ಚಿತ್ರ: ಸಿದ್ಧಾರ್ಥ
ತಾರಾಗಣ: ವಿನಯ್ ರಾಜ್ಕುಮಾರ್, ಅಪೂರ್ವ ಅರೋರಾ, ಆಶಿಷ್ ವಿದ್ಯಾರ್ಥಿ, ಅಚ್ಯುತಕುಮಾರ್, ಅಶ್ವಿನಿ ಗೌಡ, ನಿಕ್ಕಿ ಗರ್ಲಾನಿ, ನಯನಾ, ಅಲೋಕ್, ಜೀವನ್, ವಿನೋದ್, ಗುರುನಂದನ್ ಮತ್ತಿತರರು
ನಿರ್ದೇಶನ: ಪ್ರಕಾಶ್ ಜಯರಾಮ್
ನಿರ್ಮಾಪಕರು: ಪಾರ್ವತಮ್ಮ ರಾಜ್ಕುಮಾರ್
‘ನನ್ನ ಹೆಸರು ಸಿದ್ಧಾರ್ಥ, ಆದರೆ ಯಾವುದೇ ಆ್ಯಂಗಲ್ನಿಂದಲೂ ಬುದ್ಧ ಅಲ್ಲ’– ಹೊಡೆದಾಟದ ದೃಶ್ಯವೊಂದರಲ್ಲಿ ಬರುವ ಸಂಭಾಷಣೆಯಿದು. ಆ ಸಿದ್ಧಾರ್ಥ ಸಂಸಾರ ವಿಮುಖಿಯಾಗಿ ಬುದ್ಧನಾದರೆ, ಇಲ್ಲಿನ ಸಿದ್ಧಾರ್ಥ ಪ್ರೀತಿಗೆ ಬದ್ಧ. ಹಾಗೆಂದು ಬುದ್ಧನಿಗೆ ಸಂಪೂರ್ಣ ತದ್ವಿರುದ್ಧವಾದ ಹಾದಿಯೂ ಅಲ್ಲ.
ಪ್ರೀತಿಯಿಂದಲೇ ಗೆಲ್ಲುವ, ಸಂಯಮದ ಗುಣಗಳೂ ಈತನಲ್ಲಿವೆ. ಉಳಿದಂತೆ ಸಂಭಾಷಣೆಯಲ್ಲಿರುವಂತೆಯೇ ಈ ಸಿದ್ಧಾರ್ಥನಲ್ಲಿ ಬುದ್ಧ ಕಾಣಿಸಲಾರ. ಡಾ. ರಾಜ್ಕುಮಾರ್ ಕುಟುಂಬದ ಮೂರನೇ ಪೀಳಿಗೆ ನಟ ವಿನಯ್ ರಾಜ್ಕುಮಾರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುವ ‘ಸಿದ್ಧಾರ್ಥ’ ಗಮನ ಸೆಳೆಯುವುದು ಸರಳ ಕಥೆ ಮತ್ತು ನಿರೂಪಣೆಯಿಂದ. ಈ ಸರಳತೆ ಚಿತ್ರದ ಮಿತಿಯೂ ಹೌದು.
ಯುವ ಮನಸ್ಸಿನ ಕನವರಿಕೆಗಳನ್ನು ಬಿಂಬಿಸುವ ಚಿತ್ರ, ವಾಸ್ತವಕ್ಕೂ ಹತ್ತಿರ. ಯುವ ಜನರ ಗೆಳೆತನ, ಸಂಭ್ರಮ, ಪ್ರೀತಿ ಸಂಪಾದಿಸಲು ನಡೆಸುವ ಸಾಹಸ, ಉತ್ಕಟ ಪ್ರೇಮ, ಅನುಮಾನ, ಪೊಸೆಸಿವ್ನೆಸ್ ಹೀಗೆ ಹಲವು ಭಾವದ ಆಯಾಮಗಳನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ ನಿರ್ದೇಶಕ ಪ್ರಕಾಶ್ ಜಯರಾಮ್. ‘ಮಿಲನ’, ‘ಗೋಕುಲ’ಗಳಂತಹ ಸಂವೇದನಾಶೀಲ ಚಿತ್ರಗಳನ್ನು ನೀಡಿದ್ದ ಅವರು, ‘ಸಿದ್ಧಾರ್ಥ’ದಲ್ಲಿಯೂ ಆ ಪರಂಪರೆ ಮುಂದುವರಿಸಿದ್ದಾರೆ.
