ರಾಷ್ಟ್ರೀಯ

ಲೂಪಸ್‌ನಲ್ಲಿ ಕದಡುವ ಬದುಕಿನ ಲೆಕ್ಕಾಚಾರ: ಸುನಂದ ಪುಷ್ಕರ್ ರನ್ನು ಇದೇ ಲೂಪಸ್ ಬಲಿ ತೆಗೆದುಕೊಂಡಿರಬಹುದು

Pinterest LinkedIn Tumblr

sunanda-l

ಮನಸು ಗಟ್ಟಿ ಇದ್ದರೆ ಯಾವುದೇ ಸವಾಲನ್ನಾದರೂ ಮೆಟ್ಟಿ ನಿಲ್ಲಬಹುದು. ರೋಗ ನಿರೋಧಕ ಶಕ್ತಿಯೊಂದು ಬಲಿಷ್ಟವಾಗಿದ್ದರೆ ಜೀವ ತೆಗೆದುಕೊಂಡು ಹೋಗಲಿಕ್ಕೆ ಅಂತಾನೇ ದೇಹ ಹೊಕ್ಕ ರೋಗದ ವಿರುದ್ಧವೂ ಹೋರಾಡಿ ಜಯಿಸಬಹುದು. ಆದರೆ ಎಲ್ಲವೂ ಕೈ ಮೀರಿದ ಹಂತದಲ್ಲೊಂದು ಅದೃಷ್ಟ ಅನ್ನುವುದು ಎದುರಾಗುತ್ತದೆಯಲ್ಲ, ಅದು ಎಲ್ಲ ಅವಕಾಶಗಳ ಬಾಗಿಲು ಮುಚ್ಚಬಹುದು. ಆಗ ದುರಾದೃಷ್ಟವನ್ನು ಶಪಿಸದೆ ವಿಧಿ ಇಲ್ಲ. ಅಂಥದ್ದೇ ಒಂದು ದುರಾದೃಷ್ಟದ ರೂಪದಲ್ಲಿ ಎದುರಾಗುತ್ತದೆ ಲೂಪಸ್ ಕಾಯಿಲೆ.

ರಾಜಕಾರಣಿ ಶಶಿ ತರೂರು ಪತ್ನಿ ಸುನಂದ ಪುಷ್ಕರ್ ಅಂಥ ಸುಂದರ ಮಹಿಳೆಯನ್ನು ಕೂಡ ಇದೇ ಲೂಪಸ್ ಬಲಿ ತೆಗೆದುಕೊಂಡಿರಬಹುದು. ಅವರದ್ದು ಕೊಲೆ ಅಥವಾ ಆತ್ಮಹತ್ಯೆ ಅನ್ನುವ ವಾದಗಳ ನಡುವೆಯೂ ಅವರನ್ನು ಮಾನಸಿಕವಾಗಿ ಮತ್ತಷ್ಟು ಮಗದಷ್ಟು ಇದೇ ಕಾಯಿಲೆ ಕುಗ್ಗಿಸಿತ್ತೇನೋ ಅನ್ನುವುದು ಇತ್ತೀಚಿನ ಚರ್ಚೆಯ ವಿಷಯ.

ಏನಿದು?
ಇಡೀ ದೇಹವನ್ನು ಕಾಪಾಡುವ ರೋಗ ನಿರೋಧಕ ಶಕ್ತಿಗೆ ಕಾಯಿಲೆ ಬಂದರೆ ಹೇಗಾಗಬೇಡ. ಇದೊಂದು ಅಂಥದ್ದೇ ಕಾಯಿಲೆ. ಹಲವಾರು ವಿಧಗಳಲ್ಲಿ ಗುರುತಿಸಿಕೊಳ್ಳು ಲೂಪಸ್‌ನಲ್ಲಿ ಸಿಸ್ಟಮೆಕ್ ಎರಿತೆಮಟೋಸಸ್ ಲೂಪಸ್ ಅನ್ನುವುದು ಇಡೀ ದೇಹವನ್ನು ಆವರಿಸುತ್ತದೆ. ಇದು ಮಹಿಳೆಯರನ್ನೇ ಹೆಚ್ಚಾಗಿ ಕಾಡುತ್ತದೆ.

