ರಾಷ್ಟ್ರೀಯ

ಕೇಜ್ರಿವಾಲ್ ಭೀತಿಯ ನೆರಳಲ್ಲಿ ಕಮಲ ಪಕ್ಷ

Pinterest LinkedIn Tumblr

kejri

ಅರವಿಂದ್ ಕೇಜ್ರಿವಾಲ್ ಮತ್ತು ಅವರ ಆಮ್ ಆದ್ಮಿ ಪಾರ್ಟಿ ಹುಟ್ಟಿ ಹಾಕಿದ ತಾಜಾ ಗಾಳಿಯ ರಾಜಕಾರಣದ ಪ್ರಯೋಗಶಾಲೆ ದಿಲ್ಲಿ ವರ್ಷವೊಪ್ಪತ್ತಿನಲ್ಲಿ ಎರಡನೆಯ ಬಾರಿಗೆ ವಿಧಾನಸಭಾ ಚುನಾವಣೆ ಎದುರಿಸಿದೆ.

ಎಂಟು ತಿಂಗಳ ಹಿಂದೆ ತಮ್ಮ ವರ್ಚಸ್ಸಿನಿಂದಲೇ ಬಿಜೆಪಿಗೆ ಲೋಕಸಭೆಯನ್ನು ಗೆದ್ದುಕೊಟ್ಟ ನರೇಂದ್ರ ಮೋದಿ, ಆ ನಂತರ ಹಲವು ರಾಜ್ಯಗಳಲ್ಲಿ ತಮ್ಮ ಪಕ್ಷವನ್ನು ಅಧಿಕಾರದತ್ತ ನಡೆಸಿರುವುದು ಹೌದು. ಇದೀಗ ದಿಲ್ಲಿಯ ಸರದಿ. ಆದರೆ ದಿಲ್ಲಿ ಚುನಾವಣೆಯ ಸ್ವರೂಪ ಬಿಜೆಪಿ ಎಣಿಸಿರುವುದಕ್ಕಿಂತ ಭಿನ್ನ. ಇತರೆಡೆ ಮೋದಿ ಚಲಾಯಿಸಿದ ಅಭಿವೃದ್ಧಿಯ ನಾಣ್ಯವೊಂದೇ ಇಲ್ಲಿ ಬಿಜೆಪಿಯನ್ನು ದಡ ಮುಟ್ಟಿಸುವುದು ದುಸ್ತರ.

ಯಾಕೆಂದರೆ ಇಲ್ಲಿ ಬಿಜೆಪಿಯ ಎದುರಾಳಿ ಪಾರಂಪರಿಕ ಹಳಸಲು ರಾಜಕಾರಣವನ್ನೇ ನಡೆಸಿಕೊಂಡು ಬಂದಿರುವ ಕಾಂಗ್ರೆಸ್ ಅಥವಾ ಅದೇ ಎರಕದಲ್ಲಿ ಅಚ್ಚುಗಳಾಗಿರುವ ಪ್ರಾದೇಶಿಕ ಪಕ್ಷಗಳಲ್ಲ. ಜನರೊಂದಿಗೆ ನೇರ ಸಂವಾದ ಸಂಬಂಧ ಬೆಳೆಸಿದ ಆಮ್ ಆದ್ಮಿ ಪಾರ್ಟಿ ಒಂದು ಕಾಲದಲ್ಲಿ ಮೋದಿ ಅವರಿಗೂ ಸೋಜಿಗ ಮೂಡಿಸುವಂತೆ ಮತದಾರರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಇದರ ಹಲವು ರಣತಂತ್ರಗಳು, ಜನಮುಖಿ ಕ್ರಮಗಳನ್ನು ಖುದ್ದು ಬಿಜೆಪಿ ಅನುಸರಿಸತೊಡಗಿದ್ದೇ ಈ ಮಾತುಗಳಿಗೆ ಉದಾಹರಣೆ.

ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ನಲವತ್ತೊಂಬತ್ತು ದಿನಗಳ ಸರಕಾರ ನಡೆಸಿದವರು. ಜನಲೋಕಪಾಲ ವಿಧೇಯಕ ವಿಧಾನಸಭೆಯಲ್ಲಿ ಬಿದ್ದು ಹೋಯಿತೆಂದು ಹಠಾತ್ತನೆ ರಾಜೀನಾಮೆ ನೀಡಿದ್ದು ಖುದ್ದು ಅವರ ಮತ್ತು ಅವರ ಪಕ್ಷದ ಜನಪ್ರಿಯತೆ ಕುಸಿಯಲು ದಾರಿ ಮಾಡಿದ್ದು ವಾಸ್ತವ. ಆದರೆ ನಂತರದ ದಿನಗಳಲ್ಲಿ ಯಮುನೆಯಲ್ಲಿ ಸಾಕಷ್ಟು ನೀರು ಹರಿದಿದೆ. ದಿಲ್ಲಿಯ ಮತ್ತು ದೇಶದ ರಾಜಕಾರಣ ದೊಡ್ಡ ರೀತಿಯ ಏಳುಬೀಳುಗಳನ್ನೇ ಕಂಡಿದೆ. ಕೇಜ್ರಿವಾಲ್ ಮತ್ತು ಅವರ ಸಂಗಾತಿಗಳು ತಮಗೆ ವಿರುದ್ಧ ಬೀಸಿದ ಗಾಳಿಯನ್ನು ತಮ್ಮ ಪರವಾಗಿ ತಿರುಗಿಸಿಕೊಳ್ಳುವಲ್ಲಿ ಬಹುಮಟ್ಟಿಗೆ ಸಫಲರೂ ಆಗಿದ್ದಾರೆ. ಕಳೆದ ಹಲವು ವಾರಗಳಿಂದ ಹೊರಬೀಳುತ್ತಿರುವ ಚುನಾವಣೆ ಸಮೀಕ್ಷೆಗಳಲ್ಲಿ ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ಅವರನ್ನೇ ಆರಿಸುವ ದಿಲ್ಲಿ ಬಯಕೆ ನಿಚ್ಚಳವಾಗಿ ಒಡಮೂಡಿದೆ.

ಲೋಕಸಭಾ ಚುನವಣೆಗಳ ಫಲಿತಾಂಶದ ಪ್ರಕಾರ ದಿಲ್ಲಿಯ ಎಪ್ಪತ್ತರ ಪೈಕಿ ಅರವತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಆದರೂ ವಿಧಾನಸಭಾ ಚುನಾವಣೆಗಳಲ್ಲಿ ತನ್ನ ಗೆಲುವು ನಿರಾತಂಕ ಎಂದು ವಿಶ್ವಾಸದಿಂದ ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿ ಬಿಜೆಪಿ ಈಗ ಇಲ್ಲ. ಕೇಜ್ರಿವಾಲರನ್ನು ದಿಲ್ಲಿಯಲ್ಲಿ ಕೆಡವಲೇಬೇಕಾದ ಅನಿವಾರ್ಯ ಈ ಪಕ್ಷದ್ದು. ಅವರನ್ನು ಇಲ್ಲಿ ಚಿಗಿತುಕೊಳ್ಳಲು ಬಿಟ್ಟರೆ ದೇಶದ ಇತರೆಡೆಗಳಲ್ಲಿ ಆಮ್ ಆದ್ಮಿ ಪಾರ್ಟಿ ಬಿಜೆಪಿಗೆ ಸವಾಲು ಎಸೆಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

