ಮನೋರಂಜನೆ

ಗೋವುಗಳನ್ನು ಸಂರಕ್ಷಿಸುವ ಸಂದೇಶದ ‘ಗೋಪಾಲ’ ಚಿತ್ರೀಕರಣ ಪೂರ್ಣ

Pinterest LinkedIn Tumblr

go

ಚಿತ್ರೀಕರಣ ಪೂರ್ಣಗೊಳಿಸಿದ ಸಂತಸ ‘ಗೋಪಾಲ’ ಚಿತ್ರತಂಡದ ಎಲ್ಲರಲ್ಲೂ ಕಾಣಿಸುತ್ತಿತ್ತು. ನಾಗತಿಹಳ್ಳಿ ಚಂದ್ರಶೇಖರ್ ಅವರ ಗರಡಿಯಲ್ಲಿ ಕೆಲಸ ಮಾಡಿರುವ ವಸಂತರಾಜ್ ನಿರ್ದೇಶನದ ಮೊದಲ ಚಿತ್ರ ಈ ‘ಗೋಪಾಲ’. ‘ಪೂಜ್ಯವೆನಿಸಿರುವ ಗೋವುಗಳನ್ನು ಸಂರಕ್ಷಿಸುವ ಸಂದೇಶ ರವಾನಿಸುವುದೇ ಚಿತ್ರದ ಮುಖ್ಯ ಉದ್ದೇಶ’ ಎಂದರು ನಿರ್ದೇಶಕರು.

ನಿರ್ದೇಶಕರ ಮಾತನ್ನು ಒಪ್ಪದ ಪತ್ರಕರ್ತರೊಬ್ಬರು, ‘ಮಾನವನ ಆಹಾರ ಕ್ರಮಗಳಲ್ಲಿ ಮಾಂಸ ಭಕ್ಷಣೆಯೂ ಹೌದು. ಅವುಗಳಲ್ಲಿ ಹಸುವೂ ಒಂದು. ಹಿಂದೂ ಸಂಸ್ಕೃತಿಯಲ್ಲಿ ಗೋವು ಪೂಜ್ಯ ಅಂದ ಮಾತ್ರಕ್ಕೆ, ಗೋ ಮಾಂಸ ತಿನ್ನಬಾರದು ಎಂದರೆ ಹೇಗೆ? ವಯಸ್ಸಾದ ಅಥವಾ ಗೊಡ್ಡು ಹಸುಗಳನ್ನು ಮಾರಬಾರದು ಎಂಬುದು ಎಷ್ಟು ಸರಿ? ಕಡು ಬಡವನೊಬ್ಬ ತುತ್ತು ಅನ್ನಕ್ಕಾಗಿ ಹಸುವನ್ನು ಮಾರುವ ಪರಿಸ್ಥಿತಿಯಲ್ಲಿ ಆತ ತನ್ನ ಹೊಟ್ಟೆಪಾಡು ನೋಡಬೇಕೋ, ಗೋ ಶಾಲೆ ಕಟ್ಟಿ ಅದನ್ನು ರಕ್ಷಿಸಬೇಕೋ? ಮನುಷ್ಯನ ಬದುಕಿಗಿಂತ ಪ್ರಾಣಿಯ ಪೂಜ್ಯತೆಯೇ ಹೆಚ್ಚೇ?’ ಎಂದು ಪ್ರಶ್ನೆಪತ್ರಿಕೆ ಮುಂದಿಟ್ಟರು.

ಪತ್ರಕರ್ತರ ಪ್ರಶ್ನೆಗಳಿಗೆ ನಿರ್ದೇಶಕರು– ‘ನಾನು ಗೋ ಶಾಲೆ ಕಟ್ಟಿ ಹಸುಗಳನ್ನು ಸಂರಕ್ಷಿಸೇಕು ಎಂಬುದನ್ನು ಒತ್ತಾಯಪೂರ್ವಕವಾಗಿ ಹೇಳುತ್ತಿಲ್ಲ. ನಾಯಕ ಚಿಕ್ಕವನಿದ್ದಾಗನಿಂದಲೂ ಹಸುಗಳ ಬಗ್ಗೆ ಅತಿಯಾದ ಪ್ರೀತಿ ಹೊಂದಿದವನಾಗಿದ್ದು ಗೋವನ್ನು ಸಂರಕ್ಷಿಸಲು ಸಫಲನಾಗುತ್ತಾನೆ. ಅದಕ್ಕಾಗಿ ಆತ ಹೋರಾಟದ ಹಾದಿ ಹಿಡಿಯುವುದಿಲ್ಲ. ಇದು ನನ್ನ ಚಿತ್ರದ ಕಥೆ’ ಎಂದು ಸಮರ್ಥಿಸಿಕೊಂಡರು.

ಮರಾಠಿ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದ ವೇಣು ಶೆಟ್ಟಿ ಕನ್ನಡದಲ್ಲಿ ಗೋಪಾಲಕನಾಗಿದ್ದಾರೆ. ನಾಯಕಿಯ ಪಾತ್ರಕ್ಕೆ ಅರ್ಪಿತಾ ಗೌಡ ಆಡಿಷನ್ ಮೂಲಕ ಆಯ್ಕೆಯಾದವರು. ಶ್ರೀನಿವಾಸಮೂರ್ತಿ, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ, ಉಷಾ ಭಂಡಾರಿ, ಜ್ಯೋತಿ ಗೌಡ ಮುಂತಾದವರು ತಾರಾಗಣದಲ್ಲಿದ್ದಾರೆ. ವಿದ್ಯಾಭೂಷಣತೀರ್ಥರು ಚಿತ್ರದಲ್ಲಿ ನಟಿಸಿರುವುದು ವಿಶೇಷ.

ನಾಯಕನಿಗೆ ಮೊದಲ ಗೋವನ್ನು ದಾನ ನೀಡುವ ಪಾತ್ರದಲ್ಲಿ ವಿದ್ಯಾಭೂಷಣ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಹಣ ಹೂಡಿರುವ ಸ್ನೇಹಲ್ ವ್ಯಾಸ್ ಮುಂಬೈನವರು. ಐದು ಹಾಡುಗಳಿಗೆ ಪ್ರಸಾದ್ ಕನ್ಯಮಡುವು ಸಂಗೀತ ನೀಡಿದ್ದಾರೆ. ಬಿ.ಎಲ್. ವೇಣು ಅವರ ಛಾಯಾಗ್ರಹಣವಿದೆ.

Write A Comment