ಚಿತ್ರ: ಐ (ತಮಿಳು)
ತಾರಾಗಣ: ವಿಕ್ರಮ್, ಆಮಿ ಜಾಕ್ಸನ್, ಸುರೇಶ್ ಗೋಪಿ, ಉಪೆನ್ ಪಟೇಲ್, ಓಜಸ್ ಎಂ. ರಜನಿ, ಸಂತಾನಂ ಮತ್ತಿತರರು.
ನಿರ್ದೇಶನ: ಶಂಕರ್
ನಿರ್ಮಾಪಕರು: ವಿ. ರವಿಚಂದ್ರನ್, ಡಿ. ರಮೇಶ್ ಬಾಬು
‘ಜಂಟಲ್‌ಮನ್’, ‘ಇಂಡಿಯನ್’, ‘ಮುದಲ್ವನ್’, ‘ಅನ್ನಿಯನ್’ ಈ ಎಲ್ಲಾ ಸಿನಿಮಾಗಳಲ್ಲಿ ವ್ಯವಸ್ಥೆಯ ವಿರುದ್ಧ ಮಧ್ಯಮ ವರ್ಗದವರಲ್ಲಿ ಇರುವ ಕ್ರೋಧದ ದೃಶ್ಯೀಕರಣವನ್ನು ವೈಭವಯುತವಾಗಿ ಮಾಡಿದ್ದ ಶಂಕರ್, ‘ಐ’ ಸಿನಿಮಾದಲ್ಲಿ ಅದನ್ನು ಸಾಕಷ್ಟು ದುರ್ಬಲಗೊಳಿಸಿ ವೈಯಕ್ತಿಕ ನೆಲೆಗೆ ಇಳಿಸಿದ್ದಾರೆ. ಆದರೆ, ಸಿನಿಮಾದ ಇಂಚಿಂಚನ್ನೂ ನೋಡಿಸಿಕೊಳ್ಳುವಂತೆ ಮಾಡುವ ಅವರ ತಾಂತ್ರಿಕ ಜಾಣತನ ಇದರಲ್ಲಿಯೂ ಮುಂದುವರಿದಿದೆ.
ಬಾಗಿದ ಬೆನ್ನಿನ, ಬೊಬ್ಬೆಗಳೆದ್ದ ಕುರೂಪಿ ದೇಹದ ನಾಯಕನನ್ನು ಅವರು ಚಿತ್ರದುದ್ದಕ್ಕೂ ಪ್ರಕಟಪಡಿಸುವ ರೀತಿಯಲ್ಲಿ, ಅದರ ಹಿಂದೆ ಅಡಗಿದ ಸತ್ಯಗಳ ಅನಾವರಣದ ನಿರೂಪಣಾ ಪರಿಯಲ್ಲಿ ಶಂಕರ್‌ಗೆ ಅವರೇ ಸಾಟಿ. ಹೊಡೆದಾಟಗಳಲ್ಲಿ, ಹಾಡುಗಳಲ್ಲಿ, ಪ್ರೇಮ ನಿವೇದನೆಯಲ್ಲಿ, ನಾಯಕನ ತಮಿಳುತನ ಬಿಂಬಿಸುವ ಸಣ್ಣ ಸಣ್ಣ ಪರಿಕರಗಳ ಬಳಕೆಯಲ್ಲಿ ಶಂಕರ್ ಅವರದ್ದೇ ಆದ ಸಿನಿಮೀಯ ಶ್ರೀಮಂತಿಕೆ, ಎಚ್ಚರಿಕೆ, ಸಾವಧಾನ ಢಾಳಾಗಿ ಇವೆ.
ಕುರೂಪಿ ನಾಯಕನನ್ನು ಇಟ್ಟುಕೊಂಡೂ ಅವರು ಮಾಡಿರುವುದು ‘ಬ್ಯೂಟಿಫುಲ್ ಸಿನಿಮಾ’ ಎನ್ನುವುದು ವಿಶೇಷ. ನಗುವಾಗ ನಕ್ಕು, ಅಳುವಾಗ ಅತ್ತು, ಕುರೂಪಿ ನಾಯಕನನ್ನು ಅತಿ ಸುಂದರ ನಾಯಕಿ ಆತುಕೊಳ್ಳುವಾಗ ಕಣ್ಣಾಲಿಗಳಲ್ಲಿ ಹನಿ ಮೂಡಿಸಿಕೊಳ್ಳುವಂತೆ ಮಾಡುವ ‘ಮೈಮರೆಸುವ ಗುಣ’ದ ಚುಚ್ಚುಮದ್ದನ್ನು ಅವರು ನೀಡಿದ್ದಾರೆ.