‘ಮೋದಿ ಜೊತೆ ಹೆಜ್ಜೆ ಹಾಕಿ’ ಎಂಬುದು ಇತ್ತೀಚಿನ ತನಕ ಬಿಜೆಪಿಯ ಚುನಾವಣೆ ಘೋಷಣೆ. ಆದರೆ ಕಳೆದ ವಾರ ನಡೆದ ಬಹುನಿರೀಕ್ಷಿತ ಮೋದಿ ರ‌್ಯಾಲಿ ಭಣಗುಟ್ಟಿದ ಬೆಳವಣಿಗೆ ಬಿಜೆಪಿಯ ಆತ್ಮವಿಶ್ವಾಸವನ್ನು ಕುಗ್ಗಿಸಿದೆ. ಅಷ್ಟೇ ಸಾಲದೆಂಬಂತೆ ಕೇಜ್ರಿವಾಲ್ ವರ್ಚಸ್ಸಿನ ಎತ್ತರಕ್ಕೆ ಸಮನಾಗಿ ನಿಂತು ಸೆಣೆಸಬಲ್ಲ ನಾಯಕತ್ವ ದಿಲ್ಲಿ ಬಿಜೆಪಿಯಲ್ಲಿ ಇಲ್ಲ. ಪ್ರದೇಶ ಬಿಜೆಪಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ಅವರ ವಿರುದ್ಧ ಆಮ್ ಆದ್ಮೀ ಪಾರ್ಟಿ ಕಳೆದ ಕೆಲ ದಿನಗಳಿಂದ ನಿತ್ಯ ಬಿಡುಗಡೆ ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳು ಆ ಪಕ್ಷದ ನೈತಿಕ ಸ್ಥೆರ್ಯವನ್ನು ಕಸಿಯುತ್ತಿವೆ.

ದಿನೇದಿನೆ ಬೆಳೆಯುತ್ತಲೇ ನಡೆದಿದ್ದ ಆಮ್ ಆದ್ಮಿ ಪಾರ್ಟಿಯ ಜನಪ್ರಿಯತೆಯಿಂದ ಕಂಗೆಟ್ಟ ಬಿಜೆಪಿ, ಅಣ್ಣಾ ಹಜಾರೆ ಚಳವಳಿಯ ದಿನಗಳ ಕೇಜ್ರಿವಾಲ್ ಸಹೋದ್ಯೋಗಿ ಮತ್ತು ಖಡಕ್ಕು ಐಪಿಎಸ್ ಅಧಿಕಾರಿ ಎಂದೇ ಹೆಸರಾಗಿದ್ದ ಕಿರಣ್ ಬೇಡಿ ಅವರನ್ನು ತನ್ನೆಡೆಗೆ ಸೆಳೆದುಕೊಂಡಿದೆ. ಕೇಜ್ರಿವಾಲ್ ಅವರನ್ನು ಎದುರಿಸಲು ಅಸ್ತ್ರಗಳಿಲ್ಲದೆ ಬರಿದಾದ ತನ್ನ ಬತ್ತಳಿಕೆಗೆ ಬೇಡಿ ಎಂಬ ಕಿರಣವನ್ನು ಸೇರಿಸಿಕೊಂಡು ಬೀಗತೊಡಗಿದೆ. ಘೋಷಿಸದೆ ಹೋದರೂ ಆಕೆಯೇ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಹಲವು ನಿಚ್ಚಳ ಸುಳಿವುಗಳನ್ನು ನೀಡಿದೆ.

ಬಿಜೆಪಿ ನಡೆಯನ್ನು ಅತ್ಯಂತ ಚತುರ ನಡೆ ಎಂದೂ, ಗಾಬರಿ ಗಲಿಬಿಲಿಯ ಪ್ರತಿಕ್ರಿಯೆ ಎಂಬ ವ್ಯಾಖ್ಯಾನಗಳು ನಡೆದಿವೆ. ಇವನ್ನು ಬದಿಗಿಟ್ಟು ನೋಡುವುದಾದರೆ ಸಪ್ಪೆಯಾಗಬಹುದಿದ್ದ ಚುನಾವಣೆಗೆ ಈ ನಾಟಕೀಯ ತಿರುವಿನಿಂದಾಗಿ ಹಠಾತ್ತನೆ ರಂಗು ಬಂದಿದೆ. ಬೇಡಿ ಅವರನ್ನು ಕೇಜ್ರಿವಾಲ್ ವಿರುದ್ಧ ದಿಲ್ಲಿ ಕ್ಷೇತ್ರದಲ್ಲಿ ಹೂಡುವ ದಟ್ಟ ಸಾಧ್ಯತೆಗಳಿವೆ. ಈ ಕ್ಷೇತ್ರದಲ್ಲಿ ಕಳೆದ ಬಾರಿ ದಿಲ್ಲಿಯ ಅಂದಿನ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಮಣಿಸಿದ್ದರು ಕೇಜ್ರೀವಾಲ್. ಬಿಜೆಪಿಯ ಅಭ್ಯರ್ಥಿ ವಿಜಯೇಂದ್ರ ಗುಪ್ತ ಮೂರನೆಯ ಸ್ಥಾನ ತಲುಪಿದ್ದರು.

