ಮನೋರಂಜನೆ

ಸೋನಿಯಾ ಜೀವನ ಚರಿತ್ರೆ ‘ದಿ ರೆಡ್ ಸ್ಯಾರಿ’ ಭಾರತದಲ್ಲಿ ಬಿಡುಗಡೆ: ಪ್ರಧಾನಿ ಪಟ್ಟ ತಿರಸ್ಕರಿಸುವಂತೆ ರಾಜೀವ್ ಕೈಹಿಡಿದು ಬೇಡಿದ್ದರಂತೆ ಸೋನಿಯಾ!

Pinterest LinkedIn Tumblr

soniya

ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೀವನ ಚರಿತ್ರೆ ಕುರಿತದ್ದು ಎಂದು ಹೇಳಲಾದ ಪುಸ್ತಕ ‘ದಿ ರೆಡ್ ಸ್ಯಾರಿ’ ಕೊನೆಗೂ ಶನಿವಾರ ಓದುಗರ ಕೈ ಸೇರಲಿದೆ.

ಸ್ಪ್ಯಾನಿಷ್ ಲೇಖಕ ಜವಿರ್ ಮರೊ ಬರೆದಿದ್ದ ಈ ಪುಸ್ತಕ ಏಳು ವರ್ಷಗಳ ಹಿಂದೆಯೇ ಪ್ರಕಟಣೆಗೊಂಡಿದ್ದರೂ, ಅಘೋಷಿತ ನಿಷೇಧದಿಂದಾಗಿ ಭಾರತದಲ್ಲಿ ಬಿಡುಗಡೆಗೊಂಡಿರಲಿಲ್ಲ. ಅದಕ್ಕೆ ಕಾರಣ ಕಳೆದ ಹತ್ತು ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಆಳ್ವಿಕೆಯಲ್ಲಿದ್ದುದು.

ಜಗತ್ತಿನ ಬಲಿಷ್ಠ ವ್ಯಕ್ತಿಗಳಲ್ಲಿ ಒಬ್ಬರು ಎಂದು ಬಣ್ಣಿಸಲಾಗಿದ್ದ ಸೋನಿಯಾ ಗಾಂಧಿ ಅವರ ಜೀವನ ಕುರಿತ ಅನೇಕ ಕಾಲ್ಪನಿಕ ಸಂಗತಿಗಳನ್ನು ಈ ಪುಸ್ತಕ ಒಳಗೊಂಡಿದೆ ಎನ್ನಲಾಗಿದೆ. ಕಾಕತಾಳೀಯವೆಂಬಂತೆ ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ಕೆಲವು ಸಂಗತಿಗಳು ನಿಜ ಜೀವನದಲ್ಲೂ ಘಟಿಸಿವೆ. ಇದರಿಂದಾಗಿ ಈ ಪುಸ್ತಕ ಭಾರತದಲ್ಲಿ ಪ್ರಕಟಗೊಳ್ಳುವುದು ಕಾಂಗ್ರೆಸ್ ಅಧ್ಯಕ್ಷೆಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ 2010ರಲ್ಲಿ ಭಾರತದಲ್ಲಿ ಪುಸ್ತಕ ಬಿಡುಗಡೆ ಮಾಡುವ ಪ್ರಕಾಶಕ ಸಂಸ್ಥೆ ರೋಲಿ ಬುಕ್‌ನ ಪ್ರಯತ್ನ ಯಶ ನೀಡಿರಲಿಲ್ಲ. ಕಾಂಗ್ರೆಸ್ ಕಾರ‌್ಯಕರ್ತರ ಉಗ್ರ ಪ್ರತಿಭಟನೆ ಹಾಗು ಕೆಲವು ನಾಯಕರು ಪ್ರಕಾಶಕರಿಗೆ ಲೀಗಲ್ ನೋಟಿಸ್ ನೀಡಿದ್ದರಿಂದ ಪ್ರಕಾಶಕರು ಪುಸ್ತಕ ಬಿಡುಗಡೆ ನಿರ್ಧಾರದಿಂದ ಹಿಂದೆ ಸರಿದಿದ್ದರು.

