ಮನೋರಂಜನೆ

ಬೇಬಿ (ಹಿಂದಿ): ಥ್ರಿಲ್ಲಾನುಭವ!

Pinterest LinkedIn Tumblr

ಚಿತ್ರ: ಬೇಬಿ (ಹಿಂದಿ)
ತಾರಾಗಣ: ಅಕ್ಷಯ್‌ ಕುಮಾರ್‌, ರಾಣಾ ದಗ್ಗುಬಾಟಿ, ಅನುಪಮ್‌ ಖೇರ್, ಕೆ.ಕೆ. ಮೆನನ್, ಡ್ಯಾನಿ ಡೆನ್‌ಜೊಂಗ್‌ಪಾ, ತಾಪಸಿ ಪನ್ನು, ರಶೀದ್‌ ನಾಜ್‌, ಮಿಕಾಲ್ ಜುಲ್ಫೀಕರ್‌ ಮತ್ತಿತರರು.
ನಿರ್ದೇಶನ: ನೀರಜ್‌ ಪಾಂಡೆ
ನಿರ್ಮಾಪಕರು: ಭೂಷಣ್ ಕುಮಾರ್, ಕೃಷ್ಣಕುಮಾರ್, ಶೀತಲ್‌ ಭಾಟಿಯ

pvec24jan15rjBaby

ಆಧುನಿಕ ಸಂದರ್ಭದಲ್ಲಿ ಭಾರತೀಯ ಸಿನಿಮಾಗಳ ಸ್ಕ್ರೀನ್‌­­ಪ್ಲೇ­ಗಳು ಒಂದೋ ಹೆಚ್ಚು ಬುದ್ಧಿ ಓಡಿಸಿ ತಯಾರಾಗುತ್ತವೆ, ಇಲ್ಲವೇ ಭಾವದ ಗಾಮಿನಿ ಅಡಗಿಸಿಟ್ಟು­ಕೊಂಡು ರೂಪಿ­ತ­ವಾಗು­ತ್ತವೆ. ನೀರಜ್‌ ಪಾಂಡೆ ಮೊದಲಿ­ನಿಂದಲೂ ಬುದ್ಧಿಗೆ ಹೆಚ್ಚು ಕೆಲಸ ಕೊಡುವ ನಿರ್ದೇಶಕ. ಅವರ ‘ವೆಡ್‌ನೆಸ್‌ಡೇ’, ‘ಸ್ಪೆಷಲ್‌ 26’ ಎರಡೂ ಹಿಂದಿ ಸಿನಿಮಾಗಳು ಇದೇ ಜಾಯ­ಮಾನದವು. ಆ ಪಟ್ಟಿಗೆ ಇನ್ನೊಂದು ಅರ್ಥಪೂರ್ಣ ಸೇರ್ಪಡೆ ‘ಬೇಬಿ’.

ಭಯೋತ್ಪಾದನೆಯ ಸೂಕ್ಷ್ಮ ಎಳೆಗಳ ಸಿನಿಮಾ ಎಂದು ಭಾವ­ನಾತ್ಮಕ ದೃಷ್ಟಿಯಿಂದ ಹೇಳಲು ಸಾಧ್ಯವಿಲ್ಲ. ಆದರೆ, ಭಯೋತ್ಪಾ­ದನೆ ಹಿನ್ನೆಲೆಯ ಹಿಡಿದಿಟ್ಟುಕೊಳ್ಳುವ ಥ್ರಿಲ್ಲರ್‌ ಎಂದು ನಿಸ್ಸಂಶಯ­ವಾಗಿ ಹೇಳಬಹುದು.  ತಾವು ಸೃಜಿಸಿದ ಹಲವು ದೃಶ್ಯ­ಗಳಿಗೆ ಅಂತ್ಯಗಳನ್ನು ಒದಗಿಸುವ ಮೂಲಕ ಸಿನಿಮಾಗೆ ‘ಎಪಿ­ಸೋಡಿಕ್‌’ ಗುಣವನ್ನು ನೀರಜ್‌ ಪಾಂಡೆ ದಕ್ಕಿ­ಸಿಕೊಡುತ್ತಾರೆ.

ಕಂತು ಕಂತಾಗಿ ದಾಟಬಲ್ಲ ಸಿನಿಮಾ ಇದಾಗು­ವುದರಿಂದ ಕಥಾನಕ ಲಂಬಿಸಿದರೂ, ಅದು ಅರಿವಿಗೆ ಬಾರದಂತೆ ಮಾಡುವ ನಿರೂಪಣಾ ತಂತ್ರ ಅದು. ಕ್ಯಾಮೆರಾ ಹರಿದಾಡುವ ದೃಷ್ಟಿಕೋನ ಕೂಡ ಥ್ರಿಲ್ಲರ್‌ ಅಂಶಗಳಿಗೆ ಚ್ಯುತಿ ಬಾರದಿರಲಿ ಎಂಬ  ನಿಜದೆಚ್ಚರದಂತೆ ಭಾಸವಾಗುತ್ತದೆ. ಮಾಮೂಲಿ ಕಮರ್ಷಿಯಲ್‌ ಸಿನಿಮಾಗಳ ಸೂತ್ರವನ್ನು ಧಿ­ಕ್ಕರಿಸುವ ನೀರಜ್‌, ಥ್ರಿಲ್ಲರ್‌ ಅಂಶಗಳನ್ನು ಸಿನಿಮಾದ ಉದ್ದಕ್ಕೂ ಉಳಿಸಿಕೊಂಡು ಹೋಗುತ್ತಾರೆ.

