ಮನೋರಂಜನೆ

ಶೀಘ್ರದಲ್ಲಿ ಸೆಟ್ಟೇರಲಿರುವ ಲೈಂಗಿಕ ಅಲ್ಪಸಂಖ್ಯಾತರ ‘ಪುಂಸ್ತ್ರೀ’

Pinterest LinkedIn Tumblr

manga

ಸಿನಿಮಾಗಳಲ್ಲಿ ಮಂಗಳಮುಖಿಯರು (ಲೈಂಗಿಕ ಅಲ್ಪಸಂಖ್ಯಾತರು) ಕಾಣಿಸಿಕೊಂಡರೆ, ಅದು ಅಪಹಾಸ್ಯದ ಸನ್ನಿವೇಶಗಳಿಗೆ ಮಾತ್ರ. ಅವರಲ್ಲಿ ಇರಬಹುದಾದ ಪ್ರತಿಭೆಗೆ ವೇದಿಕೆ ಕೊಟ್ಟವರೇ ಕಡಿಮೆ. ಇದನ್ನು ಅರಿತಿರುವ ಅಜಯ್‌ಕುಮಾರ್‌ ಎ.ಜೆ. ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಅವರ ನಿರ್ದೇಶನದಲ್ಲಿ ಮಂಗಳಮುಖಿಯರೇ ಅಭಿನಯಿಸಲಿರುವ ‘ಪುಂಸ್ತ್ರೀ’ ಚಿತ್ರ ಶೀಘ್ರದಲ್ಲಿ ಸೆಟ್ಟೇರಲಿದೆ. ಬಾಲ್ಯದಿಂದಲೂ ಮಂಗಳಮುಖಿಯರ ಬಗ್ಗೆ ಕುತೂಹಲ ತಾಳಿದ್ದ ಅಜಯಕುಮಾರ್‌, ಈ ಚಿತ್ರದೊಂದಿಗೆ ಮಂಗಳಮುಖಿಯರ ಪ್ರತಿಭೆಯನ್ನು ತೆರೆಯ ಮೇಲೆ ತೋರಿಸುವ ಹುಮ್ಮಸ್ಸಿನಲ್ಲಿದ್ದಾರೆ.

‘ಪುಂಸ್ತ್ರೀ’ ಸಿನಿಮಾಕ್ಕೆ ಸ್ಫೂರ್ತಿಯಾಗಿರುವುದು ಮರಾಠಿ ನಾಟಕ ‘ಹಿಜಡಾ’. ಅದನ್ನು ನೋಡಿದ ದಿನವೇ ಅಜಯ್‌ಕುಮಾರ್‌ ಮನದಲ್ಲಿ ಸಿನಿಮಾ ಮಾಡುವ ಕನಸು ಚಿಗುರೊಡೆದಿತ್ತು. ‘ಗಂಡಾಗಿ ಹುಟ್ಟಿದ ದೇಹ, ಹೆಣ್ಣಾಗಿ ಪರಿವರ್ತನೆಗೊಳ್ಳುವುದು ಮಹಾಪಾಪ ಎಂಬಂತೆ ನಮ್ಮ ಸಮಾಜ ಭಾವಿಸಿಕೊಂಡಿದೆ. ಆದರೆ ಅವರೂ ಮನುಷ್ಯರೇ ತಾನೇ?’ ಎಂದು ಪ್ರಶ್ನಿಸುವ ಅಜಯ್, ಮಂಗಳಮುಖಿಯರ ಮೇಲೆ ನಡೆಯುವ ದೌರ್ಜನ್ಯವನ್ನು ತೆರೆ ಮೇಲೆ ತೋರಿಸುವ ಹಂಬಲ ಹೊಂದಿದ್ದಾರೆ.

ಹಾಗೆಂದು ಈ ಸಿನಿಮಾ ಸಾಕ್ಷ್ಯಚಿತ್ರದಂತಲ್ಲ. ಕಮರ್ಷಿಯಲ್ ಅಂಶಗಳೂ ಇದರಲ್ಲಿ ಇರಲಿವೆಯಂತೆ. ‘ಪುರುಷನೊಬ್ಬ ಹೆಣ್ಣಾದ ಬಳಿಕ ಅನುಭವಿಸುವ ಯಾತನೆ, ಶೋಷಣೆ ಏನೇನು? ಅದನ್ನು ಆಕೆ ನಿಭಾಯಿಸುವುದು ಹೇಗೆ ಎಂಬುದನ್ನೆಲ್ಲ ಕಥೆಯ ರೂಪದಲ್ಲಿ ಹೇಳಲಿದ್ದೇನೆ. ಅವು ಬರಿ ಕಲ್ಪನೆಯಲ್ಲ. ವಾಸ್ತವವಾಗಿ ಮಂಗಲಮುಖಿಯರ ಬದುಕಿನಲ್ಲಿ ನಡೆಯುವ ಘಟನೆಗಳು’ ಎಂದು ಸ್ಪಷ್ಟಪಡಿಸುತ್ತಾರೆ ಅಜಯ್. ಸಿನಿಮಾಕ್ಕೆ ರಂಜನೆಯ ಚೌಕಟ್ಟು ಕೊಡಲು ಎಂಟು ಹಾಡುಗಳು, ಫೈಟಿಂಗ್, ಡಾನ್ಸ್ ಇತ್ಯಾದಿಗಳನ್ನು ಅಳವಡಿಸಲಾಗಿದೆ.

