ಮನೋರಂಜನೆ

ವಿಜಯ್ ರ ‘ಜಾಕ್ಸನ್’ ಸಿನಿಮಾ: ಅಮಲೇರಿಸದ ಕುಡಿತ

Pinterest LinkedIn Tumblr

ಚಿತ್ರ: ‘ಜಾಕ್ಸನ್’
ತಾರಾಗಣ: ವಿಜಯ್, ಪಾವನಾ, ರಂಗಾಯಣ ರಘು, ನಾಗೇಂದ್ರ ಶಾ ಇತರರು
ನಿರ್ದೇಶನ: ಸನತ್ ಕುಮಾರ್
ನಿರ್ಮಾಪಕರು: ಸುಂದರ್ ಗೌಡ್ರು

jacson

‘ಮದ್ಯಪಾನ ಆರೋಗ್ಯಕ್ಕೆ ಹಾನಿಕರ’ ಎಂಬ ಸಂದೇಶ ಸಾರಲು ಹಲವು ದಾರಿಗಳಿವೆ. ಆ ಪೈಕಿ ಸಿನಿಮಾ ಹಾದಿ ಹಿಡಿದಿದ್ದಾರೆ ನಿರ್ದೇಶಕ ಸನತ್‌ ಕುಮಾರ್. ಕುಡಿದರೆ ಏನೆಲ್ಲ ಹಾಳು ಎಂಬುದನ್ನು ಮನಮುಟ್ಟುವಂತೆ ತೋರಿ­ಸಲು, ನಾಲ್ಕಾರು ಪಾತ್ರಧಾರಿ­ಗಳಿಗೆ ಕುಡಿಸಿ ಕುಡಿಸಿ ಪರಿಣಾಮ ಏನೆಂಬು­ದನ್ನು ಹೇಳಲು ಯತ್ನಿಸಿದ್ದಾರೆ. ಆದರೆ ಸಿನಿಮಾ ಮುಗಿದರೂ ಕೊನೆಗೆ ಪ್ರೇಕ್ಷಕನ ಮನದಲ್ಲಿ ಉಳಿಯುವುದು– ಮದ್ಯದ ಘಾಟು, ನಾಯಕನು ವೈರಿಗಳಿಗೆ ಕೊಡುವ ಹತ್ತಾರು ಏಟು.

ಕುಣಿತಕ್ಕೆ ಇನ್ನೊಂದು ಹೆಸರೇ ಆ ಮೈಕೆಲ್ ಜಾಕ್ಸನ್; ಮದ್ಯಕ್ಕಾಗಿ ಹಪಹಪಿಸುವವನೇ ಈ ಜಾಕ್ಸನ್! ಚಿತ್ರದಲ್ಲಿನ ಎರಡು ಪ್ರೇಮಕಥೆಗಳನ್ನು ಸಮಾನಾಂತರವಾಗಿ ನಿರೂಪಿ­ಸುವ ಪ್ರಯತ್ನದಲ್ಲಿ ಕಥೆ ಜಾಳು ಜಾಳಾಗಿ­ರುವುದು ಗೋಚರ­ವಾಗುತ್ತದೆ. ವಿಜಯ್ ಹೀರೊ ಆಗಿರುವುದರಿಂದ ಅವರ ಪಾತ್ರಕ್ಕೆ ಹೆಚ್ಚು ತಾಕತ್ತು ಕೊಡಲು ನಿರ್ದೇಶಕರು ಶ್ರಮಿಸಿದ್ದಾರೆ. ಅದಕ್ಕಾಗಿಯೇ ಮೂಲ ತಮಿಳು ಚಿತ್ರಕ್ಕಿಂತ (‘ಇದರ್‌ಕದನ್ ಆಸೈಪಟ್ಟೆೈ ಬಾಲಕುಮಾರ’) ಒಂದಷ್ಟು ಬೇರೆ­ಯದೇ ಕತೆಯನ್ನೂ ಹೆಣೆದಿದ್ದಾರೆ. ಹಾಗಿದ್ದರೂ ಬರೀ ತಮಾಷೆಯಲ್ಲೇ ಕಳೆದು ಹೋಗುವ ಸಂಭಾಷಣೆಗಳು, ಹೊಡೆದಾಟಗಳು, ಕುಡಿತ– ಕುಣಿತಗಳು ಚಿತ್ರಕ್ಕೆ ಅತ್ತ ಗಂಭೀರವಾಗಲೀ, ಇತ್ತ ರಂಜನೆ ಚೌಕಟ್ಟು ಕೊಡುವಲ್ಲಾಗಲೀ ವಿಫಲವಾಗಿವೆ.

