ಮನೋರಂಜನೆ

ಶರಣ್ ಜನ್ಮದಿನದಂದೇ ‘ರಾಜ ರಾಜೇಂದ್ರ’ ತೆರೆ (ಫೆಬ್ರುವರಿ 6)

Pinterest LinkedIn Tumblr

ರ಻

ಇಂದು ಶರಣ್ ಜನ್ಮದಿನ (ಫೆಬ್ರುವರಿ 6). ಅವರ ಹುಟ್ಟುಹಬ್ಬದ ಖುಷಿ ಹೆಚ್ಚಿಸುವಂತೆ ಇಂದು ‘ರಾಜ ರಾಜೇಂದ್ರ’ ತೆರೆಕಾಣುತ್ತಿದೆ. ಒಂದರ ಹಿಂದೆ ಒಂದರಂತೆ ಗೆಲುವನ್ನು ಪಡೆಯುತ್ತಿರುವ ಶರಣ್‌  ‘ರಾಜ ರಾಜೇಂದ್ರ’ ಚಿತ್ರದ ಬಗ್ಗೆ ‘ಸಿನಿಮಾ ರಂಜನೆ’ ಜತೆ ಮಾತನಾಡಿದ್ದಾರೆ.

*ಜನ್ಮದಿನದಂದೇ ‘ರಾಜ ರಾಜೇಂದ್ರ’ ತೆರೆ ಕಾಣುತ್ತಿದೆ. ಇದು ಹುಟ್ಟಿದ ಹಬ್ಬಕ್ಕೆ ಉಡುಗೊರೆಯಾ?
ಇದು ಕಾಕತಾಳೀಯ. ಫೆಬ್ರುವರಿ 6ರಂದು ಸಿನಿಮಾ ತೆರೆ ಕಾಣಿಸುವ ಆಲೋಚನೆ ಮಾಡಿದೆವು ಅಷ್ಟೇ. ಆ ನಂತರವೇ ಅಂದು ನನ್ನ ಜನ್ಮದಿನ ಎನ್ನುವುದು ನೆನಪಿಗೆ ಬಂದಿದ್ದು. ನನ್ನ 105ನೇ ಸಿನಿಮಾ ಇದು. ಜನ್ಮದಿನದಂದೇ ತೆರೆಗೆ ಬರುತ್ತಿರುವ ಮೊದಲ ಸಿನಿಮಾ.

*ರಾಜನ ಪೋಷಾಕಿನಲ್ಲಿ ಕಾಣಿಸಿಕೊಂಡಿದ್ದಿರಿ. ಚಿತ್ರದಲ್ಲಿ ಐತಿಹಾಸಿಕ ಕಥನ ಪ್ರಮುಖವಾಗಿದೆಯೇ?
ನಾನು ಕಥೆಯನ್ನು ಕೇಳಿದ ತಕ್ಷಣಕ್ಕೆ ಒಪ್ಪಿಕೊಳ್ಳುವುದಿಲ್ಲ. ಎರಡು ಮೂರು ದಿನ ಆಲೋಚಿಸಿ, ಚರ್ಚಿಸಿ ನಿರ್ಧಾರ ಹೇಳುವೆ. ಈ ಹಿಂದೆ ‘ರ್‍ಯಾಂಬೋ’ ಕಥೆಯನ್ನು ಕೇಳಿದ ತಕ್ಷಣವೇ ಸ್ಥಳದಲ್ಲಿಯೇ 700 ರೂಪಾಯಿ ಕೊಟ್ಟು ಈ ಕಥೆಯನ್ನು ಬ್ಲಾಕ್ ಮಾಡಿ ಎಂದೆ. ನಾನು ಒಂದೇ ಕ್ಷಣದಲ್ಲಿ ನಿರ್ಧಾರ ತೆಗೆದುಕೊಂಡ ಮೊದಲ ಚಿತ್ರ ಅದು. ಎರಡನೆಯದ್ದು ‘ರಾಜ ರಾಜೇಂದ್ರ’. ಕಥೆ ಕೇಳಿದ ತಕ್ಷಣವೇ ಓಕೆ ಎಂದೆ. ಹೌದು, ಐತಿಹಾಸಿಕ ಕಥನವಿದೆ. ರಾಜ ಮತ್ತು ಬಾಟ್ಲು ಮಣಿ ಎನ್ನುವ ಎರಡು ಶೇಡ್‌ಗಳನ್ನು ಹೇಳಿದ್ದೇವೆ. ದೊಡ್ಡ ತಾರಾಬಳಗ ಸಾಥ್ ನೀಡಿದೆ.

