ಮನೋರಂಜನೆ

ಭಕ್ತಿಪಥಕ್ಕೆ ನಟ ಹರೀಶ್‌ರಾಜ್‌ ಹೈಜಂಪ್‌!

Pinterest LinkedIn Tumblr

psmec17harish

‘ಕಲಾಕಾರ್‌’, ‘ಗನ್‌’ ಸಿನಿಮಾಗಳನ್ನು ನಿರ್ಮಿಸಿ ಕೈ ಸುಟ್ಟುಕೊಂಡಿದ್ದ ಹರೀಶ್‌ರಾಜ್‌ ಅವರನ್ನು ‘ಜಂಪಿಂಗ್‌ ಸ್ಟಾರ್‌’ ಎಂದು ಗೆಳೆಯರು ತಮಾಷೆ ಮಾಡುತ್ತಾರೆ. ಥಿಯೇಟರ್‌ ಮೇಲಿನಿಂದ ಕೆಳಗೆ ಬೀಳಲು ಪ್ರಯತ್ನಿಸಿದ ಕಾರಣಕ್ಕಾಗಿ ಅಂಟಿಕೊಂಡಿದ್ದು ಈ ವಿಶೇಷಣ. ಈ ‘ಜಂಪಿಂಗ್‌ ಸ್ಟಾರ್‌’ ಇದೀಗ ಸದ್ದಿಲ್ಲದೆ ಮತ್ತೊಮ್ಮೆ ನೆಗೆದಿದ್ದಾರೆ. ಈ ನೆಗೆತ ಸಾಧ್ಯವಾಗಿರುವುದು ಅಪ್ಪಟ ಕಮರ್ಷಿಯಲ್‌ ಕಥನಗಳಿಂದ ಭಕ್ತಿಪ್ರಧಾನ ಸಿನಿಮಾ ಅಂಗಳಕ್ಕೆ!

ಕಾಪಾಡು ಶ್ರೀಸತ್ಯನಾರಾಯಣ ಎನ್ನುವುದು ಹರೀಶ್‌ರಾಜ್‌ ಅವರ ಈ ಹೊತ್ತಿನ ಪ್ರಾರ್ಥನೆ. ‘ಶ್ರೀಸತ್ಯನಾರಾಯಣ’ ಅವರ ನಟನೆ, ನಿರ್ಮಾಣ, ನಿರ್ದೇಶನದ ಸಿನಿಮಾ. ಚಿತ್ರೀಕರಣ ಮುಗಿಸಿ, ಸೆನ್ಸಾರ್‌ನಿಂದ ಹಸಿರು ನಿಶಾನೆಯನ್ನೂ ಪಡೆದಿರುವ ಹರೀಶ್‌ರ ಸತ್ಯನಾರಾಯಣ ಮಹಾತ್ಮೆ ಫೆಬ್ರುವರಿಯಲ್ಲಿ ತೆರೆಕಾಣುವ ಸಿದ್ಧತೆ ನಡೆಸುತ್ತಿದೆ. ಇನ್ನೇನು ಹಾಡುಗಳ ಧ್ವನಿಮುದ್ರಿಕೆಯನ್ನು ಪೇಟೆಗೆ ಬಿಡುವ ತಯಾರಿ ನಡೆಸಿರುವ ಅವರ ಕನಸುಮನಸಿನಲ್ಲೂ ಪ್ರಸ್ತುತ ಸತ್ಯನಾರಾಯಣ ಪಾರಾಯಣ.

