ಮನೋರಂಜನೆ

ನಿರ್ದೇಶಕ ಆರ್. ಚಂದ್ರು ‘ಚಾರ್‌ಮಿನಾರ್‌’ ತೆಲುಗಿನ ಅವತರಣಿಕೆ ‘ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ’ ಶೀಘ್ರ ತೆರೆಗೆ

Pinterest LinkedIn Tumblr

cha

ನಿರ್ದೇಶಕ ಆರ್. ಚಂದ್ರು ಖುಷಿಪಡಲು ಹಲವು ಕಾರಣಗಳಿವೆ. ಒಂದೆಡೆ ‘ಚಾರ್‌ಮಿನಾರ್‌’ಗೆ 2013ನೇ ಸಾಲಿನ ‘ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ’ ರಾಜ್ಯ ಪ್ರಶಸ್ತಿ, ಇನ್ನೊಂದೆಡೆ ಈ ಸಿನಿಮಾ ತೆಲುಗಿನ ಅವತರಣಿಕೆ ‘ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ’ ಶೀಘ್ರ ತೆರೆಗೆ ಬರುತ್ತಿದೆ. ಮತ್ತೊಂದೆಡೆ ತಮ್ಮ ನಿರ್ಮಾಣದ ‘ಮಳೆ’ ಚಿತ್ರ ತೆರೆಗೆ ಸಿದ್ಧವಾಗಿದ್ದು ಮಾರ್ಚ್‌ನಲ್ಲಿ ತೆರೆಗೆ ತರುವ ಆಲೋಚನೆಯೂ ಅವರದ್ದು.

‘ತೆಲುಗು ಚಿತ್ರರಂಗಕ್ಕೆ ಕನ್ನಡದ ನಿರ್ದೇಶಕ ಹೋಗಿ, ಅಲ್ಲೊಂದು ಸಿನಿಮಾ ಮಾಡುವುದು ಅಸಾಧ್ಯ ಎನ್ನುತ್ತಿದ್ದರು. ಅದೀಗ ಇಲ್ಲ. ನಾನು ತೆಲುಗು ಹಾಗೂ ಕನ್ನಡ ಚಿತ್ರರಂಗಕ್ಕೆ ಬ್ರಿಡ್ಜ್ ಕಟ್ಟಿದ್ದೇನೆ’ ಎನ್ನುವ ಚಂದ್ರು, ಕನ್ನಡ ಹಾಗೂ ತೆಲುಗು ಚಿತ್ರರಂಗದ ಕುರಿತು ‘ಸಿನಿಮಾ ರಂಜನೆ’ ಜತೆ ಮಾತನಾಡಿದ್ದಾರೆ.

*‘ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ’ ಪ್ರಶಸ್ತಿ ‘ಚಾರ್‌ಮಿನಾರ್‌’ಗೆ ಸಿಗುವ ನಿರೀಕ್ಷೆ ಇತ್ತೇ?
ಖಂಡಿತ ಇರಲಿಲ್ಲ… ಆದರೆ ನಾನು ಮಾಡುವ ಸಿನಿಮಾಗಳು ರಾಷ್ಟ್ರೀಯ ಪ್ರಶಸ್ತಿ ಪಡೆಯಬೇಕೆಂಬ ಹಂಬಲ ಮೊದಲಿನಿಂದಲೂ ನನಗಿದೆ. ‘ತಾಜ್‌ಮಹಲ್‌’, ‘ಚಾರ್‌ಮಿನಾರ್‌’, ‘ಮೈಲಾರಿ’ ಸಿನಿಮಾಗಳನ್ನು ಗಮನಿಸಿದಾಗ ಸಮಾಜಕ್ಕೆ ಸಂದೇಶ ಹಾಗೂ ಮನರಂಜನೆ ನೀಡಬೇಕು ಎಂಬ ಗುರಿಯೊಂದಿಗೆ ಚಿತ್ರ ಮಾಡಿರುವುದು ಗೊತ್ತಾಗುತ್ತದೆ. ಹೀಗಾಗಿ ಚಂದ್ರು ಸಿನಿಮಾ ಅಂತ ನೋಡುವ ಪ್ರೇಕ್ಷಕರ ಒಂದು ವರ್ಗ ಸೃಷ್ಟಿಯಾಗಿದೆ.