ಸಾಮಾನ್ಯವಾಗಿ ರೋಗನಿರೋಧಕ ಶಕ್ತಿ ದೇಹವನ್ನು ಬೇರೆ ಬೇರೆ ರೀತಿಯಲ್ಲಿ ರಕ್ಷಿಸುವ ಕಾರ‌್ಯದಲ್ಲಿ ತೊಡಗುತ್ತದೆ. ಹಾನಿಕಾರಕ ವೈರಸ್ ಹಾಗೂ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ ದೇಹವನ್ನು ಸುರಕ್ಷಿತವಾಗಿಡುತ್ತದೆ. ಆದ್ರೆ ಈ ಸಮಸ್ಯೆಯಲ್ಲಿ ಅಂಥದ್ದೊಂದು ಶಕ್ತಿ ದುರ್ಬಲವಾಗುತ್ತದೆ. ನಿಧಾನವಾಗಿ ಅದು ತನ್ನನ್ನೇ ತಾನು ಚೈತನ್ಯವಾಗಿಟ್ಟುಕೊಳ್ಳಲು ವಿಫಲವಾಗುತ್ತದೆ. ಇನ್ನೂ ದೇಹ ರಕ್ಷಣೆ ಸಾಧ್ಯವೇ ಇಲ್ಲದ್ದು. ರೋಗ ನಿರೋಧಕ ಕೋಶಗಳು ಆಂತರಿಕ ಮತ್ತು ಬಾಹ್ಯ ಅಂಶಗಳನ್ನು ಪ್ರತ್ಯೇಕಿಸುವ ಶಕ್ತಿಯನ್ನೇ ಕಳೆದುಕೊಂಡು ದೇಹದ ಕೋಶಗಳ ಮೇಲೆಯೇ ದಾಳಿ ಮಾಡುವ ಕಾಯಿಲೆ ಇದು.

ಇದು ಚರ್ಮ, ಕೀಲು, ಕಿಡ್ನಿ, ನರ್ವ್ ಸಿಸ್ಟಮ್, ಶ್ವಾಸಕೋಶ ಹಾಗೂ ಹೃದಯಕ್ಕೆ ಹಾನಿ ಉಂಟು ಮಾಡುತ್ತದೆ. ಇದರ ಲಕ್ಷಣಗಳೆಂದರೆ ಕೂದಲು ಉದುರುವಿಕೆ, ಮೂಳೆ ಹಾಗೂ ಗಂಟು ನೋವು, ದೇಹದಲ್ಲಿ ನೋವು,ಆಯಾಸ ಇತ್ಯಾದಿ.

ಕಾರಣ
ಇದು ವಂಶ ಪಾರಂಪರಗತವಾಗಿ ಅಥವಾ ಪರಿಸರದ ಕಾರಣದಿಂದಲೂ ಬಂದಿರಬಹುದು. ಪರಿಸರದ ಕಾರಣಗಳಾದ ನೇರಳಾತೀತ ಕಿರಣ, ಔಷಧ, ಇನ್‌ಫೆಕ್ಷನ್ ಹಾಗೂ ಆಹಾರ ಪದಾರ್ಧಗಳು ದೇಹದ ಆರೋಗ್ಯವಂತ ಜೀವಕೋಶಗಳ ನಾಶಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ ರಕ್ತದೊತ್ತಡದಂತಹ ಸಮಸ್ಯೆಗೆ ತೆಗೆದುಕೊಳ್ಳುವ ಮಾತ್ರೆಗಳು ಕೂಡ ಇಂಥದ್ದೊಂದು ಸಮಸ್ಯೆಗೆ ಕಾರಣವಾಗಬಹುದು. ಗಂಭೀರ ಪ್ರಕರಣಗಳಲ್ಲಿ ಜ್ವರ ಹಾಗೂ ರೋಗಿಗಳು ಜ್ವರ ಹಾಗೂ ಕೀಲು ನೋವಿನಿಂದ ಬಳಲುತ್ತಾರೆ.