*ಪಿರಿಯಾಡಿಕಲ್ ಕಥೆಗಳು ಹೆಚ್ಚುತ್ತಿವೆ; ಗೆಲ್ಲುತ್ತಿವೆ. ಈ ಹಿನ್ನೆಲೆಯಲ್ಲಿ ಕಥೆ ಒಪ್ಪಿಕೊಂಡಿದ್ದಾ?
ಸಾಮಾನ್ಯವಾಗಿ ಪಿರಿಯಾಡಿಕಲ್ ಕಥೆಗಳು ಎರಡು ಕಾಲಘಟ್ಟದಲ್ಲಿ ನಡೆಯುತ್ತವೆ. ಆದರೆ ಇಲ್ಲಿ ಎರಡೂ ಕಾಲಘಟ್ಟಗಳು ಸಮಾನಾಂತರವಾಗಿ ಹೋಗುವುದು ವಿಶೇಷ. ಶರಣ್ ಮಿಸ್ ಆಗದೇ ಕಾಮಿಡಿಯೂ ಮಿಸ್ ಆಗದೇ ಸಾಗುತ್ತದೆ. ಹಾಸ್ಯ ಪ್ರಧಾನ ಚಿತ್ರದಲ್ಲಿ ಪಿರಿಯಾಡಿಕಲ್ ಕಥೆ ಹೇಳುತ್ತಿರುವುದು ಮುಖ್ಯ ವಿಶೇಷ.

*ನಿಮ್ಮ ಯಶಸ್ಸನ್ನು ಹೇಗೆ ವಿಶ್ಲೇಷಿಸುತ್ತೀರಿ?
ಶರಣ್ ಲಕ್ಕಿ ಎಂದಷ್ಟೇ ಹೇಳಬಹುದು. ಜನರು ಸ್ವೀಕಾರ ಮಾಡಿರುವುದು ನನ್ನನ್ನಲ್ಲ, ನನ್ನ ಸಿನಿಮಾಗಳ ಕಥೆಯನ್ನು. ನಾನು ಒಂದು ಪ್ರಯತ್ನ ಮಾಡಿದ್ದೇನೆ ಅಷ್ಟೇ. ಶರಣ್ ಹಿಟ್‌ ಕೊಟ್ಟ ಎನ್ನುವುದಲ್ಲ, ಜನರು ನನಗೆ ಹಿಟ್‌ ಕೊಟ್ಟರು. ಇತ್ತೀಚೆಗೆ ಒಂದು ಕಡೆ ಓದಿದೆ– ‘ನಿಮ್ಮ ಟ್ಯಾಲೆಂಟ್ ನಿಮ್ಮ ಆಟವನ್ನು ಗೆಲ್ಲಿಸಬಹುದು. ಆದರೆ ಚಾಂಪಿಯನ್ ಮಾಡುವುದು ಒಂದು ತಂಡ. ನಾನು ನಟಿಸಿರುವ ಸಿನಿಮಾಗಳು ಏಕೆ ಗೆಲ್ಲುತ್ತಿವೆ ಎಂದರೆ, ಅಲ್ಲಿ 120 ಜನರ ಕಠಿಣ ಪರಿಶ್ರಮವಿದೆ. ನಿರಂತರವಾಗಿ ಕೆಲಸ ಮಾಡುವ ತಂತ್ರಜ್ಞರು, ಬರಹಗಾರರು ಇತ್ಯಾದಿ ಎಲ್ಲರೂ ನನ್ನನ್ನು ಗೆಲ್ಲಿಸಿದ್ದಾರೆ.

*ಅಂದರೆ, ಚಿತ್ರದ ಕಥೆ ಆಯ್ಕೆ ವಿಷಯದಲ್ಲಿ ಗೆಲ್ಲುತ್ತಿದ್ದೀರಿ ಅಲ್ಲವೇ?
ಕಥೆಯ ಆಯ್ಕೆ ನನ್ನೊಬ್ಬನ ನಿರ್ಧಾರ ಅಲ್ಲ. ನನಗೆ ಒಂದಿಷ್ಟು ಸ್ನೇಹಿತರು ಇದ್ದಾರೆ. ಅವರ ಜತೆ ಚರ್ಚಿಸಿದ ನಂತರವೇ ಕಥೆಯನ್ನು ಒಪ್ಪಿಕೊಳ್ಳುವೆ. ಇದು ಅವರಿಗೆ ಸಲ್ಲುವ ಕ್ರೆಡಿಟ್.

