ಮನೋರಂಜನೆ

ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಸಿನಿಮಾಕ್ಕೆ ದರ ನಿಯಂತ್ರಣ: ನಿರ್ದೇಶಕ ರಾಜೇಂದ್ರಸಿಂಗ್ ಬಾಬು

Pinterest LinkedIn Tumblr

pvec040215KSS MSM 08

ಶ್ರವಣಬೆಳಗೊಳ: ‘ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ತಮಿಳುನಾಡಿನಲ್ಲಿರುವಂತೆ 120 ರೂಪಾಯಿ ದರ ನಿಗದಿಪಡಿಸಬೇಕು ಹಾಗೂ ವರ್ಷಕ್ಕೆ ಕನಿಷ್ಠ 150 ದಿನವನ್ನಾದರೂ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವಂತೆ ಸರ್ಕಾರ ನಿಯಮ ರೂಪಿಸಬೇಕು’ ಎಂದು ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಆಗ್ರಹಿಸಿದರು.

ಇಲ್ಲಿನ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ನಡೆಯುತ್ತಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಗಳವಾರ ನಡೆದ ‘ಕನ್ನಡ ಚಲನಚಿತ್ರ’ ಕುರಿತ ಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.
‘ಪ್ರೇಕ್ಷಕರು ಹಾಗೂ ಮಾಧ್ಯಮಗಳು ‘ಅಪ್ಪ ಲೂಸಾ, ಅಮ್ಮ ಲೂಸಾ…’ ಎಂಬಂತಹ ಅರ್ಥವಿಲ್ಲದ ಹಾಡುಗಳನ್ನು ವಿರೋಧಿಸಬೇಕು. ಆಗ ಮಾತ್ರ ಸಿನಿಮಾ ರಂಗದಲ್ಲಿರುವವರಿಗೆ ಭಯ ಬರುತ್ತದೆ. ಇದರಿಂದ ಸಹಜವಾಗಿಯೇ ಸದಭಿರುಚಿಯ ಚಿತ್ರಗಳು ಹಾಗೂ ಹಾಡುಗಳು ಹೊರಬರುತ್ತವೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಕನ್ನಡದ ಚಿತ್ರ ನಿರ್ದೇಶಕರು, ನಿರ್ಮಾಪಕರು ಹಾಗೂ ನಟರು ಮೊದಲು ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ತಮಿಳು ಕ್ಯಾಸೆಟ್‌ಗಳ ಆಕರ್ಷಣೆಯತ್ತ ವಾಲದೇ ಕನ್ನಡ ಪುಸ್ತಕಗಳನ್ನು ಕೈಯಲ್ಲಿಡಿದರೆ ಸಾಹಿತ್ಯಕ್ಕೂ , ಸಿನಿಮಾಕ್ಕೂ ಸಂಬಂಧ ಏರ್ಪಡುತ್ತದೆ’ ಎಂದು ವಿಶ್ಲೇಷಿಸಿದರು. ಅಸ್ಪೃಶ್ಯರಂತೆ ಕಾಣಬಾರದು- ಆಗ್ರಹ: ಗೋಷ್ಠಿಯಲ್ಲಿ ‘ಚಿತ್ರ ಸಾಹಿತ್ಯ’ ಕುರಿತು ಮಾತನಾಡಿದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ‘ಗಂಭೀರವಾದ ಸಾಹಿತ್ಯ ವಲಯ ಸಿನಿಮಾವನ್ನು ಅಸ್ಪೃಶ್ಯರಂತೆ ಕಾಣುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಿನಿಮಾ ಕ್ಷೇತ್ರಕ್ಕೆ ಪ್ರಧಾನ ವೇದಿಕೆ ಬದಲಾಗಿ ಸಮಾನಾಂತರ ವೇದಿಕೆ ನೀಡಿದ್ದು, ಈ ಮಾನಸಿಕ ಸ್ಥಿತಿಯಿಂದಾಗಿಯೇ. ಇದು ತೊಲಗಬೇಕು. ಇನ್ನಾದರೂ, ಸಿನಿಮಾ ಮತ್ತು ಸಾಹಿತ್ಯ ಪರಸ್ಪರ ಗೌರವದಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು. ‘ಲೇಖಕರು ತಮ್ಮ ಕೃತಿ ಇರುವಂತೆಯೇ ಸಿನಿಮಾದಲ್ಲಿ ಮೂಡಬೇಕು ಎಂದು ಬಯಸುವುದು ತಪ್ಪು. ಏಕೆಂದರೆ, ಸಾಹಿತ್ಯದ ವ್ಯಾಕರಣವೇ ಬೇರೆ, ಸಿನಿಮಾದ ವ್ಯಾಕರಣವೇ ಬೇರೆ. ಹಾಗೆಂದು, ನಿರ್ದೇಶಕ ತನ್ನ ಮನಸ್ಸಿಗೆ ಬಂದಂತೆ ಕೃತಿಯನ್ನು ಸಿನಿಮಾದಲ್ಲಿ ಮಾರ್ಪಡಿಸಬಾರದು’ ಎಂದರು.

