ಮನೋರಂಜನೆ

ಎರಡು ಗಂಟೆ ಇಪ್ಪತ್ತೆರಡು ನಿಮಿಷದ ಒಂದೇ ಶಾಟ್‌ನಲ್ಲಿ ರೂಪುಗೊಂಡಿರುವ ಚಿತ್ರ ‘ದಕ್ಷ’

Pinterest LinkedIn Tumblr

narasa

ಎರಡು ಗಂಟೆ ಇಪ್ಪತ್ತೆರಡು ನಿಮಿಷದ ಒಂದೇ ಶಾಟ್‌ನಲ್ಲಿ ರೂಪುಗೊಂಡಿರುವ ಚಿತ್ರ ‘ದಕ್ಷ’. ಈ ಚಿತ್ರ ಗಿನ್ನೆಸ್ ದಾಖಲೆಗೆ ಪಾತ್ರವಾಗಲಿದೆಯೇ? ಇದಕ್ಕೆ ಉತ್ತರ ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಚಿತ್ರದ ನಿರ್ದೇಶಕ ಎಸ್‌. ನಾರಾಯಣ್ ಈಗಾಗಲೇ ದಾಖಲೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಗಿನ್ನೆಸ್ ಸಮಿತಿ ಮುಂದೆ ಪೂರ್ಣಗೊಳಿಸಿದ್ದು, ಅದು ಅಂಗೀಕಾರಕ್ಕೂ ಒಳಪಟ್ಟಿದೆಯಂತೆ.

ಇನ್ನೇನು ಅಂತಿಮ ಸುದ್ದಿ ಅಷ್ಟೇ ಹೊರಬೀಳಬೇಕು. ಅದಕ್ಕೂ ಮುನ್ನ ಚಿತ್ರದ ಹಾಡುಗಳನ್ನು ಪ್ರೇಕ್ಷಕನ ಕೈಗೆ ಇಟ್ಟಿದ್ದಾರೆ ನಿರ್ದೇಶಕ–ನಿರ್ಮಾಪಕ ನಾರಾಯಣ್‌. ‘ಒಂದೇ ಶಾಟ್‌ನಲ್ಲಿ ತೆಗೆದ ಚಿತ್ರ’ ಎನ್ನುವ ಗಿನ್ನೆಸ್‌ ಹೆಗ್ಗಳಿಕೆ ಬೇಗ ಸಿಗಲಿ ಎಂದು ಚಿತ್ರತಂಡಕ್ಕೆ ಶುಭಕೋರಲು ಬಂದಿದ್ದ ಗಣ್ಯರು ಆಶಿಸಿದರು. ‘ಈ ಕಥೆಯನ್ನು ಚಿತ್ರದ ನಾಯಕ ವಿಜಯ್‌ ಅವರಿಗೆ 15 ನಿಮಿಷದಲ್ಲಿ ಹೇಳಿದೆ.

ಅವರಿಗೆ ಇಷ್ಟವಾಯಿತು. 18 ಮುಖ್ಯ ಕಲಾವಿದರು ಚಿತ್ರದಲ್ಲಿ ನಟಿಸಿದ್ದು, ಮೂರು ಅಂತಸ್ತಿನ, 13 ಕೊಠಡಿಗಳ ಒಂದೇ ಮನೆಯಲ್ಲಿ ಶೂಟಿಂಗ್‌ ನಡೆಸಲಾಗಿದೆ. ಎರಡು ಹಾಡುಗಳು, ಆರು ಸಾಹಸ ದೃಶ್ಯಗಳು ಇವೆ. 45 ಮಂದಿ ಸಾಹಸ ಕಲಾವಿದರು ಪಾಲ್ಗೊಂಡಿದ್ದಾರೆ. ಫೆಬ್ರುವರಿಯಲ್ಲೇ ಚಿತ್ರವನ್ನು ತೆರೆಗೆ ತರಲಾಗುವುದು’ ಎಂದರು ನಾರಾಯಣ್‌. ಒಂದೇ ಮನೆಯಲ್ಲಿ ಚಿತ್ರೀಕರಿಸಲು ಆಲೋಚಿಸಿದಾಗಲೇ ಈ ಗಿನ್ನೆಸ್ ದಾಖಲೆಯೂ ಅವರ ಮನಸ್ಸಿಗೆ ಬಂದಿತಂತೆ. ಶೂಟಿಂಗ್‌ಗೂ ಮುನ್ನ ನಟರು, ತಂತ್ರಜ್ಞರಿಗಾಗಿ 13 ದಿನಗಳ ಕಾರ್ಯಾಗಾರವನ್ನು ಚಿತ್ರತಂಡ ಮಾಡಿತ್ತು.

‘ಈ ಚಿತ್ರದ ಬಗ್ಗೆ ಅಪಾರ ಕುತೂಹಲವಿದೆ. ಸೇನಾಪಡೆ ಕೆಲಸ ಮಾಡಿದಂತೆ ಚಿತ್ರತಂಡ ಆ ಮನೆಯಲ್ಲಿ ಕೆಲಸ ಮಾಡಿತು. ನಾನೊಬ್ಬ ಕಮಾಂಡರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು ದುನಿಯಾ ವಿಜಯ್. ಅವರ ಮೊಗದಲ್ಲಿ ಗೆಲುವಿನ ಸಂಭ್ರಮ ಮನೆ ಮಾಡಿತ್ತು. ಚಿತ್ರಕಥೆಯ ವಿಷಯದಲ್ಲಿ ಸ್ವಲ್ವವೂ ಬಾಯಿಬಿಡದೆ ‘ಸ್ವಲ್ಪ ದಿನದಲ್ಲೇ ಎಲ್ಲರೂ ಕುಳಿತು ಸಿನಿಮಾ ನೋಡೋಣ’ ಎಂದು ಮುಗುಳ್ನಕ್ಕರು.
ನಾರಾಯಣ್ ನಿರ್ದೇಶನದ ಚಿತ್ರದಲ್ಲಿ ನಟಿಸುವ ಆಸೆ ಇಟ್ಟುಕೊಂಡಿದ್ದ ನೇಹಾ ಪಾಟೀಲ್ ಅವರಿಗೆ ಈ ಚಿತ್ರ ಖುಷಿ ಕೊಟ್ಟಿದೆ. ಅವರು ಕಾಲೇಜು ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರಂತೆ.

ಛಾಯಾಗ್ರಹಕ ರೇಣು ಕುಮಾರ್ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಬುಲ್ಲೆಟ್ ಪ್ರಕಾಶ್, ಪದ್ಮಜಾ ರಾವ್ ಇತ್ಯಾದಿ ತಾರಾಗಣವಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜಾ, ವಿಜಯ್ ಕುಮಾರ್, ಎಚ್‌.ಡಿ. ಗಂಗರಾಜು, ಆನಂದ್ ಆಡಿಯೊದ ಮೋಹನ್, ನಿರ್ಮಾಪಕ ಸಾ.ರಾ. ಗೋವಿಂದು, ಎಸ್. ನಾರಾಯಣ್ ಪುತ್ರ ಪಂಕಜ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

Write A Comment