ಈ ಚಿತ್ರದಲ್ಲಿ ಅಭಿನಯಿಸಲಿರುವ ಕಲಾವಿದರಿಗಾಗಿ ತರಬೇತಿ ನೀಡಲು ಕಾರ್ಯಾಗಾರ ಆರಂಭಿಸಿದ ದಿನದಂದು ಅಜಯ್ ಪತ್ರಕರ್ತರನ್ನು ಆಹ್ವಾನಿಸಿದ್ದರು. ಮಂಗಳಮುಖಿಯರಿಂದ ನೃತ್ಯ ರೂಪಕಗಳನ್ನೂ ಆಯೋಜಿಸಲಾಗಿತ್ತು. ವಿಶೇಷ ಅತಿಥಿಯಾಗಿದ್ದ ರಂಗಕರ್ಮಿ ಕೆ.ವೈ. ನಾರಾಯಣಸ್ವಾಮಿ, ‘ಇದೊಂದು ಜನ ಮೆಚ್ಚುವ ಸಿನಿಮಾ ಆಗಲಿ’ ಎಂದು ಆಶಿಸಿದರು. ಸಾಮಾಜಿಕ ಅವಮಾನಕ್ಕೆ ಈಡಾಗಿರುವ ಮಂಗಳಮುಖಿಯರಿಗೆ ಅವರು ಸಮಾಜದ ಪರವಾಗಿ ಕ್ಷಮೆ ಯಾಚಿಸಿದರು.

ಜನರನ್ನು ಸುಲಭವಾಗಿ ತಲುಪುವ ಮಾಧ್ಯಮವಾದ ಸಿನಿಮಾದಲ್ಲಿ ಮಂಗಳಮುಖಿಯರನ್ನು ಅಸಹ್ಯ ಎಂಬಂತೆ ಚಿತ್ರಿಸುವ ಕುರಿತು ಕೋಪ ವ್ಯಕ್ತಪಡಿಸಿದ್ದು ಸಹ ನಿರ್ಮಾಪಕಿ ಎ.ರೇವತಿ. ಗಂಡು ಹಾಗೂ ಹೆಣ್ಣು ಎಂಬ ಎರಡೇ ಚೌಕಟ್ಟುಗಳಿಂದ ಆಚೆಗೆ ಬರದ ಚಿತ್ರ ಮಾಧ್ಯಮ, ಇನ್ನಾದರೂ ಯೋಚಿಸಬೇಕು ಎಂಬ ಸಲಹೆ ಅವರದು. ಮಂಗಳಮುಖಿಯರ ಬದುಕಿಗೆ ಮೆರಗು ನೀಡುವ ಚಿತ್ರವೆಂಬ ಹೆಗ್ಗಳಿಕೆ ‘ಪುಂಸ್ತ್ರೀ’ಗೆ ಸಿಗಲಿ ಎಂದು ರಂಗಕರ್ಮಿ ಕೆ.ಎಸ್‌.ಡಿ.ಎಲ್. ಚಂದ್ರು ಆಶಿಸಿದರು.

ಮುಖ್ಯ ನಾಯಕಿ ಪಾತ್ರದಲ್ಲಿ ಸ್ಪಂದನ ಹಾಗೂ ಉಳಿದ ಪಾತ್ರಗಳಲ್ಲಿ ಚಾಂದನಿ, ಮಮತಾ, ಶೋಭಾ ಹಾಗೂ ರಕ್ಷಿತಾ ಕಾಣಿಸಿಕೊಳ್ಳಲಿದ್ದಾರೆ. ಇವರಿಗೆಲ್ಲ ಹರೀಶ್ ಎಂಬುವವರು ಅಭಿನಯದ ಬಗ್ಗೆ ತರಬೇತಿ ನೀಡಲಿದ್ದಾರೆ. ಇನ್ನೊಬ್ಬ ಸಹ ನಿರ್ಮಾಪಕಿ ಮಂಗಳಾದೇವಿ, ನಿರ್ಮಾಪಕರಾದ ಶಿವರಾಜ್, ಮುನಿರಾಜ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಗುಂಡ್ಲುಪೇಟೆ ಸುರೇಶ್ ಕ್ಯಾಮೆರಾ ಹಾಗೂ ದಿನೇಶ್‌ಕುಮಾರ್‌ ಸಂಗೀತದ ಹೊಣೆ ಹೊತ್ತಿದ್ದಾರೆ.

Write A Comment