ಮನೋರಂಜನೆ

ವಿಜಯ್ ಅವರ ಜಾಕ್ಸನ್ ಕುಣಿತ ಶುರು

Pinterest LinkedIn Tumblr

crec16Jackson

ಸಂಕ್ರಾಂತಿ ಹಬ್ಬವು ತಮಗೆಲ್ಲ ಸಿಹಿಯನ್ನೇ ತರಲಿ ಎಂದು ಆಶಿಸಿ ಸಂಕ್ರಾಂತಿಯ ದಿನವಾದ ಗುರುವಾರ, ಜ.15 ‘ಜಾಕ್ಸನ್’ ಚಿತ್ರವನ್ನು ತೆರೆಯಮೇಲೆ ತಂದಿದ್ದಾರೆ ನಿರ್ಮಾಪಕ ಸುಂದರ್ ಗೌಡ್ರು. ‘ಈ ಸಿನಿಮಾ ಕೇವಲ ಮಕರ ಸಂಕ್ರಾಂತಿಯ ಕೊಡುಗೆ ಅಲ್ಲ. ಬದಲಾಗಿ ನಾಯಕ ವಿಜಯ್ ಅವರ ಹುಟ್ಟುಹಬ್ಬಕ್ಕೆ (ಜ. 20) ಅವರ ಅಭಿಮಾನಿಗಳಿಗೆ ನಾವು ನೀಡುತ್ತಿರುವ ಪರಿಪೂರ್ಣ ಉಡುಗೊರೆ’ ಎಂದಿದ್ದಾರೆ ಅವರು.

ಸಂಕಲನಕಾರರಾಗಿದ್ದ ಸನತ್‌ಕುಮಾರ್ ‘ಜಾಕ್ಸನ್’ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ತಮಿಳಿನ ‘ಇದರ್‌ಕುದನ್‌ ಆಸೈಪಟ್ಟೈ ಬಾಲಕುಮಾರ’ ಸಿನಿಮಾವನ್ನು ವಿಜಯ್‌ ಇಮೇಜ್ ಹಾಗೂ ಇಲ್ಲಿನ ಪರಿಸರಕ್ಕೆ ತಕ್ಕಂತೆ ಸಾಕಷ್ಟು ಬದಲಾವಣೆ ಮಾಡಿ ತಂದಿದ್ದಾರಂತೆ. ಚಿತ್ರದಲ್ಲಿ ಮೂರು ಮುಖ್ಯ ಜೋಡಿಗಳಿವೆ; ಅವು ವಿಜಯ್–ರಂಗಾಯಣ ರಘು, ವಿಜಯ್– ಪಾವನಾ ಮತ್ತು ಅಭಿ– ಐಶ್ವರ್ಯ. ಜೊತೆಗೆ ವೀರ್‌ಸಮರ್ಥ್‌ ಸಂಗೀತ ಚಿತ್ರಕ್ಕೆ ಜೋಡಿಯಂತೆ. ಅಲ್ಲದೇ ಚಿತ್ರದ ಕೊನೆಯಲ್ಲಿ ಎರಡು ಪ್ರಬಲ ಸಂದೇಶ ರವಾನಿಸಿದ್ದಾರಂತೆ ನಿರ್ದೇಶಕರು.

‘ಜಾನಿ ಮೇರಾ ನಾಮ್’, ‘ಜಂಗ್ಲಿ’ ರೀತಿಯ ಇನ್ನೊಂದು ಹಾಸ್ಯ ಪ್ರಧಾನ ಮತ್ತು ಆ್ಯಕ್ಷನ್ ಕೂಡ ಇರುವ ಚಿತ್ರ ‘ಜಾಕ್ಸನ್’ ಎಂದ ವಿಜಯ್, ತಮ್ಮ ವೃತ್ತಿ ಜೀವನದ ಪ್ರಾರಂಭದ ದಿನಗಳನ್ನೂ ಮೆಲುಕು ಹಾಕಿದರು. ವಿಜಯ್‌ಗೆ ಜೊತೆಯಾಗಿರುವ ನಾಯಕಿ ಪಾವನಾ, ‘ಜಾಕ್ಸನ್ ಒಂದು ‘ಖರಾಬ್’ ಲವ್ ಸ್ಟೋರಿ. ಇದರಲ್ಲಿ ನನ್ನದು ತುಂಬಾ ಪವರ್‌ಫುಲ್ ಪಾತ್ರ’ ಎಂದರು.

‘ಸಿಂಹಾದ್ರಿ’ಯಲ್ಲಿ ವಿಜಯ್ ತಂಗಿಯಾಗಿದ್ದ ಐಶ್ವರ್ಯ ಅವರ ಹೆಸರನ್ನು ಈ ಚಿತ್ರಕ್ಕೆ ಸೂಚಿಸಿದ್ದು ವಿಜಯ್ ಅಂತೆ. ಅದಕ್ಕಾಗಿ ಅವರು ವಿಜಯ್‌ಗೆ ಋಣಿ. ಐಶ್ವರ್ಯಗೆ ಜೊತೆಯಾಗಿದ್ದಾರೆ ಅಭಿ. ಚಿತ್ರಕ್ಕೆ ಸೆಲ್ವಂ ಛಾಯಾಗ್ರಹಣವಿದೆ. ನಿನ್ನೆಯಿಂದ ರಾಜ್ಯದಾದ್ಯಂತ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಜಾಕ್ಸನ್’ ಕುಣಿತ ಆರಂಭಿಸಿದ್ದಾನೆ.

Write A Comment