ಮನೋರಂಜನೆ

ಮೆಸೆಂಜರ್ ಆಫ್ ಗಾಡ್ ಚಿತ್ರಕ್ಕೆ ಅನುಮತಿಗೆ ಸರಕಾರದ ಹಸ್ತಕ್ಷೇಪದ ಆರೋಪ: ಸೆನ್ಸಾರ್ ಮಂಡಳಿ ಅಧ್ಯಕ್ಷೆ ಲೀಲಾ ಸ್ಯಾಮ್ಸನ್ ರಾಜೀನಾಮೆ

Pinterest LinkedIn Tumblr

lila

ಮುಂಬಯಿ: ಸೆನ್ಸಾರ್ ಮಂಡಳಿ ಸದಸ್ಯರು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ, ಮಂಡಳಿಯಲ್ಲಿ ಸರಕಾರದ ಹಸ್ತಕ್ಷೇಪ ಹೆಚ್ಚಿದೆ ಎಂದು ಆರೋಪಿಸಿರುವ ಸೆನ್ಸಾರ್ ಮಂಡಳಿ ಅಧ್ಯಕ್ಷೆ ಲೀಲಾ ಸ್ಯಾಮ್ಸನ್ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಆದರೆ ಕೇಂದ್ರ ಸರಕಾರ ಈ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದೆ.

”ಮೆಸೆಂಜರ್ ಆಫ್ ಗಾಡ್ ಚಿತ್ರಕ್ಕೆ ಅನುಮತಿ ನೀಡುವಲ್ಲಿ ಸರಕಾರ ಹಸ್ತಕ್ಷೇಪ ಮಾಡಿಲ್ಲ,” ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ, ಸೆನ್ಸಾರ್ ಮಂಡಳಿಯ ಮತ್ತೊಬ್ಬ ಸದಸ್ಯ ಇರಾ ಭಾಸ್ಕರ್ ಅವರೂ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸದಸ್ಯರೂ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ದೇರಾ ಸಚ್ಚಾ ಸೌದಾದ ಮುಖಂಡ ಗುರ‌್ಮೀತ್ ರಾಮ್ ರಹೀಮ್ ಸಿಂಗ್ ನಾಯಕರಾಗಿರುವ ‘ಮೆಸೆಂಜರ್ ಆಫ್ ಗಾಡ್’ ಚಿತ್ರಕ್ಕೆ ಫಿಲ್ಮ್ ಸರ್ಟಿಫಿಕೇಶನ್ ಅಪಲೇಟ್ ಟ್ರಿಬ್ಯುನಲ್ (ಫ್ಯಾಕ್ಟ್) ಹಸಿರು ನಿಶಾನೆ ತೋರುವ ನಿರ್ಧಾರ ಹೊರಬಿದ್ದ ಬೆನ್ನಲ್ಲೇ ಲೀಲಾ ಸ್ಯಾಮ್ಸನ್ ಅವರು ಗುರುವಾರ ರಾತ್ರಿ ತಮ್ಮ ರಾಜೀನಾಮೆಯ ನಿರ್ಧಾರವನ್ನು ಎಸ್ಸೆಮ್ಮೆಸ್ ಮೂಲಕ ತಿಳಿಸಿದ್ದರು. ಶುಕ್ರವಾರ ಅವರು ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

‘ಮೆಸೆಂಜರ್ ಆಫ್ ಗಾಡ್’ ಚಿತ್ರ ಬಿಡುಗಡೆಗೆ ಒಪ್ಪಿಗೆ ದೊರೆತ ಬಗ್ಗೆ ಮಾಹಿತಿಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಲೀಲಾ ಸ್ಯಾಮ್ಸನ್, ”ಹಾಗೆಂದು ಕೇಳಿಬಂತು, ಇದು ಮಂಡಳಿಯ ಅಣಕ. ನನ್ನ ರಾಜೀನಾಮೆ ನಿರ್ಧಾರ ಅಂತಿಮ. ಈ ಬಗ್ಗೆ ವಾರ್ತಾ ಮತ್ತು ಪ್ರಸಾರ ಖಾತೆಯ ಕಾರ‌್ಯದರ್ಶಿಗೆ ಮಾಹಿತಿ ನೀಡಿದ್ದೇನೆ,” ಎಂದರು.

