ಮನೋರಂಜನೆ

ಶಕ್ತಿಮದ್ದಿಲ್ಲದ ಪೈಪೋಟಿ!

Pinterest LinkedIn Tumblr

ಚಿತ್ರ: ಪೈಪೋಟಿ
ತಾರಾಗಣ: ಗುರುರಾಜ್‌, ನಿರಂಜನ್‌ ಶೆಟ್ಟಿ, ಪೂಜಶ್ರೀ, ಅಚ್ಯುತ್‌ಕುಮಾರ್‌, ಮೋಹನ್ ಜುನೇಜ, ಲಯೇಂದ್ರ, ಇತರರು
ನಿರ್ದೇಶನ: ಕೆ.ರಾಮ್ ನಾರಾಯಣ್‌
ನಿರ್ಮಾಪಕರು: ಲಕ್ಷ್‌ ಒಬೆದ್‌

film

ಇಬ್ಬರು ಹುಡುಗರು ಒಬ್ಬ ಸುಂದರಿಯ ಹಿಂದೆ ಬೀಳುವುದು, ಆಕೆಯ ಗಮನವನ್ನು ಸೆಳೆಯಲು ಏನೇನೋ ಕಸರತ್ತು ಮಾಡುವುದು ಸಿನಿಮಾಗಳಲ್ಲಿ ಚರ್ವಿತ–ಚರ್ವಣ. ಈ ಹುಡುಗರ ಮಧ್ಯೆ ನಡೆಯುವ ‘ಪೈಪೋಟಿ’ಯನ್ನು ರಂಜನೀಯಗೊಳಿಸಿದ ಪ್ರಯತ್ನಗಳೂ ಇವೆ. ತಾನು ಪ್ರೀತಿಸುವ ಹುಡುಗಿಯನ್ನು ತನ್ನ ಸ್ನೇಹಿತನೂ ಪ್ರೀತಿಸುತ್ತಿದ್ದಾನೆ ಎಂದು ತಿಳಿದಾಗ ‘ತ್ಯಾಗರಾಜ’ನಾಗುವ ಹಂಬಲ ಇಬ್ಬರೂ ನಾಯಕರದು. ಇದಕ್ಕಾಗಿ ಅವರು ನಡೆಸುವ ‘ಪೈಪೋಟಿ’ ಏನೆಂಬುದನ್ನು ತೋರಿಸಲು ಕೆ.ರಾಮ್‌ ನಾರಾಯಣ್‌ ಪ್ರಯತ್ನಿಸಿದ್ದಾರೆ. ಆದರೆ ಶೀರ್ಷಿಕೆಗೆ ತಕ್ಕಂತೆ ಅವರು ನಡೆಸುವ ‘ಪೈಪೋಟಿ’ಯನ್ನು ಮನಮುಟ್ಟುವಂತೆ ಚಿತ್ರಿಸುವಲ್ಲಿ ಮಾತ್ರ ಹಿಂದೆ ಬಿದ್ದಿದ್ದಾರೆ.

‘ಪೈಪೋಟಿ’ಯಲ್ಲಿ ಇಬ್ಬರು ಹೀರೊಗಳು. ಅವರದು ಕರಾರುವಾಕ್ಕಾಗಿ ಸಮಬಲ. ಇದೇ ಚಿತ್ರಕಥೆಯನ್ನು ಒಂದಷ್ಟು ದುರ್ಬಲಗೊಳಿಸಿದಂತಿದೆ. ಏನನ್ನೇ ಹೇಳಬೇಕಾದರೂ ಎರಡೆರಡು ಸಲ ತೋರಿಸಬೇಕು. ಸಂಭಾಷಣೆ, ಹಾಡು, ನೃತ್ಯ, ಹೊಡೆದಾಟಗಳೂ ಎರಡು ಸಲ ಆಗಲೇಬೇಕು! ಹೀಗಾಗಿ ಒಂದು ದೃಶ್ಯ ಮೂಡುತ್ತಿರುವಂತೆ, ಅಂಥದೇ ಇನ್ನೊಂದು ಸನ್ನಿವೇಶವನ್ನು ನೋಡಲೇಬೇಕಾದ ಅನಿವಾರ್ಯತೆ ಪ್ರೇಕ್ಷಕ ಪ್ರಭುವಿನದು!