ಈಗ ಕಾಲ ಬದಲಾಗಿದೆ. ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಬಿಜೆಪಿ ಗದ್ದುಗೆಗೇರಿದೆ. ಆದ್ದರಿಂದ ಪುಸ್ತಕ ಬಿಡುಗಡೆ ಮಾಡುವ ಧೈರ‌್ಯವನ್ನು ರೋಲಿಬುಕ್ ತೋರಿಸಿದೆ. ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಕಾನೂನು ಕ್ರಮದ ಬೆದರಿಕೆಯೊಡ್ಡಿದ್ದರೂ, ಅದನ್ನು ನಿರ್ಲಕ್ಷಿಸಿ ಪುಸ್ತಕ ಬಿಡುಗಡೆಯಾಗುತ್ತಿದೆ.

ಪ್ರಕಾಶಕರ ಸಮರ್ಥನೆ ಕಾಂಗ್ರೆಸ್ ವಿರೋಧದಿಂದಾಗಿ ಈ ತನಕ ಪುಸ್ತಕ ಬಿಡುಗಡೆ ತಡೆಹಿಡಿಯಲಾಗಿತ್ತು ಎಂಬುದನ್ನು ಪ್ರಕಾಶಕ ಸಂಸ್ಥೆಯಾದ ರೋಲಿಬುಕ್ ನಿರಾಕರಿಸಿದೆ. ”ಪುಸ್ತಕ ಬಿಡುಗಡೆಗೆ ಭಾರತದಲ್ಲಿ ಯಾವತ್ತೂ ನಿಷೇಧವಿರಲಿಲ್ಲ.2008ರಲ್ಲಿ ಪ್ರಕಟಣೆಗೆ ಸನ್ನಿವೇಶ ಸೂಕ್ತವಿಲ್ಲ ಎಂಬ ಕಾರಣಕ್ಕೆ ತಡೆಹಿಡಿಯಲಾಗಿತ್ತು. ಸೋನಿಯಾ ಗಾಂಧಿ ಅವರ ವಕೀಲರ ಸಮ್ಮತಿ ಪಡೆದೇ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ,” ಎಂದು ಪ್ರಕಾಶಕರಾದ ಪ್ರಮೋದ್ ಕಪೂರ್ ಹೇಳಿದ್ದಾರೆ.

ಏನಿದು ಪುಸ್ತಕ ಸೋನಿಯಾ ಗಾಂಧಿ ಅವರ ಜೀವನ ಕುರಿತು ಸ್ಪೇನ್ ಲೇಖಕ ಜವಿರ್ ಮರೊ ಸ್ಪ್ಯಾನಿಶ್ ಭಾಷೆಯಲ್ಲಿ 2008 ‘ದಿ ರೆಡ್ ಸ್ಯಾರಿ'(ಎಸಾರಿ ರೊಜೊ) ಎಂಬ ಕಾಲ್ಪನಿಕ ಪುಸ್ತಕ ಬರೆದಿದ್ದರು. ಈ ಪುಸ್ತಕ ಯುರೋಪ್ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಾಖಲೆ ಮಾರಾಟ ದಾಖಲಿಸಿತ್ತು.