ಹಸ್ತಕ್ಷೇಪ, ಒತ್ತಡ ಮತ್ತು ಮಂಡಳಿ ಸದಸ್ಯರ ಭ್ರಷ್ಟಾಚಾರಗಳು ರಾಜೀನಾಮೆ ನಿರ್ಧಾರಕ್ಕೆ ಕಾರಣ ಎಂದ ಅವರು ”ಮಂಡಳಿಯ ಅವಧಿ ಮುಗಿದು ಹೋಗಿದೆ. ಹೊಸ ಸದಸ್ಯರ ನೇಮಕವಾಗಿಲ್ಲ. ಹಳಬರಿಗೇ ವಿಸ್ತರಣೆ ನೀಡಲಾಗಿದೆ. ಸಭೆ ಮಾಡಲು ನಿಧಿಯ ಕೊರತೆಯಿದೆ ಎಂಬ ಕಾರಣ ನೀಡಿ ಕಳೆದ ಒಂಬತ್ತು ತಿಂಗಳುಗಳಿಂದ ಸಭೆ ಮಾಡಿಲ್ಲ,” ಎಂದು ಸಮಸ್ಯೆಗಳನ್ನು ಬಿಚ್ಚಿಟ್ಟರು ಸ್ಯಾಮ್ಸನ್.

”ಆಮಿರ್ ಖಾನ್ ಅಭಿನಯದ ಚಿತ್ರ ‘ಪಿಕೆ’ಯೂ ಸೇರಿದಂತೆ ಪ್ರತಿ ಸಣ್ಣ ದೊಡ್ಡ ಚಿತ್ರಗಳ ಬಗ್ಗೆ ಸರಕಾರ ಹಸ್ತಕ್ಷೇಪ ಮಾಡುತ್ತಿದೆ. ‘ಪಿಕೆ’ ಚಿತ್ರದ ವಿಷಯದಲ್ಲಂತೂ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಕೆಲ ಮೂಲಭೂತವಾದಿ ಸಂಘಟನೆಗಳು ಒತ್ತಡ ಹೇರಿದ್ದವು. ಕೆಲ ಚಿತ್ರಗಳಿಗೆ ನಾವು ‘ಯು’ ಸರ್ಟಿಫಿಕೇಟ್ ಕೊಟ್ಟರೆ ‘ಎ’ ಕೊಡುವಂತೆ ಒತ್ತಡ ಬರುತ್ತಿತ್ತು,” ಎಂದು ಸ್ಯಾಮ್ಸನ್ ವಿವರಿಸಿದರು.

ಎಂಎಸ್‌ಜಿಗೆ ಹಸಿರು ನಿಶಾನೆ ಸಿಕ್ಕಿದೆ: ದೇರಾ
ಚಂಡೀಗಢ: ‘ಮೆಸೆಂಜರ್ ಆಫ್ ಗಾಡ್’ ಚಿತ್ರ ಪ್ರದರ್ಶನಕ್ಕೆ ಅಗತ್ಯವಾದ ಅನುಮತಿ ದೊರೆತಿದೆ ಎಂದು ಶುಕ್ರವಾರ ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಶುಕ್ರವಾರ ಅಧಿಕೃತ ಪತ್ರ ದೊರೆತಿದ್ದು , ಮುಂದಿನ ವಾರ ಚಿತ್ರ ಬಿಡುಗಡೆ ಮಾಡಬಹುದಾಗಿದೆ ಎಂದು ದೇರಾ ಸಚ್ಚಾ ಸೌದಾದ ವಕ್ತಾರ ಪಾಸ್ವಾನ್ ತಿಳಿಸಿದ್ದಾರೆ.