‘ಚಾರ್‌ಮಿನಾರ್‌’ ಅಂತೂ ಒಂದರ್ಥದಲ್ಲಿ ಯೂನಿವರ್ಸಲ್ ಸಿನಿಮಾ. ಮಕ್ಕಳು, ಯುವಕರು, ವೃದ್ಧರು ಎಲ್ಲರೂ ನೋಡಬಹುದಾದ ಚಿತ್ರ ಅದು. ಅದು ಪ್ರತಿಪಾದಿಸುತ್ತಿದ್ದ ಮೌಲ್ಯಗಳನ್ನು ನೋಡಿದರೆ, ಪ್ರಶಸ್ತಿ ಸಿಗಬಹುದು ಎಂಬ ನಿರೀಕ್ಷೆ ನನಗಿಂತಲೂ ಬೇರೆಯವರಲ್ಲಿ ಸಾಕಷ್ಟಿತ್ತು. ದೊಡ್ಡ ದೊಡ್ಡ ಸಿನಿಮಾಗಳ ಸ್ಪರ್ಧೆ ಮಧ್ಯೆ ಅದಕ್ಕೆ ಪ್ರಶಸ್ತಿ ಬಂದಿರುವುದು ಖುಷಿ ಕೊಟ್ಟಿದೆ.

*ಅದೇ ಸಿನಿಮಾ ಈಗ ತೆಲುಗಿಗೆ ರೀಮೇಕ್ ಆಗುತ್ತಿದೆ. ಈ ಅವಕಾಶ ಹೇಗೆ ಸಿಕ್ಕಿತು?
ಅದು ‘ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ’ ಎಂಬ ಹೆಸರಲ್ಲಿ ರೀಮೇಕ್ ಆಗುತ್ತಿದೆ. ಸುಧೀರ್ ಬಾಬು, ನಂದಿತಾ ಮುಖ್ಯಭೂಮಿಕೆಯಲ್ಲಿದ್ದಾರೆ. ನಾಗಚೈತನ್ಯ, ರಾಣಾ ಇತರರ ತಾರಾಗಣವಿದೆ. ‘ಚಾರ್‌ಮಿನಾರ್‌’ ಹಾಗೂ ಇತರ ಚಿತ್ರ ನೋಡಿದ ನಿರ್ಮಾಪಕ ಲಗಡಪತಿ ಶ್ರೀಧರ್ ಅವರೇ ನನ್ನನ್ನು ಅಲ್ಲಿಗೆ ಕರೆದರು. ಇತ್ತೀಚೆಗಷ್ಟೇ ವಿಜಯವಾಡದಲ್ಲಿ ಅದರ ಆಡಿಯೊ ಬಿಡುಗಡೆ ಅದ್ದೂರಿಯಿಂದ ನಡೆಯಿತು. ಹಾಡುಗಳು ಜನಪ್ರಿಯವಾಗಿವೆ. ಆ ಆಧಾರದಲ್ಲಿ ಹೇಳುವುದಾದರೆ, ಸಿನಿಮಾ ಖಂಡಿತ ಹಿಟ್ ಆಗುತ್ತದೆ.

* ಕನ್ನಡದ ನಿರ್ದೇಶಕ ತೆಲುಗಿನಲ್ಲಿ ಕೆಲಸ ಮಾಡುವ ಅನುಭವ ಹೇಗಿತ್ತು?
ಅಲ್ಲಿನ ಚಿತ್ರರಂಗದಲ್ಲಿ ಅಚ್ಚುಕಟ್ಟುತನ, ಶಿಸ್ತು ಎದ್ದು ಕಾಣುತ್ತದೆ. ಪ್ರತಿ ವಿಭಾಗದವರು ಅಂದಂದಿನ ಕೆಲಸಗಳ ಬಗ್ಗೆ ಪೂರ್ಣ ತಿಳಿದುಕೊಂಡಿರುತ್ತಾರೆ. ನಿರ್ದೇಶಕರಿಂದ ಹಿಡಿದು ಲೈಟ್‌ಬಾಯ್‌ವರೆಗೆ ಎಲ್ಲರಲ್ಲೂ ಕೆಲಸದ ಬಗ್ಗೆ ಶ್ರದ್ಧೆ, ಆಸಕ್ತಿ ಎದ್ದು ಕಾಣಿಸುವಂತಿರುತ್ತದೆ. ಬೆಳಿಗ್ಗೆ 8 ಗಂಟೆಗೆ ಒಂದಷ್ಟು ದೃಶ್ಯ ಶೂಟಿಂಗ್‌ ಮಾಡಿ ಬ್ರೇಕ್‌ ಕೊಡುತ್ತಿದ್ದೆ. ಆದರೆ ನಮ್ಮಲ್ಲಿ ಹನ್ನೊಂದು ಗಂಟೆಯಾದರೂ ಇನ್ನೂ ಕ್ಯಾಮೆರಾ ಕೆಲಸ ಶುರು ಮಾಡಿರುವುದೇ ಇಲ್ಲ. ಅಲ್ಲಿನವರ ಜತೆ ಕೆಲಸ ಮಾಡಿರುವುದು ನನಗೆ ಮತ್ತಷ್ಟು ಶಿಸ್ತು, ಶ್ರದ್ಧೆ ಕಲಿಸಿದೆ.

