ಮನೋರಂಜನೆ

ತೇವರ್‌ (ಹಿಂದಿ): ರೀಮೇಕ್‌ ಸೂತ್ರದ ಒದ್ದಾಟ

Pinterest LinkedIn Tumblr

tevar

ಚಿತ್ರ: ತೇವರ್‌ (ಹಿಂದಿ)
ತಾರಾಗಣ:  ಅರ್ಜುನ್ ಕಪೂರ್‌, ಸೋನಾಕ್ಷಿ ಸಿನ್ಹ, ಮನೋಜ್‌ ಬಾಜಪೇಯಿ ಮತ್ತಿತರರು
ನಿರ್ದೇಶನ: ಅಮಿತ್ ರವೀಂದ್ರನಾಥ್ ಶರ್ಮ
ನಿರ್ಮಾಪಕರು: ಎರೋಸ್ ಇಂಟರ್‌ ನ್ಯಾಷನಲ್‌
ದಕ್ಷಿಣ ಭಾರತದ ಜನಪ್ರಿಯ ಸಿನಿಮಾ ಧಾಟಿಯ ರುಚಿಯನ್ನು ಪ್ರಭುದೇವ ಬಾಲಿವುಡ್‌ಗೆ ಹತ್ತಿಸಿ ದಶಕವೇ ಉರುಳಿದೆ. ಆ ಸೂತ್ರಕ್ಕೆ ಸಿಲುಕಿ ವಿಲವಿಲ ಒದ್ದಾಡಿರುವ ಸಿನಿಮಾ ‘ತೇವರ್’.

ಅಮಿತ್‌ ರವೀಂದ್ರನಾಥ್‌ ಶರ್ಮ ಮೊದಲ ನಿರ್ದೇಶನಕ್ಕೆ ಆಯ್ಕೆ ಮಾಡಿಕೊಂಡಿರುವ ವಸ್ತು ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿ ತೆರೆಕಂಡು ವರ್ಷಗಳೇ ಆಗಿವೆ. 2003ರಲ್ಲಿ ತೆಲುಗಿನಲ್ಲಿ ಬಂದ ‘ಒಕ್ಕಡು’, ಆಮೇಲೆ ತಮಿಳಿನಲ್ಲಿ ‘ಗಿಲ್ಲಿ’, ಕನ್ನಡದಲ್ಲಿ ‘ಅಜಯ್’ ಆಗಿ ಯಶಸ್ವಿಯಾಯಿತು. ಈಗ ಸಾಕಷ್ಟು ಸವಕಲೆನ್ನಿಸುವ ಅದೇ ವಸ್ತುವಿನ ಸಿನಿಮಾ ನೋಡುವುದು ಕಷ್ಟ.

ಇದು ಹದವರಿತ ರೀಮೇಕ್‌ ಅಲ್ಲ. ಅಲ್ಲಲ್ಲಿ ಮಾಡಿಕೊಂಡಿರುವ ಬದಲಾವಣೆಗಳು ಗಟ್ಟಿ ಪುನರ್‌ಸೃಷ್ಟಿ ಆಗದೆ, ಪೇಲವ ಮಾರ್ಪಾಟಾಗಿವೆಯಷ್ಟೆ. ಹಲವು ನಿಮಿಷ ಅರ್ಜುನ್‌ ಕಪೂರ್‌ ಓತಪ್ರೋತವಾಗಿ ಸಂಭಾಷಣೆ ಹೊಡೆದರೆ, ಇನ್ನು ಕೆಲವು ನಿಮಿಷ ಮನೋಜ್‌ ಬಾಜಪೇಯಿ ಮಾತುಗಳಿಂದ ಕುಟುಕುತ್ತಾರೆ. ಹೀರೊಯಿಸಂ ಎನ್ನುವುದು ಇಬ್ಬರ ನಡುವೆ ಗಿರಕಿ ಹೊಡೆಯುತ್ತಲೇ ಸಾಗುತ್ತದೆ. ಹಳೆಯ ಲಯದಲ್ಲೇ ಈಗಲೂ ಅಭಿನಯಿಸುವ ಮನೋಜ್‌ ಬಾಜಪೇಯಿ ಅವರ ನಿಲುವು, ನೋಟ ಗಂಭೀರ ಅಥವಾ ಕ್ರೋಧ ರಸ ಸೂಸಬೇಕಾದ ಎಷ್ಟೋ ಸಂದರ್ಭಗಳಲ್ಲಿ ಹಾಸ್ಯಪಾತ್ರವಾಗಿಬಿಡುತ್ತದೆ. ಅವರ ಹೊಡೆದಾಟ ನೋಡಲಂತೂ ಎರಡು ಕಣ್ಣು ಸಾಲವು! ರೀಮೇಕ್‌ ಮಾಡುವಾಗ ಭಾಷೆ, ದೇಹಭಾಷೆಯ ದೃಷ್ಟಿಯಲ್ಲಿ ಆಗಿರುವ ಎಡವಟ್ಟಿನ ವ್ಯತಿರಿಕ್ತ ಪರಿಣಾಮ ಇದು.

