾ ಶ್ರೀವಾಸ್ತವ್. ಸುಮನಾ ಕಿತ್ತೂರು ನಿರ್ದೇಶನದ ‘ಕಿರಗೂರಿನ ಗಯ್ಯಾಳಿಗಳು’ ಸಿನಿಮಾ ರೂಪಾಂತರದಲ್ಲಿ ತಾವೇ ದಾನಮ್ಮನಾಗಲಿರುವ ಅವರಲ್ಲಿ ರೋಮಾಂಚನ ಮೂಡಲು ಕಾರಣವಿದೆ.

ಶ್ವೇತಾ ಅವರಲ್ಲಿ ಓದಿನ ಗೀಳು ಹೊತ್ತಿಸಿದ್ದು ಅವರು ಮೊದಲು ಓದಿದ ‘ಕರ್ವಾಲೋ’ ಕೃತಿ. ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳಿಂದ ಪ್ರಭಾವಿತರಾಗಿದ್ದವರಿಗೆ, ಅವರದೇ ‘ಕಿರಗೂರಿನ ಗಯ್ಯಾಳಿಗಳು’ ಕಥೆ ಆಧಾರಿತ ಚಿತ್ರದಲ್ಲಿ ನಟಿಸುವ ಅಪೂರ್ವ ಅವಕಾಶ.
ಕಾಲೇಜು ದಿನಗಳಿಂದಲೂ ಶ್ವೇತಾ ಸ್ತ್ರೀ ಸಬಲೀಕರಣದ ಚಿಂತನೆಗಳನ್ನು ಮೈಗೂಡಿಸಿಕೊಂಡವರು. ಓದಿನ ನಡುವೆ ಈ ವಿಚಾರ ಕುರಿತ ಯುಜಿಸಿ ಪ್ರಾಜೆಕ್ಟ್‌ ಕೆಲಸದಲ್ಲಿಯೂ ತೊಡಗಿಸಿಕೊಂಡಿದ್ದವರು.

‘ಕಿರಗೂರಿನ ಗಯ್ಯಾಳಿಗಳು’ ಪುಸ್ತಕವನ್ನು ತೇಜಸ್ವಿ ಅವರು ಅರ್ಪಿಸಿರುವುದೇ ದುಡಿಯುವ ಮಹಿಳೆಯರಿಗೆ. ಅದರಲ್ಲಿನ ದಾನಮ್ಮಳೂ ಮಹಿಳಾ ಸಬಲೀಕರಣದ ಆಶಯದ ಚಿತ್ರಣ. ಮನೆಯಲ್ಲಿದ್ದರೆ ಶ್ವೇತಾ ಸದಾ ಮೌನಿ. ಸಿಟ್ಟು ಬಂದರೂ ಬಯ್ಯಲು ಬಾರದವರು. ಆದರೆ ಅವರು ಬಯಸುವುದು ಅದಕ್ಕೆ ತದ್ವಿರುದ್ಧ ಪಾತ್ರಗಳನ್ನು. ಮಾತಿನ ಮಲ್ಲಿಯ ಪಾತ್ರಗಳಲ್ಲಿಯೇ ಅವರು ಖ್ಯಾತರಾದವರು. ಕಿರಗೂರಿನ ದಾನಮ್ಮಳಾಗಿಯೂ ಅವರು ಮಾತನಾಡಬೇಕು, ಬೈಯಬೇಕು. ಭಾವನೆಗಳನ್ನು ವ್ಯಕ್ತಪಡಿಸುವ ಸವಾಲೂ ಇದೆ.

ಈ ಪಾತ್ರಕ್ಕೆ ತಾವು ಆಯ್ಕೆಯಾದದ್ದು ಭಾವನೆಗಳನ್ನು ಪ್ರಕಟಿಸುವ ಸಾಮರ್ಥ್ಯವಿದೆಯೆಂಬ ಕಾರಣಕ್ಕಾಗಿಯೇ ಹೊರತು, ಪುಂಖಾನುಪುಂಖವಾಗಿ ಸಂಭಾಷಣೆಗಳನ್ನು ಒಪ್ಪಿಸುತ್ತೇನೆ ಎಂಬ ಕಾರಣಕ್ಕಾಗಿ ಅಲ್ಲ ಎನ್ನುವ ಅರಿವು ಅವರಿಗಿದೆ. ಮರ ಸುತ್ತುವ ಸಿನಿಮಾಗಳಲ್ಲಿ ಯಾರು ಬೇಕಾದರೂ ನಟಿಸುತ್ತಾರೆ. ಆದರೆ ಸಮಾಜಕ್ಕೆ ಹತ್ತಿರವಾದ, ನಟಿಯ ಕಾರಣಕ್ಕೂ ವಿಶಿಷ್ಟ ಎನಿಸುವ ಸಿನಿಮಾಗಳಲ್ಲಿ ನಟಿಸಬೇಕೆಂದು ಎಷ್ಟು ನಾಯಕಿಯರು ತಾನೆ ಬಯಸುತ್ತಾರೆ?