ನ್ಯಾಯಾಲಯದ ಮುಂದೆ ಬರುವ ವಿಚಿತ್ರ ಪ್ರಕರಣದೊಂದಿಗೆ ಚಿತ್ರ ಆರಂಭ. ವಿಚಾರಣೆ ಸಮಯದಲ್ಲಿ, ಕತೆಯ ಹಿನ್ನೆಲೆ ತೆರೆದುಕೊಳ್ಳುತ್ತದೆ. ರಮೇಶ್ (ಗುರುರಾಜ್‌) ಹಾಗೂ ಸುರೇಶ್‌ (ನಿರಂಜನ ಶೆಟ್ಟಿ) ಪ್ರಾಣ ಸ್ನೇಹಿತರು. ಪರಸ್ಪರ ತಿಳಿಯದಂತೆಯೇ ಅವರಿಬ್ಬರೂ ಪ್ರೀತಿಸುವುದು ನಂದಿನಿಯನ್ನು (ಪೂಜಶ್ರೀ). ಸತ್ಯ ಗೊತ್ತಾಗುತ್ತಿದ್ದಂತೆಯೇ ಮೊದಲು ‘ತ್ಯಾಗರಾಜ’ರಾಗಲು ಇಬ್ಬರೂ ಪೈಪೋಟಿ ನಡೆಸುತ್ತಾರೆ. ಆಕೆಗೆ ಇನ್ನೊಬ್ಬನ ಜತೆ ಮದುವೆ ನಿಶ್ಚಯವಾಗುತ್ತದೆ. ಕಥೆ ಈಗ ‘ಯು ಟರ್ನ್’. ನಂದಿನಿ ತನಗೇ ಸಿಗಬೇಕು ಎಂಬ ಪೈಪೋಟಿಯೊಂದಿಗೆ ಅವರಿಬ್ಬರಲ್ಲಿ ಸೆಣೆಸಾಟ ಶುರುವಾಗುತ್ತದೆ. ಆ ಹೊಡೆದಾಟ ನ್ಯಾಯಾಲಯದ ಅಂಗಳಕ್ಕೂ ಬರುತ್ತದೆ. ‘ಒಬ್ಬಳನ್ನೇ ನೀವಿಬ್ಬರೂ ಪ್ರೀತಿಸುತ್ತಿದ್ದರೆ, ಆಕೆಯ ಎದುರು ನಿಮ್ಮ ಪ್ರೇಮ ಹೇಳಿಕೊಳ್ಳಿ. ಆಕೆಯೇ ತೀರ್ಪು ಕೊಡುತ್ತಾಳೆ’ ಅಂತ ನ್ಯಾಯಾಧೀಶರು ಹೇಳುತ್ತಾರೆ. ಇಬ್ಬರು ಸಮಾನ ತಾಕತ್ತಿನ ನಾಯಕರ ಪೈಕಿ ಒಬ್ಬರಿಗೆ ಆಕೆ ಪ್ರಾಪ್ತಿಯಾಗಬೇಕು. ಆಕೆ ಯಾರಿಗೆ ಸಿಗುತ್ತಾಳೆ ಎಂಬುದನ್ನು ಕೊನೆಗೂ ಹೇಳದೇ ನೋಡುಗನ ಊಹೆಗೇ ಬಿಟ್ಟಿದ್ದಾರೆ, ನಿರ್ದೇಶಕ ರಾಮ್‌ನಾರಾಯಣ್!

ಇಬ್ಬರು ಹೀರೊಗಳನ್ನು ಮುಂದಿಟ್ಟುಕೊಂಡು ಅವರನ್ನು ಸರಿಸಮನಾಗಿ ಬಿಂಬಿಸುವ ಯತ್ನದಲ್ಲಿ ‘ಪೈಪೋಟಿ’ಗೆ ಲವಲವಿಕೆ ಕೊಡುವುದನ್ನೇ ಮರೆಯಲಾಗಿದೆ. ನಡುನಡುವೆ ಕಾಣಿಸಿಕೊಳ್ಳುವ ಒಂದಷ್ಟು ಹಾಸ್ಯ ಸನ್ನಿವೇಶಗಳು ಸಿನಿಮಾಕ್ಕೆ ರಂಜನೀಯ ಚೌಕಟ್ಟನ್ನು ಕಟ್ಟಿಕೊಡಲು ಯತ್ನಿಸುತ್ತವೆ. ನಿರಂಜನ ಶೆಟ್ಟಿಗೆ ಹೋಲಿಸಿದರೆ, ಗುರುರಾಜ್‌ ಅಭಿನಯದಲ್ಲಿ ಪರವಾಗಿಲ್ಲ. ಪೂಜಶ್ರೀ ನಟನೆಗೆ ಹೆಚ್ಚು ಅವಕಾಶ ಸಿಕ್ಕಿಲ್ಲ. ಮೊದಲಿನಿಂದ ಕೊನೆಯವರೆಗೂ ಕಾಣಿಸಿಕೊಳ್ಳುವ ಅಚ್ಯುತ್‌ ಕುಮಾರ್‌ ಮನದಲ್ಲಿ ಉಳಿಯುತ್ತಾರೆ. ವಾದ್ಯಗಳಿಲ್ಲದೇ ಸಂಗೀತ ಸಂಯೋಜಿಸಿದ ಒಂದು ಹಾಡನ್ನು ಹೊರತುಪಡಿಸಿದರೆ, ಗಣೇಶ್ ನಾರಾಯಣನ್‌ ಸಂಗೀತ ಅಷ್ಟಕ್ಕಷ್ಟೇ. ಅನಂತ್ ಅರಸ್ ಛಾಯಾಗ್ರಹಣ ಸಾಧಾರಣ.

ಹಾಗೆ ನೋಡಿದರೆ, ‘ಪೈಪೋಟಿ’ ಎಂಬ ಪದದಲ್ಲಿ ಸಾಕಷ್ಟು ಬಲವಿದೆ. ಆದರೆ, ವಿಶೇಷವೆನಿಸದ ಚಿತ್ರಕಥೆ ಮತ್ತು ಚುರುಕುತನ-ವಿಲ್ಲದ ನಿರೂಪಣೆಯಿಂದಾಗಿ ‘ಪೈಪೋಟಿ’ ನೀರಸವೆನಿಸುತ್ತದೆ.

Write A Comment