ಚಿತ್ರ: ‘ಮಿರ್ಚಿ ಮಂಡಕ್ಕಿ ಕಡಕ್ ಚಾಯ್’
ತಾರಾಗಣ: ಪ್ರದೀಪ್, ನಮೃತಾ, ಸಚಿನ್, ವಿಶಾಲ್, ಅಪೂರ್ವ, ನಿಮಿಷ, ಬಸವಲಿಂಗಯ್ಯ ಹಿರೇಮಠ, ವಿಶ್ವೇಶ್ವರಿ ಇತರರು
ನಿರ್ದೇಶನ: ಸಂಜೋತಾ
ನಿರ್ಮಾಪಕರು: ಸಂಜೋತಾ
‘ಪ್ರೀತಿಸೋದು ಅಂದ್ರೆ ಅದು ಮ್ಯಾನೇಜ್‌ಮೆಂಟ್ ಥರ ಅಂತ ಅವನು ಅಂದ್ಕೊಂಡಿದಾನೆ. ಅದು ಹೃದಯದ ಮಾತು ಅನ್ನೋದು ಗೊತ್ತಿಲ್ಲ’ ಎಂಬುದು ಮಿಥುನ್ ಕುರಿತು ರಾಧಿಕೆಯ ದೂರು. ಈ ಒಂದೇ ಮಾತಿನಲ್ಲಿ ಇಣುಕುವ ಪ್ರೀತಿ, ಮ್ಯಾನೇಜ್‌ಮೆಂಟ್, ಪ್ರೇಮಿಗಳ ಮಧ್ಯೆ ಸೃಷ್ಟಿಯಾಗುವ ಕಂದರ ಇತ್ಯಾದಿ ಗಮನಿಸಿದರೆ ಚಿತ್ರಕಥೆ ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ಮಿರ್ಚಿ, ಮಂಡಕ್ಕಿ ಹಾಗೂ ಕಡಕ್ ಚಾಯ್‌ನಂತಿರುವ ಮೂರು ಪಾತ್ರಗಳ ಮೂಲಕ ಆ ಕಥೆಯನ್ನು ಸರಳಗೊಳಿಸಿ ತೋರಿಸಿದ್ದಾರೆ, ನಿರ್ದೇಶಕಿ ಸಂಜೋತಾ. ಒಂದೆರಡು ವರ್ಷಗಳ ಹಿಂದೆ ಹಲವು ದೇಶಗಳನ್ನು ಕಾಡಿದ್ದ ಆರ್ಥಿಕ ಹಿಂಜರಿತವು (ರಿಸೆಶನ್), ಲಕ್ಷಾಂತರ ಜನರ ಬದುಕನ್ನೂ ಕಂಗೆಡಿಸಿತ್ತು. ಮೈಮುರಿದು ದುಡಿದು, ರಾಶಿ ರಾಶಿ ದುಡ್ಡು ಎಣಿಸುತ್ತಿದ್ದ ಯುವಕ– ಯುವತಿಯರ ದೊಡ್ಡ ಕನಸುಗಳು ದಿನ ಬೆಳೆಗಾಗುವಷ್ಟರಲ್ಲಿ ನೆಲಸಮವಾಗುತ್ತಿದ್ದ ಸ್ಥಿತಿ ಅದು.
ಮಿರ್ಚಿಯಂತೆ ಚುರುಕಾಗಿರುವ ಮಿಥುನ್, ಮಂಡಕ್ಕಿಯಂತೆ ಸೌಮ್ಯವಾಗಿರುವ ಮನೋಜ್ ಹಾಗೂ ಕಡಕ್ ಚಾಯ್‌ನ ಹಾಗೆ ವಿಶಿಷ್ಟ ಸ್ವಭಾವದ ಕಪಿಲಾ– ಇಂಥದೇ ಬಿಕ್ಕಟ್ಟಿಗೆ ಸಿಲುಕಿದವರು. ಈ ಮೂವರ ಬದುಕಿನ ಪರಿಗಳನ್ನು ತೀರಾ ಸಹಜವಾದ ನೆಲೆಯಲ್ಲಿ ಸ್ಪರ್ಶಿಸುವ ‘ಮಿರ್ಚಿ…’, ಕಮರ್ಷಿಯಲ್ ಸೂತ್ರಗಳಿಗೆ ದೂರದಲ್ಲೇ ನಿಲ್ಲುತ್ತದೆ.
