ಮನೋರಂಜನೆ

‘ಶ್ರೀಸತ್ಯನಾರಾಯಣ’: ಭಕ್ತಿಪ್ರಧಾನ ಚಿತ್ರದಲ್ಲಿ ಪ್ರೇಮಕಥೆಯ ಮತ್ತೊಂದು ಎಳೆ; ಮಂಗಳೂರು ಬೆಡಗಿ ರಮ್ಯಾ ಬಾರ್ನಾ ನಾಯಕಿ

Pinterest LinkedIn Tumblr

ra

ಚಿತ್ರದ ಹೆಸರು ‘ಶ್ರೀಸತ್ಯನಾರಾಯಣ’. ಹೆಸರಿಗೆ ತಕ್ಕಂತೆ ಹಾಡುಗಳ ಸೀಡಿ ಮತ್ತು ಟ್ರೇಲರ್ ಬಿಡುಗಡೆಗೂ ಮುನ್ನ ಚಿತ್ರದ ನಿರ್ಮಾಪಕ, ನಿರ್ದೇಶಕ, ನಾಯಕ ಎಲ್ಲವೂ ಆಗಿರುವ ಹರೀಶ್ ರಾಜ್ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಿ, ಚಿತ್ರಕ್ಕೆ ಅಕ್ಷರಶಃ ಸತ್ಯನಾರಾಯಣನೊಂದಿಗೆ ಸಂಬಂಧ ಕಲ್ಪಿಸಿದ್ದರು.

‘ಸತ್ಯನಾರಾಯಣ’ ಚಿತ್ರಕ್ಕೆ ಸಂಕಲ್ಪ ಮಾಡಿಕೊಂಡಾಗ ಎಲ್ಲವೂ ಸರಾಗವಾಗಿ ಕೈಗೂಡಿ ಬಂದಿದ್ದನ್ನು ನೆನಪಿಸಿಕೊಂಡರು ಹರೀಶ್‌ ರಾಜ್‌. ಈ ಹಿಂದಿನ ಚಿತ್ರಗಳಲ್ಲಿ ಆದ ತೊಡಕುಗಳು ಈ ಚಿತ್ರದಲ್ಲಿ ಆಗದೇ ಇರುವುದಕ್ಕೆ ಸತ್ಯನಾರಾಯಣ ಮಹಿಮೆಯೇ ಕಾರಣ ಎನ್ನುವ ಇಂಗಿತ ಅವರ ಮಾತುಗಳಲ್ಲಿತ್ತು.

ಭಕ್ತಿಪ್ರಧಾನ ಚಿತ್ರದಲ್ಲಿ ಪ್ರೇಮಕಥೆಯ ಮತ್ತೊಂದು ಎಳೆಯೂ ಇದೆ. ಚಿತ್ರಕ್ಕಾಗಿ ಒಂದು ಪ್ರೇಮ ಗೀತೆಯನ್ನೂ ಸ್ವತಃ ಹರೀಶ್‌ ಅವರೇ ಬರೆದಿದ್ದಾರೆ. ಮದುವೆ ಆದ ನಂತರ ಈ ಹಾಡು ಮೂಡಿದ್ದು ಎಂಬುದು ಮತ್ತೊಂದು ವಿಚಾರ. ಮೊದಲ ಬಾರಿಗೆ ಅವರು ಒಂದು ಹಾಡನ್ನೂ ಹಾಡಿರುವ ಚಿತ್ರದ ಮತ್ತೊಂದು ವಿಶೇಷ.

ನಟ ರಾಮಕೃಷ್ಣ ಸತ್ಯನಾರಾಯಣನ ಪಾತ್ರಧಾರಿ. ಎಡಕಲ್ಲು ಗುಡ್ಡದ ಚಂದ್ರಶೇಖರ್ ಅವರು ನಾಯಕನ ತಂದೆ. ನಾಯಕಿಯ ತಂದೆಯಾಗಿ ಜೈಜಗದೀಶ್ ಪಾತ್ರ ಪೋಷಿಸಿದ್ದಾರೆ. ಈ ಮೂವರು ಹಿರಿಯ ಕಲಾವಿದರು ತಮ್ಮ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಹರೀಶ್‌ಗೆ ಹೆಮ್ಮೆ. ರಮ್ಯಾ ಬಾರ್ನಾ ಹರೀಶ್‌ಗೆ ಜೋಡಿಯಾಗಿದ್ದಾರೆ. ಮೊದಲ ಬಾರಿ ನಟಿಸುತ್ತಿರುವ ಆಶಾ ಜೋಯಿಸ್ ಅವರು ನಾಯಕನ ತಾಯಿ ಹಾಗೂ ಶಾಲಿನಿ ಅವರು ನಾಯಕನ ತಂಗಿಯಾಗಿ ಕಾಣಿಕೊಂಡಿದ್ದಾರೆ.

ಹರೀಶ್ ಅವರ ‘ಗನ್’ ಚಿತ್ರಕ್ಕೆ ಸಂಗೀತ ನೀಡಿದ್ದ ರೋನಿ ರಾಫೆಲ್ ಈ ಚಿತ್ರಕ್ಕೂ ಸಂಗೀತ ಸಂಯೋಜಿಸಿದ್ದಾರೆ. ಸತ್ಯನಾರಾಯಣನ ಕೃಪೆಯಿಂದ ‘ತಾಜಾ ರೋನಿ’ ಆಗಿದ್ದಾರೆ. ಒಟ್ಟು ನಾಲ್ಕು ಹಾಡುಗಳಿದ್ದು ವಿ. ನಾಗೇಂದ್ರ ಪ್ರಸಾದ್, ಸಂತೋಷ್ ನಾಯಕ್ ಸಾಹಿತ್ಯ ಒದಗಿಸಿದ್ದಾರೆ. ಅಜಯ್ ವಾರಿಯರ್, ಸಂತೋಷ್ ವೆಂಕಿ ಹಾಗೂ ಮಲಯಾಳಂನ ಗಾಯಕ ಕಲೀದ್ ಹಾಡುಗಳಿಗೆ ದನಿಯಾಗಿದ್ದಾರೆ. ರಾಮರೆಡ್ಡಿ ಎಂಬುವವರು ಛಾಯಾಗ್ರಹಣದ ಮೊದಲ ಪ್ರಯತ್ನ ಮಾಡಿದ್ದಾರೆ.

Write A Comment