ಮಿಸ್ಟರ್ ಇಂಡಿಯಾ ಆಗಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡ ಮಧ್ಯಮವರ್ಗದ ಬಡ ಹುಡುಗನ ಬದುಕು ಪಡೆದುಕೊಳ್ಳುವ ಅನಿರೀಕ್ಷಿತ ತಿರುವುಗಳು ಸಿನಿಮಾದ ವಸ್ತು. ಆ ತಿರುವುಗಳಲ್ಲಿ ಕೆಲವು ಅದೃಷ್ಟಕರ, ಒಂದಿಷ್ಟು ಸುಂದರ, ಬಹುತೇಕ ಕ್ರೂರ.
ಇದನ್ನೊಂದು ಸಹನೀಯ ಪಯಣವಾಗಿಸುವ ತಾಂತ್ರಿಕ ಜಾಣ್ಮೆಯ ಸ್ಕ್ರಿಪ್ಟ್ ಅನ್ನು ಶಂಕರ್ ನೆಚ್ಚಿಕೊಂಡಿದ್ದಾರೆ. ಸೇಡಿನ ಒನ್‌ಲೈನರ್ ಇದ್ದರೂ ಸಿನಿಮಾದಲ್ಲಿ ಹುಲ್ಲುಗಾವಲೂ ಇದೆ. ಹೂಗಿಡಗಳನ್ನು ಅರಳಿಸಿ, ಬೆಳೆಸುವ ಸಾವಧಾನದ ಪ್ರೀತಿಯ ಅನಾವರಣವೂ ಇದೆ.
ಮೂರು ಗಂಟೆಯ ಅವಧಿಯನ್ನು ಮೀರಬೇಕಾದ ಸಿನಿಮಾ ಇದು ಅಲ್ಲ. ದೃಶ್ಯಗಳನ್ನು ಲಂಬಿಸುವ ಶಂಕರ್ ಅವರ ಜಾಯಮಾನದ ಫಲಶ್ರುತಿ ಇದು. ನಾಯಕನ ಸೇಡಿನ ಹೊಡೆತಕ್ಕೆ ಸಿಲುಕುವವರ ನರಕಯಾತನೆಯ ತೀವ್ರತೆಯನ್ನು ಒಂದಿಷ್ಟು ಕಡಿಮೆ ಮಾಡಿ ತೋರಿಸಿದ್ದಿದ್ದರೆ ಸಿನಿಮಾ ಇನ್ನಷ್ಟು ಹಿತವೆನಿಸುತ್ತಿತ್ತು. ಬಹುಶಃ ಸತ್ಯದ ಕಹಿಯ ತೀವ್ರತೆಯನ್ನು ಹಾಗೆಯೇ ಉಳಿಸಿಕೊಳ್ಳುವ ಉದ್ದಿಶ್ಯ ನಿರ್ದೇಶಕರಿಗೆ ಇದ್ದಿರಬೇಕು.
ಹಲವು ಚಹರೆಗಳು, ದೇಹಭಾಷೆಗಳು, ಆಕಾರ–ತೂಕಗಳನ್ನು ಬಯಸುವ ಪಾತ್ರದ ಪರಕಾಯ ಪ್ರವೇಶ ಮಾಡಿರುವ ವಿಕ್ರಮ್ ಸೋಜಿಗದ ನಟ. ನಾಯಕಿ ಆಮಿ ಜಾಕ್ಸನ್ ಅವರ ಚೆಲುವು ಈಗತಾನೆ ಅರಳಿದ ಹೂವಿನಂತೆ. ಅಭಿನಯದಲ್ಲೂ ಅವರು ಹಿಂದಿಲ್ಲ. ಹಿನ್ನೆಲೆ ಸಂಗೀತದಲ್ಲಿ ಔಚಿತ್ಯ ಪ್ರಜ್ಞೆ ಮೆರೆಯುವ ಎ.ಆರ್. ರೆಹಮಾನ್ ನೋಡಿಸಿಕೊಳ್ಳುವ ಹಾಡುಗಳಿಗೆ ಕೇಳಿಸಿಕೊಳ್ಳುವ ಕಸುವನ್ನು ಕೊಟ್ಟಿಲ್ಲ. ಸಿನಿಮಾ-ಟೋಗ್ರಾಫರ್ ಪಿ.ಸಿ. ಶ್ರೀರಾಮ್ ಕೆಲಸ ಹಾಗೂ ಗ್ರಾಫಿಕ್ ತಂಡದ ವೃತ್ತಿಪರತೆಗೆ ದಟ್ಟ ಸಾಕ್ಷ್ಯಗಳು ಸಿನಿಮಾದಲ್ಲಿ ಇವೆ.
ಹಿಡಿದಿಡುವ, ಚರ್ಚೆಗೆ ಗ್ರಾಸ ಒದಗಿಸುವ, ತಮ್ಮ ‘ಬ್ಲ್ಯಾಕ್ ಅಂಡ್ ವೈಟ್’ ಸೂತ್ರವನ್ನೇ ಮುದ್ದಿಸುವ ಶಂಕರ್ ಇನ್ನೊಂದು ನೋಡಿಸಿಕೊಳ್ಳುವ ಸಿನಿಮಾ ಕೊಟ್ಟಿದ್ದಾರೆ.
