ಮನೋರಂಜನೆ

ಕರ್ನಾಟಕದ ಅರವಿಂದ್‌ ಸ್ವರ್ಣ ಸಾಧನೆ: ರಾಷ್ಟ್ರೀಯ ಕ್ರೀಡಾಕೂಟ: ಚಿನ್ನಕ್ಕೆ ‘ಗುರಿ’ ಇಟ್ಟ ವಿಜಯ್, ಅಗ್ರಸ್ಥಾನದಲ್ಲಿ ಹರಿಯಾಣ

Pinterest LinkedIn Tumblr

pvec04xvijay

ತಿರುವನಂತಪುರ: ಉತ್ತಮ ವೇಗ ತೋರಿದ ಕರ್ನಾಟಕದ ಎಂ. ಅರವಿಂದ್‌ ಇಲ್ಲಿ ನಡೆಯುತ್ತಿರುವ 35ನೇ ರಾಷ್ಟ್ರೀಯ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಒಂದು ಚಿನ್ನ ಮತ್ತು ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

ಮಂಗಳವಾರ ನಡೆದ 400ಮೀ. ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ ಅರವಿಂದ್‌ ಸ್ವರ್ಣ ಸಾಧನೆ ಮಾಡಿದರು. ಅವರು ನಾಲ್ಕು ನಿಮಿಷ 37.75ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಜೊತೆಗೆ ತಮ್ಮ ಹಿಂದಿನ ದಾಖಲೆಯನ್ನೂ ಉತ್ತಮಪಡಿಸಿಕೊಂಡರು.
ಪಶ್ವಿಮ ಬಂಗಾಳದ ಸುಪ್ರಿಯಾ ಮಂಡಲ್‌ (ಕಾಲ: 4:38.99ಸೆ.) ಮತ್ತು ಇದೇ ರಾಜ್ಯದ ಸನು ಬಾಬಿನಾಥ್‌ (ಕಾಲ: 4:42.28ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚು ತಮ್ಮದಾಗಿಸಿಕೊಂಡರು. ಅರವಿಂದ್‌ಗೆ ಇನ್ನೊಂದು ಪದಕ 4X100ಮೀ. ರಿಲೇ ಸ್ಪರ್ಧೆಯಲ್ಲಿ ಲಭಿಸಿತು.

ಅರವಿಂದ್‌, ಎಂ. ಅವಿನಾಶ್, ಎಸ್‌.ಪಿ. ಲಿಖಿತ್‌ ಮತ್ತು ಮೊಹಮ್ಮದ್‌ ಯಾಕೂಬ್‌ ಸಲೀಮ್‌  ಅವರಿದ್ದ ಕರ್ನಾಟಕ ತಂಡ ಮೂರು ನಿಮಿಷ 58.36 ಸೆಕೆಂಡ್‌ ಗಳಲ್ಲಿ ಗುರಿ ತಲುಪಿ ಕಂಚು ಪಡೆಯಿತು. ಈ ವಿಭಾಗದ ಚಿನ್ನ ಮಧ್ಯಪ್ರದೇಶ (ಕಾಲ: 3:48.56ಸೆ.) ಪಾಲಾ ದರೆ, ಕೇರಳ (ಕಾಲ: 3:53.22ಸೆ.) ಬೆಳ್ಳಿ ಗೆದ್ದಿತು.

ವಿಜಯ್‌ಗೆ ಚಿನ್ನ: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಶೂಟರ್‌ ವಿಜಯ್‌ ಕುಮಾರ್‌ 25ಮೀ. ಸೆಂಟರ್ ಫೈರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಒಟ್ಟು 583 ಪಾಯಿಂಟ್ಸ್‌ ಗಳಿಸಿ ಚಿನ್ನ ಗೆದ್ದುಕೊಂಡರು. ಹಿಮಾಚಲ ಪ್ರದೇಶದ ಸಮರೇಶ್ ಜಂಗ್‌ (576 ಪಾಯಿಂಟ್ಸ್‌) ಮತ್ತು ಸರ್ವಿಸಸ್‌ನ ಪೆಂಬಾ ತಮಾಂಗ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಪಡೆದರು.