‘ಮೊದಲು ಒಳ್ಳೆಯ ಕಾದಂಬರಿಗಳು ಬರುತ್ತಿದ್ದವು. ಆದರೆ, ಈಗ ಬರುತ್ತಿಲ್ಲ. ಮೊದಲು ಎಲ್ಲರ ಕೈಯಲ್ಲೂ ಕಾದಂಬರಿಗಳು ಇದ್ದವು. ಆದರೆ, ಈಗ ಎಲ್ಲರ ಕೈಯಲ್ಲೂ ಟಿವಿ ರಿಮೋಟ್‌ಗಳಿವೆ. ಹಾಗಾಗಿ, ಸಹಜವಾಗಿ ಮೌಲಿಕ ಕಾದಂಬರಿಗಳ ಕೊರತೆ ಕಾಡುತ್ತಿದೆ’ ಎಂದು ವಿವರಿಸಿದರು.

ಪ್ರಧಾನ ನಾಯಕ ನಟರಿಗೆ ಕಿವಿಮಾತು: ನಿರ್ದೇಶಕ ಟಿ.ಎಸ್. ನಾಗಾಭರಣ ‘ರಿಮೇಕ್ – ಡಬ್ಬಿಂಗ್’ ಕುರಿತು ಮಾತನಾಡಿ, ‘ಸಿನಿಮಾ ಕಂಟೆಂಟ್ ಡಿಸೈಡರ್’ ಇಂದು ನಿರ್ಮಾಪಕ, ನಿರ್ದೇಶಕರಾಗದೇ ನಾಯಕ ನಟರಾಗಿದ್ದಾರೆ. ಅವರು ತಮಗೂ ಸಾಮಾಜಿಕ ಜವಾಬ್ದಾರಿ ಇದೆ ಎಂದು ಅರಿತು ಸಿನಿಮಾ ಕಂಟೆಂಟ್‌ಗಳಲ್ಲಿ ಕನ್ನಡದ ಶಕ್ತಿಯನ್ನು ತುಂಬಬೇಕು’ ಎಂದು ಕಿವಿಮಾತು ಹೇಳಿದರು.

‘ರಿಮೇಕ್ ಸಿನಿಮಾ ಮಾರುಕಟ್ಟೆಯನ್ನು ಸಂಕುಚಿತಗೊಳಿಸುತ್ತದೆ. ಯಾವಾಗ ಮಾರು­ಕಟ್ಟೆ ವಿಸ್ತರಿಸುವುದಿಲ್ಲವೋ ಆಗ ಸಹಜ­ವಾಗಿಯೇ ಚಿತ್ರೋದ್ಯಮ ಕುಬ್ಜವಾಗು­ತ್ತದೆ. ಇದರಿಂದಾಗಿ ಇಂದು ನಾವು ವಿಕ್ಷಿಪ್ತ ಹಾದಿ­ಯಲ್ಲಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘2009-12ರವರೆಗೆ ಪ್ರತಿ ವರ್ಷ ಕೇವಲ ಎರಡರಿಂದ ಮೂರು ರಿಮೇಕ್ ಚಿತ್ರಗಳಷ್ಟೇ ಗೆದ್ದಿವೆ. ಆದರೆ, ಇಂದು ಬರುತ್ತಿರುವ ಶೇ 70ರಷ್ಟು ಚಿತ್ರಗಳು ರಿಮೇಕ್ ಇಲ್ಲವೇ ರೀಮಿಕ್ಸ್ ಆಗಿರುತ್ತದೆ. ಇನ್ನಾದರೂ ರಿಮೇಕ್‌ಗಳನ್ನು ಬಿಟ್ಟು ಸ್ವಮೇಕ್‌ನತ್ತ ಸಿನಿಮಾ ಜಗತ್ತು ಹೊರಳಬೇಕು’ ಎಂದು ಆಶಿಸಿದರು.

ನಿರ್ದೇಶಕಿ ಸುಮನಾ ಕಿತ್ತೂರು ‘ಕನ್ನಡ ಚಿತ್ರರಂಗ ಸ್ಥಿತ್ಯಂತರದ ನೆಲೆಯಲ್ಲಿ’ ವಿಷಯ ಕುರಿತು ಮಾತನಾಡಿದರು.
ನಂತರ ನಡೆದ ಸಂವಾದಕ್ಕೆ ಮೈಕ್ ಬೇಕು ಎಂದು ವೇದಿಕೆ ಮೇಲೆಯೇ ನಿರೂಪಕರು ಕೇಳಿದರೂ ಯಾರೊಬ್ಬರು ಮೈಕ್ ಒದಗಿಸುವ ಗೊಡವೆಗೆ ಹೋಗದೇ ಇದ್ದದ್ದು ಗಮನ ಸೆಳೆಯಿತು.