ರೋಗ ಪತ್ತೆ
ಒಂದೇ ಬಾರಿಗೆ ಇದು ಇಂಥದ್ದೇ ಕಾಯಿಲೆ ಎಂದು ಹೇಳುವುದು ಕಷ್ಟ. ಆದರೆ ವ್ಯಕ್ತಿಯನ್ನು ಸಂಪೂರ್ಣ ಪರೀಕ್ಷೆಗೆ ಒಳಪಡಿಸಿದಾಗ ಸಮಸ್ಯೆಯ ಮೂಲಕ ಹಾಗೂ ಕಾರಣ ತಿಳಿಯಬಹುದು.

ಚಿಕಿತ್ಸೆ
ಇದಕ್ಕೆ ಇಂಥದ್ದೇ ಚಿಕಿತ್ಸೆ ಅಂತಿಲ್ಲ. ಏಕೆಂದರೆ ಇದು ಹಲವು ಸಮಸ್ಯೆಗಳೊಂದಿಗೆ ಥಳಕು ಹಾಕಿಕೊಂಡಿರುತ್ತದೆ. ಗಂಭೀರತೆಯನ್ನು ಆಧರಿಸಿದ ಮಾತ್ರೆ, ಡಯಟ್, ವ್ಯಾಯಾಮದ ಮೂಲಕ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಬಹುದು. ಕೌನ್ಸಿಲಿಂಗ್ ಕೂಡ ಇಲ್ಲಿ ಪ್ರಯೋಜನಕ್ಕೆ ಬರುತ್ತದೆ.

ಲೂಪಸ್ ಪುರುಷರಿಗಿಂತ ಹೆಣ್ಣು ಮಕ್ಕಳನ್ನೇ ಹೆಚ್ಚು ಕಾಡುವುದರ ಜತೆ ಗರ್ಭಾವಸ್ಥೆಯ ಮೇಲೂ ಇದರ ಪ್ರಭಾವ ಹೆಚ್ಚು. ಈ ಸಮಸ್ಯೆ ಇರುವವರಲ್ಲಿ ಗರ್ಭಧಾರಣೆ ಕಷ್ಟವಾಗಬಹುದು. ಗರ್ಭಪಾತ ಸಾಧ್ಯತೆ, ಭ್ರೂಣದ ಆರೋಗ್ಯದ ಮೇಲೆ ಕೂಡ ಪ್ರಭಾವ ಬೀರಬಹುದು. ಜೀವನಪೂರ್ತಿ ಕಾಡುವ ಸಮಸ್ಯೆ ಇದಾಗಿದ್ದರೂ ಗಂಭೀರತೆಯನ್ನು ಆಧರಿಸಿ ನಾನಾ ಚಿಕಿತ್ಸೆ ನಿಡಲಾಗುತ್ತದೆ. ದೀರ್ಘಾವಧಿಯಲ್ಲಿ ಕಾಡುವ ಈ ಸಮಸ್ಯೆ ತಕ್ಷಣಕ್ಕೆ ಅರಿವಿಗೆ ಬರುವುದಿಲ್ಲ. ಕೀಲುನೋವು, ನಿಶ್ಯಕ್ತಿ ಮತ್ತಿತರ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುವ ವೇಳೆ ಈ ಸಮಸ್ಯೆ ಬೆಳಕಿಗೆ ಬರುತ್ತದೆ.
ಡಾ. ವಿದ್ಯಾ ಭಟ್, ಸ್ತ್ರೀರೋಗ ತಜ್ಞೆ

ಲೂಪಸ್ ಕಾಯಿಲೆ ಇರುವವರಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ಇದಕ್ಕಾಗಿ ಸಿ ವಿಟಮಿನ್ ಇರುವ ಹಣ್ಣುಗಳನ್ನು ನಿತ್ಯದ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕು. ದ್ರಾಕ್ಷಿ, ಫೈನಾಪಲ್, ಮೂಸಂಬಿ, ಲಿಂಬುವನ್ನು ಯಾವುದೇ ರೂಪದಲ್ಲಿ ಸೇವಿಸಬಹುದು. ಬೆಟ್ಟದ ನೆಲ್ಲಿಕಾಯಿ ಈ ಸಮಸ್ಯೆಗೆ ರಾಮಬಾಣ.
ಡಾ. ಗಂಗಾಧರ ವರ್ಮಾ, ಪ್ರಕೃತಿ ಚಿಕಿತ್ಸೆ ತಜ್ಞ

Write A Comment