* ಕನ್ನಡ– ತೆಲುಗು ಚಿತ್ರರಂಗದ ವ್ಯತ್ಯಾಸವನ್ನು ಹೇಗೆ ಗುರುತಿಸುತ್ತೀರಿ?
ಆಂಧ್ರದಲ್ಲಿ ನಿರ್ಮಾಪಕರು ತಮಿಳು ಹಾಗೂ ತೆಲುಗು ನಿರ್ದೇಶಕರಿಗೆ ರತ್ನಗಂಬಳಿ ಹಾಸಿ, ಆಹ್ವಾನಿಸುತ್ತಾರೆ. ಆದರೆ ಕನ್ನಡದ ನಿರ್ದೇಶಕರನ್ನು ಕಂಡರೆ ಅಷ್ಟಕ್ಕಷ್ಟೇ! ಯಾಕೆಂದರೆ, ಕನ್ನಡದ ನಿರ್ದೇಶಕರು ಹಾಗೆ ಮಾಡಿಕೊಂಡುಬಿಟ್ಟಿದ್ದಾರೆ. ನಿರ್ಮಾಪಕರು ಬೇರೆ ಭಾಷೆ ಸಿನಿಮಾ ರೀಮೇಕ್‌ ಮಾಡಲು ನಿರ್ದೇಶಕರಿಗೆ ಹೇಳುತ್ತಾರೆ. ನಮ್ಮಲ್ಲಿನ ಕಥೆಗಳನ್ನು ಸಿನಿಮಾಕ್ಕೆ ಬಳಸಿಕೊಳ್ಳುವುದಿಲ್ಲ; ಹೊಸದಾಗಿ ಕತೆ ಬರೆಯುವ ಚಾಳಿ ಕೂಡ ಇಲ್ಲ. ಬೇರೆಯವರ ಪ್ರಸಾದಕ್ಕೆ ಕೈಯೊಡ್ಡುವ ಸ್ಥಿತಿ ನಮ್ಮಲ್ಲಿ ರೂಢಿಯಾಗಿಬಿಟ್ಟಿದೆ.

* ಅಲ್ಲಿನ ಮಾರುಕಟ್ಟೆ ಇಲ್ಲಿಗಿಂತ ಸಾಕಷ್ಟು ದೊಡ್ಡದಾಗಿ ಬೆಳೆದಿದೆ ಅಲ್ಲವೇ. ಅದಕ್ಕೆ ಕಾರಣ..?
ಅದು ತನ್ನಷ್ಟಕ್ಕೆ ತಾನೇ ದೊಡ್ಡದಾಗಿಲ್ಲ. ಅವರು ಅದನ್ನು ವಿಸ್ತರಿಸಿಕೊಂಡಿದ್ದಾರೆ. ಮೂರು ದಶಕಗಳ ಹಿಂದೆ ಕನ್ನಡ ಚಿತ್ರೋದ್ಯಮದ ಮಾರುಕಟ್ಟೆ ಚೆನ್ನಾಗಿಯೇ ಇತ್ತು. ಯಾಕೆಂದರೆ ಆಗ ಗುಣಮಟ್ಟದ ಸಿನಿಮಾಗಳು, ಶ್ರದ್ಧೆಯುಳ್ಳ ನಿರ್ದೇಶಕ–ನಿರ್ಮಾಪಕರು ಇದ್ದರು. ಅಲ್ಲಿ ಆರೋಗ್ಯಕರ ಸ್ಪರ್ಧೆ ಇದೆ.