ರ್‍್ಯಾಂಬೊ, ಟರ್ಮಿನೇಟರ್‌, ಸಲ್ಮಾನ್‌ ಖಾನ್‌ ಎಲ್ಲರನ್ನೂ ಮಿಕ್ಸಿಯಲ್ಲಿ ಹಾಕಿ ರುಬ್ಬಿದರೆ ಆಗುವ ಮಿಲ್ಕ್‌ ಶೇಖ್‌ಗೆ ತನ್ನನ್ನು ನಾಯಕ ಹೋಲಿಸಿಕೊಳ್ಳುತ್ತಾನೆ. ಸೂಪರ್‌ ಮ್ಯಾನ್‌ ತಾನು ಎಂದು ಎದೆಯುಬ್ಬಿಸಿ ಹೇಳಿಕೊಳ್ಳುತ್ತಾನೆ. ಕಟ್ಟಡದಿಂದ ಕಟ್ಟಡಕ್ಕೆ ಜಿಗಿದು, ಎದುರಾಳಿಗಳನ್ನು ಪುಡಿಗಟ್ಟಿದ ಮಾತ್ರಕ್ಕೆ ಆ ಸೂಪರ್‌­ಹೀರೊಗಳ ಸಾಲಿಗೆ ಸೇರುವುದು ಹೇಗೆತಾನೆ ಸಾಧ್ಯ? ಇಂಥ ಸಂಭಾಷಣೆ ಬರೆದವರಿಗೆ (ಶಂತನು ಶ್ರೀವಾಸ್ತವ) ಅದರಿಂದ ಆಗುವ ವಿರೋಧಾಭಾಸದ ಅರಿವೂ ಇದ್ದಂತಿಲ್ಲ. ಅರ್ಜುನ್‌ ಕಪೂರ್‌ ನಟನಾಗಿ ಖಂಡಿತ ‘ಸೂಪರ್‌ ಮ್ಯಾನ್‌’ ಅಲ್ಲ.

ಅಜಯ್‌ ದೇವಗನ್‌, ಸಲ್ಮಾನ್‌ ಖಾನ್‌ ತರಹದ ನಟರು ತಮ್ಮ ಅಭಿಮಾನಿ ವೃಂದವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡುವ ರೀಮೇಕ್‌ಗಳ ತುಲನೆಯಲ್ಲಿಯೂ ‘ತೇವರ್‌’ ನೆಲಕಚ್ಚುತ್ತದೆ. 7ಹಾಡು, ಕುಣಿತ, ರಂಜನೆ, ಭಾವಾಭಿನಯ ಯಾವ ದೃಷ್ಟಿಯಲ್ಲಿಯೂ ಗಮನಾರ್ಹವಲ್ಲದ ಈ ಸಿನಿಮಾದಲ್ಲಿ ನಾಯಕಿ ಸೋನಾಕ್ಷಿ ಸಿನ್ಹ ಮಾತ್ರ ಕಣ್ಣಿಗೆ ಒಂದಿಷ್ಟು ‘ರಿಲೀಫ್’. ಕನ್ನಡದ ಕೆಟ್ಟ ರೀಮೇಕ್‌ಗಳನ್ನು ಕುಟುಕುವವರು ಈ ಸಿನಿಮಾ ನೋಡಿ ‘ನಮ್ಮವರೇ ವಾಸಿ’ ಎಂದು ಸ್ವಲ್ಪ ಸಮಾಧಾನ ಪಟ್ಟುಕೊಳ್ಳಬಹುದು!

Write A Comment