ಪುಸ್ತಕದ ಹೂರಣವೇನು? ಮಾಜಿ ಪ್ರಧಾನಿ ಇಂದಿರಾ ಗಾಂಧಿ ಖಾಲಿಸ್ಥಾನ್ ಭಯೋತ್ಪಾದಕರ ಗುಂಡಿಗೆ ಬಲಿಯಾದ ಬಳಿಕ, ಪಕ್ಷ ಹಾಗೂ ದೇಶದ ನಾಯಕತ್ವವನ್ನು ಅವರ ಪುತ್ರ ರಾಜೀವ್ ಗಾಂಧಿ ವಹಿಸಿಕೊಳ್ಳಬೇಕಾಗಿ ಬಂದಿತ್ತು. ಈ ವಿಷಯವನ್ನು ಪತ್ನಿ ಸೋನಿಯಾ ಬಳಿ ರಾಜೀವ್ ತಿಳಿಸಿದಾಗ, ಖಂಡತುಂಡವಾಗಿ ಪ್ರಸ್ತಾಪವನ್ನು ತಿರಸ್ಕರಿಸಿದ್ದ ಸೋನಿಯಾ, ” ಅವರು ನಿಮ್ಮನ್ನೂ ಕೊಲ್ಲುತ್ತಾರೆ, ನಿಮ್ಮನ್ನೂ ಕೊಲ್ಲುತ್ತಾರೆ,” ಎಂದು ಗೋಳಾಡಿ ಅತ್ತಿದ್ದರು. ರಾಜೀವ್ ಪ್ರಧಾನಿಯಾಗುತ್ತಾರೆ ಎಂಬ ಸುದ್ದಿ ಸೋನಿಯಾ ಪಾಲಿಗೆ ‘ಮರಣ ದಂಡನೆ’ಯಂತೆ ಭಾಸವಾಗಿತ್ತು ಎಂದು ಪುಸ್ತಕದಲ್ಲಿ ಹೇಳಲಾಗಿದೆ.

ರಾಜೀವ್ ಎಷ್ಟೇ ಸಂತೈಸಿ ತಿಳಿ ಹೇಳಿದರೂ ಪತಿ ಪ್ರಧಾನಿಯಾಗುವುದಕ್ಕೆ ಸೋನಿಯಾ ಬಿಲ್‌ಕುಲ್ ಒಪ್ಪಿರಲಿಲ್ಲ. ರಾಜೀವ್ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ”ಇಲ್ಲ, ಓ ದೇವರೆ ,ಇಲ್ಲ,”ಎನ್ನುತ್ತಾ ಪ್ರವಾಹದಂತೆ ಕಣ್ಣೀರಿಟ್ಟರು. ಸೋನಿಯಾ ಅವರ ದೇಹ ವಿದ್ಯುತ್ ಶಾಕ್ ತಗುಲಿರುವಂತೆ ತತ್ತರಿಸಿತ್ತು. ಮನದಾಳ ನೋವು ,ಭಯ ಅಳುವಾಗಿ ಪ್ರವಹಿಸಿತು ಎಂದು ಲೇಖಕ ಜವಿರ್ ಮರೊ ಬರೆದಿದ್ದಾರೆ.

”1991ರಲ್ಲಿ ರಾಜೀವ್ ಹತ್ಯೆಯಾದಾಗ ಪ್ರಿಯಾಂಕ ಅವರು ತಾಯಿಯ ರೂಂಗೆ ನುಗ್ಗಿ ಇನ್‌ಹೇಲರ್ ಮತ್ತು ಔಷಧ ಹುಡುಕಾಡಿದರು. ಪ್ರಿಯಾಂಕ ಲಿವಿಂಗ್ ರೂಂಗೆ ಬರುವ ವೇಳೆಗೆ ಆರಾಮ ಕುರ್ಚಿಯಲ್ಲಿ ಕುಳಿತಿದ್ದ ಸೋನಿಯಾ ತಲೆ ಹಿಂದಕ್ಕೆ ಬಾಗತ್ತು, ಕಣ್ಣುಗಳು ಮೇಲ್ಮುಖವಾಗಿದ್ದವು,ಬಾಯಿ ತೆರದಿದ್ದು, ಉಸಿರಾಟಕ್ಕೆ ಚಡಪಡಿಸುತ್ತಿದ್ದರು. ಪ್ರಿಯಾಂಕ ಅವರು ತಾಯಿ ಸೋನಿಯಾ ಮೃತಪಟ್ಟರೆಂದು ಭಾವಿಸಿದ್ದರು,”ಎಂದು ಪುಸ್ತಕದಲ್ಲಿ ದಾಖಲಾಗಿದೆ.