‘ಶ್ರೀಸತ್ಯನಾರಾಯಣ’ ಎರಡು ಕಾರಣಗಳಿಂದಾಗಿ ಕುತೂಹಲ ಹುಟ್ಟಿಸುತ್ತಿರುವ ಸಿನಿಮಾ. ‘ಕಲಾಕಾರ್‌’, ‘ಗನ್‌’ಗಳಂತಹ ಕಮರ್ಷಿಯಲ್‌ ಕಥನಗಳ ಉತ್ಸಾಹಿ ಭಕ್ತಕಥನಕ್ಕೆ ತೆರೆದುಕೊಂಡಿದ್ದು ಹೇಗೆ ಎನ್ನುವುದು ಕುತೂಹಲಕ್ಕೆ ಮೊದಲ ಕಾರಣ. ಭಕ್ತಿಕಥೆಗಳ ಸಿನಿಮಾಗಳಿಗೆ ಇದು ಕಾಲವೇ ಎನ್ನುವುದು ಎರಡನೆಯ ಪ್ರಶ್ನೆ. ಎರಡೂ ಪ್ರಶ್ನೆಗಳಿಗೆ– ‘ಎಲ್ಲವೂ ಭಗವಂತನ ಚಿತ್ತ’ ಎನ್ನುವ ಧಾಟಿಯಲ್ಲಿಯೇ ಹರೀಶ್‌ ಉತ್ತರಿಸುತ್ತಾರೆ.

‘ಎಷ್ಟು ಅದ್ಭುತ ಸಿನಿಮಾ ಮಾಡಿದರೂ, ಎಷ್ಟು ವಿಭಿನ್ನವಾದ ಕಥೆಯನ್ನು ಹೆಣೆದರೂ ಅದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎನ್ನುವುದಕ್ಕೆ ಖಾತರಿ ಏನು?’ ಎನ್ನುವ ಪ್ರಶ್ನೆ ರೂಪದ ಉತ್ತರವನ್ನು ಅವರು ಮುಂದಿಡುತ್ತಾರೆ. ‘ಪ್ರೇಕ್ಷಕರಿಗೆ ಭಕ್ತಿಪ್ರಧಾನ ಸಿನಿಮಾ ಇಷ್ಟವಾಗಬಾರದು ಎಂದು ನಮ್ಮಷ್ಟಕ್ಕೆ ನಾವು ಯಾಕೆ ತೀರ್ಮಾನಿಸಬೇಕು? ಚರ್ವಿತಚರ್ವಣ ಕಥೆಗಳ ನಡುವೆ ದೇವರ ಕುರಿತ ನಂಬಿಕೆಯ ಸಿನಿಮಾ ನೋಡುಗರಿಗೆ ಭಿನ್ನವಾಗಿ ಕಾಣುವ ಸಾಧ್ಯತೆಯೂ ಇದೆಯಲ್ಲವೇ?’ ಎಂದವರು ಇನ್ನಷ್ಟು ಪ್ರಶ್ನೆಗಳನ್ನು ಹಾಕುತ್ತಾರೆ. ಒಂದಂತೂ ನಿಜ, ಹರೀಶ್‌ರಾಜ್‌ ಒಳಗಿನ ಸತ್ಯನಾರಾಯಣನ ಕುರಿತ ಭಕ್ತಿಯೇ ಈಗ ಸಿನಿಮಾ ರೂಪ ತಳೆದಿದೆ.

ಈ ಸಿನಿಮಾ ನಿರ್ಮಾಣ ಹೂ ಎತ್ತಿದಷ್ಟು ಸುಲಭವಾಗಿ ಮುಗಿದಿದೆ ಎಂದು ಹರೀಶ್‌ ಅವರಿಗೆ ಅನ್ನಿಸಿದೆ. ಕಲಾವಿದರು–ತಂತ್ರಜ್ಞರ ಸಹಕಾರ, ಬಂಡವಾಳದ ಕ್ರೋಡೀಕರಣ ಅವರಿಗೆ ಅಚ್ಚರಿ ಹುಟ್ಟಿಸುವಷ್ಟು ಸುಲಭವಾಗಿದೆ. ‘ಪವರ್‌’, ’ನಮೋ ಭೂತಾತ್ಮ’ಗಳಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದ ಹರೀಶ್‌ರಾಜ್‌, ಇನ್ನೊಂದೆಡೆ ತಮ್ಮ ಚಿತ್ರದ ಕೆಲಸವನ್ನೂ ತಣ್ಣಗೆ ಮುಗಿಸಿದ್ದಾರೆ.