ಏನಿದು ವಿವಾದ?:
‘ಗಾಡ್ ಆಫ್ ಮೆಸೆಂಜರ್’ ಚಿತ್ರವು ಮಾದಕ ವಸ್ತುಗಳ ಹಾವಳಿಯೂ ಸೇರಿದಂತೆ ಹಲವು ಸಾಮಾಜಿಕ ಪಿಡುಗುಗಳ ಬಗ್ಗೆ ಚರ್ಚಿಸುತ್ತದೆ. ಆದರೆ ಚಿತ್ರ ಬಿಡುಗಡೆಗೆ ಹರಿಯಾಣಾದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಚಿತ್ರದ ನಾಯಕನಾಗಿರುವ ದೇರಾ ಸಚ್ಚಾ ಸೌದಾದ ಮುಖಂಡ ಗುರ‌್ಮೀತ್ ರಾಮ್‌ರಹೀಮ್ ಸಿಂಗ್ ಅವರನ್ನು ದೇವರಂತೆ ಬಿಂಬಿಸಲಾಗಿದೆ ಎಂದು ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿಷಯವನ್ನು ಫಿಲ್ಮ್ ಸರ್ಟಿಫಿಕೇಶನ್ ಅಪಲೇಟ್ ಟ್ರಿಬ್ಯುನಲ್(ಫ್ಯಾಕ್ಟ್ ) ಮುಂದಿಡಲಾಗಿತ್ತು. ಸಾಮಾನ್ಯವಾಗಿ ವಿಳಂಬವಾಗುವ ಫ್ಯಾಕ್ಟ್ ನಿರ್ಧಾರಗಳು, ಎಂಎಸ್‌ಜಿ ವಿಷಯದಲ್ಲಿ ವಾರವೊಪ್ಪತ್ತಿನಲ್ಲೇ ಹೊರಬಿದ್ದಿದೆ.

ಪ್ರದರ್ಶನಕ್ಕೆ ಕಾದಿದ್ದ 2 ಲಕ್ಷ ಮಂದಿ
ಗುರ‌್ಗಾಂವ್: ಎಂಎಸ್‌ಜಿ ಚಿತ್ರ ವೀಕ್ಷಿಸಲು ಗುರ‌್ಗಾಂವ್‌ನ ಲೀಶರ್ ವ್ಯಾಲಿಯಲ್ಲಿ ಶುಕ್ರವಾರ ಚಿತ್ರ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹೆಂಗಸರು ಮಕ್ಕಳೂ ಸೇರಿದಂತೆ ಸುಮಾರು 2 ಲಕ್ಷ ಮಂದಿ ನೆರದಿದ್ದರು. ಪ್ರತಿ ಟಿಕೆಟ್‌ಗೆ 2000 ರೂ ಶುಲ್ಕ ನಿಗದಿ ಮಾಡಲಾಗಿತ್ತು. ಬಹಿರಂಗ ಪ್ರದರ್ಶನಕ್ಕೆಂದೇ 12 ಬೃಹತ್ ತೆರೆಗಳನ್ನು ಅಳವಡಿಸಲಾಗಿತ್ತು.

ಶಾಂತಿ ಸುವ್ಯವಸ್ಥೆ ಕಾಪಾಡಲು ಐಎನ್‌ಎಲ್ಡ್ ಮತ್ತು ಐಎನ್‌ಎಸ್‌ಒ ರಾಜಕೀಯ ಪಕ್ಷಗಳ 60 ಮಂದಿ ಕಾರ‌್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆನ್ಸಾರ್ ಮಂಡಳಿಯ ಸುತ್ತಮುತ್ತ:
ಸೆನ್ಸಾರ್ ಮಂಡಳಿಯು ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಡಿಯಲ್ಲಿ ಬರುವ ಶಾಸನಬದ್ಧ ಸಂಸ್ಥೆಯಾಗಿದ್ದು, ಸಂವಿಧಾನದ ಸಿನೆಮಾಟೊಗ್ರಾಫ್ ಆಕ್ಟ್ 1952 ಅಡಿಯಲ್ಲಿ ಚಿತ್ರಗಳ ಸಾರ್ವಜನಿಕ ಪ್ರದರ್ಶನದ ನಿಯಂತ್ರಣದ ಅಧಿಕಾರವನ್ನು ಹೊಂದಿದೆ. ಸ್ಯಾಮ್ಸನ್ ಅವರು ಸೆನ್ಸಾರ್ ಮಂಡಳಿಯ ಮುಖ್ಯಸ್ಥರಾಗಿ 2011 ರಲ್ಲಿ ನೇಮಕಗೊಂಡಿದ್ದರು. ಅವರ ಅವಧಿಯು ಕಳೆದ ಸೆಪ್ಟಂಬರ್‌ನಲ್ಲೇ ಮುಗಿದಿದ್ದು, ಈ ತನಕ ಮೂರು ತಿಂಗಳಿಗೊಂದು ಬಾರಿ ತಾತ್ಕಾಲಿಕ ವಿಸ್ತರಣೆ ಪಡೆಯುತ್ತಿದ್ದರು.

Write A Comment