ಎದುರು ಮನೆ ಹುಡುಗಿ ಕುಮದಾ ಮೇಲೆ ಜಾಕ್ಸನ್‌ಗೆ ಬಲು ಪ್ರೀತಿ. ಅದನ್ನು ವಿರೋಧಿಸುವ ಆಕೆಯ ಅಪ್ಪ, ಜಾಕ್ಸನ್‌ಗೆ ಬುದ್ಧಿ ಕಲಿಸುವಂತೆ ರೌಡಿ­ಯೊ­ಬ್ಬನಿಗೆ ಮೊರೆಯಿಡುತ್ತಾನೆ. ಆಗ ಶುರುವಾಗುವ ಪಂಚಾಯ್ತಿ, ಸಿನಿಮಾದ ಅರ್ಧದವರೆಗೂ ಚ್ಯೂಯಿಂಗ್ ಗಮ್‌­ನಂತೆ ಹಿಗ್ಗುತ್ತಲೇ ಹೋಗುತ್ತದೆ. ದ್ವಿತೀಯಾರ್ಧದಲ್ಲಿ ಆ ಪ್ರೇಮ ಪರೀಕ್ಷೆಯಲ್ಲಿ ಜಾಕ್ಸನ್‌ ಗೆಲ್ಲಲು ನೂರೆಂಟು ವಿಘ್ನಗಳು, ಅಡ್ಡಿ–ಆತಂಕಗಳು! ಪತಿಯನ್ನೇ ಕೊಲೆ ಮಾಡಿಸುವ ಸುಂದರಿ, ಆಕೆಯ ಬೆನ್ನು ಬಿದ್ದ ಪ್ರಿಯಕರರು, ಕುಡಿತ ಬಿಡುವೆ ಎಂದು ಪದೇ ಪದೇ ಆಣೆ ಮಾಡುವ ಪ್ರೇಮಿ… ಹೀಗೆ ಸಾಧ್ಯವಾದಷ್ಟು ಎಳೆಗಳನ್ನು ಎಳೆದೆಳೆದು ಕಥೆಯಲ್ಲಿ ಜೋಡಿಸಿದ್ದಾರೆ ಸನತ್‌ ಕುಮಾರ್. ಕೊನೆಗೊಂದು ‘ಆ್ಯಕ್ಸಿಡೆಂಟ್‌’ ಮಾಡಿ­ಸುವ ಮೂಲಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಕ್ಲೈಮ್ಯಾಕ್ಸ್‌, ನೀರಸ ಅನಿಸಿಬಿಡುತ್ತದೆ.

ತಮ್ಮದೇ ಶೈಲಿಯಲ್ಲಿ ಮೈಕೈ ಕುಣಿಸುವ ವಿಜಯ್‌, ಹಲವು ಸಲ ಚಿನಕುರಳಿ ತರಹದ ಸಂಭಾಷಣೆಗಳಿಂದ ಕಚಗುಳಿ ಇಡುತ್ತಾರೆ. ರಂಗಾಯಣ ರಘು, ನಾಯಕಿ ಪಾವನಾ ಅವರ ಅಭಿನಯಕ್ಕೆ ಅವಕಾಶವೇ ಸಿಕ್ಕಿಲ್ಲ. ಎರಡು ಹಾಡುಗಳು (ಸಂಗೀತ ಅರ್ಜುನ್‌ ಜನ್ಯ) ‘ಜಾಕ್ಸನ್‌’ ಕುಣಿತಕ್ಕೆ ಹುರುಪು ತುಂಬುವಂತಿವೆ. ಸೆಲ್ವಂ ಕ್ಯಾಮೆರಾದಲ್ಲಿ ವಿಶೇಷವೇನಿಲ್ಲ.

ವಿಜಯ್‌ ಅಭಿಮಾನಿಗಳಿಗೆ ಇಷ್ಟವೆನಿ­ಸುವ ಹೊಡೆದಾಟ­ಗಳು, ಶೀರ್ಷಿಕೆಗೆ ತಕ್ಕಂತೆ ಬೇಕೆನಿಸುವ ಕುಣಿತಗಳೂ ಸಾಕಷ್ಟಿವೆ. ಮದ್ಯಪಾನದ ಅಪಾಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಇರಾದೆ ಈ ಸಿನಿಮಾಕ್ಕೆ ಇರುವುದರಿಂದ, ಬಾಟಲಿಗಳೂ ಹೇರಳ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತವೆ. ಆ ದೃಷ್ಟಿಯಿಂದ ನೋಡಿದರೆ, ಇಡೀ ಸಿನಿಮಾ ಜಾಕ್ಸನ್‌ನ ಅಡ್ಡಡ್ಡ ಕುಣಿತ; ಬರೀ ಕುಡಿತ!

Write A Comment