‘6–5=2’ ಚಿತ್ರದ ಯಶಸ್ಸಿನಿಂದ ಪ್ರೇರಣೆಗೊಂಡು, ಈಗ ಕನ್ನಡದಲ್ಲಿ ದೆವ್ವ ಭೂತಗಳ ಹಾವಳಿ ಹೆಚ್ಚಾಗಿದೆ. ಅದರ ನಂತರ ಒಂದೊಂದಾಗಿ ಹಾರರ್ ಚಿತ್ರಗಳು ತೆರೆಗೆ ಬರುತ್ತಲೇ ಇವೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ– ‘ತಮಿಸ್ರ’. ಸಿನಿಮಾದ ಹೆಸರೇ ವಿಚಿತ್ರವಾಗಿದೆ ಎನ್ನುತ್ತೀರಾ? ಅದಕ್ಕೆ ಚಿತ್ರತಂಡದ ಉತ್ತರ; ‘ತಮಿಸ್ರ’ ಸಂಸ್ಕೃತ ಪದ. ಅದು ಗರುಡಪುರಾಣದಲ್ಲಿ ಪ್ರಸ್ತಾಪವಾಗುವ, ನರಕದಲ್ಲಿ ನೀಡಲಾಗುವ ಒಂದು ಪ್ರಕಾರದ ಶಿಕ್ಷೆಯ ಹೆಸರು.
‘ಚಿತ್ರಕ್ಕೆ ಸೂಕ್ತವಾಗಿದೆ ಎಂದು ಈ ಹೆಸರನ್ನು ಆಯ್ದುಕೊಂಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಪ್ರಕಾಶ್ ಹಾಸನ್. ಇದು ಅವರ ಮೊದಲ ಚಿತ್ರ. ಈ ಮೊದಲು ‘ನಮ್ಮೂರೇ ನಮಗೆ ಸವಿಬೆಲ್ಲ’, ‘ಒಂಟಿ’ ಕಿರುಚಿತ್ರಗಳನ್ನು ನಿರ್ಮಿಸಿದ ಅನುಭವವಿದೆ. ‘ಚಿತ್ರದ ನಾಲ್ಕು ಮುಖ್ಯ ಪಾತ್ರಧಾರಿಗಳು ಸುಖಭೋಗಕ್ಕಾಗಿ ಎಸಗುವ ಕೃತ್ಯಗಳಿಗೆ ಕೊನೆಯಲ್ಲಿ ಸಿಗುವ ಶಿಕ್ಷೆಯೇ ತಮಿಸ್ರ’ ಎಂದು ಕಥೆಯ ಎಳೆ ನೀಡುತ್ತಾರೆ ಅವರು.
‘ನೆವರ್ ಎ ಶಾರ್ಟ್‌ಕಟ್ ಟು ಹ್ಯಾಪಿನೆಸ್’ ಎಂಬುದು ಚಿತ್ರದ ಉಪ ಶೀರ್ಷಿಕೆ. ಶಾರ್ಟ್ ಆಗಿ ಟ್ರೇಲರ್ ತೋರಿಸಿ– ಹೆದರಿಸಿ ಚಿತ್ರದ ಬಗ್ಗೆ ಕುತೂಹಲ ಮೂಡಿಸುವ ಯತ್ನ ತಂಡದ್ದಾಗಿತ್ತು. ಆದರೆ ಟ್ರೇಲರ್ ನೋಡಿದವರಾರೂ ಹೆದರಿಕೊಳ್ಳದಿರುವುದು ನೋಡಿದವರ ತಪ್ಪಂತೂ ಅಲ್ಲ!
ಬ್ಯಾಂಕ್ ಉದ್ಯೋಗಕ್ಕೆ ಟಾಟಾ ಹೇಳಿ ಬಣ್ಣದ ಲೋಕವೇ ನನ್ನುಸಿರು ಎನ್ನುವ ಶಿವ ‘ತಮಿಸ್ರ’ದ ನಾಯಕ. ಕಥೆಯೂ ಅವರದೇ. ನಾಯಕನಿಗೆ ಜೊತೆಯಾಗಿದ್ದಾರೆ ತಮಿಳಿನ ‘ಸ್ಕಂದಗುರು’ ಚಿತ್ರದಲ್ಲಿ ಕಾಣಿಸಿಕೊಂಡ ಕಾವ್ಯ. ಅವರಿನ್ನೂ ಬಿ.ಕಾಂ. ವಿದ್ಯಾರ್ಥಿನಿ.
ಮೂರ್ನಾಲ್ಕು ಚಿತ್ರಗಳಿಗೆ ಸಂಗೀತ ನೀಡಿದ್ದ ಜೂಡಾ ಸ್ಯಾಂಡಿ ‘ತಮಿಸ್ರ’ಗೆ ಸಂಗೀತ ನಿರ್ದೇಶಿಸಿದ್ದಾರೆ.
ಹಿನ್ನೆಲೆ ಸಂಗೀತದ ಹೊರತಾಗಿ ಒಂದು ಪ್ರಮೋಷನ್ ಹಾಡು ಮಾತ್ರ ಇದ್ದು, ಅದರ ಸಾಹಿತ್ಯ ನಾಗೇಂದ್ರಪ್ರಸಾದ್ ಅವರದ್ದು. ಎಸ್.ವಿ.ಭಾವಿಕಟ್ಟಿ ಎಂಬ ಹೊಸಬರ ಛಾಯಾಗ್ರಹಣ ಚಿತ್ರಕ್ಕಿದೆ. ನಾಗತಿಹಳ್ಳಿ ಸಂತೋಷ್ ಚಿತ್ರಕಥೆ, ಸಂಭಾಷಣೆ ಜತೆಗೆ ಸಹ ನಿರ್ದೇಶನದ ಭಾರವನ್ನೂ ನಿಭಾಯಿಸಿದ್ದಾರೆ. ಚಿತ್ರೀಕರಣ ಪೂರ್ಣಗೊಂಡಿದ್ದು, ದೊಡ್ಡಬಳ್ಳಾಪುರ, ಬೆಂಗಳೂರು ಮತ್ತು ಹೊರನಾಡಿನ ರಸ್ತೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಗಾರ್ಮೆಂಟ್ ಉದ್ಯಮಿ ಆರ್‌ಎಮ್‌ಎನ್ ನಾಗರಾಜ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