ಕೇವಲ ಸೇವಕರಲ್ಲಿ ಮಾತನಾಡುವುದಕ್ಕಾಗಿ ಸೋನಿಯಾ ಹಿಂದಿಯನ್ನೇಕೆ ಕಲಿತರು ಎಂಬುದು ತಿಳಿಯದು ಎಂದು ಲೇಖಕರು ಹೇಳಿದ್ದು, ಸೋನಿಯಾ ಮತ್ತು ಮೇನಕಾ ಗಾಂಧಿ ಅವರ ದ್ವೇಷದ ಮತ್ತು ಹಳಸಿದ ಸಂಬಂಧದ ಬಗ್ಗೆಯೂ ವಿವರಿಸಿದ್ದಾರೆ.

”ಪತಿ ರಾಜೀವ್ ಮರಣಿಸಿದ ನಂತರ ಸೋನಿಯಾ ಭಾರತ ತೊರೆಯಲು ಬಯಸಿದ್ದರು. ಸೋನಿಯಾ ತಾಯಿ ‘ ನೀನು ಯಾವಾಗ ಇಲ್ಲಿಗೆ ಬರುವೆ’ ಎಂದೂ ಪ್ರಶ್ನಿಸಿದ್ದರು. ಸೋನಿಯಾ ಸಕ್ರಿಯ ರಾಜಕಾರಣ ಪ್ರವೇಶಿಸಿದಾಗ ಅವರ ರಾಜಕೀಯ ವಿರೋಧಿಗಳು ಕಾಂಗ್ರೆಸ್ ಅಧ್ಯಕ್ಷೆಯ ವಿದೇಶಿ ಮೂಲ ಕೆದಕಿ ಅವರ ಮನಸ್ಸನ್ನು ಬಹಳಷ್ಟು ಘಾಸಿಗೊಳಿಸಿದ್ದರು,” ಎಂದು ಪುಸ್ತಕದಲ್ಲಿ ಹೇಳಲಾಗಿದೆ. ದುರದೃಷ್ಟವಶಾತ್ ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ಅನೇಕ ಅಂಶಗಳು ಕಾಂಗ್ರೆಸ್ ಅಧ್ಯಕ್ಷೆಯ ಬದುಕಿನಲ್ಲೂ ನಿಜವಾಗಿವೆ.

ಕಟ್ಟುಕತೆ, ಬಾಲಿಶಗಳ ಹೂರಣ ರೆಡ್ ಸ್ಯಾರೀಸ್ ಪುಸ್ತಕ, ಅಸತ್ಯ, ಅರ್ಧಸತ್ಯ, ಬಾಲಿಶ ಮತ್ತು ಮಾನಹಾನಿಕರ ಹೇಳಿಕೆಗಳ ಹೂರಣ ಎಂದು ಕಾಂಗ್ರೆಸ್ ಹೇಳಿದೆ. ಪುಸಕ್ತದಲ್ಲಿರುವುದೆಲ್ಲವೂ ಕಾಲ್ಪನಿಕ ಸಂಭಾಷಣೆಗಳು. ಸೋನಿಯಾ ಅವರ ನಿಜ ಜೀವನದಲ್ಲಿ ಅಂತಹ ಒಂದು ಸಂವಾದವೂ ಏರ್ಪಟ್ಟಿಲ್ಲ. ಕಾಂಗ್ರೆಸ್ ಅಧ್ಯಕ್ಷರು ಹಾಗೂ ಅವರ ಕುಟುಂಬದ ಘನತೆ ಗೌರವ ಕಾಪಾಡಲು ಏನೇನು ಅಗತ್ಯವೋ ಆ ಎಲ್ಲಾ ಕ್ರಮ ಕೈಗೊಳ್ಳುವುದಾಗಿ ಸೋನಿಯಾ ಅವರ ವಕೀಲರು ಹೇಳಿದ್ದಾರೆ.

Write A Comment