ಈ ಅನುಕೂಲಕ್ಕೆ ಅವರು ಸೂಕ್ತ ತಾರಾಬಳಗವನ್ನು ನೆಚ್ಚಿಕೊಂಡಿದ್ದಾರೆ. ಶ್ರೀ ನಾರಾಯಣ್‌ ಸಿಂಗ್‌ ಸಂಕಲನ ಸಿನಿಮಾದ ಓಘದ ಹದವನ್ನು ಕಾಯ್ದಿದೆ. ಸುದೀಪ್‌ ಚಟರ್ಜಿ ಕ್ಯಾಮೆರಾ ಭಾರತ, ನೇಪಾಳ, ಟರ್ಕಿ, ಮಧ್ಯಪ್ರಾಚ್ಯ ಎಲ್ಲೆಡೆ ಓಡಾಡಿ ಬಂದಿದೆಯಾದರೂ ಲೊಕೇಷನ್‌ಗಳು ಅದಕ್ಕೇನೂ ಮುಖ್ಯವಾಗಿಲ್ಲ. ವೇಗ, ಥ್ರಿಲ್‌ ಎರಡಕ್ಕೇ ಆದ್ಯತೆ.

ಗಾಂಭೀರ್ಯದ ವಿಷಯದಲ್ಲಿ ಹೆಚ್ಚು ಸಾಂದ್ರ ಎನ್ನಬಹು­ದಾದ ಈ ಸಿನಿಮಾದಲ್ಲಿ ಅಲ್ಲಲ್ಲಿ ಆಸಕ್ತಿಕರ ‘ರಿಲೀಫ್‌’ಗಳನ್ನೂ ಒದ­ಗಿಸಿದ್ದಾರೆ. ಅವೂ ಶಿಕ್ಷೆ, ದಂಡನೆಯ ಅಭಿವ್ಯಕ್ತಿಯೇ ಆಗು­ವುದು ಆಧುನಿಕ ಹಿಂಸಾಚಾರ ಒಡ್ಡಿರುವ ಆತಂಕದ ತೀವ್ರತೆ­ಯನ್ನು ಬಿಂಬಿಸುತ್ತವೆ. ಮೊದಲಾರ್ಧದಲ್ಲಿ ದೃಶ್ಯಾವಳಿಗಳ ಅತಿ ಚಲನಶೀಲತೆ­ಯಿಂದ ಸಾಗುವ ಸಿನಿಮಾ ಎರಡನೇ ಅರ್ಧದಲ್ಲಿ ದೀರ್ಘಾವಧಿ ಅಂತ್ಯದ ಮೂಲಕ ಗಮನ ಸೆಳೆಯುತ್ತದೆ.

ಮುಂದೇ­ನಾದೀತು ಎನ್ನುವ ಕುತೂಹಲ, ಸಂಸಾರದ ಒತ್ತಡ­ಗಳನ್ನು ಮೀರಿ ಕೆಲಸ ಮಾಡುವ ಪೊಲೀಸ್‌ ನಿಷ್ಠೆ ಎರಡನ್ನೂ ಮೆಲೋಡ್ರಾಮಾ­ಗಳಿಲ್ಲದೆ ಹೇಳಿರುವುದು ನೀರಜ್‌ ಕಸುಬು­ದಾರಿಕೆಗೆ ಸಾಕ್ಷಿ. ಅಕ್ಷಯ್‌ ದೇಹ, ಚಹರೆ ಈ ಪಾತ್ರಕ್ಕೆ ಅಕ್ಷರಶಃ ಹೊಂದುತ್ತದೆ. ರಾಣಾ ದಗ್ಗುಬಾಟಿಗೆ ನಟಿಸಲು ಹೆಚ್ಚೇನೂ ಇಲ್ಲ­ವಾದರೂ ಒಂದು ಪ್ರಮುಖ ಸಿನಿಮಾದ ಭಾಗವಾಗಿದ್ದಾರೆ ಎನ್ನ­ಲಡ್ಡಿ­ಯಿಲ್ಲ. ಅನುಪಮ್‌ ಖೇರ್‌ ಅವರದ್ದು ಎಂದಿನ ಲಹರಿಯ ಅಭಿನಯ.  ಪತ್ತೇದಾರಿ ಕಾದಂಬರಿಯನ್ನು ಓದಿದ ರಸಾನುಭವ ದಕ್ಕಿಸಿಕೊಡುವ ‘ಬೇಬಿ’ ನಿಜಕ್ಕೂ ಭಿನ್ನ.

Write A Comment