ತಾನು ಎರಡನೇ ವರ್ಗಕ್ಕೆ ಸೇರುವ ನಟಿಯಾಗಬೇಕು ಎನ್ನುವುದು ಸಿನಿಮಾ ಬದುಕಿಗೆ ಕಾಲಿಡುವಾಗಲೇ ಶ್ವೇತಾ ನಿರ್ಧರಿಸಿದ್ದರು. ಇದುವರೆಗೆ ಬಣ್ಣಹಚ್ಚಿದ ಚಿತ್ರಗಳಲ್ಲಿಯೂ ವೈವಿಧ್ಯ ಕಾಣಿಸುತ್ತಿತ್ತು. ಆ ಗುರಿಯ ದಿಕ್ಕನ್ನು ಮತ್ತಷ್ಟು ಸ್ಪಷ್ಟಪಡಿಸಿರುವುದು ಈ ಚಿತ್ರ.
ಹಳ್ಳಿ ಬದುಕೆಂದರೆ ಶ್ವೇತಾ ಅವರಿಗೆ ಪ್ರೀತಿ. ಹುಟ್ಟಿ ಬೆಳೆದ ಪರಿಸರ ನಗರದ್ದಾದರೂ ಗ್ರಾಮೀಣ ಬದುಕಿನೆಡೆಗೆ ವಿಶೇಷ ಒಲವು.
ಈ ಚಿತ್ರದ ನೆಪದಲ್ಲಿ ಆರು ತಿಂಗಳು ಮಲೆನಾಡಿನಲ್ಲೇ ವಾಸ್ತವ್ಯ ಹೂಡುವ, ಅಲ್ಲಿನ ಬದುಕನ್ನು ಆನಂದಿಸುವ  ತವಕವೂ ಅವರದು.

ಶ್ವೇತಾ ಇದುವರೆಗೂ ನಟಿಸಿದ್ದ ಚಿತ್ರಗಳಲ್ಲಿ ಯಾವ ನಿರ್ದೇಶಕರೂ ಪ್ರಸಿದ್ಧರಾಗಿದ್ದವರಲ್ಲ. ಆದರೆ ಸುಮನಾ ಕಿತ್ತೂರು ಚಿತ್ರರಂಗದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿಕೊಂಡವರು. ಮಿಗಿಲಾಗಿ ತಮ್ಮಂತೆಯೇ ಚಿಂತನೆಯುಳ್ಳ ನಿರ್ದೇಶಕಿ. ‘ಇಬ್ಬರು ಗಯ್ಯಾಳಿಗಳ’ ಬೆಸುಗೆ ಚಿತ್ರರಂಗದ ಹೊಸ ಮನ್ವಂತರವೂ ಆಗಲಿದೆ ಎಂಬ ಭರವಸೆ.

ಪ್ರತಿ ಚಿತ್ರದಲ್ಲಿಯೂ ಹೊಸತನಕ್ಕೆ ತುಡಿಯುವ ಶ್ವೇತಾ, ಪಾತ್ರಗಳ ಆಯ್ಕೆಯಲ್ಲಿ ಬಲು ಚೂಸಿ. ನಿರ್ದೇಶಕರು ಯಾರು ಎನ್ನುವುದು ಮುಖ್ಯವಲ್ಲ, ಪಾತ್ರ ಮತ್ತು ಕಥೆಯೇ ಆಯ್ಕೆಯ ಮಾನದಂಡ ಎನ್ನುವ ಅವರು ಒಪ್ಪಿಕೊಂಡ ಚಿತ್ರಗಳಿಗಿಂತ ತಿರಸ್ಕರಿದ್ದ ಕಥೆಗಳೇ ಹೆಚ್ಚು. ರುಚಿಕಟ್ಟಾದ ಅಡುಗೆ ಬಯಸಿದ ಮನಸಿಗೆ ತುಪ್ಪ ಸಿಕ್ಕಂತೆ, ಸುಮನಾ ಕಿತ್ತೂರು ಅವರ ಆಹ್ವಾನ ದೊರೆತಿದೆ. ಶ್ವೇತಾ ಪ್ರಕಾರ ಸುಮನಾ, ಕನ್ನಡ ಸೆಲ್ಯುಲಾಯ್ಡ್‌ ಜಗತ್ತಿನ ಅತ್ಯುತ್ತಮ ನಿರ್ದೇಶಕಿ.