ಮಹತ್ವಾಕಾಂಕ್ಷೆ ಹೊಂದಿರುವ ಇಬ್ಬರು ಯುವಕರು ಮತ್ತೊಬ್ಬ ಯುವತಿಯ ಕಥೆಯಲ್ಲಿ ನಾವೆಲ್ಲ ದಿನನಿತ್ಯ ನೋಡುವ ಪಾತ್ರಗಳೇ ತುಂಬಿಕೊಂಡಿವೆ. ರಿಸೆಶನ್ ಎದುರಿಸಲು ನಡೆಸುವ ಪ್ರಯತ್ನದಲ್ಲಿ ವಿಫಲವಾಗಿ, ಪರಸ್ಪರ ದೂಷಿಸಿ ಬೇರಾಗುವ ಈ ಮೂವರು ಸ್ನೇಹಿತರ ಸಹಜ ಕಥೆಯಿದು.
ಹೀಗಾಗಿ ಸಿನಿಮಾದ ಬಹುತೇಕ ಸನ್ನಿವೇಶಗಳು ತನ್ನ ಸುತ್ತಲೂ ನಡೆಯುತ್ತಿವೆ ಎಂಬ ಅನುಭವ ಪ್ರೇಕ್ಷಕನಿಗೆ ಆಗುತ್ತದೆ. ಪಕ್ಕದ ಮನೆ ಸರೋಜಾಗೆ ಮನಸೋಲುವ ಮನೋಜ್, ಅಮುಲ್ ಬೇಬಿಯಂತಿರುವ ಮುದ್ದುಕೃಷ್ಣನಿಗೆ ಮನಸ್ಸು ಕೊಡುವ ಕಪಿಲಾ ಹಾಗೂ ನಿಷ್ಠುರವಾದಿ ರಾಧಿಕಾಳ ಮನಗೆಲ್ಲಲು ವಿಫಲನಾಗುವ ಮಿಥುನ್ ಸುತ್ತ ಚಿತ್ರ ಸುತ್ತುತ್ತದೆ.
ಮೂರು ಜೋಡಿಗಳ ಕಥೆಯನ್ನು ಸಮಾನಾಂತರ ನೆಲೆಯಲ್ಲಿ ಬಿಂಬಿಸುವ ‘ಮಿರ್ಚಿ…’ಯಲ್ಲಿ ಉತ್ಪ್ರೇಕ್ಷೆಯಾಗಲೀ, ನಾಟಕೀಯ ಸನ್ನಿವೇಶಗಳಾಗಲೀ ಇಲ್ಲ. ಆದರೆ ಮಾನವ ಸಂಬಂಧಗಳು ಹಾಗೂ ಭಾವನೆಗಳ ತೊಳಲಾಟವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸಬಹುದಿತ್ತು. ನಮ್ರತಾ ಹಾಗೂ ಪ್ರದೀಪ್‌ಗೆ ಹೋಲಿಸಿದರೆ ಸಚಿನ್ ಅಭಿನಯ ಮನಗೆಲ್ಲುತ್ತದೆ. ಉಳಿದಂತೆ ಅಪೂರ್ವ, ನಿಮಿಷ, ವಿಶಾಲ್ ಅಷ್ಟಕ್ಕಷ್ಟೇ. ಮಾಧುರ್ಯ ತುಂಬಿಕೊಂಡಿರುವ ಹಾಡುಗಳಿಂದ ಹರಿಕಾವ್ಯ ಭರವಸೆ ಮೂಡಿಸುತ್ತಾರೆ.
ಪಾತ್ರಗಳಿಗಿಂತ ಚಿತ್ರಕಥೆಯ ಮೇಲೆ ಹೆಚ್ಚು ನಂಬಿಕೆ ಇಟ್ಟಿರುವ ನಿರ್ದೇಶಕಿ ಸಂಜೋತಾ, ನಮ್ಮ ಸುತ್ತಲೂ ಕಾಣುವ ಸಂಗತಿಯನ್ನೇ ಆಧರಿಸಿ ಸಿನಿಮಾ ಮಾಡಿದ್ದಾರೆ. ಸಂದೇಶ, ಉಪದೇಶ ಹಾಗೂ ನಾಟಕೀಯ ದೃಶ್ಯಗಳಿಂದ ಅಂತರ ಕಾಯ್ದುಕೊಂಡಿರುವ ಸಿನಿಮಾ, ಮಿರ್ಚಿ ಹಾಗೂ ಮಂಡಕ್ಕಿ ಮೆಲ್ಲುತ್ತಲೇ ಕಡಕ್ ಚಾಯ್ ಗುಟುಕರಿಸುವ ಅನುಭವವನ್ನೂ ಕೊಡುತ್ತದೆ.