ಅಗ್ರಸ್ಥಾನದಲ್ಲಿ ಹರಿಯಾಣ: ಸೋಮವಾರ ಎರಡನೇ ಸ್ಥಾನಕ್ಕೆ ಕುಸಿದಿದ್ದ ಹರಿಯಾಣ ಪಾಯಿಂಟ್‌ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿದೆ. ಈ ರಾಜ್ಯ 13 ಚಿನ್ನ, 4 ಬೆಳ್ಳಿ ಮತ್ತು 3 ಕಂಚು ಗೆದ್ದಿದೆ. ಸರ್ವಿಸಸ್‌ ಸ್ಪೋರ್ಟ್ಸ್‌ ಕಂಟ್ರೋಲ್‌ ಬೋರ್ಡ್‌ (ಒಟ್ಟು 20 ಪದಕ) ಎರಡನೇ ಸ್ಥಾನದಲ್ಲಿದೆ. ಕಾಮನ್‌ವೆಲ್ತ್‌ ಕೂಟದಲ್ಲಿ ಬೆಳ್ಳಿ ಗೆದ್ದಿದ್ದ ವಿಕಾಸ್‌ ಠಾಕೂರ್‌ (85 ಕೆ.ಜಿ.) ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದರು. ಅವರು ಒಟ್ಟು 339 ಕೆ.ಜಿ. ಭಾರ ಎತ್ತಿದರು.

ಇತಿಹಾಸ ಬರೆದ ಕೋಶಿ
ಎಲಿಜಬೆತ್‌ ಸೂಸಾನ್‌ ಕೋಶಿ ಮಂಗಳವಾರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಈ ಕೂಟದ ಶೂಟಿಂಗ್‌ನಲ್ಲಿ ಚಿನ್ನ ಗೆದ್ದ ಕೇರಳದ ಮೊದಲ ಶೂಟರ್ ಎನ್ನುವ ಕೀರ್ತಿಯನ್ನು ಕೋಶಿ ತಮ್ಮದಾಗಿಸಿಕೊಂಡರು.

ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಜಯಿಸಿದ್ದ ಕೋಶಿ ಇಲ್ಲಿ 50ಮೀ. ರೈಫಲ್‌ ಪ್ರೊನೊ ಸ್ಪರ್ಧೆಯಲ್ಲಿ ಒಟ್ಟು 618.5 ಪಾಯಿಂಟ್ಸ್‌ ಗಳಿಸಿ ಈ ಸಾಧನೆ ಮಾಡಿದರು. ‘ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ. ಇಲ್ಲಿ ಬಂಗಾರ ಗೆಲ್ಲುಬಹುದು ಎಂದು ಖಂಡಿತವಾಗಿಯೂ ಅಂದುಕೊಂಡಿರಲಿಲ್ಲ. ನಾನು ಗೆದ್ದ ಪದಕ ನಮ್ಮ ರಾಜ್ಯಕ್ಕೆ ಅರ್ಪಿಸುತ್ತೇನೆ’ ಎಂದು ಕೋಶಿ ಸಂತೋಷ ಹೇಳಿದ್ದಾರೆ.

ಮಯೂರೇಶ್‌ ಕುಟುಂಬಕ್ಕೆ  2 ಲಕ್ಷ ಪರಿಹಾರ
ತಿರುವನಂತಪುರ (ಪಿಟಿಐ): ಶಂಕುಮುಗಮ್‌ ಬೀಚ್‌ನಲ್ಲಿ ಈಜಲು ಹೋಗಿ ಸೋಮವಾರ ಪ್ರಾಣ ಕಳೆದುಕೊಂಡ ಮಹಾರಾಷ್ಟ್ರದ ನೆಟ್‌ಬಾಲ್‌ ಆಟಗಾರ ಮಯೂರೇಶ್‌ ಪವಾರ್‌ ಅವರ ಕುಟುಂಬಕ್ಕೆ ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಮಂಗಳವಾರ  2 ಲಕ್ಷ ಪರಿಹಾರ ಘೋಷಿಸಿದೆ.

‘ಮಯೂರೇಶ್‌ ಅವರ ಅಕಾಲಿಕ ಮರಣ ನೋವು ತಂದಿದೆ. ಅವರ ಕುಟುಂಬದವರಿಗೆ ಭಗವಂತ  ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ಭಾರತ ಒಲಿಂಪಿಕ್‌ ಸಂಸ್ಥೆ ವತಿಯಿಂದ ಮಯೂರೇಶ್‌ ಕುಟುಂಬಕ್ಕೆ  2 ಲಕ್ಷ ಪರಿಹಾರ ನೀಡಲಿದ್ದೇವೆ’ ಎಂದು ಕೆಎಒ ಪ್ರಧಾನ ಕಾರ್ಯದರ್ಶಿ ರಾಜೀವ್‌ ಮೆಹ್ತಾ ತಿಳಿಸಿದ್ದಾರೆ.

Write A Comment