ಅಂದಹಾಗೆ, ಸತ್ಯನಾರಾಯಣ ಸ್ವಾಮಿಯ ಪಾತ್ರದಲ್ಲಿ ಹಿರಿಯ ನಟ ರಾಮಕೃಷ್ಣ ನಟಿಸುತ್ತಿದ್ದಾರೆ. ಎಡಕಲ್ಲುಗುಡ್ಡದ ಖ್ಯಾತಿಯ ಚಂದ್ರಶೇಖರ್‌ ಹಾಗೂ ಜೈಜಗದೀಶ್‌ ಮುಖ್ಯಪಾತ್ರಗಳಲ್ಲಿದ್ದಾರೆ. ಪುಟ್ಟಣ್ಣ ಕಣಗಾಲರ ಮೂವರು ಶಿಷ್ಯರು ಒಟ್ಟಾಗಿ ನಟಿಸಿರುವುದು ಚಿತ್ರದ ವಿಶೇಷಗಳಲ್ಲೊಂದು. ರಮ್ಯಾ ಬಾರ್ನ ಚಿತ್ರದ ನಾಯಕಿ. ತಾಜಾ ರೋನಿ ಅವರ ಸಂಗೀತ ಹಾಗೂ ರಾಮ್‌ ರೆಡ್ಡಿ ಅವರ ಛಾಯಾಗ್ರಹಣ ‘ಶ್ರೀಸತ್ಯನಾರಾಯಣ’ ಚಿತ್ರಕ್ಕಿದೆ.

ದೇವರ ಕುರಿತ ನಂಬಿಕೆಯ ಸಿನಿಮಾ ಆದರೂ ಕಥೆಯಲ್ಲಿ ಬೇರೆ ಬೇರೆ ಎಳೆಗಳು ಸೇರಿಕೊಳ್ಳುವಂತೆ ಹರೀಶ್‌ ಎಚ್ಚರಿಕೆ ವಹಿಸಿದ್ದಾರಂತೆ. ಪ್ರೇಮದ ನವಿರುಕಥೆ ಚಿತ್ರದಲ್ಲಿದೆ. ಈ ಪ್ರೇಮದ ಸಾಕ್ಷಾತ್ಕಾರಕ್ಕೆ ದೈವದ ನೆರವೂ ಇದೆ ಹಾಗೂ ಪ್ರೇಮದ ದಾರಿಯಲ್ಲಿ ಜಾತಿಯ ಉಪಕಥನವೂ ಸೇರಿಕೊಂಡಿದೆ. ಹಾಗೆಯೇ ಸತ್ಯನಾರಾಯಣನ ಸ್ತುತಿಗೀತೆಗಳೊಂದಿಗೆ ಪ್ರೇಮಿಗಳ ಯುಗಳವೂ ಟಪ್ಪಾಂಗುಚ್ಚಿ ಗೀತೆಯೂ ಚಿತ್ರದಲ್ಲಿದೆ. ಈ ಹಾಡನ್ನು ಸ್ವತಃ ಹರೀಶ್‌ ಅವರೇ ಹಾಡಿದ್ದಾರೆ. ಈ ಕಲಸುಮೇಲೋಗರದ ಕಾರಣದಿಂದಾಗಿ ಎಲ್ಲ ವರ್ಗದ ಪ್ರೇಕ್ಷಕರೂ ತಮ್ಮ ಸಿನಿಮಾ ನೋಡುತ್ತಾರೆ ಎನ್ನುವ ನಂಬಿಕೆ ಹರೀಶ್‌ ಅವರದ್ದು.

Write A Comment