ಇಲ್ಲಿ ಕಾಲೆಳೆಯುವವರು ಜಾಸ್ತಿ! ಉದಾಹರಣೆಗೆ, ಪೂರಿ ಜಗನ್ನಾಥ್‌ ಅವರ ಸಿನಿಮಾದ ಆಡಿಯೊ ಬಿಡುಗಡೆಗೆ ರಾಜಮೌಳಿ ಬಂದು ‘ನಾನು ನಿಮ್ಮ ಬಳಿ ಸಹಾಯಕನಾಗಿ ಒಂದು ಸಿನಿಮಾಕ್ಕೆ ಕೆಲಸ ಮಾಡಬೇಕು’ ಅಂತ ಮನವಿ ಮಾಡುತ್ತಾರೆ! ಗಟ್ಟಿ ಕಥೆಯ ಗುಣಮಟ್ಟದ ಸಿನಿಮಾ ಮಾಡಿದರೆ ಮತ್ತೆ ನಾವು ಗೆಲ್ಲಬಹುದು. ಆ ಮಟ್ಟ ತಲುಪಲು ನಮಗೆ ಇನ್ನಷ್ಟು ದಿನ ಬೇಕಾಗಬಹುದೇನೋ?

* ಮುಂದೆ ತೆಲುಗಿನಲ್ಲಿಯೇ ಸಿನಿಮಾ ನಿರ್ದೇಶನದ ಹಂಬಲ ಇದೆಯೇ? ಅಥವಾ ಕನ್ನಡಕ್ಕೆ ಮತ್ತೆ ಬರುತ್ತೀರಾ?
ನನ್ನ ನೆಲ ಕನ್ನಡ. ನನಗೆ ಇಲ್ಲಿನ ಭಾಷೆ ಬೇಕು. ಇಲ್ಲಿ ಇಷ್ಟಪಟ್ಟು ಇನ್ನಷ್ಟು ಸಿನಿಮಾ ಮಾಡಬೇಕು. ಅವಕಾಶ ಸಿಕ್ಕಿತು ಅಂತ ತೆಲುಗು ಚಿತ್ರರಂಗಕ್ಕೆ ಹೋದೆ. ‘ಕೃಷ್ಣಮ್ಮ…’ ಬಳಿಕ ಇನ್ನೊಂದು ಸಿನಿಮಾ ಮಾಡಲು ದೊಡ್ಡ ಕಲಾವಿದರು ಡೇಟ್ಸ್‌ ಕೊಡುವುದಾಗಿ ಹೇಳಿದ್ದಾರೆ. ಆದರೆ ಕನ್ನಡದಲ್ಲಿ ನನ್ನ ನಿರ್ಮಾಣದ ‘ಮಳೆ’ ಸಿನಿಮಾ ಇಷ್ಟರಲ್ಲೇ ತೆರೆಗೆ ಬರುತ್ತಿದೆ.

ಅದಾದ ಬಳಿಕ ಇಲ್ಲೇ ಸ್ಟಾರ್‌ ನಟನನ್ನು ಹಾಕಿಕೊಂಡು ಸಿನಿಮಾ ಮಾಡಲಿದ್ದೇನೆ. ಅದರ ನಂತರವಷ್ಟೇ ಇನ್ನೊಂದು ತೆಲುಗು ಚಿತ್ರ. ಈಗಂತೂ ಎರಡೂ ಚಿತ್ರರಂಗಕ್ಕೆ ಬ್ರಿಡ್ಜ್ ಕಟ್ಟಿದ್ದೇನೆ. ಅದರ ಮೇಲೆ ಕನ್ನಡದ ಇನ್ನಷ್ಟು ನಿರ್ದೇಶಕರು ಸುಲಭವಾಗಿ ಆ ಚಿತ್ರರಂಗಕ್ಕೆ ಹೋಗಬಹುದು. ಒಳ್ಳೆಯ ಸಿನಿಮಾ ಕೊಟ್ಟರೆ, ಅಲ್ಲಿನವರು ನಮ್ಮವರನ್ನು ಕರೆಯುವ ಸಾಧ್ಯತೆ ಖಂಡಿತ ಇದೆ.

Write A Comment