ಸಂವಾದದಲ್ಲಿ…: ಹಳ್ಳಿ ಭಾಷೆ ಸಿನಿಮಾದಲ್ಲಿ ಲೇವಡಿಗೆ ಒಳಗಾಗುತ್ತಿರುವುದು, ಪ್ರಶಸ್ತಿಗಳಿಗಾಗಿ ಸಿನಿಮಾ ಮಾಡುವುದು ಹಾಗೂ ಅರ್ಥವಿಲ್ಲದ ಹಾಡುಗಳ ಕುರಿತು ಮಂಜುನಾಥ ಅದ್ದೆ ಬೇಸರ ವ್ಯಕ್ತಪಡಿಸಿದರು. ಎನ್.ಆರ್. ನಂಜುಂಡೇಗೌಡ ಅವರು ‘ಮಕ್ಕಳ ಚಿತ್ರ’ಗಳ ಕುರಿತು ಗೋಷ್ಠಿ ಇರಬೇಕಿತ್ತು ಹಾಗೂ ಮಕ್ಕಳ ಚಿತ್ರಗಳು ಹೆಚ್ಚು ಹೆಚ್ಚು ಬರುವಂತಾಗಬೇಕು ಎಂದು ಆಗ್ರಹಿಸಿದರು.

ಹರಿಗೋಪಾಲ್ ಅವರು, ನೋಡುವಂತಹ ಸಿನಿಮಾ ತೆಗೆಯಿರಿ ಎಂದರೆ; ಶಿವಾನಂದ ತಗಡೂರು ಅವರು, ಕುಟುಂಬವೆಲ್ಲಾ ಒಟ್ಟಿಗೆ ಕುಳಿತು ನೋಡುವಂತಹ ಸಿನಿಮಾ ನಿರ್ಮಿಸಿ ಎಂದು ಮನವಿ ಮಾಡಿದರು. ಅಶೋಕ ಬಾದರದಿನ್ನಿ, ಎಚ್.ಎಲ್. ಜನಾರ್ದನ್ ಸಂವಾದದಲ್ಲಿ ಪಾಲ್ಗೊಂಡರು.

‘ಸಮಾನಾಂತರ ವೇದಿಕೆ’ ಬಹಿಷ್ಕರಿಸಿದ ಚಿತ್ರೋದ್ಯಮ
ಪ್ರಸ್ತುತ ಸಮ್ಮೇಳನದ ಹೊಸ ಪರಿಕಲ್ಪನೆ ಸಮಾನಾಂತರ ವೇದಿಕೆಯನ್ನು ಚಿತ್ರೋದ್ಯಮ ತಂಡ ಮಂಗಳವಾರ ಬೆಳಿಗ್ಗೆ ಬಹಿಷ್ಕರಿಸಿತು.

ಸೋಮವಾರ ನಿಗದಿಯಂತೆ ಬೆಳಿಗ್ಗೆ 9.30ಕ್ಕೆ ಕನ್ನಡ ಚಲನಚಿತ್ರ ಕುರಿತು ಗೋಷ್ಠಿ ಇಲ್ಲಿನ ಸಮಾನಾಂತರ ವೇದಿಕೆ ಎಂದು ಹೆಸರಾದ ಡಾ.ಎಸ್.ಕೆ. ಕರೀಂ ಖಾನ್ ಮಹಾಮಂಟಪದ ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ವೇದಿಕೆಯಲ್ಲಿ ನಡೆಯಬೇಕಿತ್ತು. ಆದರೆ, ಸಮಯ 10.45 ಆದರೂ ಕಾರ್ಯಕ್ರಮ ಆರಂಭಗೊಳ್ಳಲಿಲ್ಲ. ‘ವೇದಿಕೆ ಸರಿಯಾಗಿಲ್ಲ, ಪ್ರಧಾನ ವೇದಿಕೆಯಲ್ಲಿ ಅವಕಾಶ ಕಲ್ಪಿಸಬೇಕು’ ಎಂದು ಆಕ್ಷೇಪಿಸಿ ಚಿತ್ರೋದ್ಯಮದವರು ಸಮಾನಾಂತರ ವೇದಿಕೆಯನ್ನು ಬಹಿಷ್ಕರಿಸಿದರು.

ನಂತರ ಪ್ರಧಾನ ವೇದಿಕೆಯಲ್ಲಿ ಮಧ್ಯಾಹ್ನ ಒಂದು ಗಂಟೆ ಕಳೆದರೂ ಸಿನಿಮಾ ಗೋಷ್ಠಿ ಆರಂಭವಾಗದ ಕಾರಣ ಹಿರಿಯ ನಟ ಶಿವರಾಂ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜಾ ಹಾಗೂ ಇನ್ನಿತರರು ಸಮ್ಮೇಳನದಿಂದ ನಿರ್ಗಮಿಸಿದರು.

Write A Comment