‘ಸುಳ್ಳು ಹೇಳುವವನು ಖಂಡಿತ ನಿರ್ದೇಶಕನಾಗುತ್ತಾನೆ’ ಎಂದು ನಿರ್ದೇಶಕ ಸೂರಿ ಹೇಳುತ್ತಲೇ ನಗೆಬುಗ್ಗೆ ಸ್ಫೋಟಗೊಂಡಿತು. ‘ಚಾರ್ಲಿ’ ನಿರ್ದೇಶಕ ಶಿವ ಅವರನ್ನು ಕುರಿತು ಸೂರಿ ಹೇಳಿದ ಮಾತು ಅದಾಗಿತ್ತು! ಒಂಚೂರು ಸುಳ್ಳು ಹೇಳಿ, ತಮ್ಮ ಬಳಿ ಕೆಲಸಕ್ಕೆ ಶಿವ ಬಂದು ಸೇರಿದ್ದು, ಬಳಿಕ ಸಾಕಷ್ಟು ಪರಿಶ್ರಮ ವಹಿಸಿ ಕೆಲಸ ಮಾಡಿದ್ದು ಎಲ್ಲವನ್ನೂ ಸೂರಿ ಹಂಚಿಕೊಂಡರು.
ಈಗ ಅವರೇ ಸ್ವತಂತ್ರವಾಗಿ ನಿರ್ದೇಶನ ಮಾಡಿರುವ ‘ಚಾರ್ಲಿ’ ಸಿನಿಮಾದ ಹಾಡುಗಳ ಸಿ.ಡಿ ಬಿಡುಗಡೆಗೆ ತಾವು ಖುಷಿಯಿಂದ ಬಂದಿದ್ದಾಗಿ ಸೂರಿ ಹೇಳಿಕೊಂಡರು. ಸಿ.ಡಿ ಬಿಡುಗಡೆ ಸಮಾರಂಭವನ್ನು ತುಸು ಅದ್ದೂರಿಯಾಗಿಯೇ ಆಯೋಜಿಸಿದ್ದರು ನಿರ್ಮಾಪಕ ಎಲ್.ವೈ.ಎಂ.ಮಂಜು. ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿರುವ ಅವರಿಗೆ ಸ್ನೇಹಿತ ವಾಸು ಎಂಬುವವರು ಶಿವ ಅವರನ್ನು ಪರಿಚಯಿಸಿದ್ದರಂತೆ.
‘ಇದು ಲಾಭ-– ನಷ್ಟ ಎಂಬೆಲ್ಲ ವ್ಯಾಪಾರಿ ಮನೋಭಾವದಿಂದ ಮಾಡಿದ ಸಿನಿಮಾ ಅಲ್ಲ. ಕೇವಲ ಫ್ರೆಂಡ್‌ಶಿಪ್‌ಗೋಸ್ಕರ ಚಿತ್ರ ನಿರ್ಮಾಣ ಮಾಡಿದ್ದೇನೆ’ ಎಂದು ಮಂಜು ಹೇಳಿದರು. ‘ಚಾರ್ಲಿ ಅಂದಾಕ್ಷಣ ಚಾಪ್ಲಿನ್ ನೆನಪು ಬಂದೇ ಬರುತ್ತದೆ. ‘ಚಾರ್ಲಿ’ ಸಿನಿಮಾದ ನಾಯಕನ ಕೆಲಸವೂ ಅದೇ. ಎಲ್ಲರೂ ಸದಾ ಖುಷಿ ಖುಷಿಯಾಗಿ ಇರುವಂತೆ ಆತ ನೋಡಿಕೊಳ್ಳುತ್ತಾನೆ’ ಎಂದ ಶಿವ, ಇಷ್ಟಕ್ಕಿಂತ ಹೆಚ್ಚು ವಿವರಗಳನ್ನು ನೀಡಲಿಲ್ಲ.
ಐದು ಹಾಡುಗಳಿಗೆ ಸಂಗೀತ ಹೊಸೆದಿರುವ ವೀರ ಸಮರ್ಥ್‌ಗೆ ಇದು ತಮ್ಮ ಹೃದಯಕ್ಕೆ ಹತ್ತಿರವಾದ ಅಲ್ಬಂ ಅನಿಸಿದೆಯಂತೆ. ‘ಕೆಲವು ಸಿನಿಮಾದ ಹಾಡುಗಳು ಮನಸ್ಸಿಗೆ ಖುಷಿ ಕೊಡುತ್ತವೆ. ಆದರೆ ಚಾರ್ಲಿ ನನಗೆ ಆತ್ಮತೃಪ್ತಿ ನೀಡಿದ ಚಿತ್ರ’ ಎಂದರು. ತಮ್ಮಿಂದ ಸಿನಿಮಾಕ್ಕೆ ಹಾಡು ಬರೆಸುವ ಧೈರ್ಯ ಮಾಡಿದ ಶಿವ ಅವರ ಸಾಹಸಕ್ಕೆ ನಿರ್ದೇಶಕ ಚೇತನ್‌ಕುಮಾರ್ ಅಚ್ಚರಿ ವ್ಯಕ್ತಪಡಿಸಿದರು. ‘ಸಂಗೀತದಲ್ಲಿ ಸಮರ್ಥ ಈ ವೀರ ಸಮರ್ಥ’ ಎಂದು ಕವಿರಾಜ್ ಶ್ಲಾಘಿಸಿದರು.
ನಾಯಕ ಕೃಷ್ಣ ಇನ್ನೊಂದು ಸಿನಿಮಾದ ಶೂಟಿಂಗ್‌ನಲ್ಲಿ ಇದ್ದ ಕಾರಣ, ಸಮಾರಂಭಕ್ಕೆ ಬಂದಿರಲಿಲ್ಲ. ‘ಖುಷಿ, ವಿಷಾದ ಇತರ ಭಾವನೆಗಳ ಪ್ಯಾಕೇಜ್ ಈ ಚಾರ್ಲಿ’ ಎಂದು ನಾಯಕಿ ವೈಶಾಲಿ ದೀಪಕ್ ಹೇಳಿದರೆ, ‘ನಮ್ಮ ಸಿನಿಮಾ ನಮಗೆ ಇಷ್ಟವಾಗುತ್ತದೆ. ಪ್ರೇಕ್ಷಕರು ಕೂಡ ಇದನ್ನು ಇಷ್ಟಪಡಲಿದ್ದಾರೆ’ ಎಂಬ ವಿಶ್ವಾಸ ಇನ್ನೊಬ್ಬ ನಾಯಕಿ ಮಿಲನ ನಾಗರಾಜ್ ಅವರದಾಗಿತ್ತು.
ಸಿ.ಡಿ ಬಿಡುಗಡೆ ಮಾಡಬೇಕಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗಾಗಿ ಕಾದು ಕಾದು ಎಲ್ಲರೂ ಸುಸ್ತಾದರು. ಸಾಕಷ್ಟು ತಡವಾಗಿ ಬಂದ ಅವರು, ಸಿ.ಡಿ ಬಿಡುಗಡೆ ಮಾಡಿ ಶುಭ ಕೋರಿದರು. ಖಳನಾಯಕ ರಂಗಶಂಕರ ಮಂಜು, ಉದಯ್ ಮಾತನಾಡಿದರು.