‘ಸಿದ್ಧಾರ್ಥ’ ಯುವ ಜಗತ್ತಿನ ಕಣ್ಣಿನಿಂದ ಬದುಕಿನ ತತ್ವಗಳನ್ನು ಸಾರುವ ಚಿತ್ರವೂ ಹೌದು. ‘ಜಿಂದಗಿ ನಾ ಮಿಲೇಗಿ ದುಬಾರ’ ಚಿತ್ರದ ವಸ್ತುವಿನಂತೆ, ಪ್ರತಿ ಕ್ಷಣವನ್ನೂ ಸಂಭ್ರಮಿಸಬೇಕೆಂಬ ಆಶಯವಿದೆ. ಗೆಳೆತನದ ಬಂಧವಿದೆ. ಕೆಲಸದ ಜಂಜಾಟದಲ್ಲಿ ಮರೆಯುವ ಖುಷಿಗಳನ್ನು ನೆನಪಿಸುವ ಪಾಠವಿದೆ. ದಕ್ಕುವ ಪ್ರೀತಿಯನ್ನು ಉಳಿಸಿಕೊಳ್ಳುವುದು ಸುಲಭವಲ್ಲ, ಸಂದೇಹಗಳು ಒಲವನ್ನು ಕೊಲ್ಲುತ್ತವೆ ಎಂಬ ವಾಸ್ತವಗಳ ಚಿತ್ರಣವಿದೆ. ಈ ಸಂಗತಿಗಳೆಲ್ಲವೂ ಒಟ್ಟಾರೆ ಚಿತ್ರದ ಶಕ್ತಿ.
ಕಥನವನ್ನು ಸಂಗೀತಮಯವಾಗಿರಿಸಿರುವುದೂ ಪ್ರಮುಖ ಅಂಶ. ಲವಲವಿಕೆಯಿಂದಲೇ ಸಾಗಿದರೂ ಆರಂಭದಲ್ಲಿ ಕಥೆ ಅಲ್ಲಲ್ಲಿ ಪೇಲವವಾಗುತ್ತದೆ. ಹಲವು ಸಿನಿಮಾಗಳಲ್ಲಿ ನೋಡಿರುವಂತಹ ಸನ್ನಿವೇಶಗಳು, ಅಂತ್ಯದಲ್ಲಿ ಕಥೆ ಲಂಬಿಸಿರುವ ಬಗೆ ತುಸು ಹೆಚ್ಚೇ ಅನಿಸುವಂತಿದೆ. ಕಥೆ ಮತ್ತು ನಿರೂಪಣೆಯಲ್ಲಿ ತಾಜಾತನದ ಕೊರತೆಯಿದ್ದರೂ ನವಿರುತನವಿದೆ.
‘ಗಿವ್ ಮಿ ಎ ಬ್ರೇಕ್!’ ಎಂಬ ಅಡಿಶೀರ್ಷಿಕೆ ಹೊಸ ನಾಯಕ ಪ್ರೇಕ್ಷಕನಲ್ಲಿ ಮಾಡುವ ಕೋರಿಕೆಯೂ ಹೌದು, ಕಥನಕ್ಕೆ ತಿರುವು ನೀಡುವ ಪ್ರಮುಖ ಘಟ್ಟವೂ ಹೌದು. ಆ ಕೋರಿಕೆಯನ್ನು ಒಪ್ಪಿಕೊಳ್ಳುವಂತಹ ಚಿತ್ರವಾಗಿ ‘ಸಿದ್ಧಾರ್ಥ’ ಮೂಡಿಬಂದಿದೆ. ವಿನಯ್ ರಾಜ್ಕುಮಾರ್ ಹೊಸ ಪೀಳಿಗೆಯ ನಾಯಕನಟರಾಗಿ ಭರವಸೆ ಮೂಡಿಸಿದ್ದಾರೆ. ಅಪೂರ್ವ ಅರೋರಾ ಅಭಿನಯ, ನಗು ಎರಡರಲ್ಲಿಯೂ ಇಷ್ಟವಾಗುತ್ತಾರೆ. ಆಶಿಷ್ ವಿದ್ಯಾರ್ಥಿ, ಅಚ್ಯುತ ಕುಮಾರ್ ಯೌವನಕ್ಕೆ ಮರಳಿದವರಂತೆ ಮುದ ನೀಡುತ್ತಾರೆ.
‘ಸಿದ್ಧಾರ್ಥ’ನ ಗೆಳೆಯರ ಬಳಗದ ಅಭಿನಯವೂ ಗಮನಾರ್ಹ. ವಿ. ಹರಿಕೃಷ್ಣ ಸಂಗೀತದ ಹಾಡುಗಳಲ್ಲಿ ತಾಜಾತನ ಇರುವುದು ವಿಶೇಷ. ಆದರೆ ಸಂಗೀತದ ಸದ್ದು ಸಾಹಿತ್ಯವನ್ನು ಮರೆಮಾಚಿಸಿದೆ. ಎಂ.ವಿ. ಕೃಷ್ಣಕುಮಾರ್ ಛಾಯಾಗ್ರಹಣ ಕಥನದ ಸರಳತೆಗೆ ಪೂರಕವಾಗಿದೆ.