*‘ರಾಜ ರಾಜೇಂದ್ರ’ನ ಮೂಲಕ ಗಾಯಕನೂ ಆಗಿದ್ದೀರಿ?
ನನ್ನ ಗಾಯಕ ಎಂದು ಕರೆದರೇ ಅದೇ ಒಂದು ಕಾಮಿಡಿ. ಪ್ರೀತಿಯ ಒತ್ತಡಕ್ಕೆ ಮಣಿದು ಗಾಯಕನಾಗಿದ್ದು. ಸಂಗೀತ ನಿರ್ದೇಶಕ
ಅರ್ಜುನ್ ಜನ್ಯ ನಾಲ್ಕು ವರುಷಗಳಿಂದ ನನ್ನ ಹಾಡಿಸಲು ಪ್ರಯತ್ನಿಸುತ್ತಿದ್ದರು. ಅದು ಈಗ ಕೈಗೂಡಿದೆ. ‘ನಿಮಗೆ ಸಿನಿಮಾ ಎಷ್ಟು ಮುಖ್ಯವೋ ನನಗೆ ನನ್ನ ಆಲ್ಬಂ ಸಹ ಅಷ್ಟೇ ಮುಖ್ಯ. ಸ್ನೇಹಿತರಂತೆ ಮಜಾ ಮಾಡಿಕೊಂಡು
ಹಾಡೋಣ’ ಎಂದು ಜನ್ಯ ಹೇಳಿದರು. ಅವರ ಪ್ರೀತಿಯ ಒತ್ತಾಯಕ್ಕೆ ಕಟ್ಟುಬಿದ್ದು
ಗಾಯಕನಾದೆ.

* 2014 ನಿಮ್ಮ ಪಾಲಿಗೆ ಆಶಾದಾಯಕ; 2015?
2015ನ್ನು ‘ರಾಜ ರಾಜೇಂದ್ರ’ನ ಮೂಲಕ ಆರಂಭಿಸುತ್ತಿದ್ದು ಆ ಮೂಲಕ ಆಶಾಭಾವನೆ ಇದೆ. ಅದನ್ನು ದೃಢೀಕರಿಸುವುದು ಪ್ರೇಕ್ಷಕ. ಈಗ ಆರಂಭವಾಗಿರುವ ‘ಬುಲೆಟ್ ಬಸ್ಯ’ ಚಿತ್ರ ನನ್ನಲ್ಲಿ ಆಶಾಭಾವ ಹೆಚ್ಚಿಸಿದೆ.

*ನಿರ್ದೇಶಕ ಜಯತೀರ್ಥ ಮತ್ತು ನೀವು ಇಬ್ಬರು ವಿರುದ್ಧ ಧ್ರುವದಂತೆ ಕಾಣಿಸುತ್ತಿದ್ದೀರಿ. ‘ಬುಲೆಟ್ ಬಸ್ಯ’ ಯಾವ ರೀತಿ ಸಾಗುವ ಕಥೆ?
ಆ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇದು ಪಕ್ಕಾ ಕರ್ಮರ್ಷಿಯಲ್ ಚಿತ್ರ. ಜನರು ಶರಣ್‌ನನ್ನು ಯಾವ ರೀತಿ ಇಷ್ಟಪಟ್ಟಿದ್ದರೋ ಅದೇ ಶರಣ್ ಚಿತ್ರದಲ್ಲಿರುತ್ತಾನೆ. ಜಯತೀರ್ಥ ಯಾವ ರೀತಿ ಚಿತ್ರ ಮಾಡಿಕೊಂಡು ಬಂದಿರುವರೋ ಅದೇ ಜಯತೀರ್ಥ ಚಿತ್ರದಲ್ಲಿರುತ್ತಾರೆ. ನಮ್ಮ ಸ್ಥಾನಗಳನ್ನು ನಾವು ಪಲ್ಲಟ ಮಾಡಿಕೊಂಡಿಲ್ಲ. ಶರಣ್ – ಜಯತೀರ್ಥ ಇಬ್ಬರ ಸ್ವಂತಿಕೆಯೂ ಇರುವ ಚಿತ್ರ ‘ಬುಲೆಟ್ ಬಸ್ಯ’.

Write A Comment