ಆರೆಸ್ಸೆಸ್ ವಿಚಾರಧಾರೆಯ ಪ್ರಾಮಾಣಿಕ ಹಿನ್ನೆಲೆಯಿಂದ ಬಂದ ನಾಯಕರು ತಮ್ಮವರು ಎನ್ನುವ ಬಿಜೆಪಿ, ದಿಲ್ಲಿಯಲ್ಲಿ ಕಡೆ ಗಳಿಗೆಯಲ್ಲಿ ಕಿರಣ್ ಬೇಡಿಯಂಥ ನಾಯಕರಿಗಾಗಿ ಪಕ್ಷದ ಹೊರಗೆ ನೋಡಬೇಕಾದ ಪ್ರಮೇಯದಲ್ಲಿ ವಿಪರ್ಯಾಸವನ್ನು ಕಂಡವರಿದ್ದಾರೆ. ತನ್ನ ಅಧ್ಯಕ್ಷ ಸತೀಶ್ ಉಪಾಧ್ಯಾಯ ಮೇಲಿನ ಭ್ರಷ್ಟಾಚಾರಗಳ ಆರೋಪದ ಆಪ್ ದಾಳಿಯನ್ನು ತತ್ಕಾಲಕ್ಕಾದರೂ ಮೊಂಡು ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ”ಕೇಂದ್ರದಲ್ಲಿ ಮೋದಿಯಿರಲಿ, ದಿಲ್ಲಿಗೆ ಕೇಜ್ರಿವಾಲರೇ ಸರಿ,” ಎಂಬುದಾಗಿ ಆಲೋಚಿಸುತ್ತಿದ್ದ ಮಧ್ಯಮವರ್ಗಿಗಳ ಮನಸ್ಸುಗಳನ್ನು ಸದ್ಯಕ್ಕಾದರೂ ಗೊಂದಲಕ್ಕೆ ನೂಕಿದೆ.

ನೇರ ನಿಷ್ಠುರ ಪ್ರಾಮಾಣಿಕ ಅಧಿಕಾರಿಯಾಗಿ ಕಿರಣ್ ಬೇಡಿ ದೇಶಾದ್ಯಂತ ಹೆಸರು ಮಾಡಿದವರು. ಆದರೆ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡದೆ ಅವರು ನುಣುಚಿಕೊಳ್ಳಲು ಬರುವುದಿಲ್ಲ. ರಾಜಕಾರಣವೆಂದರೆ ಅಸಹ್ಯಪಟ್ಟುಕೊಂಡು ದೂರ ಉಳಿದಿದ್ದವರು ಬೇಡಿ. ಅಣ್ಣಾ ಹಜಾರೆ ಚಳವಳಿ ವೇದಿಕೆಯಿಂದ ಅವರು ಎಲ್ಲ ರಾಜಕಾರಣಿಗಳೂ ಕಳ್ಳರು ಎಂದು ಬಣ್ಣಿಸಿದ್ದವರು. ಜನಲೋಕಪಾಲ ಮಸೂದೆ ವಿರುದ್ಧ ಬಿಜೆಪಿಯ ಇಬ್ಬಂದಿ ಧೋರಣೆಯನ್ನು ಟೀಕಿಸಲು ಅನಂತಕುಮಾರ್ ಮತ್ತು ದಿವಂಗತ ಗೋಪಿನಾಥ ಮುಂಡೆಯವರನ್ನು ಕೀಳಾಗಿ ಅಣಕಿಸಿದ್ದವರು. ಮೋದಿಯವರು ನ್ಯಾಯಾಲಯಗಳಿಂದ ಪಾರಾಗಿದ್ದರೂ ಗುಜರಾತಿನ ದಂಗೆಯ ಮಾರಣ ಹೋಮಕ್ಕೆ ಒಂದಲ್ಲ ಒಂದು ದಿನ ಸಮಜಾಯಿಷಿ ನೀಡಲೇಬೇಕು ಎಂದಿದ್ದವರು. ಯಡಿಯೂರಪ್ಪ ಅವರ ಭ್ರಷ್ಟಾಚಾರವನ್ನು ಎತ್ತಿ ಆಡಿದ್ದವರು. ಇದೀಗ ತಮ್ಮ ಅಭಿಪ್ರಾಯವನ್ನು ತಾರುಮಾರು ಮಾಡಿಕೊಳ್ಳುವಂತಹ ಯಾವ ಬದಲಾವಣೆ ಘಟಿಸಿದೆ ಎಂಬ ಪ್ರಶ್ನೆಗಳು ಅವರನ್ನು ಈಗಾಗಲೆ ಕಾಡತೊಡಗಿವೆ.