ದಾನಮ್ಮನ ಪಾತ್ರಕ್ಕೆ ಶ್ವೇತಾ ವಿಶೇಷ ಸಿದ್ಧತೆಗಳನ್ನೇನೂ ನಡೆಸಿಲ್ಲ. ಕ್ಯಾಮೆರಾ ಮುಂದೆಯೇ ಎಲ್ಲವೂ ಹುಟ್ಟಬೇಕು ಎನ್ನುವುದು ಅವರ ನಿಲುವು. ಪಾತ್ರಕ್ಕೆ ಪೂರಕವಾದ ತರಬೇತಿಯನ್ನು ರಂಗಭೂಮಿಯೇ ನೀಡಿದೆ. ಇನ್ನು ಸ್ಥಳದ ಹುಡುಕಾಟ, ಚಿತ್ರೀಕರಣದ ಸಮಯದಲ್ಲಿಯೇ ಅಲ್ಲಿನ ವಾತಾವರಣ, ಭಾಷೆ, ಉಡುಪು–ಊಟದ ಶೈಲಿಗಳೂ ಮೈಗೂಡಲಿದೆ ಎನ್ನುತ್ತಾರೆ ಅವರು. ಇದುವರೆಗೆ ನಟಿಸಿರುವ ಪಾತ್ರಗಳ ಬಗ್ಗೆ ಅವರಲ್ಲಿ ತೃಪ್ತಿ ಇದೆ.

ಮಾತಿನ ಮಧ್ಯೆ ಮಹಿಳಾ ಸಬಲೀಕರಣದ ವಿಚಾರವನ್ನು ಮತ್ತೆ ಮತ್ತೆ ಪ್ರಸ್ತಾಪಿಸುವ ಶ್ವೇತಾ ಅವರಿಗೆ, ತಮ್ಮ ಪಾತ್ರಗಳಲ್ಲಿಯೂ ಅವು ಒಂದೊಂದು ರೀತಿಯಲ್ಲಿ ಬಿಂಬಿತವಾಗಿವೆ ಎನ್ನುವ ಸಂತಸವೂ ಇದೆ. ವರ್ಷಕ್ಕೆ ಒಂದೇ ಚಿತ್ರವಾದರೂ ಬೇಸರವಿಲ್ಲ ಎನ್ನುವ ಶ್ವೇತಾ, ಈ ನಡುವೆ ಹತ್ತಾರು ಕಥೆಗಳನ್ನು ಕೇಳಿದ್ದರೂ ಬಣ್ಣಹಚ್ಚಲು ಯೋಗ್ಯ ಎನಿಸಿದ್ದು ಎರಡು ಕಥೆಗಳು ಮಾತ್ರ.

ನಟನೆಯ ಮೂಲಕವೇ ಅದಕ್ಕೆ ತೃಪ್ತರಾಗುವ ಮನಸು ಅವರದ್ದಲ್ಲ. ನಿರ್ದೇಶನ ಹಲವು ದಿನಗಳ ಕನಸು. ಆ್ಯಕ್ಷನ್ ಕಟ್‌ ಹೇಳಲು ಅವರು ತಯಾರಿಯನ್ನೂ ನಡೆಸಿದ್ದಾರೆ. ನೃತ್ಯದ ಕುರಿತ ಈ ಕಥೆ ಸಮಕಾಲೀನವೂ ಹೌದು, ಮನರಂಜನಾತ್ಮಕವಾಗಿಯೂ ಇರಲಿದೆ ಎಂದು ಹೇಳುತ್ತಾರೆ.

Write A Comment