ಕೇಜ್ರಿವಾಲ್ ಮತ್ತು ಅವರ ಆಮ್ ಆದ್ಮಿ ಪಾರ್ಟಿಯನ್ನು ಧರಣಿ ಮತ್ತು ಪ್ರದರ್ಶನಗಳಲ್ಲಿ ಕಾಲ ಕಳೆಯುವ ನಕ್ಸಲೀಯರೆಂದೂ, ಆಡಳಿತ ನಡೆಸುವುದು ಅವರಿಗೆ ಗೊತ್ತಿರದ ಪರಿಣತಿಯೆಂದೂ ಮೋದಿ ಮೊನ್ನೆಯಷ್ಟೇ ತಮ್ಮ ರ‌್ಯಾಲಿಯಲ್ಲಿ ಲೇವಡಿ ಮಾಡಿದ್ದರು. ಆದರೇ, ಕೆಲವೇ ದಿನಗಳಲ್ಲಿ ಕೇಜ್ರಿವಾಲರ ಧರಣಿ ಮತ್ತು ಪ್ರದರ್ಶನದ ದಿನಗಳ ಸಕ್ರಿಯ ಸಹೋದ್ಯೋಗಿಗಳಾದ ಕಿರಣ್ ಬೇಡಿ ಮತ್ತು ಶಾಜಿಯಾ ಇಲ್ಮಿ ಅವರನ್ನು ತಮ್ಮ ಪಕ್ಷಕ್ಕೆ ಆಮದು ಮಾಡಿಕೊಂಡಿದ್ದಾರೆ. ಪ್ರಧಾನಿ ಕೆಲವೇ ದಿನಗಳಲ್ಲಿ ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಂಡಿರುವ ಕುರಿತು ಪ್ರಶ್ನೆಗಳೆದ್ದಿವೆ.

ಕಿರಣ್ ಬೇಡಿ ಅಥವಾ ಶಾಜಿಯಾ ಇಲ್ಮಿ ಅವರನ್ನು ಆಮದು ಮಾಡಿಕೊಂಡ ಮಾತ್ರದಿಂದ ಬಿಜೆಪಿಯ ಕೊರತೆ ನೀಗುವ ಸೂಚನೆಗಳಿಲ್ಲ. ಕೇಜ್ರಿವಾಲ್ ಕಂಪನಿ ಹಣಿಯಲು ಹೊಸ ವ್ಯೆಹಗಳನ್ನು ಭಿನ್ನ ಅಸ್ತ್ರಗಳನ್ನು ಮೋದಿ-ಅಮಿತ್ ಶಾ ಜೋಡಿ ಹುಡುಕಲೇಬೇಕಿದೆ

ಬೇಡಿ ಬಿಜೆಪಿ ಸೇರ್ಪಡೆಯನ್ನು ಆಮ್ ಆದ್ಮಿ ಪಾರ್ಟಿ ಎಷ್ಟರಮಟ್ಟಿಗೆ ಜೀರ್ಣಿಸಿಕೊಳ್ಳಲಿದೆ, ಅದರ ತಂತ್ರಗಳು ಎಷ್ಟರಮಟ್ಟಿಗೆ ಫಲ ನೀಡಲಿವೆ ಎಂಬ ಅಂಶಗಳು ಕೇಜ್ರಿವಾಲ್ ಸಂಗಾತಿಗಳ ಹಾದಿಯನ್ನು ಮುಂಬರುವ ದಿನಗಳಲ್ಲಿ ಸಲೀಸು ಮಾಡಲಿವೆ.

Write A Comment